ರಾಜ್ಯಪಾಲರು ತಮ್ಮ ರಾಜಭವನದ ಕಚೇರಿಯನ್ನು ಯಾಕೆ ಬಿಜೆಪಿ ಕಚೇರಿಗೆ ವರ್ಗಾಯಿಸಿಕೊಳ್ಳಬಾರದು: ದಿನೇಶ್ ಗುಂಡೂರಾವ್

Update: 2024-08-18 07:08 GMT

ಬೆಂಗಳೂರು, ಆ.18: ರಾಜ್ಯಪಾಲರು ಸಂವಿಧಾನದ ಪ್ರತಿನಿಧಿ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಿಜೆಪಿಯ ಏಜೆಂಟ್ ರಂತೆ ಆಗಿದ್ದಾರೆ. ಬಿಜೆಪಿಯ ಏಜೆಂಟ್ ಆಗಿರುವ ರಾಜ್ಯಪಾಲರು ತಮ್ಮ ರಾಜಭವನದ ಕಚೇರಿಯನ್ನು ಯಾಕೆ ಮಲ್ಲೇಶ್ವರದಲ್ಲಿರುವ ಬಿಜೆಪಿಯ ಕಚೇರಿ ಜಗನ್ನಾಥ ಭವನಕ್ಕೆ ವರ್ಗಾಯಿಸಿಕೊಳ್ಳಬಾರದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಚಿವ ದಿನೇಶ್ ಗುಂಡೂರಾವ್ ಅವರು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ರಾಜೀನಾಮೆ ಕೇಳುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ 'ಎಕ್ಸ್'ನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ರಾಜ್ಯಪಾಲರ ಬಳಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಹಾಗೂ ಜನಾರ್ದನ ರೆಡ್ಡಿಯವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಲೋಕಾಯುಕ್ತ ಹಾಗೂ ಖಾಸಗಿ ವ್ಯಕ್ತಿಗಳ ದೂರು ಇದೆ. ಅವುಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹುನ್ನಾರವೇನು. ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಲ್ಲಿಸಿರುವ ದೂರಿನ ಪ್ರತಿಗಳು ರಾಜಭವನದಲ್ಲಿ ಕೊಳೆಯುತ್ತಾ ಕುಳಿತಿವೆ. ಆದರೆ ರಾಜ್ಯಪಾಲರಿಗೆ ಸಿದ್ದರಾಮಯ್ಯ ವಿರುದ್ಧದ ದೂರಿನ ಪ್ರತಿ ಮಾತ್ರ ಕಾಣಿಸಲು ಅವರು ಧರಿಸಿದ್ದ ಭೂತಗನ್ನಡಿ ಯಾವುದು.? ಸಚಿವರು ವ್ಯಂಗ್ಯವಾಡಿದ್ದಾರೆ.

ಮುಡಾದಲ್ಲಿ 50-50ರ ಅನುಪಾತ ತಂದಿದ್ದೇ ಬಿಜೆಪಿ ಸರಕಾರ. ಈ ನಿಯಮದ ಅನುಸಾರವೇ ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದಾರೆ. ಇದರಲ್ಲಿ ಕಾನೂನುಬಾಹಿರವಾದದ್ದು ಏನಿದೆ.? ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದು, ಕಾನೂನುಬಾಹಿರವೆಂದರೆ 50-50ರ ಅನುಪಾತದ ನಿಯಮ ತಂದ ಬಿಜೆಪಿ ಸರಕಾರದ ಕ್ರಮವೂ ಕಾನೂನುಬಾಹಿರವಲ್ಲವೇ.? ಎಂದು ಪ್ರಶ್ನಿಸಿರುವ ದಿನೇಶ್ ಗುಂಡೂರಾವ್, ಸಿಎಂ ಸಿದ್ದರಾಮಯ್ಯರ ಪತ್ನಿಗೆ ಬದಲಿ ನಿವೇಶನ ನೀಡಿದ್ದು 2021ರಲ್ಲಿ. ಆಗ ಅಧಿಕಾರದಲ್ಲಿದ್ದಿದ್ದು ಬಿಜೆಪಿ ಸರಕಾರ. ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದು ಅಪರಾಧ ಎನ್ನುವುದಾದರೆ, ಬದಲಿ ನಿವೇಶನ ಮಂಜೂರು ಮಾಡಿದ ಬಿಜೆಪಿ ಸರಕಾರವೂ ಅಪರಾಧಿ ಸ್ಥಾನದಲ್ಲಿ ಇರಬೇಕಲ್ಲವೇ.?

ಸಿದ್ದರಾಮಯ್ಯರ ವಿರುದ್ಧ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿರುವವರು, ಇದೇ ಮುಡಾದಲ್ಲಿ ಕುಮಾರಸ್ವಾಮಿ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಅವರ ಕುಟುಂಬದ ಅನೇಕರ ಬಳಿ ಮುಡಾ ಸೈಟ್ ಗಳಿವೆ. ಸಿದ್ದರಾಮಯ್ಯರದ್ದು ಸ್ವಜನ ಪಕ್ಷಪಾತವಾದರೆ, ಕುಮಾರಸ್ವಾಮಿಯವರದ್ದು ಪರಮ ಜನ ಹಿತವೋ.?

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ, ಅವರ ಪಾತ್ರದ ಬಗ್ಗೆ ದಾಖಲೆಯಿಲ್ಲ, ಯಾವ ತನಿಖಾ ಸಂಸ್ಥೆಗಳು ಅವರ ಪಾತ್ರದ ಬಗ್ಗೆ ಉಲ್ಲೇಖಿಸಿಲ್ಲ. ಹೀಗಿದ್ದರೂ ರಾಜ್ಯಪಾಲರು ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದು ರಾಜಕೀಯ ಷಡ್ಯಂತ್ರವಲ್ಲವೇ.?

ಯಡಿಯೂರಪ್ಪರಂತೆ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು ಎಂದು ಕೇಳುತ್ತಿರುವವರು ಇತಿಹಾಸ ಮರೆತಿದ್ದಾರೆಯೇ.? ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ಆದರೆ ರಾಚೇನಹಳ್ಳಿ ಡಿ-ನೋಟಿಫಿಕೇಶನ್ ಹಾಗೂ ಗಣಿ ಅಕ್ರಮದಲ್ಲಿ ನ್ಯಾ.ಸಂತೋಷ್ ಹೆಗ್ಡೆ ವರದಿ ಬಳಿಕ ಬಂಧನದ ಭೀತಿಯಿಂದ ರಾಜೀನಾಮೆ ಕೊಟ್ಟರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ವಿರುದ್ದ ಅಂತಹ ಯಾವ ವರದಿಯಿದೆ.? ಯಾವ ದಾಖಲೆಯಿದೆ.?

ಸಿದ್ದರಾಮಯ್ಯರ ನಾಲ್ಕು ದಶಕದ ರಾಜಕೀಯ ಜೀವನ ನಿಷ್ಕಳಂಕ ಎಂಬುದು ಬಿಜೆಪಿ-ಜೆಡಿಎಸ್ ನಾಯಕರಿಗೂ ಗೊತ್ತು. ಆದರೂ ಸಿದ್ದರಾಮಯ್ಯರ ವಿರುದ್ಧ ದ್ವೇಷ ಕಾರಲು ಅವರು ಅಹಿಂದ ಸಮುದಾಯದ ಹಾಗೂ ಶೋಷಿತ ವರ್ಗದ ಧ್ವನಿಯಾಗಿದ್ದಾರೆ ಎಂಬ ಕಾರಣಕ್ಕಲ್ಲವೇ.?

ತಮಿಳುನಾಡು ರಾಜ್ಯಪಾಲ ರವಿ, ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಪ.ಬಂಗಾಳ ರಾಜ್ಯಪಾಲ ಆನಂದ್ ಬೋಸ್ ರಂತೆ ಕರ್ನಾಟಕದ ರಾಜ್ಯಪಾಲರೂ ರಾಜಭವನವನ್ನು ಬಿಜೆಪಿಯ ಹೆಡ್ ಆಫೀಸ್ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿರುವ ಇಂತಹವರಿಂದ ರಾಜ್ಯಪಾಲ ಹುದ್ದೆಯ ಘನತೆ ಉಳಿಯಲು ಸಾಧ್ಯವೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News