ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

Update: 2024-05-30 18:06 GMT

ಶಿವಮೊಗ್ಗ: ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಿಐಡಿ ತನಿಖೆ ನಡೆಯುತ್ತಿದೆ.ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ವಿನೋಬ ನಗರದಲ್ಲಿರುವ ಮೃತ ಚಂದ್ರಶೇಖರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಮೇ.26 ನೇ ತಾರೀಖು ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದರು.

ವಾಲ್ಮೀಕಿ ನಿಗಮದಲ್ಲಿ ಹಣಕಾಸು ಅವ್ಯಹಾರ ಆಗಿದೆ. 182 ಕೋಟಿ ಹಣ ವರ್ಗಾವಣೆ ಆಗಿದೆ ಅಂತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಿಗಮದಲ್ಲಿ ಕೆಲಸ ಮಾಡುವಾಗ ಒತ್ತಡ ಇತ್ತಾ ಅಥವಾ ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಆಗುವರೆಗೆ ನಿರ್ಧಿಷ್ಟವಾಗಿ ಏನು ಹೇಳಲು ಆಗುವುದಿಲ್ಲ ಎಂದರು.

ಕೋವಿಡ್ ಸಂದರ್ಭದಲ್ಲಿ ಸಾವಿನ ದವಡೆಯಿಂದ ವಾಪಾಸು ಆಗಿದ್ದರು. ಒಡವೆ ಅಡ ಇಟ್ಟು ಜೀವ ಉಳಿಸಿದ್ದೇನೆ ಅಂತ ಅವರ ಪತ್ನಿ ತಮ್ಮ‌ ಅಳಲು ತೋಡಿಕೊಂಡರು. ಜೂ. 6ರ ನಂತರ ಸರ್ಕಾರವೇ ಆ ಕುಟುಂಬವನ್ನು ಸಂಪರ್ಕ ಮಾಡಿ ಬೇಡಿಕೆ ಈಡೇರಿಸಲಾಗುವುದು. ಹಣಕಾಸಿನ ಅವ್ಯವಹಾರ ಹಾಗೂ ಆತ್ಮಹತ್ಯೆ ಬಗ್ಗೆ ಸೂಕ್ಷ್ಮವಾಗಿ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಚಿವ ನಾಗೇಂದ್ರ ರಾಜೀನಾಮೆ ಒತ್ತಡ ಕುರಿತು ಪ್ರತಿಕ್ರಿಯಿಸಿದ ಅವರು, ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶ ಅಂತ ಇದೆ. ನಿರ್ಧಿಷ್ಟವಾಗಿ ಸಚಿವರ ಹೆಸರನ್ನು ಡೆತ್ ನೋಟ್ ನಲ್ಲಿ ಸೂಚಿಸಿಲ್ಲ. ಹಾಗಾಗಿ ನೇರವಾಗಿ ಅವರನ್ನು ಹೊಣೆ ಮಾಡಲು ಆಗುವುದಿಲ್ಲ ಎಂದರು.

ಈಶ್ವರಪ್ಪ ಪ್ರಕರಣದಲ್ಲಿ ಈಶ್ವರಪ್ಪ ಹೆಸರಿತ್ತು. ಬಿಜೆಪಿ ಸರ್ಕಾರ ಇದ್ದಾಗಲು ಎಸ್ಐಟಿ ಅವರ ಅಧೀನದಲ್ಲಿತ್ತು. ಸರ್ಕಾರದ ಅಂಗ ಸಂಸ್ಥೆ ಗಳನ್ನ ನಾವೇ ನಂಬದೇ ಹೋದರೇ ಹೇಗೆ. ಬಿಜೆಪಿಯವರನ್ನು ಕೇಳಿಕೊಂಡು ನಾವು ಆಡಳಿತ ಮಾಡುತ್ತೇವಾ ಎಂದರು.

ಪ್ರತಿಭಟನೆ ಮಾಡಲು ವಿರೋಧ ಪಕ್ಷದವರಿಗೂ ಹಕ್ಕಿದೆ. ಉತ್ತರ ಕೊಡೋಕೆ ನಾವಿದ್ದೇವೆ. ನಮ್ಮನ್ನ ಆಯ್ಕೆ ಮಾಡಿದ ಜನರಿಗೆ ಉತ್ತರ ಕೊಡುತ್ತೇವೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.

ಚನ್ನಗಿರಿ ಪ್ರಕರಣದ ವರದಿ ಇನ್ನೂ ಬಂದಿಲ್ಲ. ತಪ್ಪಿತಸ್ಥರನ್ನ ರಕ್ಷಿಸುವ ಕೆಲಸ ಆಗುವುದಿಲ್ಲ.ಈಗಾಗಲೇ 25 ಜನರ ಬಂಧನ ಆಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News