ಹಠಾತ್ ಸಾವುಗಳ ಹೆಚ್ಚಳದ ಕಾರಣ ಪತ್ತೆ ಹಚ್ಚಲು ತುರ್ತು ಕ್ರಮ ಕೈಗೊಳ್ಳಿ: ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರು ಬಹಿರಂಗ ಪತ್ರ
ಕಳೆದ ಮೂರು ವರ್ಷಗಳಿಂದ ಸಂಭವಿಸುತ್ತಿರುವ ಗಮನಾರ್ಹ ಪ್ರಮಾಣದ ಅಕಾರಣ ಸಾವುಗಳಿಗೆ ಕಾರಣ ಪತ್ತೆ ಹಚ್ಚಲು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಸಚಿವರಿಗೆ ಬಹಿರಂಗ ಪತ್ರ ಬರೆದಿರುವ ತಲ್ಲೂರು, ಹಠಾತ್ ಸಾವುಗಳು ಸಂಭವಿಸುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ಆದರೆ, ಜನ ಹಠಾತ್ ಕುಸಿದು, ಹೃದಯಾಘಾತದಿಂದ ಈ ಪ್ರಮಾಣದಲ್ಲಿ ಸಾಯುತ್ತಿರುವುದಕ್ಕೆ ಏನಾದರೂ ಒಂದು ಬಲವಾದ ಕಾರಣ ಇರಲೇಬೇಕು. ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ಸಂಶೋಧನೆಗಳನ್ನು ಆರಂಭಿಸುವುದಕ್ಕಾಗಿ ತಕ್ಷಣ ಆದೇಶ ನೀಡಬೇಕು ಮತ್ತು ಇನ್ನಷ್ಟು ಅಕಾರಣ ಸಾವುಗಳು ಸಂಭವಿಸದಂತೆ ಜನರ ರಕ್ಷಣೆ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.
ಈ ಗಂಭೀರ ಸಮಸ್ಯೆಯ ಬಗ್ಗೆ ಈಗಾಗಲೇ ICMRಗೆ, ಕೇಂದ್ರ ಸರಕಾರಕ್ಕೆ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ತಾನು ಪತ್ರ ಬರೆದಿದ್ದೆ. ಆದರೆ ಅಲ್ಲಿಂದ ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ ರಾಜ್ಯ ಸರಕಾರದ ಕಡೆಯಿಂದಲಾದರೂ ಈ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಬೇಕು ಮತ್ತು ಜನರ ಜೀವ ಉಳಿಸಬೇಕು ಎಂದವರು ಬಹಿರಂಗ ಪತ್ರದಲ್ಲಿ ಮನವಿ ಮಾಡಿದ್ದಾರೆ.