ಯಡಿಯೂರಪ್ಪರನ್ನು ಕೆಣಕಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ: ಬಿಜೆಪಿ ಎಚ್ಚರಿಕೆ

Update: 2024-06-14 04:13 GMT

ಬೆಂಗಳೂರು, ಜೂ.14: 'ಕಾಂಗ್ರೆಸ್ಸಿನ ದಿಲ್ಲಿ ನಾಯಕರ ನೀಚ ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಯಡಿಯೂರಪ್ಪರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ರಾಜ್ಯ ಬಿಜೆಪಿ ಎಚ್ಚರಿಕೆ ನೀಡಿದೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪರ ಬಂಧನಕ್ಕೆ ನ್ಯಾಯಾಲಯವು ಜಾಮೀನುರಹಿತ ವಾರಂಟ್ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ಬಿಜೆಪಿಯ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದೆ.

ರಾಜ್ಯ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ ಅಸ್ವಸ್ಥೆ ನೀಡಿದ್ದ ದೂರನ್ನು ಆಧರಿಸಿ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲು ಹವಣಿಸುತ್ತಿದೆ ಆಪಾದಿಸಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ತಲೆದಂಡ ಹಾಗೂ ಸ್ವತಃ ಸರ್ಕಾರದ ಮೇಲೆ ಆರೋಪ ಬಂದಿರುವ ಬೆನ್ನಲ್ಲೇ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಯಡಿಯೂರಪ್ಪರ ಮೇಲೆ ಅಪ ಪ್ರಚಾರದ ಷಡ್ಯಂತರ ರೂಪಿಸಿದ್ದಾರೆ.

ಈ ಹಿಂದೆ ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಮಾನಸಿಕ ಅಸ್ವಸ್ಥೆ ದುರುದ್ದೇಶಪೂರಿತವಾಗಿ ದೂರು ನೀಡಿದ್ದಾಳೆಂದು ಹೇಳಿಕೆ ನೀಡಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. 3 ತಿಂಗಳ ನಂತರ ಈ ಪ್ರಕರಣಕ್ಕೆ ಮರುಜೀವ ತುಂಬಲು ಹೊರಟಿರುವುದು ವಿಪರ್ಯಾಸ ಎಂದು ಬಿಜೆಪಿ ಹೇಳಿದೆ.

ಮಾನಸಿಕ ಅಸ್ವಸ್ಥೆ ಸ್ವತಃ ತನ್ನ ಮಕ್ಕಳು ಹಾಗೂ ಗಂಡನ ವಿರುದ್ಧವೇ ದೂರು ನೀಡಿರುವುದೂ ಸೇರಿದಂತೆ 53 ಜನರ ವಿರುದ್ಧದ ದೂರುಗಳಲ್ಲಿ ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಕಾಂಗ್ರೆಸ್ಸಿನ ದಿಲ್ಲಿ ನಾಯಕರ ನೀಚ ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಯಡಿಯೂರಪ್ಪರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News