ಶಿವಮೊಗ್ಗ | ಸಿಡಿಮದ್ದು ಸ್ಫೋಟ; ಓರ್ವ ಬಾಲಕ ಗಂಭೀರ ಗಾಯ, ಇಬ್ಬರು ಪಾರು
ಶಿವಮೊಗ್ಗ: ಸಿಡಿಮದ್ದು ಸ್ಫೋಟಗೊಂಡು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಬಾಲಕರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಜಿಲ್ಲೆಯ ತೀರ್ಥಹಳ್ಳಿಯ ತುಂಗಾನದಿ ಪಾತ್ರದಲ್ಲಿ ನಡೆದಿದೆ.
ಬಾಲಕ ತೇಜು ಎಂಬಾತನಿಗೆ ಮೈ ಕೈ, ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕಣ್ಣುಗಳಿಗೆ ಹಾನಿಯಾಗಿದೆ. ಸದ್ಯ ಬಾಲಕನಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಾಲಕ ದಾಖಲಿಸಲಾಗಿದೆ.
ಜನವರಿ 1ರಂದು ತೀರ್ಥಹಳ್ಳಿ ಪಟ್ಟಣದಲ್ಲಿ ತೆಪ್ಪೋತ್ಸವ ಅಂಗವಾಗಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು ಎರಡೂವರೆ ಗಂಟೆ ಸಿಡಿಮದ್ದು ಪ್ರದರ್ಶನ ನಡೆದಿತ್ತು. ಜನವರಿ 5ರಂದು ಸಿಡಿಯದೆ ಇದ್ದ ಪಟಾಕಿಯನ್ನು ಬಾಲಕರು ಒಟ್ಟುಗೂಡಿಸಿದ್ದರು. ಏಕಾಏಕಿ ಪಟಾಕಿ ಸಿಡಿದ ಪರಿಣಾಮ ಬಾಲಕ ತೇಜು ತೀವ್ರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಬಾಲಕರು ಪಾರಾಗಿದ್ದಾರೆ.
ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಡಿಮದ್ದು ಪ್ರದರ್ಶನ ಮಾಡಲಾಗಿದ್ದು, ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ದುರಂತಕ್ಕೆ ಕಾರಣ ಮತ್ತು ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಮುಗಿದು 4 ದಿನಗಳಾದರೂ ಪ್ರದೇಶ ಸ್ವಚ್ಛ ಮಾಡದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.