ಶಿಕಾರಿಪುರ ಯುವಕನ ಕೊಲೆ ಪ್ರಕರಣ: ಮತ್ತೆ ಆರು ಮಂದಿಯ ಬಂಧನ
ಶಿವಮೊಗ್ಗ, ಆ.27: ಆರು ದಿನಗಳ ಹಿಂದೆ ಶಿಕಾರಿಪುರದ ಕೆ.ಎಚ್.ಬಿ ಕಾಲನಿಯಲ್ಲಿ ಮೀಲಾದುನ್ನಬಿ ಆಚರಣೆ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರೋಷನ್ (19), ಸದ್ದಾಂ ಹುಸೇನ್ (31), ಸಲ್ಮಾನ್ ಅಲಿಯಾಸ್ ಸಲೀಂ (22), ಇಮ್ರಾನ್ (30), ಆರಿಫ್ ಜಾನ್ (33) ಮತ್ತು ಎಸ್.ಎನ್. ಬಾಬು ಅಲಿಯಾಸ್ ಸಾಬಿರ್ ಅಹ್ಮದ್ (42) ಬಂಧಿತ ಆರೋಪಿಗಳು. ಇವರನ್ನು ಆ.25ರಂದು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆ.22ರಂದು ಸೊಸೈಟಿ ಕೇರಿಯ ಬಾಷಾ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಒಟ್ಟು ಸಂಖ್ಯೆ 7ಕ್ಕೇರಿದೆ.
ಆ.21ರಂದು ಶಿಕಾರಿಪುರದ ಕೆ.ಹೆಚ್.ಬಿ ಕಾಲನಿಯಲ್ಲಿ ನಡೆದ ಸಭೆಯ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಜನ್ನತ್ ಗಲ್ಲಿ ನಿವಾಸಿ ಮುಹಮ್ಮದ್ ಜಾಫರ್ (32) ಎಂಬವರನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಿಲಾದ್ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಶಿಕಾರಿಪುರದ ಸೊಸೈಟಿ ಕೇರಿ ಮತ್ತು ಗಗ್ರಿ ಏರಿಯಾದವರ ಮಧ್ಯೆ ವೈಮನಸು ಸೃಷ್ಟಿಯಾಗಿತ್ತು. ಇದೇ ವಿಚಾರದಲ್ಲಿ ಆ.21ರಂದು ಗಲಾಟೆಯಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದ ಆರೋಪಿಗಳನ್ನು ಬಂಧಿಸಲಾಗಿದೆ.
ಶಿಕಾರಿಪುರ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಖಂಡಿ, ಶಿಕಾರಿಪುರ ಠಾಣೆ ಇನ್ ಸ್ಪೆಕ್ಟರ್ ರುದ್ರೇಶ ನೇತೃತ್ವದಲ್ಲಿ, ಪಿಎಸ್ಸೈಗಳಾದ ಪ್ರಶಾಂತ್ ಕುಮಾರ್, ರಾಜುರೆಡ್ಡಿ, ಕೋಮಲಾಚಾರ್, ಶರತ್, ಎಎಸ್ಸೈ ಮಲ್ಲೇಶಪ್ಪ, ವಿಶ್ವನಾಥ್, ಸಿಬ್ಬಂದಿ ಎಚ್..ಸಿ.ಶಿವಕಮಾರ್, ಶಿವಾನಂದ ಗಾಮದ್, ಗಂಗಾಧರ ಅನಗವಾಡಿ, ಅಶೋಕ, ಪ್ರಶಾಂತ್, ಹಝ್ರತ್ ಅಲಿ, ರಾಘವೇಂದ್ರ, ಕೊಟ್ರೇಶ, ಆದರ್ಶ, ಚನ್ನೇಶ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.