ʼಗ್ಯಾರಂಟಿʼ ಬಗ್ಗೆ ವಿಪಕ್ಷಗಳ ಆರೋಪಕ್ಕೆ ನಮ್ಮ ಕಾರ್ಯಕ್ರಮದ ಮೂಲಕವೇ ಉತ್ತರಿಸುತ್ತೇವೆ: ಸಚಿವ ಮಧುಬಂಗಾರಪ್ಪ

Update: 2024-01-10 12:55 GMT

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರ ಆರೋಪಕ್ಕೆ ನಮ್ಮ ಕಾರ್ಯಕ್ರಮದ ಮೂಲಕವೇ ಉತ್ತರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕಾಂಗ್ರೆಸ್ ಗ್ಯಾರಂಟಿ ಮೂಲಕ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು ಕನಿಷ್ಠ 75 ಲಕ್ಷ ತಲುಪುತ್ತಿದೆ. ಆದರೂ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಉತ್ತರಿಸಲು ಹೋಗುವುದಿಲ್ಲ. ನಮ್ಮ ಕಾರ್ಯಕ್ರಮದ ಮೂಲಕ ಉತ್ತರಿಸುತ್ತೇವೆʼ ಎಂದರು.

ನಮ್ಮ 4 ಗ್ಯಾರಂಟಿ ಯೋಜನೆಯ ಲಾಭ ಈಗಾಗಲೇ ಜನರಿಗೆ ತಲುಪಿದೆ. ಇದೀಗ 5ನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದ ಅವರು, ಜ.12 ರಂದು ಸರ್ಕಾರದ 5ನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಸಚಿವರುಗಳು ಭಾಗವಹಿಸಲಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಭಾವನಾತ್ಮಕ ವಿಚಾರಗಳಿಗೆ ಜನ ಮರಳಾಗಲ್ಲ. ಬಿಜೆಪಿಯವರ ಒಂದೇ ಒಂದು ಯೋಜನೆಯಿಂದ ಜನರಿಗೆ ಪ್ರಯೋಜನವಾಗಿಲ್ಲ. ಉಜ್ವಲಾ ಯೋಜನೆಯಡಿ ನೀಡಿದ್ದ ಗ್ಯಾಸ್ ಸೌಲಭ್ಯ ಸಿಗುತ್ತಿಲ್ಲ, ಆದರೆ ನಮ್ಮ ಗ್ಯಾರಂಟಿ ಯೋಜನೆಯ ಲಾಭ ಎಲ್ಲರಿಗೂ ಸಿಗುತ್ತಿದೆ ಎಂದರು.

ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೋ ಗೆ ಅಷ್ಟೇ ಅಲ್ಲ ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ತೆರಿಗೆ ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ. ರಾಜ್ಯದ 25 ಜನ ಬಿಜೆಪಿ ಸಂಸದರು ಮೌನವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಎನ್.ರಮೇಶ್, ಹೆಚ್,ಸಿ ಯೋಗೇಶ್, ಜಿ.ಡಿ ಮಂಜುನಾಥ್, ದೇವೇಂದ್ರಪ್ಪ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News