ಯೂಟ್ಯೂಬ್ ಚಾನೆಲ್ ಆರಂಭಿಸಿದ ಕ್ರಿಸ್ಟಿಯಾನೊ ರೊನಾಲ್ಡೊ | ಒಂದೇ ದಿನದಲ್ಲಿ ಗೋಲ್ಡನ್ ಪ್ಲೇ ಬಟನ್!
ಲಿಸ್ಬನ್ (ಪೋರ್ಚುಗಲ್): ಈಗಾಗಲೇ ಇನ್ಸ್ಟಾಗ್ರಾಮ್, ಎಕ್ಸ್ ಹಾಗೂ ಫೇಸ್ ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಪೋರ್ಚುಗಲ್ ಫುಟ್ ಬಾಲ್ ತಂಡದ ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಇದೀಗ ಗೂಗಲ್ ಒಡೆತನದ ಯೂಟ್ಯೂಬ್ ನಲ್ಲಿ ತಮ್ಮ ಚಾನೆಲ್ ಪ್ರಾರಂಭಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ರೋಮಾಂಚನ ಎರಡಕ್ಕೂ ಕಾರಣರಾಗಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕ್ರಿಸ್ಟಿಯಾನೊ ರೊನಾಲ್ಡೊ, “ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಕೊನೆಗೂ ನನ್ನ ಯೂಟ್ಯೂಬ್ ಚಾನೆಲ್ ಇಲ್ಲಿದೆ! ಚಂದಾದಾರರಾಗುವ ಮೂಲಕ ನನ್ನ ಈ ಪಯಣದಲ್ಲಿ ಜೊತೆಗೂಡಿ” ಎಂದು ಬರೆದುಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಹಿಂಬಾಲಕರಿಗೆ ಕುಟುಂಬ, ಸ್ವಾಸ್ಥ್ಯ, ಪೌಷ್ಟಿಕತೆ, ಸಿದ್ಧತೆ, ಚೇತರಿಕೆ, ಶಿಕ್ಷಣ ಮತ್ತು ವ್ಯಾಪಾರದ ಕುರಿತು ಕ್ರಿಸ್ಟಿಯಾನೊ ರೊನಾಲ್ಡೊ ಮಾಹಿತಿ ನೀಡಲಿದ್ದಾರೆ.
ತಮ್ಮ ಪ್ರಥಮ ವಿಡಿಯೊ ಪೋಸ್ಟ್ ಮಾಡಿದ ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ಚಂದಾದಾರರನ್ನು ಸಂಪಾದಿಸುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಯೂಟ್ಯೂಬ್ ಅಭೂತಪೂರ್ವ ಸ್ಪಂದನೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ಚಂದಾದಾರರನ್ನು ಪಡೆಯುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಹಾಗೆಯೇ 24 ಗಂಟೆಗಳೊಳಗೆ ಒಂದು ಕೋಟಿ ಚಂದಾದಾರರನ್ನು ಪಡೆಯುವ ಮೂಲಕ ಮತ್ತೊಂದು ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಮೂಲಕ ಅವರು ಗೋಲ್ಡನ್ ಯೂಟ್ಯೂಬ್ ಪ್ಲೇ ಬಟನ್ ಪ್ರಶಸ್ತಿ ಪಡೆದ ಹಿರಿಮೆಗೆ ಭಾಜನರಾಗಿದ್ದಾರೆ.
ಅವರು ಈ ಪ್ರಶಸ್ತಿಯನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಚರಿಸಿ, ಮತ್ತೊಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಈ ಪೋರ್ಚುಗೀಸ್ ತಾರಾ ಆಟಗಾರ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ಪ್ರಮಾಣದ ಹಿಂಬಾಲಕರನ್ನು ಹೊಂದಿದ್ದಾರೆ. ಈ ವೇಳೆಗಾಗಲೇ ಅವರ ಯೂಟ್ಯೂಬ್ ಚಂದಾದಾರರ ಸಂಖ್ಯೆ 14.2 ದಶಲಕ್ಷ ತಲುಪಿದ್ದು, ಅವರ ವಿಡಿಯೊಗಳಿಗೆ 24,450,366 ವೀಕ್ಷಣೆ ಲಭಿಸಿದೆ. ಕಳೆದ 24 ಗಂಟೆಯ ಅವಧಿಯೊಳಗೆ 19 ವಿಡಿಯೊಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದಲ್ಲದೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 112.5 ದಶಲಕ್ಷ ಹಿಂಬಾಲಕರಿದ್ದರೆ, ಫೇಸ್ ಬುಕ್ ನಲ್ಲಿ 170 ದಶಲಕ್ಷ ಹಿಂಬಾಲಕರಿದ್ದಾರೆ. ಇದರೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ 636 ದಶಲಕ್ಷದಷ್ಟು ದಾಖಲೆಯ ಹಿಂಬಾಲಕರನ್ನು ಹೊಂದಿದ್ದಾರೆ.