ಎಮ್ಮೇಹಟ್ಟಿ| ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಶಿವರಾಜ್ ಕುಮಾರ್ ದಂಪತಿ

Update: 2024-07-08 18:36 GMT

ಶಿವಮೊಗ್ಗ: ಹಾವೇರಿ ಬಳಿ ನಡೆದ ಬೀಕರ ಅಪಘಾತದಲ್ಲಿ ಮೃತಪಟ್ಟ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಕುಟುಂಬಸ್ಥರ ಮನೆಗಳಿಗೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸೋಮವಾರ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಅವರು,ಮೃತರ ಕುಟುಂಬಗಳಿಗೆ ನಗದು ಹಣ ವಿತರಿಸಿದರು.

ಈ ಸಂದರ್ಭದಲ್ಲಿ ಸಾಂತ್ವಾನ ಸಭೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಅಲ್ಲದೆ ಘಟನೆಯಲ್ಲಿ ತೀರ್ವವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಮತ್ತು ಪರಷುರಾಮ್ ರವರಿಗೆ ತಲಾ 1.5 ಲಕ್ಷ ನೀಡಿ ಮಾನವಿಯತೆ ಮೆರೆದರು.

ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಜವಬ್ದಾರಿಯನ್ನು ಹೊರುವುದಾಗಿ ಶಿವಣ್ಣ ದಂಪತಿಗಳು ತಿಳಿಸಿದರು. ಅಲ್ಲದೇ ಈಗಾಗಲೇ ಚಿಕಿತ್ಸೆ ಪಡೆದು ಮನೆಗೆ ಬಂದಂತಹ ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ತಾವೇ ಬರಿಸುವುದಾಗಿ ತಿಳಿಸಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಈ ರೀತಿಯ ಘಟನೆ ಎಲ್ಲಿಯೂ ನಡೆಯಬಾರದು. ದೇವರು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ, ನಾವು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಾಯ ಮಾಡಬೇಕಾದಲ್ಲಿ ಅದಕ್ಕೂ ಸಿದ್ದರಿದ್ದೇವೆ ಎಂದು ತಿಳಿಸಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ,ದುರ್ಘಟನೆ ನೋಡಿ ಬರೋಕೆ ಧೈರ್ಯವಾಗಲಿಲ್ಲ. ಇಲ್ಲಿಗೆ ಬರುವ ದೈರ್ಯ ಮಾಡುವುದಕ್ಕೆ ತುಂಬಾನೆ ಕಷ್ಟವಾಗಿತ್ತು. ಕೇವಲ ಒಂದು ನಿಮಿಷದಲ್ಲಿ ೧೩ ಜನ ಸಾವನಪ್ಪಿದ್ದರು. ಸಾವಿನ ದುಃಖ ತಡೆದುಕೊಳ್ಳಲು ದೇವರು ಆ ಕುಟುಂಬಸ್ಥರಿಗೆ ಶಕ್ತಿ ಕೊಡಲಿ. ಅದರಲ್ಲಿಯು ಮಾನಸರನ್ನ ಕಳೆದುಕೊಂಡಿದ್ದು ತುಂಬಾ ದೊಡ್ಟ ನಷ್ಟವಾಗಿದೆ. ಊರಿನವರ ಜೊತೆಗೆ ಕುಟುಂಬಸ್ಥರಿಗೆ ನೆರವು ನೀಡಲು ಬಂದಿದ್ದೇನೆ. ನಮ್ಮ ಕೈ ಯಲ್ಲಿ ಆದಷ್ಟು ಸಹಾಯ ಮಾಡಿದ್ದೇವೆ ಎಂದರು.

ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ, ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ ವಿಶೇಷ ಚೇತನ ಅರ್ಪಿತಾಗೆ ದೇವರು ಶಕ್ತಿ ಕೊಡಲಿ ಎಂದರು.

ಈ ಸಂದರ್ಭದಲ್ಲಿ ಭದ್ರಾವತಿ ಶಾಸಕರಾದ ಸಂಗಮೇಶ್, ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನಕುಮಾರ್,ಪ್ರಮುಖರಾದ ಕಲಗೋಡು ರತ್ನಾಕರ್,ಜಿ,ಡಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಉದ್ಯೋಗಕ್ಕೆ ಮನವಿ

ಈ ಸಂದರ್ಭದಲ್ಲಿ ಮೃತರಾದ ಅರುಣ್ ಪತ್ನಿ ರೇಣುಕಾ ಮಾತನಾಡಿ, ನನ್ನ ಪತಿಯೇ ನನಗೆ ಆಶ್ರಯವಾಗಿದ್ದರು. ನಾನು ೩ ತಿಂಗಳ ಬಾಣಂತಿ, ನನ್ನ ಮಗುವಿನ ಭವಿಷ್ಯಕ್ಕೆ ನನಗೆ ಉದ್ಯೋಗ ಬೇಕಾಗಿದೆ. ಹಿಂದೆ ಕೂಡ ನಾನು ನನಗೆ ಉದ್ಯೋಗ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಸಚಿವ ಮಧುಬಂಗಾರಪ್ಪ ಮತ್ತು ಇದೀಗ ಗೀತಾ ಶಿವರಾಜ್ ಕುಮಾರ್ ಅವರು ಕೂಡ ಭರವಸೆ ನೀಡಿದ್ದಾರೆ. ಮುಂದಿನ ಭವಿಷ್ಯಕ್ಕೂ ಸಹಕಾರ ನೀಡುವುದಾಗಿ ಅವರ ವೈಯುಕ್ತಿಕ ದೂರವಾಣಿ ನಂಬರ್‌ನ್ನು ನೀಡಿದ್ದು, ಯಾವುದೇ ಸಂದರ್ಭ ದಲ್ಲೂ ಕೂಡ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News