ಶಿವಮೊಗ್ಗ | ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಇಬ್ಬರ ಬಂಧನ

Update: 2024-02-02 16:49 GMT

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಕರ್ನಾಟಕ ಸಂಘದ ಬಳಿ ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲದೆ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಮಂಗಳವಾರ ಟ್ರಾಫಿಕ್ ಠಾಣೆ ಎಎಸ್‌ಐ ಶ್ರೀನಿವಾಸ್ ಹಾಗೂ ಕಾನ್ಸ್ಟೇಬಲ್ ಪ್ರಭು ವಾಹನಗಳ ತಪಾಸಣೆ ಮಾಡುವಾಗ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್ ಸವಾರ ಬಿದ್ದು ಅಸ್ವಸ್ಥಗೊಂಡಿದ್ದ. ಅದೇ ಬೈಕ್‌ನಲ್ಲಿದ್ದ ಹಿಂಬದಿ ಸವಾರ, ಕಾನ್ಸ್ಟೇಬಲ್ ಪ್ರಭುವಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ವ್ಯಕ್ತಿಯೊಬ್ಬ ಪೊಲೀಸರೇ ಹೊಡೆದಿದ್ದಾರೆಂಬ ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.

ಅಸ್ವಸ್ಥಗೊಂಡಿದ್ದ ಬೈಕ್ ಸವಾರನನ್ನು ಸಂಚಾರ ಪೊಲೀಸರೇ ಆಂಬುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ ಘಟನೆ ಕುರಿತು ಕಾನ್ಸ್ಟೇಬಲ್ ಪ್ರಭು ನೀಡಿದ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಡಿಯೋ ದೃಶ್ಯಾವಳಿ ಆಧಾರದ ಮೇಲೆ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದಾತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜ.30ರಂದು ಪೂರ್ವ ಸಂಚಾರ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹಾಕುವಾಗ ರೌಡಿಶೀಟರ್ ಗಳಿಬ್ಬರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು. ಘಟನೆ ಕುರಿತಂತೆ ದೂರು ದಾಖಲಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News