ಸಿದ್ದರಾಮಯ್ಯ ತಪ್ಪಿತಸ್ಥರಲ್ಲ ಎಂದು ತೀರ್ಪು ಬರಲೆಂದು ಬೇಡಿಕೊಳ್ಳುತ್ತೇನೆ: ಕೆ.ಎಸ್. ಈಶ್ವರಪ್ಪ

Update: 2024-09-09 15:11 GMT

ಶಿವಮೊಗ್ಗ: ಎಲ್ಲರೂ ಮುಖ್ಯಮಂತ್ರಿ ಸ್ಥಾನದ ಹಿಂದೆ ಬಿದ್ದಿದ್ದಾರೆ. ನೀವು ಯಾರಾದರೂ ಮುಖ್ಯಮಂತ್ರಿಯಾಗಿ ನಮಗೆ ಬೇಜಾರಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ ಬಿಟ್ಟು 135 ಜನ ಹೋಗಲಿ ಅಭ್ಯಂತರವಿಲ್ಲ. ಪಟ್ಟಿ ಹೇಳುತ್ತಾ ಹೋದರೆ ಚುನಾವಣೆ ಲಿಸ್ಟ್ ರೀತಿ ಆಗುತ್ತದೆ. ಒಂದು ಕಡೆ ಬೆಂಬಲ ಎನ್ನುತ್ತಾರೆ ಇನ್ನೊಂದು ಕಡೆ ಹಂಬಲ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಮಾಡಿದ ಅಪಮಾನ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ರಾಜೀನಾಮೆ ಕೋಡಬೇಕಿತ್ತು. ನನ್ನ ಮೇಲೆ ಅಪಾದನೆ ಬಂದಾಗ ರಾಜೀನಾಮೆ ಕೊಟ್ಟೆ. ಜಾರ್ಜ್ ಸಹ ರಾಜೀನಾಮೆ ಕೊಟ್ಟಿದ್ದರು. ಬಳಿಕ ಮಂತ್ರಿ ಸಹ ಆದರು. ಸಿದ್ದರಾಮಯ್ಯ ನವರು ತಪ್ಪಿತಸ್ಥರಲ್ಲ ಎಂದು ತೀರ್ಪು ಬರಲೆಂದು ಬೇಡಿಕೊಳ್ಳುತ್ತೇನೆ. ಕಾಂಗ್ರೆಸ್ ಸರ್ಕಾರವೇ ಐದು ವರ್ಷ ಆಡಳಿತ ಮಾಡಲಿ. ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಸಿಎಂ ರಾಜೀನಾಮೆ ನೀಡಿದ ಮೇಲೆ ಇವರ ಯಕ್ಷಗಾನ ನೋಡಬೇಕು. ಡಿಸಿಎಂ ಫಾರಿನ್ ಗೆ ಬೇಕಾದರೂ ಹೋಗಲಿ, ಎಲ್ಲಾದರೂ ಹೋಗಲಿ. ಬಂಡೆ ತರ ನಿಲ್ಲುತ್ತಾರೋ, ತಲೆ ಮೇಲೆ ಬಂಡೆ ಹಾಕುತ್ತಾರೋ ನೋಡೊಣ ಎಂದರು.

ಸಿಎಂ ಹಣೆಗೆ ಕುಂಕುಮವೇ ಹಚ್ಚುತ್ತಿರಲಿಲ್ಲ. ಈಗ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮುಸ್ಲಿಮರಿಗಾಗಿ ನಾಟಕೀಯವಾಗಿ ಸಿದ್ದರಾಮಯ್ಯ ಬದುಕುತಿದ್ದಾರೆ. ಸಿದ್ದರಾಮಯ್ಯ ಪೂರ್ಣವಾಗಿ ಮುಸ್ಲಿಮರಿಗೆ ಒಪ್ಪಿಸಿಕೊಂಡಿದ್ದಾರೆ. ಈ ಹಿಂದೆ ದೇವೇಗೌಡರು ಹೀಗೆ ಮಾಡಿದ್ದರು. ಮುಸ್ಲಿರನ್ನು ಸಂತೃಪ್ತಿಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಪೇಟ, ಕುಂಕುಮ ಇಟ್ಟುಕೊಳ್ಳಲು ಯಾಕೆ ಹಿಂದೆ ಸರಿಯುತ್ತೀರಿ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇರಬಾರದು. ರಾಧಾಕೃಷ್ಣ ಎನ್ನುವರಿಗೆ ಸರ್ಕಾರವೇ ಪ್ರಶಸ್ತಿ ಆದೇಶ ಮಾಡಿತ್ತು. ಎಸ್ ಡಿಪಿಐ ನವರು ಹೇಳಿದ ತಕ್ಷಣ ಪ್ರಶಸ್ತಿ ತಡೆಹಿಡಿದಿದ್ದೀರಿ. ಕೂಡಲೇ ರಾಜ್ಯ ಸರ್ಕಾರ ಪ್ರಶಸ್ತಿ ಕೊಡಬೇಕು. ಐವನ್ ಡಿಸೋಜಾ ಮೇಲೆ ಏನು ಕ್ರಮ ಕೈಗೊಂಡಿದ್ದೀರಾ ಹೇಳಿ ಎಂದು ಪ್ರಶ್ನಿಸಿದರು.

ದೇವರ ಪ್ರಸಾದ ಕೊಡುವಾಗ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಬೇಕು ಎನ್ನುತ್ತಾರೆ. ರಮಝಾನ್ ಸಮಯದಲ್ಲೂ ಆಹಾರ ಪರೀಕ್ಷೆ ಮಾಡುತ್ತೀರಾ? ನೀವು ಎಷ್ಟೇ ಮುಸ್ಲಿಮರ ಮತ ಪಡೆದರೂ ದೇಶ ನಮ್ಮ ಕೈಯಲ್ಲೇ ಇರುತ್ತದೆ. ಹೆಚ್ಚು ಎಂಪಿ, ಎಂಎಲ್‌ಎಗಳು ನಮ್ಮವರೇ ಇದ್ದಾರೆ ಎಂದು ಹೇಳಿದರು.

ಪರಿಹಾರಕ್ಕೆ ಆಗ್ರಹಿಸಿ ಜೈಲ್ ಭರೋ ಪ್ರತಿಭಟನೆ:

ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹೊರಬರಲು ಚಂದ್ರಶೇಖರನ್ ಕಾರಣ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ಮುಂದುವರೆದಿದೆ. ತನ್ನ ಕುಟುಂಬದ ಪರಿಸ್ಥಿತಿ ಸರಿ ಇಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಪರಿಹಾರವಾಗಿ ಒಂದು ರೂ. ಕೂಡ ಇನ್ನೂ ನೀಡಿಲ್ಲ. 25 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ನಾನು ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪನವರಿಗೆ ದೂರವಾಣಿ ಮೂಲಕ ಮಾತನಾಡಿದೆ. ನಾನು ಈ ಬಗ್ಗೆ ಗಮನ ನೀಡುತ್ತೇನೆ ಎಂದಿದ್ದರು. ಮುಖ್ಯಮಂತ್ರಿಗಳು ಪರಿಹಾರದ ಹಣ ನೀಡಲು ತಿಳಿಸಿದ್ದಾರೆ ಎಂದಿದ್ದರು. ಇದು ಹೇಳಿ ಹತ್ತು ದಿನಗಳಾಗಿವೆ. ಆದರೂ ಈವರೆಗೂ ಪರಿಹಾರದ ಹಣ ನೀಡಿಲ್ಲ. ಹೀಗಾಗಿ ನಾವು ಹಿಂದೆ ಹೇಳಿದಂತೆ ರಾಷ್ಟ್ರಭಕ್ತ ಬಳಗದಿಂದ 5 ಲಕ್ಷ ರೂ. ಪರಿಹಾರ ನೀಡಲಿದ್ದೇವೆ ಎಂದು ಹೇಳಿದರು.

ಸಮಾಜಕ್ಕೋಸ್ಕರ ಜೀವನವನ್ನೇ ಮುಡುಪಾಗಿಟ್ಟವರಿಗೆ ನಾವು ನೀಡುತ್ತೇವೆ. ಸೆ. 20 ರವರೆಗೆ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಿದ್ದೇವೆ. ನಮಗೆ ಜೈಲಿಗೆ ಹೋಗುವ ಚಟವಿಲ್ಲ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿ ಎಂಬುದೇ ನಮ್ಮ ಉದ್ದೇಶ. ರಾಜ್ಯ ಸರ್ಕಾರ ಬದುಕಿದ್ದರೆ ಪರಿಹಾರದ ಹಣ ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಕೇವಲ ರಾಜಕೀಯದಲ್ಲಿ ತೊಡಗಿಕೊಂಡಿದೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಯಾರಾದರೂ ಸಿಎಂ ಆಗಿ ಹಾಳಾಗಿ ಹೋಗಲಿ. ಮೊದಲು ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರದ ಹಣ ನೀಡಿ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಎಂ.ಶಂಕರ್,ವಿಶ್ವಾಸ್, ಸುವರ್ಣಾ ಶಂಕರ್,ಬಾಲು,ಜಾದವ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News