ಸೆ. 12 ರಂದು ‘ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ’ ವತಿಯಿಂದ ‘ಸೌಹಾರ್ದವೇ ಹಬ್ಬ’

Update: 2024-09-06 16:04 GMT

ಶಿವಮೊಗ್ಗ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ’ ವತಿಯಿಂದ ಸೆ. 12 ರಂದು ಮಧ್ಯಾಹ್ನ 3 ಗಂಟೆಗೆ ‘ಸೌಹಾರ್ದವೇ ಹಬ್ಬ’ ಶೀರ್ಷಿಕೆ ಅಡಿಯಲ್ಲಿ ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕೀಲರಾದ ಕೆ.ಪಿ. ಶ್ರೀಪಾಲ್, ಕಳೆದ ಎರಡು ವರ್ಷಗಳಿಂದ ಈ ಶಾಂತಿ ಜಾಥಾವನ್ನು ಹಮ್ಮಿಕೊಂಡಿದ್ದೆವು. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಜೊತೆಯಾಗಿಯೇ ಬಂದಿವೆ. ಇದು ಸೌಹಾರ್ದತೆಯೆ ಸಂಕೇತವೂ ಆಗಿದೆ. ನಾವೆಲ್ಲರೂ ಜೊತೆಯಾ ಗಿದ್ದೇವೆ ಎಂಬುದನ್ನು ಕ್ಯಾಲೆಂಡರ್‌ಕೂಡ ರುಜುವಾತುಪಡಿಸಿದೆ. ಪ್ರಕೃತಿಯ ನಿರ್ದೇಶನವೇ ಸಾಮರಸ್ಯವಾಗಿರುವಾಗ ಮನುಷ್ಯರು ಮಾತ್ರ ಏಕೆ ಶಾಂತಿಯನ್ನು ಕದಡಬೇಕು ಎಂದು ಹೇಳಿದರು.

‘ಸರ್ವ ಜನಾಂಗದ ಶಾಂತಿಯ ನಾಡು ನಮ್ಮ ಶಿವಮೊಗ್ಗ’ ಎಂಬ ಹಿನ್ನಲೆಯಲ್ಲಿ ಈ ಜಾಥಾ ಹಮ್ಮಿಕೊಂಡಿದ್ದು, ಈ ಜಾಥಾ ಧರ್ಮಾತೀತವಾಗಿದೆ. ಮತ್ತು ಈ ಜಾಥಾದಲ್ಲಿ ಬಸವಕೇಂದ್ರ, ಜಡೆ ಮಠದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳ ಜೊತೆಗೆ ಜಾಮೀಯಾ ಮಸೀದಿಯ ಧರ್ಮಗುರುಗಳು, ಮೌಲ್ವಿಗಳು, ಫಾದರ್ ಗಳು ಭಾಗವಹಿಸುತ್ತಾರೆ, ಮತ್ತುಪಕ್ಷಾತೀತವಾಗಿ ರಾಜಕೀಯ ಮುಖಂಡರು ಸಹ ಭಾಗವಹಿಸುತ್ತಾರೆ. ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ.ಮೆರವಣಿಗೆ ನಂತರ ಸೈನ್ಸ್ ಮೈದಾನದಲ್ಲಿ ಶಾಂತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಠಾಧೀಶರು, ಫಾದರ್ ಗಳು ಹಾಗೂ ಮೌಲ್ವಿಗಳು ಮಾತ್ರ ಇರುತ್ತಾರೆ. ಅವರೇ ಶಾಂತಿಯ ಸಂದೇಶಗಳನ್ನು ನೀಡುತ್ತಾರೆ. ಇದರ ಜೊತೆಗೆ ಶಿವಮೊಗ್ಗದ ಭೂಪಟವನ್ನು ರಚಿಸಲಾಗುವುದು. ಈ ಭೂಪಟದಲ್ಲಿ ಸಂಘ, ಸಂಸ್ಥೆಗಳು,ವ್ಯಾಪಾರಸ್ಥರು, ಶಾಂತಿ ಸಹಿಯ ಸ್ಟಿಕರ್ ಗಳನ್ನು ಅಂಟಿಸಬಹುದಾಗಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಎಲ್ಲ ಧರ್ಮಗಳು ಶಾಂತಿಯನ್ನು ಸಾರುತ್ತವೆ. ತೀರ ಇತ್ತೀಚಿನವರೆಗೆ ಶಿವಮೊಗ್ಗದಲ್ಲಿ ಶಾಂತಿಯುತ ವಾತಾವರಣ ಇತ್ತು. ಈಚೆಗೆ ಶಾಂತಿ ಕದಡುವ ಪ್ರಯತ್ನವಾಗುತ್ತಿದೆ. ಹಾಗಾಗಿ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಅಭಿವೃದ್ಧಿ ಬಯಸುವವರು ಹಿಂಸೆ ಇಷ್ಟಪಡುವುದಿಲ್ಲ. ಇಲ್ಲಿನ ವ್ಯಾಪಾರ, ವಹಿವಾಟಿನ ಅನುಕೂಲಕ್ಕೆ, ಬಡವರು ನೋವು ಅನುಭವಿಸದಂತೆ ತಡೆಯಲು ಈ ನಡಿಗೆ ಎಂದರು.

ಕಿರಣ್ ಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ರೈಲು, ರಸ್ತೆ ಸಂಪರ್ಕವು ಉತ್ತಮವಾಗಿದೆ. ಇಲ್ಲಿನ ವ್ಯಾಪಾರ, ವಹಿವಾಟು ಅಭಿವೃದ್ಧಿ ಆಗಬೇಕಿದೆ. ಬ್ರ್ಯಾಂಡ್ ಶಿವಮೊಗ್ಗ ಬೆಳೆಯಲು ಹಲವು ಆಯಾಮದಲ್ಲಿ ನಗರ ಬೆಳೆಯಬೇಕು. ಊರು ಶಾಂತವಾಗಿದ್ದರೆ ಸರ್ವ ರೀತಿಯ ಅಭಿವೃದ್ಧಿ ಆಗಲಿದೆ. ಈ ಹಿನ್ನೆಲೆ ಮೂರನೆ ವರ್ಷದ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಸ್ಪೆಲ್ಲಿಂಗ್‌ನಲ್ಲಿ ಹೆಚ್‌ಐಎಂ ಇದೆ. ಹೆಚ್ ಅಂದರೆ ಹಿಂದೂ, ಐ ಅಂದರೆ ಇಸಾಯಿ, ಎಂ ಅಂದರೆ ಮುಸ್ಲಿಂ. ಎಲ್ಲರು ಸೌರ್ಹಾದವಾಗಿ ಬದುಕಬೇಕು, ಬ್ರ್ಯಾಂಡ್ ಶಿವಮೊಗ್ಗದ ಇಮೇಜ್ ಬೆಳವಣಿಗೆಗೆ ಈ ಕಾರ್ಯ. ಅಂದು ಸಿಗ್ನೇಚರ್ ಬೋರ್ಡ್ ಮಾಡಲಿದ್ದೇವೆ. ಅದರಲ್ಲಿ ವ್ಯಾಪಾರ, ವಾಹಿವಾಟು, ಧಾರ್ಮಿಕ ಕ್ಷೇತ್ರದವರು ಸೇರಿ ಎಲ್ಲರು ಸ್ಟಿಕರ್‌ಗಳನ್ನು ಅಂಟಿಸಬಹುದು ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, 60-70ರ ದಶಕದಲ್ಲಿ ಸೌರ್ಹಾದತೆಕ್ಕೆ ಧಕ್ಕೆ ಆದಾಗ ಪತ್ರಕರ್ತರು ಮುಂದೆ ನಿಂತು ಶಾಂತಿ ಮರು ಸ್ಥಾಪಿಸಿದ್ದರು. ಅಹಿತಕರ ಘಟನೆಗಳ ನಡೆದಾಗ ಸೂಕ್ಷ್ಮ ವರದಿಗಾರಕೆ ಮೂಲಕ ಶಾಂತಿ ಸ್ಥಾಪನೆ ಮಾಡಬೇಕು ಎಂದರು.

ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಜೀವ, ಆಸ್ತಿ ಹಾನಿ ತಡೆಯುವುದು ಸೌರ್ಹಾದ ಹಬ್ಬದ ಮುಖ್ಯ ಉದ್ದೇಶ. ಶಾಂತಿ ನೆಲಸಬೇಕು. ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಅರಿವು ಮೂಡಿಸಲಾಗುತ್ತದೆ. ಇದು ಅತ್ಯುತ್ತಮ ಕಾರ್ಯಕ್ರಮ. ಇದರಿಂದ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಕಿರಣ್ ಕುಮಾರ್, ಅರಸಾಳು ಸುರೇಶ್, ರಫಿ ಇದ್ದರು

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News