ಶಿವಮೊಗ್ಗ| ಜಮೀನಿನಲ್ಲಿ ಚಿನ್ನದ ನಾಣ್ಯ ಸಿಕ್ಕಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚನೆ

Update: 2023-12-28 12:11 GMT

ಶಿವಮೊಗ್ಗ: ಜಮೀನಿನಲ್ಲಿ ಚಿನ್ನದ ನಾಣ್ಯ ಸಿಕ್ಕಿದೆ ಎಂದು ನಂಬಿಸಿ ಕೊಡುಗು ಜಿಲ್ಲೆಯ ವಿರಾಜಪೇಟೆಯ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಿರುವ ಘಟನೆ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸಿದ್ದಾಪುರ ಬಳಿ ನಡೆದಿದೆ.

ಭದ್ರಾವತಿಯ ರಾಜು ಎಂಬಾತ ವಿರಾಜಪೇಟೆಯ ಶಶಿಕುಮಾರ್‌ಗೆ ಕರೆ ಮಾಡಿ ಜಮೀನಿನಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಹೇಳಿ, ನ.21 ರಂದು ಶಶಿಕುಮಾರ್‌ಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿದ್ದ. ಪರಿಶೀಲಿಸಿದಾಗ ಅವು ಅಸಲಿ ಚಿನ್ನ ಎಂದು ಗೊತ್ತಾಗಿತ್ತು. ಈ ಹಿನ್ನೆಲೆ ಉಳಿದ ಚಿನ್ನದ ನಾಣ್ಯಗಳಿಗಾಗಿ ಶಶಿಕುಮಾರ್‌ 10 ಲಕ್ಷ ರೂ. ಹಣವನ್ನು ಆರೋಪಿಗೆ ನೀಡಿದ್ದ ಎಂದು ಹೇಳಲಾಗಿದೆ.

ಆರೋಪಿ ರಾಜು ಸಿದ್ದಾಪುರದ ಬಳಿ ಶಶಿಕುಮಾರ್‌ನನ್ನು ಕರೆಯಿಸಿಕೊಂಡು 10 ಲಕ್ಷ ರೂ. ಹಣ ಪಡೆದು ನಾಣ್ಯಗಳನ್ನು ನೀಡಿ ತಕ್ಷಣ ಸ್ಥಳದಿಂದ ತೆರಳಿದ್ದ. ಅನುಮಾನಗೊಂಡು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್‌ ಆಫ್‌ ಆಗಿತ್ತು. ಮನೆಗೆ ತೆರಳಿದ ಶಶಿಕುಮಾರ್ ನಾಣ್ಯಗಳನ್ನು ಪರಿಶೀಲಿಸಿದ್ದು, ಅವು ನಕಲಿ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಶಶಿಕುಮಾರ್ ದೂರು ನೀಡಲು ಮುಂದಾದಾಗ ರಾಜು ಎಂಬಾತ ಪುನಃ ಕರೆ ಮಾಡಿ, ದೂರು ನೀಡದಂತೆ ಮನವಿ ಮಾಡಿದ್ದ. 10 ಲಕ್ಷ ರೂ. ಪೈಕಿ 5 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿಸಿದ್ದ. ಆ ನಂತರ ಹಣ ಕೇಳಿದಾಗಲೆಲ್ಲ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಕೊನೆಗೆ ಶಶಿಕುಮಾರ್ ಅವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News