ಶಿವಮೊಗ್ಗ | ʼಲಿಂಗನಮಕ್ಕಿ ಚಲೋʼಗೆ ಚಾಲನೆ : ರೈತ ಗೀತೆಗಳೊಂದಿಗೆ ಸಾಗುತ್ತಿರುವ ಶರಾವತಿ ಮುಳುಗಡೆ ರೈತರ ಪಾದಯಾತ್ರೆ

Update: 2024-10-24 10:57 GMT

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥರ ʼಲಿಂಗನಮಕ್ಕಿ ಚಲೋʼಗೆ ಸಮಾಜವಾದಿ ಹೋರಾಟಗಾರ ಬಿ.ಆರ್ ಜಯಂತ್ ಅವರು ಚಾಲನೆ ನೀಡಿದರು.

ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ವಿವಿಧ ರೈತ ಸಂಘಟನೆಗಳು ಕಳೆದ ನಾಲ್ಕು ದಿನಗಳಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಇದರ ಮುಂದುವರೆದ ಭಾಗವಾಗಿ ಸರಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಗುರುವಾರದಿಂದ ʼಲಿಂಗನಮಕ್ಕಿ ಚಲೋʼ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪಾದಯಾತ್ರೆ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನ್ಯಾಯಗಳ ವಿರುದ್ಧ ದಿಕ್ಕಾರ ಕೂಗಿದರು. ನಾಡಿಗೆ ಬೆಳಕು ಕೊಟ್ಟೆವು ,ನಾವು ಕತ್ತಲೆಯಲ್ಲಿದ್ದೇವೆ .ನಮಗೆ ಬೆಳಕು ಕೊಡಿ ಎಂದು ಮುಳುಗಡೆ ಸಂತ್ರಸ್ಥರು ಆಗ್ರಹಿಸಿದರು. ಪಾದಯಾತ್ರೆ ವೇಳೆ ಸಾವಿರಾರು ರೈತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ತೀ.ನಾ ಶ್ರೀನಿವಾಸ್, ದಿನೇಶ್ ಶಿರಿವಾಳ, ವಿ.ಜಿ ಶ್ರೀಕರ್, ಶಿವಾನಂದ ಕುಗ್ವೆ, ನಾಗರಾಜ್ ಎಂ.ಡಿ ಪ್ರದೀಪ್ ಹೆಬ್ಬೂರು, ಕೆ.ಹೂವಪ್ಪ ಸೇರಿದಂತೆ ಹಲವರಿದ್ದರು.

ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಇಂದು ನಿನ್ನೆಯದ್ದಲ್ಲ, ಆರು ದಶಕಗಳು ಕಳೆದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಅರಣ್ಯ ಕಾನೂನುಗಳ ಮೂಲಕ ಸಂತ್ರಸ್ಥರ ಕತ್ತು ಹಿಸುಕಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಚಲೋ ನಡೆಸಲಾಗುತ್ತದೆ. ನಾವು ಎಲ್ಲಿ ಮುಳುಗಡೆ ಆದೆವೋ ಅಲ್ಲಿಂದಲೇ ನ್ಯಾಯ ಪಡೆಯುತ್ತೇವೆ.

- ದಿನೇಶ್ ಶಿರಿವಾಳ, ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷರು

ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಮೀಸಲಿಟ್ಟ ಜಾಗವನ್ನು ಅರಣ್ಯದಿಂದ ಕೈ ಬಿಡಬೇಕು. ಕಳೆದ ಆರೇಳು ದಶಕದಿಂದ ಉಳಿಮೆ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಬೇಕು.

-ನಾಗರಾಜ್ ಎಂ,ಡಿ, ಸಂತ್ರಸ್ಥ ರೈತ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲೆನಾಡಿನ ರೈತರ ಸಮಸ್ಯೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಅರಣ್ಯ ಇಲಾಖೆ ನೋಟೀಸ್ ನೀಡುತ್ತಿದೆ. 64 ವರ್ಷಗಳು ಕಳೆದರೂ ನ್ಯಾಯ ಒದಗಿಸದೇ ಸರಕಾರಗಳು ಕಾಲಹರಣ ನಡೆಸುತ್ತಿದ್ದಾರೆ. ಹಾಗಾಗಿ ನಮ್ಮ ಜಾಗ ನಮಗೆ ಕೊಡಿ ಎಂದು ಆಗ್ರಹಿಸಿ ಲಿಂಗನಮಕ್ಕಿ ಚಲೋ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ.

- ತೀ.ನಾ ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News