ಕುಮಾರಸ್ವಾಮಿಯವರೇ, ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಪುರಾಣದ ಮೊದಲ ಅಧ್ಯಾಯ ಪತ್ರಿಕೆಯಲ್ಲಿ ಪ್ರಕಟವಾಗಿದೆ: ಸಿದ್ದರಾಮಯ್ಯ

Update: 2024-08-22 09:31 GMT

PC: X/Siddaramaiah

ಬೆಂಗಳೂರು, ಆ.22: "ನೋಂದಣಿಯೇ ಆಗದ ಕಂಪೆನಿಗೆ 550 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ, ಈಗ "ಸಹಿ ನನ್ನದಲ್ಲ, ಯಾರೋ ಪೋರ್ಜರಿ ಮಾಡಿದ್ದಾರೆ" ಎಂದು ಕಣ್ಣೀರು ಸುರಿಸುತ್ತಿರುವ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿಯವರೇ, ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರದ ಪುರಾಣದ ಮೊದಲ ಅಧ್ಯಾಯ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮುಂದೆ ಇನ್ನೇನೆಲ್ಲಾ ಬಹಿರಂಗವಾಗಲಿವೆಯೋ!!??" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ವಾರ್ತಾಭಾರತಿ ಸಹಿತ ಪತ್ರಿಕಾ ವರದಿಯನ್ನು ಉಲ್ಲೇಖಿಸಿ 'ಎಕ್ಸ್'ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ, "ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ನನ್ನ ಸಹಿ, ಟಿಪ್ಪಣಿ ಯಾವುದೂ ಇಲ್ಲ, ನನ್ನ ಅಧಿಕಾರವಧಿಯಲ್ಲಿ ನಡೆದದ್ದೇ ಅಲ್ಲ - ಹೀಗಿದ್ದರೂ ನನ್ನ ರಾಜೀನಾಮೆ ಕೇಳುತ್ತಿರುವ ಕುಮಾರಸ್ವಾಮಿಯವರೇ? ನಿಮ್ಮ ಊಟದೆಲೆಯಲ್ಲಿ ಆನೆ ಸತ್ತು ಬಿದ್ದಿದೆ ನೋಡಿ. ನ್ಯಾ.ಎನ್.ಸಂತೋಷ್ ಹೆಗ್ಡೆ ನೇತೃತ್ವದ ಲೋಕಾಯುಕ್ತವೇ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವುದೊಂದೇ ಬಾಕಿ. ಯಾರನ್ನು ಕಾಯುತ್ತಾ ಕೂತಿದ್ದೀರಿ? ನರೇಂದ್ರ ಮೋದಿಯವರು ಬಂದು ರಕ್ಷಿಸುತ್ತಾರೆಂದೇ? ಸ್ವಂತ ಪಕ್ಷದ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳಿಸಿದ್ದ ಪಕ್ಷ ನಿಮ್ಮ ರಕ್ಷಣೆಗೆ ಬರುತ್ತಾರೆ ಎಂದು ಅಂದುಕೊಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, "ಯಾರೋ ಹೇಳಿದ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರೇ, ನಿಮ್ಮ ಕೈಯಲ್ಲಿರುವ ಎಚ್.ಡಿ.ಕುಮಾರಸ್ವಾಮಿಯವರ ಗಣಿ ಹಗರಣದ ದಾಖಲೆ ಪತ್ರಗಳು ಈಗ ಸಾರ್ವಜನಿಕರ ಮುಂದೆ ಇದೆ. ಇವುಗಳ ಒಂದು ಪ್ರತಿಯನ್ನು ನಿಮ್ಮ ಒಡೆಯರಿಗೆ ಕಳಿಸಿಕೊಡಿ, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದಂತೆ ಕೈಕಟ್ಟಿ ಹಾಕಿರುವ ಹಗ್ಗ ಬಿಚ್ಚಿಕೊಳ್ಳಬಹುದು" ಎಂದು ಕೆಣಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News