ಆಕಾಶದ ಅಗಲಕ್ಕೂ ನಿಂತ ಆಲವೇ...

Update: 2024-04-08 03:45 GMT

ಅಂಬೇಡ್ಕರ್ ಅವರಿಂದ ಪ್ರೇರಣೆ ಪಡೆದ ನಾವೆಲ್ಲಾ ಏನಾಗಿದ್ದೇವೆ ಎನ್ನುವುದನ್ನು ಅವರು ಹುಟ್ಟಿದ ದಿನವಾದರೂ ತುಂಬಾ ಗಂಭೀರವಾಗಿ ಚಿಂತಿಸಲೇ ಬೇಕಾದ ಕಾಲ ಬಂದಿದೆ. ಅವರು ರೂಪಿಸಿದ ಪವಿತ್ರ ಸಂವಿಧಾನಕ್ಕೆ ಧಕ್ಕೆ ತರುವ ಈ ಹೊತ್ತಿನಲ್ಲಿ ಸಂವಿಧಾನ ಉಳಿಸಿ ಅಂಬೇಡ್ಕರ್ ಅವರನ್ನು ಗೆಲ್ಲಿಸಿ ಎನ್ನುವ ವಾತಾವರಣವನ್ನು ನಾವು ಬಲವಾಗಿ ಪ್ರತಿಪಾದಿಸಬೇಕಾದ ಅನಿವಾರ್ಯತೆ ಈಗ ಬಂದಿದೆ. ಎಪ್ರಿಲ್ 14ರಂದು ಅಂಬೇಡ್ಕರ್ ಹೇಳಿದ್ದನ್ನು ಮರೆಯದಿರೋಣ. ಮೈ ಮರೆತುಮಲಗಿದರೆ ನಮ್ಮ ದೇಹವನ್ನೇ ದಾರಿಮಾಡಿಕೊಂಡು ಹೋಗುವ ದಿನ ದೂರವಿಲ್ಲ. ಅದಕ್ಕೆ ಬುದ್ಧ ಗುರುಗಳು ಹೇಳಿದ ‘‘ಸದಾ ಎಚ್ಚರವಾಗಿರು ಎಲ್ಲಾ ತಿಳಿಯುತ್ತದೆ’’ ಎನ್ನುವುದನ್ನು ಮರೆಯದಿರೋಣ.

ಈ ವಾರ ಎರಡು ಹಬ್ಬಗಳ ಸಂಭ್ರಮವನ್ನು ಆಚರಿಸುತ್ತಿದ್ದೇವೆ, ಒಂದು ಯುಗಾದಿ ಹಬ್ಬ ಇನ್ನೊಂದು ಎಪ್ರಿಲ್ 14. ಮಾನವೀಯತೆಯ ಮಹಾ ಸಾಗರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂಭ್ರಮ. ಪ್ರಕೃತಿಯ ಹುಟ್ಟು ಹಬ್ಬಯಿದೆಯಲ್ಲಾ, ಅದು ಎಲ್ಲಾ ಜೀವಿಗಳ ಹುಟ್ಟು ಹಬ್ಬವೇ. ಅರ್ಥಾತ್ ಮರ ಗಿಡಗಳ ಎಲೆ ಉದುರಿ ಮತ್ತೆ ಚಿಗುರಿ ಪ್ರಕೃತಿ ತನಗೆ ತಾನೇ ಸಿಂಗಾರ ಮಾಡಿಕೊಳ್ಳುವ ಪರಿ ಒಂದು ರೀತಿಯ ಬೆರಗು ಮತ್ತು ಅಚ್ಚರಿ. ಮತ್ತೆ ಮತ್ತೆ ಹುಟ್ಟುವ ಈ ನೆಲದ ಕಾರುಣ್ಯಕ್ಕೆ ಈ ಸಂಭ್ರಮಕ್ಕೆ ಸಾಟಿಯೇ ಇಲ್ಲ. ಈ ಸಂಭ್ರಮದ ಘಳಿಗೆಗೆ ನಮ್ಮ ಕಣ್ಣು ಮತ್ತು ಮನಸ್ಸುಗಳು ಸಾಕ್ಷಿಯಾಗುವುದು ಅದು ಮನಸ್ಸಿಗೆ ಆನಂದದ ತುಂದಿಲವೇ. ಹಾಗೆ ನೋಡಿದರೆ ಇಷ್ಟೊತ್ತಿಗೆ ಒಂದೆರಡು ಮಳೆ ಬಂದಿರಬೇಕಿತ್ತು. ಧೂಳನ್ನು ತೊಳೆದು ಹಸುರು ನಳ ನಳಿಸಬೇಕಿತ್ತು. ಆದರೂ ಗಿಡ ಮರಗಳು ನೆಲದ ಪಸೆ ಹೀರಿ ಹಸುರು ಚಿಗುರಿ ಪ್ರಕಟ ಗೊಳ್ಳುವುದಿದೆಯಲ್ಲಾ ಅದು ನಿಸರ್ಗದ ಅನನ್ಯ ಕೊಡುಗೆ. ಆದರೆ ಮನುಷ್ಯನ ದುರಾಸೆಯಿಂದ ನಮಗೆ ನಾವೇ ಪ್ರಕೃತಿಯ ಸಹಜ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಇರಲಿ ಈ ಸಾರಿಯ ಯುಗಾದಿ ಹಬ್ಬ ಎಂದರೆ ನನ್ನ ಪ್ರಕಾರ ಬಟೆ,್ಟ ಅಡುಗೆ-ಊಟಕ್ಕಿಂತ ನಾಡಿನೆಲ್ಲೆಡೆ, ದೇಶದೆಲ್ಲೆಡೆ ಮಳೆ ಬಂದರೆ ಅದಕ್ಕಿಂತ ದೊಡ್ಡ ಯುಗಾದಿ ಹಬ್ಬ ಇನ್ನೇನಿದೆ. ಈ ಸಾರಿ ಯುಗಾದಿ ಮಳೆಯಹಬ್ಬವಾಗಲಿ ಎನ್ನುವುದು ನಮ್ಮೆಲ್ಲರ ಪ್ರಾರ್ಥನೆ ಆಗಬೇಕು. ಸಕಲ ಚರಾಚರ ಜೀವಿಗಳಿಗೂ ಜೀವ ಜಲ ಬೇಕೇಬೇಕು ಅದಿಲ್ಲದೆ ಜೀವಕ್ಕೆ ಕಳೆಯೇ ಇರುವುದಿಲ್ಲ. ಏನೂ ಇಲ್ಲದಿದ್ದರೂ ಹೊಂದಿಸಿಕೊಂಡು ಹೋಗಬಹುದು. ಆದರೆ ನೀರಿಲ್ಲದಿದ್ದರೆ ಹಬ್ಬವೇ ಇರುವುದಿಲ್ಲ. ಬದುಕೇ ಇಲ್ಲ ಅನ್ನಿ, ಯುಗಾದಿ ಹಬ್ಬವೆಂದರೆ ಕನ್ನಡದ ಮನೆ ಮನಗಳಲ್ಲಿ ‘‘ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ’’ ಎಂಬ ಬೇಂದ್ರೆಯವರ ಸಾಲುಗಳು ನೆನಪಾಗದಿರಲಿಕ್ಕೆ ಸಾಧ್ಯವೇ ಇಲ್ಲ. ಆ ಹಾಡಿಗೂ, ಪ್ರಕೃತಿಗೂ, ಹಬ್ಬಕ್ಕೂ, ನಮಗೂ ಜೀವಸರಪಳಿಯ ಅವಿನಾಭಾವ ಸಂಬಂಧವಿದೆ. ಅಂತಿಮವಾಗಿ ನಾಳೆಯ ಯುಗಾದಿ ಹಬ್ಬ ಮಳೆಯ ಹರ್ಷವನ್ನು, ಒಬ್ಬಟ್ಟಿನ ಸಿಹಿಯನ್ನು ನಾಡಿನೆಲ್ಲೆಡೆ ಎಲ್ಲರೆದೆಯಲ್ಲಿ ನೆಮ್ಮದಿ ತರಲೆಂದು ಪ್ರಕೃತಿಯಲ್ಲಿ ಪ್ರಾರ್ಥಿಸೋಣ.

ಡಾ. ಭೀಮಾ ಸಾಹೇಬ್ ಅಂಬೇಡ್ಕರ್ ಎಂದರೆ ಒಂದು ಹೆಸರಲ್ಲ, ಒಂದು ಪ್ರದೇಶವೂ ಅಲ್ಲ ಒಂದು ಸಮುದಾಯ ಮಾತ್ರವಲ್ಲ. ಅದೊಂದು ದೇಶ. ಅಂಬೇಡ್ಕರ್ ಎನ್ನುವುದು ಒಂದು ಜಗತ್ತು. ಇಷ್ಟೊಂದು ವಿಶೇಷಣಗಳು ಬೇಕಾ ಎನ್ನುವಿರಾ, ಅಂಬೇಡ್ಕರ್ ಹುಟ್ಟಿದ್ದರಿಂದ ಲಕ್ಷಾಂತರ-ಕೋಟ್ಯಂತರ ಮಹಿಳೆಯರ, ದೀನ ದಲಿತರ ಕಣ್ಣಬೆಳಕಿಗೆ ಕಾರಣರಾದರು. ಇದು ಯಾವ ದೇವರಿಂದ, ಧರ್ಮದಿಂದ, ಜಾತಿಯಿಂದ ಆದುದ್ದಲ್ಲ. ಸ್ವಸಾಮರ್ಥ್ಯದಿಂದ ಛಲದಿಂದ ಅಪಾರ ಓದಿನಿಂದ ಸಾಧಿಸಲೇ ಬೇಕೆನ್ನುವ ಧ್ಯಾನದಿಂದ ಸಾಧ್ಯವಾಗಿದೆ. ಅಸಾಧ್ಯ ಎನ್ನುವ ಶಬ್ದವನ್ನು ತನ್ನ ಶಬ್ದಕೋಶದಿಂದ ತೆಗೆದುಹಾಕಿದ್ದರಿಂದ ಸಹಿಸಿಕೊಳ್ಳಲಾರದ ಅವಮಾನವನ್ನು ಎದುರಿಸಿ ಕೆಂಡವನ್ನೇ ಹಾಯ್ದು ತನ್ನ ದೇಹವನ್ನೇ ಬೆಳಕಾಗಿಸಿ ಈ ದೇಶವನ್ನು ಬೆಳಗಿದವರು ಭೀಮಾ ಸಾಹೇಬರು.

ಭೀಮಾಸಾಹೇಬರು ಹುಟ್ಟಿದ್ದರಿಂದ ನನ್ನಂತಹವರು ಇಲ್ಲಿ ನಿಂತು ಮಾತನಾಡಲಿಕ್ಕೆ, ಬರೆಯಲಿಕ್ಕೆ, ಉಸಿರಾಡಲಿಕ್ಕೆ ಸಾಧ್ಯವಾಗಿದೆ. ಒಂದು ಕಾಲಕ್ಕೆ ಜಡವಾಗಿದ್ದ ಈ ಸಮಾಜಕ್ಕೆ ಚಲನೆ ಮತ್ತು ಚೈತನ್ಯಕೊಟ್ಟವರು ಬಾಬಾ ಸಾಹೇಬರು. ಭೀಮಾ ಸಾಹೇಬರು ಈ ಸಮಾಜಕ್ಕೆ ಬೇಕೋ-ಬೇಡವೋ ಗೊತ್ತೋ-ಗೊತ್ತಿಲ್ಲವೋ ಆದರೆ 140 ಕೋಟಿ ಜನರ ಚಲನೆಯಲ್ಲಿ ಅವರಿದ್ದಾರೆ. ಅವರು ರೂಪಿಸಿದ ಸಂವಿಧಾನದ ಪ್ರಕಾರ ಹುಟ್ಟಿದ ಪ್ರತೀ ಮಗುವಿನ ದಾಖಲಾತಿಯಾಗಬೇಕು, ತೀರಿಕೊಂಡ ವ್ಯಕ್ತಿಯ ದಾಖಲಾತಿಯಾಗಬೇಕು ಮತ್ತು ಮನುಷ್ಯರ ಎಲ್ಲಾ ಚಟುವಟಿಕೆಗಳು ಸಂವಿಧಾನದ ಕಾನೂನಿನ ಚೌಕಟ್ಟಿಗೆ ಒಳಪಟ್ಟು ನಡೆಯುತ್ತವೆ. ಇಷ್ಟುಮಾತ್ರವಲ್ಲದೆ ಪಶು, ಪಕ್ಷಿ, ಪ್ರಾಣಿ, ಗಿಡ-ಮರ, ನದಿ ಹೀಗೆ ಇಡೀ ಪ್ರಕೃತಿಯನ್ನು ಕಾಪಾಡುವ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ. ಹಾಗಾಗಿ 140 ಕೋಟಿ ಜನರ ಉಸಿರಲ್ಲಿ ಭೀಮಾಸಾಹೇಬರಿದ್ದಾರೆ. ಹೀಗಾಗಿ ಭೀಮಾ ಸಾಹೇಬರು ಪ್ರತೀ ಪ್ರಜೆಯ ಚಲನೆಯಲ್ಲಿ ಹಾಗೂ ಪ್ರಕೃತಿಯ ಉಳಿವಿನಲ್ಲಿ ಇದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಆದುದರಿಂದ ಎಪ್ರಿಲ್ 14 ಎನ್ನುವುದು ನನ್ನಂತಹವರೆಲ್ಲರ ಹುಟ್ಟುಹಬ್ಬ ಕೂಡಾ ಹೌದು. ಇಲ್ಲದಿದ್ದರೆ ನನಗೊಂದು ವಿಳಾಸ, ಹೆಸರು, ದಾಖಲಾತಿ ಅಕ್ಷರ, ಅನ್ನ, ಯಾವುದೂ ಇರುತ್ತಿರಲಿಲ್ಲ. ಆದರೆ ಈಗ ನಾನು ಭಾರತದ ಸತ್ಪ್ರಜೆ ಎನ್ನುವುದು ಹೆಮ್ಮೆ, ಅಭಿಮಾನ. ಸ್ವಾಭಿಮಾನದಿಂದ ಹೇಳಿಕೊಳ್ಳುವ ಹಕ್ಕನ್ನು ನಮ್ಮ ಪವಿತ್ರವಾದ ಸಂವಿಧಾನ ದೊರಕಿಸಿಕೊಟ್ಟಿದೆ. ಅದಕ್ಕಾಗಿ ಸಂವಿಧಾನಕ್ಕೆ ಮತ್ತು ಬಾಬಾ ಸಾಹೇಬರಿಗೆ ನಾವೆಲ್ಲರೂ ಯಾವತ್ತೂ ಕೃತಜ್ಞರಾಗಿರಬೇಕು.

ಇಂತಹ ಮಹಾಸಾಧಕರಾದ ಬಾಬಾ ಸಾಹೇಬರು ಕನ್ನಡದ ನೆಲದ ಸಂಪರ್ಕ ಮತ್ತು ಪರಿಚಯಕ್ಕೆ ಬರುವುದಕ್ಕಿಂತ ಮುಂಚೆ ಈ ನೆಲದಲ್ಲಿ ಮಾನವೀಯತೆಯ ಪರವಾದ ಬಹಳ ದೊಡ್ಡ ಕ್ರಾಂತಿ ನಡೆದು ಹೋಗಿತ್ತು. ಕನ್ನಡಿಗರ ಚಿಂತನೆ ಮತ್ತು ಸಾಮಾಜಿಕ ಪ್ರಜ್ಞೆ ವಿಸ್ತಾರಗೊಳ್ಳುವುದು ಪಂಪನಿಂದ ಪ್ರಾರಂಭವಾಗಿ ಬಸವಾದಿ ಶರಣರು, ದಾಸವರೇಣ್ಯರು, ಸೂಫಿಸಂತರು ಇವರುಗಳು ಕನ್ನಡವನ್ನು ಮತ್ತು ಕನ್ನಡದ ಮನಸ್ಸುಗಳನ್ನು ಹಿಗ್ಗಿಸಿದರು. ಮಾನವೀಯ ಅಂತಃಕರಣದ ಜೀವ ಸೆಲೆ ಶತಮಾನಗಳಿಂದಲೂ ಮಿಡಿಯುತ್ತಿದೆ. ಆದರೆ ಸರಿಸಮವಾಗಿ ಜಾತಿ, ಧರ್ಮ, ದೇವರುಗಳ ಹೆಸರುಗಳಿಂದ ಅಮಾನವೀಯ ಕ್ರೌರ್ಯಗಳು ತುಳಿತಕ್ಕೊಳಗಾದವರ ಮೇಲೆ ನಡೆಯುತ್ತಲೇ ಇದೆ. ಅಸ್ಪಶ್ಯತೆಯ ಆಚರಣೆ ಇವತ್ತಿಗೂ ನಿಂತಿಲ್ಲ. ಅವರು ಅಪಾರ ನೋವು ಮತ್ತು ಅವಮಾನ ಅನುಭವಿಸುತ್ತಲೇ ಇದ್ದಾರೆ. ಸ್ವಾತಂತ್ರ್ಯ ಬಂದು ಸಂವಿಧಾನ ರಚನೆಯಾದಮೇಲೆ ಒಂದಿಷ್ಟು ಖಂಡಿತಾ ಸುಧಾರಣೆಯಾಗಿದೆ. ಈ ಒಂದಿಷ್ಟು ಎನ್ನುವ ಗಾತ್ರ ಬಹಳ ದೊಡ್ಡದು. ಅದನ್ನು ತನ್ನ ಶಕ್ತಿ ಮೀರಿ ನೊಂದವರ ಮುಖದಲ್ಲಿ ಮುಗುಳುನಗೆ ತರುವಲ್ಲಿ ಭೀಮಾ ಸಾಹೇಬರ ಪಾತ್ರ ಹಿರಿದು.

ಭೀಮಾ ಸಾಹೇಬರು ಪಕ್ಕದ ಮಹಾರಾಷ್ಟ್ರದವರಾದ್ದರಿಂದ ಕರ್ನಾಟಕದ ಬೆಳಗಾವಿ, ಧಾರವಾಡ, ಹಾಸನ, ಕೋಲಾರ, ಬೆಂಗಳೂರುಗಳಿಗೆ ಅನೇಕಸಲ ಭೇಟಿ ಕೊಟ್ಟಿದ್ದಾರೆ. ವಿಶೇಷವಾಗಿ ಶೋಷಿತರು ಶಿಕ್ಷಣ ಪಡೆಯುವ ಮೂಲಕ ಬಿಡುಗಡೆಯನ್ನು ಪಡೆಯಬೇಕೆಂದು ಹಂಬಲಿಸಿದರು. ಆ ಕಾರಣಕ್ಕೆ ಧಾರವಾಡದಲ್ಲಿ ದಲಿತರ ಮಕ್ಕಳಿಗಾಗಿ ತೆರೆದ ವಸತಿಶಾಲೆ ಈಗಲೂ ಮುಂದುವರಿದಿದೆ. ಹಾಗೇ ಬೆಂಗಳೂರಿನಲ್ಲಿ ಆಗಿನ ಮೈಸೂರಿನ ಮಹಾರಾಜರು ಪೀಪಲ್ ಎಜುಕೇಷನ್ ಸೊಸೈಟಿಗೆ ಶಿಕ್ಷಣಕ್ಕಾಗಿ ಕೊಟ್ಟಜಾಗವನ್ನು ಸದಾಶಿವನಗರದಲ್ಲಿ ಈಗಲೂ ಕಾಣಬಹುದು. ಹಾಸನಕ್ಕೆ ಭೇಟಿ ಮಾಡಿದ ಭೀಮಾಸಾಹೇಬರು ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಕುರಿತು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವಂತೆ ಭಾಷಣಮಾಡಿ ಹೋಗಿದ್ದಾರೆ. ಅಲ್ಲಿ ಅವರನ್ನು ನೋಡಿದವರು, ಭಾಷಣ ಕೇಳಿದವರು ಇಂದು ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ ಮತ್ತು ವಿನಮ್ರತೆಯಿಂದ ನೆನಪು ಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯಾನಂತರ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ, ಭಾರತದ ಮೊದಲ ಕಾನೂನು ಮಂತ್ರಿಯಾಗಿ ಕಾರ್ಮಿಕ ಸಚಿವರಾಗಿ ಈ ದೇಶದಲ್ಲಿ ಯಾರೂ ಮಾಡದ ಮಹಾನ್ ಕಾರ್ಯ ಮಾಡಿ ಹೋಗಿದ್ದಾರೆ. ಹೀಗೆ ಇಡೀ ದೇಶಕ್ಕೆ ಭೀಮಾಸಾಹೇಬರು ಹೇಗೆ ಪರಿಚಿತರೋ ಹಾಗೆ ಕರ್ನಾಟಕಕ್ಕೂ ಪರಿಚಿತರಾಗಿದ್ದಾರೆ. ಆದರೆ ಇಡೀ ಕರ್ನಾಟಕವನ್ನು ಭೀಮಾ ಸಾಹೇಬರು ಆವರಿಸಿಕೊಂಡಿದ್ದು ದಲಿತ ಚಳವಳಿಯಿಂದ. ಬಿ. ಬಸವಲಿಂಗಪ್ಪನವರು ಹೇಳಿದ ಒಂದು ಮಾತಿನ ಕಿಡಿ ಇಡೀ ಕರ್ನಾಟಕವನ್ನು ತಲ್ಲಣಗೊಳಿಸಿ ಒಂದು ವಿರಾಟ್ ಮಾದರಿಯ ಚಳವಳಿಗೆ ಕಾರಣವಾಗಿದ್ದು ದಲಿತ ಸಂಘರ್ಷ ಸಮಿತಿ. ದಲಿತ ಸಂಘರ್ಷ ಸಮಿತಿ ನಡೆಸಿದ ಚಳವಳಿ, ವಚನ ಚಳವಳಿಯ ಮುಂದುವರಿದ ಭಾಗದಂತೆ ದಲಿತರ ಎದೆಯಲ್ಲಿ ರೋಮಾಂಚನ ಮೂಡಿಸಿತ್ತು. ಭೀಮಾ ಸಾಹೇಬರನ್ನು ಇಡೀ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬೀದಿಗಳಲ್ಲಿ, ನಗರಗಳಲ್ಲಿ ಪಟ್ಟಣಗಳಲ್ಲಿ, ಮಹಾನಗರಗಳಲ್ಲಿ, ಹಳ್ಳಿ ಗ್ರಾಮಗಳಲ್ಲಿ, ಅವರ ಬಗ್ಗೆ ಹಾಡಿನ ಮೂಲಕ ‘‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಆಕಾಶದ ಅಗಲಕ್ಕೂ ನಿಂತ ಆಲವೇ’’ ಎಂದು ಎದೆಯುಬ್ಬಿಸಿ ದನಿ ಎತ್ತರಿಸಿ ಹಾಡುತ್ತಾ ಅರಿವು ಮೂಡಿಸಿದ ಮಹಾಕೀರ್ತಿ ದಸಂಸಕ್ಕೆ ಮತ್ತು ಈ ಸಂಘಟನೆಯ ನಾಯಕರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ಚಿಂತಕರಿಗೆ, ಕಲಾವಿದರಿಗೆ ಮತ್ತು ಸಂಘಟನೆಗೆ ತಮ್ಮ ಬದುಕನ್ನೇ ಮೀಸಲಿಟ್ಟ ಕಾರ್ಯಕರ್ತರಿಗೆ ಸಲ್ಲಬೇಕು. ಭೀಮಾಸಾಹೇಬರು ಎಂದರೆ ನಮ್ಮ ಹೆಮ್ಮೆಯ ನಾಯಕರು, ಗುರುಗಳು ವಿಶೇಷವಾಗಿ ತಾಯಿ-ತಂದೆಯಾಗಿ ಜನ ಸ್ವೀಕರಿಸಿದ್ದಾರೆ. ಅಪಾರವಾಗಿ ಗೌರವಿಸಿದ್ದಾರೆ, ಎದೆಯಲ್ಲಿಟ್ಟು ಕಾಪಿಟ್ಟು ಕೊಂಡಿದ್ದಾರೆ.

ಹಿಮಾಲಯದ ಮೇಲೆ ನಿಂತುನೋಡಿದರೂ ಭೀಮಾ ಸಾಹೇಬರು ಅದಕ್ಕೂ ಎತ್ತರವಾಗಿ ಕಾಣುತ್ತಾರೆ, ಇದನ್ನು ಸುಳ್ಳು ಎಂದು ಹೇಳುವವರೂ ಇದ್ದಾರೆ. ನಾವು ಅವರನ್ನು ಕುಬ್ಜರು ಎಂದು ಕರೆಯುತ್ತೇವೆ. ಇದೆಲ್ಲವನ್ನೂ ನೆನಪುಮಾಡಿಕೊಳ್ಳುತ್ತಾ ಭೀಮಾ ಸಾಹೇಬರು ಈ ದೇಶದ ನೊಂದವರು, ಶೋಷಿತರು, ಮಹಿಳೆಯರು ಹೇಗೆ ಸಬಲರಾಗಿರಬೇಕು ಮತ್ತು ಎಷ್ಟು ಬಲಿಷ್ಠರಾಗಿರಬೇಕು ಎನ್ನುವುದನ್ನು ತಮ್ಮ ಭಾಷಣದಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಭಾಷಣದ ಒಂದು ಘಟನೆಯನ್ನು ವಿವರಿಸುವುದಾದರೆ. ಇದು ಭೀಮಾಸಾಹೇಬರ ಹುಟ್ಟುಹಬ್ಬಕ್ಕೆ ಜಪಾನಿನ ಬುದ್ಧಗುರುಗಳು ಬರೆದ ಪತ್ರದಲ್ಲಿದೆ. ಪತ್ರದಲ್ಲಿದ್ದ ವಿಷಯ ಮತ್ತು ಬಾಬಾ ಸಾಹೇಬರು ಅಂದುಕೊಂಡಿದ್ದ ವಿಷಯ ಹೀಗೆ ಇಬ್ಬರ ಚಿಂತನೆಗಳು ಒಂದೇ ಆಗಿವೆಯಲ್ಲ ಎನ್ನುವುದು ಭೀಮಾಸಾಹೇಬರಿಗೆ ಆಶ್ಚರ್ಯ ಮತ್ತು ಸಂತೋಷವಾಗಿತ್ತು. ಒಳ್ಳೆಯದನ್ನು ಚಿಂತಿಸುವವರ ಮನಸ್ಥಿತಿ ಹಾಗೇಯೇ ಇರುತ್ತದೆನ್ನುವುದು ಜಪಾನಿನ ಬುದ್ಧಗುರುಗಳು ಬರೆದ ಪತ್ರಕ್ಕೆ ಸಾಕ್ಷಿಯಾಗಿದೆ. ಅದು ಹೀಗಿದೆ. ಒಂದು ಅರಮನೆಯಲ್ಲಿ ಬಹಳ ವರ್ಷಗಳ ನಂತರ ರಾಜ ರಾಣಿಗೆ ಒಂದು ಹೆಣ್ಣುಮಗುವಿನ ಜನನವಾಗುತ್ತದೆ. ರಾಣಿಯನ್ನು ನೋಡಿಕೊಳ್ಳುತ್ತಿದ್ದ ದಾಸಿಗೆ ಅತೀವ ಸಂತೋಷವಾಗುತ್ತದೆ. ಅರಮನೆಯವರಿಗೆ ಮಕ್ಕಳಿಲ್ಲ ಎನ್ನುವ ದೊಡ್ಡ ಕೊರಗಿರುತ್ತದೆ. ಆಗ ಮಗು ಹುಟ್ಟಿದ್ದರಿಂದ ಎಲ್ಲರಿಗೂ ಸಂಭ್ರಮವೋ ಸಂಭ್ರಮ. ರಾಣಿಗೆ ತುಂಬಾ ಆಪ್ತವಾಗಿದ್ದ ದಾಸಿಗೆ ಹೆಣ್ಣುಮಗುವನ್ನು ಕಂಡರೆ ಅಪಾರ ಅಕ್ಕರೆ. ಮಗುವನ್ನು ತುಂಬಾ ಬಲಿಷ್ಠವಾಗಿ ಮತ್ತು ಧೈರ್ಯವಂತಳನ್ನಾಗಿ ಯಾವ ರಾಜಕುಮಾರನಿಗೂ ಕಡಿಮೆಯಿಲ್ಲದಂತೆ ಬೆಳೆಸಬೇಕೆನ್ನುವ ಹಠ ದಾಸಿಯದು. ಎಲ್ಲಾ ಕಾಲಕ್ಕೂ ಗಂಡಸರು ಏಕೆ ರಾಜಕುಮಾರರಾಗಬೇಕು? ಹೆಣ್ಣುಮಕ್ಕಳೂ ಕೂಡ ರಾಜ್ಯವನ್ನು ಆಳಬೇಕು. ನಾನು ಈ ಅರಮನೆಯ ಅನ್ನ ತಿಂದು ಈ ಅರಮನೆಗೆ ಏನಾದರೂ ಮಹತ್ವದ್ದನ್ನು ಕೊಟ್ಟು ಹೋಗಬೇಕೆನ್ನುವ ಛಲ ಆಕೆಯದು. ಈ ರಾಜ್ಯ ಸುರಕ್ಷಿತವಾಗಿರಬೇಕಾದರೆ ಸಮರ್ಥವಾಗಿ ಆಳುವವರೂ ಬೇಕಲ್ಲವೇ, ಹಾಗಾಗಿ ಈ ಹೆಣ್ಣುಮಗುವನ್ನು ತುಂಬಾ ಸದೃಢವಾಗಿ ಬೆಳೆಸಬೇಕೆನ್ನುವ ಹೆಬ್ಬಯಕೆ ದಾಸಿಯದು. ಪ್ರತೀ ದಿನವೂ ಮಹಾರಾಣಿ ಮಡಿಲಿನಿಂದ ಮಗುವನ್ನು ಪಡೆದುಕೊಂಡು ಎಣ್ಣೆ ಹಚ್ಚಿ ಸ್ನಾನಮಾಡಿಸಿ ಸ್ನಾನ ಮುಗಿದ ಮೇಲೆ ಹದವಾದ ಬೆಂಕಿಯ ಶಾಖದ ತೊಟ್ಟಿಲಲ್ಲಿಟ್ಟು ಕಾಯಿಸುವುದು, ಪ್ರಾರಂಭಕ್ಕೆ ಸಾಧಾರಣವಾದ ಶಾಖ ನಂತರ ಮತ್ತಷ್ಟು ಇನ್ನಷ್ಟು ಹೆಚ್ಚಿಸುತ್ತಾ ಮಗು ಮಾನಸಿಕವಾಗಿ ದೈಹಿಕವಾಗಿ ದೃಢವಾಗಿ ಬಲಿಷ್ಠವಾಗಿ ಬೆಳೆದಳೆಂದರೆ ಇಡೀ ರಾಜ್ಯವನ್ನು ಬಲಿಷ್ಟವಾದ ರಾಜ್ಯವನ್ನಾಗಿ ಮಾಡಬಲ್ಲಳು ಎನ್ನುವ ದೂರದೃಷ್ಟಿಯಿಂದ ಈ ಕೆಲಸ ಮಾಡುತ್ತಿರುತ್ತಾಳೆ.

ದಾಸಿ ತಾಯಿಯೂ ಹೌದು, ಗುರುವೂ ಹೌದು ಎನ್ನುವ ಭಾವನೆಯಲ್ಲೇ ಈ ಕಾರ್ಯ ಮಾಡುತ್ತಿರುತ್ತಾಳೆ. ಒಂದು ದಿನ ಆಕಸ್ಮಿಕವಾಗಿ ತೊಟ್ಟಿಲಲ್ಲಿ ಮಗುವಿಗೆ ಬೆಂಕಿಯ ಶಾಖವನ್ನು ಕೊಡುವುದನ್ನು ಕಂಡು ಮಹಾರಾಣಿ ಗಾಬರಿಗೊಳ್ಳುತ್ತಾಳೆ. ಈ ದಾಸಿ ನನ್ನ ಮಗುವಿನ ಜೀವಕ್ಕೆ ಅಪಾಯವನ್ನು ತಂದೊಡ್ಡಬಲ್ಲಳೆಂದು ದಾಸಿಯನ್ನು ಮಗುವಿನ ಹಾರೈಕೆಯ ಕೆಲಸದಿಂದ ತೆಗೆದು ಹಾಕುತ್ತಾಳೆ. ಈ ಘಟನೆ ಏನನ್ನು ಸೂಚಿಸುತ್ತದೆ ಎಂದರೆ ಭೀಮಾಸಾಹೇಬರ ಕನಸು, ದಲಿತರನ್ನು ಶೋಷಿತರನ್ನು ಮಹಿಳೆಯರನ್ನು ಬಲಿಷ್ಠರನಾಗಿ ಮಾಡುವುದಾಗಿತ್ತು, ಆದರೆ ಇನ್ನೊಬ್ಬರ ಪ್ರವೇಶದಿಂದಾಗಿ ಅವರ ಉದ್ದೇಶ ಈಡೇರಲಿಲ್ಲ ಈ ಕಾರಣಕ್ಕೆ ಭೀಮಾ ಸಾಹೇಬರು ‘‘ವಿಮೋಚನೆಯ ರಥವನ್ನು ನಾನು ಶ್ರಮದಿಂದ ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ನೀವು ಸಾಧ್ಯವಾದರೆ ಮುಂದೆ ಎಳೆಯಿರಿ. ಇಲ್ಲವಾದರೆ ಬಿಟ್ಟು ಬಿಡಿ. ಹಿಂದಕ್ಕೆ ಮಾತ್ರ ಎಳೆಯಬೇಡಿ’’ ಎಂದಿದ್ದಾರೆ ಮತ್ತು ತನ್ನನ್ನೇ ಎರಡು ಬಾರಿ ಸೋಲಿಸಿದ ಈ ಸಮುದಾಯ ತಮಗೆ ತಾವೇ ಹೇಗೆ ಸದೃಢವಾಗಬಲ್ಲದು ಎಂಬುದು ಅವರ ಚಿಂತೆಗೆ ಕಾರಣವಾಗಿತ್ತು. ಮುಂದುವರಿದಂತೆ ಬಲಿತ ದಲಿತರೇ ದಲಿತರನ್ನು ಶೋಷಿಸುವ ದಿನಗಳು ಬರುವುದನ್ನು ಅವರು ನಿರೀಕ್ಷಿಸಿದ್ದರು. ಜಪಾನಿನ ಬುದ್ಧಗುರುಗಳು ಬರೆದ ಪತ್ರದ ಸಾರಾಂಶ ಮತ್ತು ದಲಿತರು, ಶೋಷಿತರನ್ನು ಕುರಿತ ಬಾಬಾ ಸಾಹೇಬರ ಆಶಯವೂ ಒಂದೇ ಆಗಿತ್ತು. ಅವರಿಂದ ಪ್ರೇರಣೆ ಪಡೆದ ನಾವೆಲ್ಲಾ ಏನಾಗಿದ್ದೇವೆ ಎನ್ನುವುದನ್ನು ಅವರು ಹುಟ್ಟಿದ ದಿನವಾದರೂ ತುಂಬಾ ಗಂಭೀರವಾಗಿ ಚಿಂತಿಸಲೇ ಬೇಕಾದ ಕಾಲ ಬಂದಿದೆ. ಅವರು ರೂಪಿಸಿದ ಪವಿತ್ರ ಸಂವಿಧಾನಕ್ಕೆ ಧಕ್ಕೆ ತರುವ ಈ ಹೊತ್ತಿನಲ್ಲಿ ಸಂವಿಧಾನ ಉಳಿಸಿ ಅಂಬೇಡ್ಕರ್ ಅವರನ್ನು ಗೆಲ್ಲಿಸಿ ಎನ್ನುವ ವಾತಾವರಣವನ್ನು ನಾವು ಬಲವಾಗಿ ಪ್ರತಿಪಾದಿಸಬೇಕಾದ ಅನಿವಾರ್ಯತೆ ಈಗ ಬಂದಿದೆ. ಎಪ್ರಿಲ್ 14 ರಂದು ಅಂಬೇಡ್ಕರ್ ಹೇಳಿದ್ದನ್ನು ಮರೆಯದಿರೋಣ. ಮೈ ಮರೆತುಮಲಗಿದರೆ ನಮ್ಮ ದೇಹವನ್ನೇ ದಾರಿಮಾಡಿಕೊಂಡು ಹೋಗುವ ದಿನ ದೂರವಿಲ್ಲ. ಅದಕ್ಕೆ ಬುದ್ಧ ಗುರುಗಳು ಹೇಳಿದ ‘‘ಸದಾ ಎಚ್ಚರವಾಗಿರು ಎಲ್ಲಾ ತಿಳಿಯುತ್ತದೆ’’ ಎನ್ನುವುದನ್ನು ಮರೆಯದಿರೋಣ.

ಎಲ್ಲರಿಗೂ ಯುಗಾದಿ ಮತ್ತು ಭೀಮಾಸಾಹೇಬರ ಹುಟ್ಟುಹಬ್ಬದ ಶುಭಾಶಯಗಳು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಸುಬ್ಬು ಹೊಲೆಯಾರ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!