ವಾಟ್ಸ್ ಆ್ಯಪ್ ಪರಿಚಯಿಸುತ್ತಿದೆ ಹೊಸ ಫೀಚರ್-‌ “ಚಾನೆಲ್ಸ್‌”‌

Update: 2023-09-14 11:19 GMT

ಕ್ಯಾಲಿಫೋರ್ನಿಯಾ: ಜನಪ್ರಿಯ ಮೆಸೆಂಜರ್‌ ಆ್ಯಪ್ ಆಗಿರುವ ವಾಟ್ಸ್ ಆ್ಯಪ್ ಹೊಸ ‘ವಾಟ್ಸ್ ಆ್ಯಪ್ ಚಾನೆಲ್ಸ್‌’ ಎಂಬ ಫೀಚರ್‌ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೊಂದು ಏಕಮುಖ ಪ್ರಸಾರ ಪರಿಕರವಾಗಿದ್ದು, ಅಪ್‌ಡೇಟ್ಸ್‌ ಎಂಬ ಹೊಸ ಟ್ಯಾಬ್‌ನಲ್ಲಿ ನಿಮ್ಮ ಆಸಕ್ತಿಯ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ಇದು ಬಳಕೆದಾರರ ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳಿಂದ ಪ್ರತ್ಯೇಕವಾದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ.

ವಾಟ್ಸ್ ಆ್ಯಪ್ ಚಾನಲ್ಸ್‌ ಎಂಬ ಈ ಹೊಸ ಫೀಚರ್‌ ಭಾರತ ಸಹಿತ 150ಕ್ಕೂ ಅಧಿಕ ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್‌ ಮಾಡಲಾದ ಚಾನೆಲ್‌ಗಳನ್ನು ಅವರು ನೋಡಬಹುದಾಗಿದೆ ಅಥವಾ ಬಳಕೆದಾರರು ಹೆಸರು ಅಥವಾ ವಿಭಾಗದ ಮೂಲಕ ಚಾನಲ್‌ಗಳನ್ನು ಹುಡುಕಬಹುದಾಗಿದೆ. ಹೊಸ, ಹೆಚ್ಚು ಸಕ್ರಿಯವಾಗಿರುವ ಹಾಗೂ ಹೆಚ್ಚು ಬಳಕೆದಾರರಿರುವ ಜನಪ್ರಿಯ ಚಾನಲ್‌ಗಳನ್ನೂ ಬಳಕೆದಾರರು ನೋಡಬಹುದಾಗಿದೆ.

ಭಾರತದ ಮತ್ತು ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳು, ಕಲಾವಿದರು, ಮುಖಂಡರು ಮತ್ತು ಸಂಸ್ಥೆಗಳು ಫಾಲೋ ಮಾಡಲು ಲಭ್ಯರಿರುತ್ತಾರೆ. ವಾಟ್ಸ್ಯಾಪ್‌ ಮಾತೃ ಸಂಸ್ಥೆ ಮೆಟಾ ಮುಖ್ಯಸ್ಥ ಮಾರ್ಕ್‌ ಝುಕೆರ್ಬರ್ಗ್‌ ಅವರನ್ನೂ ಫಾಲೋ ಮಾಡಬಹುದಾಗಿದೆ.

ಅತ್ಯಂತ ಖಾಸಗಿ ಬ್ರಾಡ್‌ಕಾಸ್ಟ್‌ ಸೇವೆಯಾಗಿ ವಾಟ್ಸ್ಯಾಪ್‌ ಚಾನಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ. ಚಾನಲ್‌ ಅನುಸರಿಸುವವರಾಗಿ ನಿಮ್ಮ ಫೋನ್‌ ಸಂಖ್ಯೆ ಮತ್ತು ಪ್ರೊಫೈಲ್‌ ಫೋಟೋವನ್ನು ಫಾಲೋ ಮಾಡುವ ಚಾನಲ್‌ನ ಅಡ್ಮಿನ್‌ ಮತ್ತು ಇತರ ಫಾಲೋವರ್ಸ್‌ ನೋಡುವುದಿಲ್ಲ. ಅಂತೆಯೇ ಯಾವುದೇ ಚಾನಲ್‌ ಫಾಲೋ ಮಾಡುವುದರಿಂದ ಅದರ ಅಡ್ಮಿನ್‌ ಕೂಡ ಬಳಕೆದಾರರ ಫೋನ್‌ ನಂಬರ್‌ ನೋಡುವುದಿಲ್ಲ. ಯಾರನ್ನು ಅನುಸರಿಸಬೇಕೆಂಬುದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದಾಗಿದೆ. ಚಾನಲ್‌ ಇತಿಹಾಸ 30 ದಿನಗಳ ಕಾಲ ಉಳಿಸಲಾಗುತ್ತದೆ.

ಅಪ್‌ಡೇಟ್‌ಗಳಿಗೆ ಇಮೋಜಿ ಮೂಲಕ ಪ್ರತಿಕ್ರಿಯಿಸಬಹುದು ಹಾಗೂ ಒಟ್ಟು ಪ್ರತಿಕ್ರಿಯೆಗಳ ಸಂಖ್ಯೆ ನೋಡಬಹುದಾಗಿದೆ. ಅಪ್‌ಡೇಟ್‌ಗಳನ್ನು ಫಾರ್ವರ್ಡ್‌ ಮಾಡಬಹುದಾಗಿದೆ ಹಾಗೂ ಚಾನಲ್‌ ಲಿಂಕ್‌ ಕಳುಹಿಸಬಹುದಾಗಿದೆ. ಫಾಲೋ ಮಾಡುವುದನ್ನು ನಿಲ್ಲಿಸಬೇಕಾದರೆ ಮ್ಯೂಟ್‌ ಅಥವಾ ಅನ್‌ಸಬ್‌ಸ್ಕ್ರೈಬ್‌ ಮಾಡಬಹುದಾಗಿದೆ.

ಬಳಕೆದಾರರೊಬ್ಬರು ಅಡ್ಮಿನ್‌ ಆಗಿ ತಮ್ಮದೇ ಚಾನಲ್‌ ರಚಿಸಬಹುದಾಗಿದೆ.

ವಾಟ್ಸ್ಯಾಪ್‌ ಚಾನಲ್‌ಗಳನ್ನು ಹೇಗೆ ಬಳಸುವುದು

1. ನಿಮ್ಮ ವಾಟ್ಸ್ಯಾಪ್‌ ಅನ್ನು ಇತ್ತೀಚಿನ ಆವೃತ್ತಿಗೆ ಗೂಗಲ್ ಪ್ಲೇಸ್ಟೋರ್‌ನಿಂದ ಅಥವಾ ಆಪ್‌ ಸ್ಟೋರ್‌ನಿಂದ ನವೀಕರಿಸಿ.

2. ವಾಟ್ಸ್ಯಾಪ್‌ ತೆರೆದು ಅಪ್‌ಡೇಟ್ಸ್‌ ಟ್ಯಾಬ್‌ ಅನ್ನು ಟ್ಯಾಪ್‌ ಮಾಡಿ. ಅನುಸರಿಸಬಹುದಾದ ಚಾನಲ್‌ಗಳ ಪಟ್ಟಿಯನ್ನು ನೀವು ನೋಡುತ್ತೀರಿ.

3. ಒಂದು ಚಾನಲ್‌ ಅನ್ನು ಅನುಸರಿಸಲು ಚಾನಲ್‌ ಹೆಸರಿನ ಪಕ್ಕದಲ್ಲಿರುವ ಬಟನ್‌ ಟ್ಯಾಪ್‌ ಮಾಡಿ. ಚಾನಲ್‌ ಹೆಸರಿನ ಮೇಲೆ ಟ್ಯಾಪ್‌ ಮಾಡಿ ಪ್ರೊಫೈಲ್‌ ಮತ್ತು ವಿವರಣೆ ನೋಡಬಹುದಾಗಿದೆ.

4. ಚಾನಲ್‌ ಅಪ್‌ಡೇಟ್‌ಗೆ ಪ್ರತಿಕ್ರಿಯೆ ಸೇರಿಸಲು ಸಂದೇಶದ ಮೇಲೆ ಒತ್ತಿ ಮತ್ತು ಹಿಡಿಯಿರಿ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News