ಶಿವಮೊಗ್ಗ | ಎಟಿಎಂ ಮಿಷನ್ ಮುರಿದು ಕಳ್ಳತನಕ್ಕೆ ಯತ್ನ : ಆರೋಪಿಯ ಬಂಧನ

ಬಂಧಿತ ಆರೋಪಿ ವಸೀಂ
ಶಿವಮೊಗ್ಗ: ಎಟಿಎಂ ಮಿಷನ್ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಜ.26 ರಾತ್ರಿ ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರ ಮೂಲದ ಮುಹಮ್ಮದ್ ವಸೀಂ ಬಿನ್ ಅಲೀಮ್ ಹಸನ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಎಟಿಎಂ ಕೇಂದ್ರದಲ್ಲಿ ಎರಡು ಎಟಿಎಂ ಮೆಷಿನ್ ಗಳಿವೆ. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತ ಒಳಗೆ ಬಂದ ಆರೋಪಿ, ಮೊದಲು ಒಂದು ಯಂತ್ರ ಪರಿಶೀಲಿಸಿದ್ದಾನೆ. ಬಳಿಕ ಪಕ್ಕದ ಎಟಿಎಂ ಯಂತ್ರವನ್ನು ಚೆಕ್ ಮಾಡಿ, ಅದರ ಲಾಕ್ ಗಳನ್ನು ತೆಗೆದು ಹಣ ಕದಿಯಲು ಯತ್ನಿಸಿದ್ದಾನೆ. ಆಗ ಎಟಿಎಂ ಕೇಂದ್ರದ ಒಳಗೆ ಸೈರನ್ ಆನ್ ಆಗಿದೆ. ಈ ವೇಳೆ ಹೆದರಿದ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸದು ಬಂದಿದೆ.
ಈ ಸಂಬಂಧ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಕೋಟೆ ಠಾಣೆ ಪೊಲೀಸರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.