ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಕುಮಾರಸ್ವಾಮಿ, ಮೈತ್ರಿ ಬದಲು ವಿಲೀನ ಮಾಡಿಕೊಳ್ಳಲಿ: ಗುಂಡೂರಾವ್

Update: 2023-07-16 06:54 GMT

ಬೆಂಗಳೂರು, ಜು.16: ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಚಿವರು, ಬಿಜೆಪಿಯ 'ಬಿ ಟೀಂ' ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ ಎಚ್.ಡಿ.ಕುಮಾರಸ್ವಾಮಿ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ ಎಂದು ಹೇಳಿದ್ದಾರೆ.

ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್ ಗೆ ಯಾವ ಸಿದ್ಧಾಂತವಿದೆ? ಅದೊಂದು ಅವಕಾಶವಾದಿ ಪಕ್ಷ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಜೆಡಿಎಸ್ ಮುಂದಿರುವ ಜಾತ್ಯತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೇ. 2006ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರಕಾರ ಮಾಡಿದಾಗಲೇ ಜಾತ್ಯತೀತ ತತ್ವಕ್ಕೆ ಎಚ್.ಡಿ.ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್ ನ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯತೀತ ಸಿದ್ಧಾಂತವೇ ಕಾರಣ ಎಂದು ಅಭಿಪ್ರಾಯಿಸಿದ್ದಾರೆ.

ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಎಚ್.ಡಿ.ಕುಮಾರಸ್ವಾಮಿಯವರ ಸುಳ್ಳು ಜಾತ್ಯತೀತತೆಯ ನಕಲಿ ಶ್ಯಾಮನ ಅವತಾರ ಕೊನೆಯಾಗಲಿ ಎಂದು ವ್ಯಂಗ್ಯವಾಡಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News