ಶಿವಮೊಗ್ಗ| ಏರ್‌ಪೋರ್ಟ್ ಕಾಂಪೌಂಡ್ ಕಾಮಗಾರಿಗೆ ಸ್ಥಳೀಯರಿಂದ ಅಡ್ಡಿ

Update: 2023-11-22 14:28 GMT

ಶಿವಮೊಗ್ಗ: ಏರ್‌ ಪೋರ್ಟ್ ಮುಂದುವರೆದ ಕಾಮಗಾರಿಗೆ ಸ್ಥಳೀಯ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಬುಧವಾರ ನಡೆಯಿತು. ಈ ವೇಳೆ ಪೊಲೀಸರು, ಗ್ರಾಮಸ್ಥರು ನಡುವೆ ಮಾತಿನ ಚಕಮಕಿ ನಡೆಯಿತು.

ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ, ರನ್ ವೇ ವಿಸ್ತರಣೆ ಸಂಬಂಧ ಅಂದಾಜು 500 ಮೀಟರ್‌ ನಷ್ಟು ಜಾಗವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಬಳಸಿಕೊಂಡಿದ್ದು ಅದಕ್ಕೆ ಕಾಂಪೌಂಡ್ ಹಾಕುವ ಕೆಲಸ ನಡೆಯುತ್ತಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಪಕ್ಕದಿಂದಲೇ ಈಗ ಹೊಸಜೈಲು, ಸಿದ್ಧರಹಟ್ಟಿ ಗ್ರಾಮಕ್ಕೆ ಹೋಗಬೇಕು. ಈಗ ಕಾಂಪೌಂಡ್ ನಿರ್ಮಾಣದಿಂದ 1 ಕಿ.ಮೀ ಸುತ್ತುವರಿದು ಬರಬೇಕು. ಇದು ಅರಣ್ಯ ಪ್ರದೇಶವಾಗಿದ್ದು ಜನರು ಓಡಾಡುವುದು ವಿರಳ. ರಾತ್ರಿ ವೇಳೆ ಇಲ್ಲಿ ಪುಂಡ ಪೋಕರಿಗಳು ಮದ್ಯ ಸೇವನೆ ಮಾಡುತ್ತಾ ಗಲಾಟೆ ಮಾಡುತ್ತಾ ನಿಂತಿರುತ್ತಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಗಾರ್ಮೆಂಟ್ಸ್ ಹೋಗಿಬರುವ ಹೆಣ್ಣು ಮಕ್ಕಳಿಗೆ ಇರಿಸುಮುರಿಸು ಆಗುತ್ತಿದೆ. ಏರ್ಪೋರ್ಟ್ ಗೆ ಮುಂದುವರೆದ ಕಾಮಗಾರಿಗೆ ಕಾಂಪೌಂಡ್ ನಿರ್ಮಾಣಕ್ಕೆ ನಮಗೆ ಅಡ್ಡಿ ಇಲ್ಲ. ನಮಗೆ ಹೊಸದಾಗಿ ಮಾಡಿರುವ ರಸ್ತೆಗೆ ಬೀದಿ ದೀಪ ವ್ಯವಸ್ಥೆ, ಪೊಲೀಸ್ ಬೀಟ್ ವ್ಯವಸ್ಥೆ, ಈ ದಾರಿಯಲ್ಲಿ ಹೋಗುತ್ತಿರುವ ಸರಕಾರಿ ಬಸ್ಸನ್ನು ಗ್ರಾಮದವರೆಗೆ ಬರುವಂತೆ ಮಾಡಬೇಕು. ಅಲ್ಲಿವರೆಗೂ ಕೆಲಸ ನಡೆಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಮುಂದುವರೆಸಲು ಹೋದಾಗ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳು ಅಂಡರ್ಪಾಸ್ ಮಾಡಿಕೊಡುವ ಭರವಸೆ ನೀಡಿದ್ದರು. ಅದು ಸಹ ಆಗಿಲ್ಲ. ತಹಸೀಲ್ದಾರ್ ಬಂದು ಭರವಸೆ ನೀಡುವರೆಗೂ ಕೆಲಸ ನಡೆಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು. ಕೆಲಕಾಲ ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ತಹಸೀಲ್ದಾರ್ ಎನ್.ಜೆ.ನಾಗರಾಜ್ ಸ್ಥಳಕ್ಕೆ ಆಗಮಿಸಿ ಬೀದಿ ದೀಪ ವ್ಯವಸ್ಥೆ, ಬಸ್ ಸೇವೆ ವಿಸ್ತರಿಸುವ ಭರವಸೆ ನೀಡಿದರು. ಅಂತಿಮವಾಗಿ ಗ್ರಾಮದ ಮುಖಂಡರು ಪ್ರತಿಭಟನೆ ಹಿಂಪಡೆದರು. ನಂತರ ಕಾಂಪೌಂಡ್ ಕಾಮಗಾರಿ ಆರಂಭಗೊಂಡಿತು.

ತುಂಗಾನಗರ ಠಾಣೆ ಪಿಐ ಮಂಜುನಾಥ್, ಪಿಎಸ್ಐ ಮಂಜುನಾಥ್, ಕುಮಾರ್, 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.






Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News