ಸಮಗ್ರ ಜಾತಿ- ಜನಗಣತಿ ಅತ್ಯಗತ್ಯ

Update: 2023-12-24 05:45 GMT

ಕೆ.ಎನ್. ಲಿಂಗಪ್ಪ,

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಜಾತಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ಜಾತಿಗಳ ಸಮೀಕ್ಷೆಯ ದತ್ತಾಂಶದ ಅಗತ್ಯವಿದೆ ಮತ್ತು ಹಿಂದುಳಿದ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗಳ ಕುರಿತು ಜಾತಿ ಆಧಾರಿತ ಜನಗಣತಿಯು ಆಳವಾದ ದತ್ತಾಂಶವನ್ನು ಒದಗಿಸುತ್ತದೆಯಾದ್ದರಿಂದ ಅದು ಅತ್ಯಗತ್ಯ. ಆ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಗತಿಗಳೇ ಅವುಗಳ ಪುರೋಭಿವೃದ್ಧಿಗೆ ಪೂರಕವಾಗಿ ನಿಖರವಾದ ದತ್ತಾಂಶಗಳನ್ನು ಪ್ರಭುತ್ವಕ್ಕೆ ಒದಗಿಸುತ್ತವೆ. ಪ್ರಭುತ್ವವು ಯಾವುದೇ ರಾಜಕೀಯ ಸುಳಿಯಲ್ಲಿ ಸಿಲುಕದೆ ಮನಃಪೂರ್ವಕವಾಗಿ ಬಲಹೀನ ಜಾತಿಗಳ ಏಳಿಗೆಗೆ ಕಾರ್ಯಕ್ರಮ ರೂಪಿಸಬೇಕಿದೆ.

ಜನಗಣತಿಗೆ ಶತಮಾನಗಳಲ್ಲ, ಸಹಸ್ರಮಾನಗಳ ಇತಿಹಾಸವೇ ಇದೆ. ಜನಗಣತಿ ಎಂದರೆ- ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ದೇಶ ಅಥವಾ ಪ್ರಾಂತದ ಜನರು, ಮನೆಗಳು, ಸಂಸ್ಥೆಗಳು ಅಥವಾ ಇನ್ನಿತರ ಗುರುತರ ವಸ್ತು ವಿಶೇಷಗಳ ಎಣಿಕೆ. ಜನಗಣತಿ ತುಟ್ಟಿಯಾಗಿರುವುದರಿಂದ ಅನೇಕ ದೇಶಗಳಲ್ಲಿ 10 ವರ್ಷಗಳಿಗೊಮ್ಮೆ ಅಥವಾ ಪ್ರತೀ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಜನಗಣತಿ ಇಲ್ಲದ ವರ್ಷಗಳಲ್ಲಿ ಜನಸಂಖ್ಯೆಯು ಸಾಕಷ್ಟು ವಿಶ್ವಾಸಾರ್ಹವಾಗಿದ್ದರೆ ಪ್ರಮುಖ ದತ್ತಾಂಶಗಳ ಸಹಾಯದಿಂದ ಅಂದಾಜು ಮಾಡುವ ಪದ್ಧತಿಯೂ ಇದೆ.

ಜಾಗತಿಕ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿಯನ್ನು 7,000 ವರ್ಷಗಳಷ್ಟು ಹಿಂದೆಯೇ ಈಜಿಪ್ಟಿನಲ್ಲಿ ಪ್ರಾರಂಭಿಸಲಾಯಿತು. ಚುನಾವಣೆ ನಡೆಸಿ ನಾಗರಿಕ ಹಕ್ಕುಗಳನ್ನು ನೀಡಲು ಜನಗಣತಿ ಮಾಡುವುದು ಪ್ರಾಚೀನ ಗ್ರೀಸ್ ಮತ್ತು ರೋಮ್ನಲ್ಲಿ ಅಗತ್ಯವಾಗಿತ್ತು. ಕ್ರಿ.ಪೂ. 594ರಲ್ಲಿ ಪ್ರಾರಂಭಿಸಲಾದ ಈ ಜನಗಣತಿ ಪ್ರಜಾಪ್ರಭುತ್ವದ ಪರಿಕಲ್ಪನೆಯ ಪ್ರಾಚೀನತೆಯನ್ನು ಹೇಳುತ್ತದೆ. ಕ್ರಿ.ಪೂ. 400ರಲ್ಲಿ ಚೀನಾದಲ್ಲಿ ಜನಗಣತಿ ನಡೆದ ಇತಿಹಾಸವಿದೆ. ಹಾಗೆಯೇ ಕೆನಡಾದ ಕ್ಯುಬೆಕ್ ಪ್ರಾಂತದಲ್ಲಿ ಮೊದಲ ಆಧುನಿಕ ಜನಗಣತಿ 1666ರಲ್ಲಿ ನಡೆಸಿದ್ದುದು ಒಂದು ಮೈಲುಗಲ್ಲಾಗಿದೆ. ಆ ವರ್ಷದಿಂದ ಪ್ರತೀ ಆರು ವರ್ಷಗಳಿಗೊಮ್ಮೆ ನಿಯಮಿತವಾಗಿ ಜನಗಣತಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. 18ನೇ ಶತಮಾನದಲ್ಲಿ ಸ್ವೀಡನ್, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ನಾರ್ವೆ ರಾಷ್ಟ್ರಗಳು ಜನಗಣತಿ ಪ್ರಾರಂಭಿಸಿದ ದಾಖಲೆ ಇದೆ. ಅಮೆರಿಕ ಸಂಯುಕ್ತ ಸಂಸ್ಥಾನವು 1790ರಿಂದ ಮತ್ತು ರಶ್ಯ 1897ರಿಂದ ಆಧುನಿಕ ಜನಗಣತಿಯನ್ನು ನಿಯಮಿತವಾಗಿ ಮಾಡಿ ಕೊಂಡು ಬರುತ್ತಿವೆ.

ಭಾರತದಲ್ಲಿ ಜನಸಂಖ್ಯೆಯ ಜಾತಿ ಆಧಾರಿತ ಜನಗಣತಿ ಮೊದಲ ಬಾರಿಗೆ 1871ರಲ್ಲಿ ವಸಾಹತು ಕಾಲಘಟ್ಟದ ಮದ್ರಾಸ್ ಆಧಿಪತ್ಯದಲ್ಲಿ ವ್ಯವಸ್ಥಿತವಾಗಿ ಪ್ರಾರಂಭವಾಯಿತು. ಸರ್ ಎಚ್. ರಿಸ್ಲೆ ಅವರ ಮಾರ್ಗದರ್ಶನದಲ್ಲಿ ಅದು 1901ರ ಜನಗಣತಿಯಲ್ಲಿ ಮುಖ್ಯಘಟ್ಟ ತಲುಪುತ್ತದೆ. ಅವರು ಸಮಾಜದಲ್ಲಿನ ಜಾತಿಗಳನ್ನು ಅವುಗಳ ಶ್ರೇಣಿಯ ಪ್ರಕಾರ ಪಟ್ಟಿ ಮಾಡುವರು.ಮುಂದೆ ಜನಗಣತಿಯು ಯಶಸ್ವಿಯಾಗಲು ಮತ್ತು ಬ್ರಿಟಿಷರಿಗೆ ಅನುಕೂಲವಾಗುವ ರೀತಿಯಲ್ಲಿ ಜಾತಿಗಳ ಗುರುತಿಸುವಿಕೆಯ ನಿಯಮಗಳನ್ನು ಬಲಪಡಿಸುವರು. ಮಾರ್ಕ್ ಗೆಲೆಂಟರ್ ಸಾಮಾಜಿಕ ಪ್ರಾಶಸ್ತ್ಯದ ಜನಗಣತಿ ದಾಖಲಾತಿಯು ವಸಾಹತುಶಾಹಿ ಪ್ರಾಬಲ್ಯದ ಸಾಧನವಾಗಿದೆ. ಅಲ್ಲದೆ ಭಾರತೀಯ ರಾಷ್ಟ್ರತ್ವವನ್ನು ಶಿಥಿಲಗೊಳಿಸಲು ಮತ್ತು ಅಲ್ಲಗಳೆಯಲೂ ರೂಪಿಸಲಾಗಿದೆ ಎಂದಿರುವುದೂ ಉಲ್ಲೇಖನೀಯ.

1931ರ ಜನಗಣತಿಯ ಹಟನ್ಸ್ ವರದಿಯನ್ನು 1986 ರಲ್ಲಿ ಮರು ಮುದ್ರಣಗೊಳಿಸುವಾಗ, ಕೆ.ಎಸ್. ಸಿಂಗ್ ಅವರು ತಮ್ಮ ಮುನ್ನುಡಿಯಲ್ಲಿ 175 ಜಾತಿಗಳು ಉತ್ತಮ ಶ್ರೇಣಿಯ ಜಾತಿಗಳು, ಅವುಗಳಲ್ಲಿ 80 ಕ್ಷತ್ರಿಯ ಅಂತಸ್ತನ್ನು ಹೊಂದಿವೆ, 33 ಜಾತಿಗಳು ಬ್ರಾಹ್ಮಣ ಮತ್ತು 15 ವೈಶ್ಯ ಎಂದೂ ನಾಲ್ಕು ಜನಗಣತಿಯ ವಲಯದಲ್ಲಿ ಹಕ್ಕು ಮಂಡಿಸಿವೆ ಎಂದು ಬರೆದಿರುತ್ತಾರೆ.(ಸಂಯುಕ್ತ ಪ್ರಾಂತಗಳು, ಬಂಗಾಳ ಮತ್ತು ಸಿಕ್ಕಿಂ, ಬಿಹಾರ್ ಮತ್ತು ಒಡಿಶಾ ಮತ್ತು ಕೇಂದ್ರ ಪ್ರಾಂತಗಳು). ದೇಶದ ಉಳಿದ ಕಡೆಗಳಲ್ಲೂ 1871ರ ಜನಗಣತಿಯಿಂದಲೂ ಅದೇ ರೀತಿ ಹಕ್ಕನ್ನು ಮಂಡಿಸಿವೆ. ಮತ್ತೆ ಗೆಲಂಟರ್ ಈ ರೀತಿ ಹೇಳುತ್ತಾರೆ- ‘‘ಜಾತಿ ಸ್ಥಾನಮಾನವನ್ನು ಮೇಲ್ದರ್ಜೆಗೇರಿಸಲು ಜನಗಣತಿ ಪಟ್ಟಿಗಳನ್ನು ಉಪಯೋಗಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಅಂಕಿ ಅಂಶಗಳನ್ನು ಹೆಚ್ಚಿಸಲು ಯೋಗ್ಯವಲ್ಲದ ರೀತಿಯ ಹೋರಾಟ ಕಂಡು ಬಂದಿದೆ.’’ ಸ್ವಾತಂತ್ರ್ಯೋತ್ತರ ಭಾರತದಲ್ಲಿ 1951 ರಿಂದ, ರಾಷ್ಟ್ರೀಯ ನೀತಿಯೋ ಅಥವಾ ಮತ್ತೆಂಥದ್ದೋ ಕಾರಣದಿಂದ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಕೈ ಬಿಡಲಾಯಿತು.

ಕರ್ನಾಟಕದ ಮೊದಲನೇ ಹಿಂದುಳಿದ ವರ್ಗಗಳ ಎಲ್.ಜಿ. ಹಾವನೂರ್ ಅಧ್ಯಕ್ಷತೆಯ, ಆಯೋಗದ ವರದಿಯಲ್ಲಿ ಜಾತಿ ಎಣಿಕೆಯ ಪ್ರಾಮುಖ್ಯತೆಗೆ ಅಡಿ ಗೆರೆ ಎಳೆದಿದೆ. ಜನಸಂಖ್ಯಾ ಶಾಸ್ತ್ರ ಎಂದರೆ ಭೂಮಿಯಲ್ಲಿ ವಾಸಿಸುವ ಸಮೂಹಗಳು ಮತ್ತು ಸಮುದಾಯಗಳ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳನ್ನು ವಿವರಿಸುವ ಪ್ರಮುಖ ಅಂಶಗಳನ್ನು ನಿರ್ಲಕ್ಷಿಸಿ, ಅವರ ಧರ್ಮದ ಆಧಾರದ ಮೇಲೆ ತಲೆ ಎಣಿಸುವ ಯಾಂತ್ರಿಕ ಪ್ರಕ್ರಿಯೆಯಾಗಿದೆ. ಅದು ತನ್ನ ನಿಜವಾದ ಅರ್ಥ ಮತ್ತು ಮಹತ್ವವನ್ನು ಕಳೆದುಕೊಂಡಿದೆ.

ಭಾರತ 1951ರಿಂದ ಈತನಕ 7 ದಶ ವಾರ್ಷಿಕ ಜನಗಣತಿಯನ್ನು ಮಾಡಿಕೊಂಡು ಬಂದಿದೆ. ಅವುಗಳ ಯಾವುದರಲ್ಲೂ, ಹಿಂದುಳಿದ ವರ್ಗಗಳ ಆಯೋಗಗಳ ಬೇಡಿಕೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಇದ್ದರೂ, ಸಮಗ್ರ ಜಾತಿಗಳ ದತ್ತಾಂಶಗಳನ್ನು ಸಂಗ್ರಹಣೆ ಮಾಡಿರುವುದಿಲ್ಲ.

2001ರ ಜನಗಣತಿಯಲ್ಲಿ ಜಾತಿ -ಜನಗಣತಿ ಪರಿಚಯಿಸಲು ಆಡಳಿತಗಾರರು,ಸಮಾಜ ವಿಜ್ಞಾನಿಗಳು, ರಾಜಕೀಯ ಮುಖಂಡರು ಮತ್ತು ಸಮಾಜದ ಇತರ ವರ್ಗಗಳ ನಡುವೆ ಸಂಪೂರ್ಣ ಒಮ್ಮತವಿತ್ತು. ಇದು ಐದು ತಾತ್ವಿಕ ಕಾರಣಗಳನ್ನು ಆಧರಿಸಿದೆ:1. ಹಿಂದುಳಿದ ವರ್ಗಗಳ ಆಯೋಗ, ಒಬಿಸಿಗಳನ್ನು ಗುರುತಿಸಲು, ಜಾತಿ -ಜನಗಣತಿ ಮಾಡಲು ಕೇಳಿಕೊಂಡಿದೆ 2. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಒಬಿಸಿಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಸುಗಮಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪ್ರಸ್ತಾಪವನ್ನು ಬೆಂಬಲಿಸುತ್ತದೆ; 3. ಮಹಿಳೆಯರಿಗೆ ಮೀಸಲಾತಿಯು ಕಾರ್ಯಸೂಚಿಯಲ್ಲಿ ಇರುವುದರಿಂದ ಒಬಿಸಿ ಜಾತಿ ಆಧಾರಿತ ಜನಗಣತಿಯಿಂದ ಅದಕ್ಕೆ ಸಹಾಯವಾಗುತ್ತದೆ ಮತ್ತು 4. ಕೆಲವು ರಾಜಕೀಯ ಪಕ್ಷಗಳು ಅಂಥ ಎಣಿಕೆಗೆ ಒತ್ತಾಯಿಸಿವೆ 5. ಜನಾಂಗೀಯ ದತ್ತಾಂಶದಲ್ಲಿ ಆಸಕ್ತಿ ಹೊಂದಿರುವ ವಿದ್ವಾಂಸರು ವಿವಿಧ ಜಾತಿಗಳ ಸಾಮಾಜಿಕ -ಆರ್ಥಿಕ ಅಂಶಗಳನ್ನು ಅಧ್ಯಯನ ಮಾಡಲು ಜಾತಿ ಆಧಾರಿತ ಜನಗಣತಿ ನಡೆಸುವುದು ಸಮಂಜಸ ಎಂದು ಹೇಳಿರುತ್ತಾರೆ.

ಮತ್ತೊಬ್ಬ ಬರಹಗಾರ ನರೇಂದ್ರ ಪಾಣಿ ಈ ಅಂಶದ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿ ಹೇಳಿದ್ದಾರೆ. ಒಳ್ಳೆಯದೋ ಅಥವಾ ಕೆಟ್ಟದ್ದೋ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಈಗ ಭಾರತೀಯ ವಾಸ್ತವದ ಸುಸ್ಥಾಪಿತ ಭಾಗವಾಗಿದೆ. ಜಾತಿಯ ಗಾತ್ರ ಅದರ ಸಾಕ್ಷರತೆಯ ಮಟ್ಟ ಮತ್ತು ಅದರ ಔದ್ಯೋಗಿಕ ರಚನೆಯಂತಹ ಅಂಶಗಳ ಮಾಹಿತಿಯೂ ಹೆಚ್ಚು ಸಹಾಯ ಮಾಡುತ್ತದೆ. ಅಂತಹ ಮಾಹಿತಿಗೆ ಜನಗಣತಿ ಅತ್ಯುತ್ತಮ ಆಧಾರವಾಗಿರಬೇಕು.

1997ರಲ್ಲಿ ಜಾತಿ ಗಣತಿಯನ್ನು ಪರಿಚಯಿಸುವ ವಿಷಯವು ಅಧಿಕೃತವಾಗಿ ಪರಿಗಣನೆಗೆ ಬಂದಿತು. ಸಮಾಜ ಕಲ್ಯಾಣ ಸಚಿವಾಲಯವು 2001ರ ಭಾರತದ ಜನಗಣತಿಯಲ್ಲಿ ಜಾತಿಗಳ ಜನಸಂಖ್ಯೆಯ ಅಂಕಿ ಅಂಶಗಳನ್ನು ಸಂಗ್ರಹಿಸಬಹುದೇ ಎಂಬ ಬಗ್ಗೆ ಜನಗಣತಿ ಆಯೋಗದೊಡನೆ ಸಮಾಲೋಚಿಸಿತು. ಅನುಚ್ಛೇದ 330 ಮತ್ತು 332ರ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಮೀಸಲಾತಿಯಂತೆಯೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿಡಬೇಕು. ಜನ ಗಣತಿಯಿಂದ ಕಂಡು ಬರುವ ಜನಸಂಖ್ಯೆಯ ಆಧಾರದ ಮೇಲೆ ಹಿಂದುಳಿದ ಜಾತಿಗಳಿಗೂ ಇದೇ ರೀತಿಯ ಮೀಸಲಾತಿಯನ್ನು ಪ್ರಸ್ತಾಪಿಸಲಾಯಿತು. ಈ ಪ್ರಸ್ತಾಪವನ್ನು ಜನಗಣತಿ ಆಯೋಗವು ಪರಿಗಣಿಸಿತು. ಇದು ಮುಂಬರುವ 2001ರ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಕೈಗೊಳ್ಳುವುದಾಗಿಯೂ ಹಾಗೂ ಸಿದ್ಧತೆಯನ್ನು ಮಾಡಿಕೊಳ್ಳುವುದಾಗಿಯೂ ತನ್ನ ಇಂಗಿತ ವ್ಯಕ್ತಪಡಿಸಿ, ಒಂದು ವೇಳೆ ಸರಕಾರ ನಿರ್ಧರಿಸಿದರೆ ಮಾತ್ರ ಎಂದಿತು. ಆದರೆ ನಂತರದ ತೊಂದರೆಗಳು ಮತ್ತು ಸಂಕೀರ್ಣಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕೈ ಬಿಡಲಾಯಿತು.

ಕರ್ನಾಟಕದ ಮೊದಲನೇ(ಶಾಶ್ವತ) ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಪ್ರೊಫೆಸರ್ ರವಿವರ್ಮ ಕುಮಾರ್ ಮತ್ತು ಬೇರೆ ಬೇರೆ ರಾಜ್ಯಗಳ ಆಯೋಗಗಳ ಪ್ರಕಾರ, ಜಾತಿ ಸಂಬಂಧಿತ ಜನಗಣತಿಯ ಅಲಭ್ಯತೆಯಿಂದ ಮೀಸಲಾತಿ ಅನುಷ್ಠಾನಗೊಳಿಸುವಲ್ಲಿ ಕ್ಲಿಷ್ಟತೆ ಅನುಭವಿಸಲಾಗಿದೆ. ಜನಗಣತಿದಾರರು ಅನುಚ್ಛೇದ 341 ಮತ್ತು 342ರ ವೇಳಾಪಟ್ಟಿಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಜಾತಿಗಳು ಮತ್ತು ಬುಡಕಟ್ಟು ಜಾತಿಗಳ ದತ್ತಾಂಶವನ್ನು ಸಂಗ್ರಹಿಸುತ್ತಾರೆ. ಅವರು ಒಬಿಸಿಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸುವುದಿಲ್ಲ. ಆದ್ದರಿಂದ ಆ ದತ್ತಾಂಶಗಳ ಕೊರತೆಯಿಂದಾಗಿ ಹಿಂದುಳಿದ ವರ್ಗಗಳ ಆಯೋಗಗಳು ಪರೋಕ್ಷ ವಿಧಾನಗಳನ್ನು ಆಶ್ರಯಿಸುತ್ತವೆ. ನ್ಯಾಯಾಂಗವು ಬಹುತೇಕ ಇಂಥ ವರ್ಗೀಕರಣವನ್ನು ಅಮಾನ್ಯಗೊಳಿಸುತ್ತದೆ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಕಾಯ್ದೆ-1993 ಅನ್ನು ‘‘ಹಿಂದುಳಿದ ವರ್ಗಗಳ ಪಟ್ಟಿಯನ್ನು ಕಾಲಕಾಲಕ್ಕೆ ಹಿಂದುಳಿದ ವರ್ಗಗಳೆಂದು ಉಳಿಯದ ಜಾತಿಯನ್ನು ತೆಗೆಯಲು ಅಥವಾ ಅಂತಹ ಪಟ್ಟಿಗೆ ಹೊಸ ಹಿಂದುಳಿದ ವರ್ಗಗಳನ್ನು ಸೇರಿಸುವ’’ ದೃಷ್ಟಿಯಿಂದ ಪರಿಷ್ಕರಿಸಲು ಅನುಷ್ಠಾನ ಗೊಳಿಸಲಾಯಿತು. ಇದನ್ನು ಜಾತಿಗಳ ಸಾಮಾಜಿಕ ಮತ್ತು ಶಿಕ್ಷಣದ ದತ್ತಾಂಶವಿಲ್ಲದೆ ಮಾಡಲಾಗುವುದಿಲ್ಲ.

ಜನಗಣತಿಯಲ್ಲಿ ಜಾತಿಯನ್ನು ಪರಿಗಣಿಸಿದ ಕಾರಣಗಳನ್ನು ಸ್ಥೂಲವಾಗಿ 3 ವರ್ಗಗಳಾಗಿ ವಿಂಗಡಿಸಲಾಗಿದೆ: 1. ನೈತಿಕ, 2. ವ್ಯಾವಹಾರಿಕ ಮತ್ತು 3. ತಾಂತ್ರಿಕ.

(1) ನೈತಿಕ: ಜಾತಿ ದತ್ತಾಂಶಗಳ ಸಂಗ್ರಹಣೆ ಜಾತೀಯತೆಯನ್ನು ಹೆಚ್ಚಿಸುತ್ತದೆ, ‘ಜಾತಿ ನ್ಯಾಯ ಸಮ್ಮತವಾಗಿ ಸ್ಥಿರೀಕರಣ’ ವಾಗುತ್ತದೆ ಮತ್ತು ಸಮಾಜದಲ್ಲಿ ‘ಬಿರುಕುಗಳನ್ನು ಸೃಷ್ಟಿಸುತ್ತದೆ’. ಆದರೆ ಈ ಆತಂಕಗಳು ಆಧಾರರಹಿತವಾಗಿವೆ. ಏಕೆಂದರೆ ಕಳೆದ 70 ವರ್ಷಗಳಲ್ಲಿ ಜಾತಿ ದತ್ತಾಂಶಗಳನ್ನು ಸಂಗ್ರಹಿಸಲಾಗಿಲ್ಲ ಮತ್ತು ಜಾತಿಯಲ್ಲಿರುವ ತಾರತಮ್ಯವೂ ಹೋಗಿಲ್ಲ; ಅಥವಾ ಅಸಮಾನತೆಯನ್ನೂ ಕೊನೆಗಾಣಿಸಲಾಗಿಲ್ಲ. ಎಂಬುದನ್ನು ಎಲ್ಲರೂ ನೆನಪಿಡಬೇಕು.

(2) ವ್ಯಾವಹಾರಿಕ: ದತ್ತಾಂಶವನ್ನು ಸಂಗ್ರಹಿಸದಿರುವುದು ಜಾತಿ ಘರ್ಷಣೆಗಳ ಆವರ್ತನವನ್ನು ಕಡಿಮೆ ಮಾಡಲು ಸಹಾಯ ಮಾಡಲಿಲ್ಲ. ಇದು ವಿಶೇಷವಾಗಿ ಬಿಹಾರದಲ್ಲಿ ವಾಸ್ತವವಾಗಿದೆ (ಪ್ರಸಕ್ತ ಬಿಹಾರದಲ್ಲಿ ಜಾತಿ -ಜನಗಣತಿ ಕಾರ್ಯ ಮುಗಿದು ಜಾತಿವಾರು ದತ್ತಾಂಶಗಳನ್ನು ಬಹಿರಂಗ ಪಡಿಸಲಾಗಿದೆ). ವಾಸ್ತವವಾಗಿ ಕೆಲವು ತಜ್ಞರು ಜಾತಿ ಸಂಘರ್ಷಗಳ ಸಮಸ್ಯೆಯನ್ನು ಪರಿಹರಿಸಲು ಜಾತಿ ಗುಂಪುಗಳ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅಧಿಕೃತ ಮಾಹಿತಿಯ ಅಗತ್ಯವಿದೆ ಎಂದು ವಾದಿಸುತ್ತಾರೆ.

(3) ತಾಂತ್ರಿಕ: ಸಾಮಾಜಿಕ -ಆರ್ಥಿಕ ಸಂಕೀರ್ಣತೆಗಳು ಮತ್ತು ರಾಜಕೀಯ ಆಯಾಮಗಳನ್ನು ಪ್ರೊ.ಕೆ.ನಾಗರಾಜ್(ಎಂಐಡಿಎಸ್), ಪ್ರೊ.ಪಿ.ಕೆ .ಮಿಶ್ರ ಮತ್ತು ಸುರೇಶ್ ಪಾಟೀಲ್ (ಎಎಸ್ಐ)ಅವರುಗಳು ವಿವರವಾಗಿ ನೀಡಿದ್ದಾರೆ. ಸಂಕೀರ್ಣತೆಗಳು ಪ್ರಾಥಮಿಕವಾಗಿ ಜಾತಿಗಳ ವಿಘಟನೆ, ಸ್ಥಳೀಕರಣ, ಅಸ್ಥಿರ ಮತ್ತು ಅಸ್ಪಷ್ಟತೆಯಿಂದಾಗಿ ಉದ್ಭವಿಸುತ್ತವೆ.

ವಿಘಟನೆ: 1881ರ ಜನಗಣತಿಯಲ್ಲಿ ಎಣಿಕೆ ಮಾಡಲಾದ 1,929 ಜಾತಿಗಳಲ್ಲಿ 1,126 (ಶೇ.58) 1,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದವು, 556 (ಶೇ.29) ನೂರಕ್ಕಿಂತ ಕಡಿಮೆ; ಮತ್ತು 275 (ಶೇ.14) 10ಕ್ಕಿಂತ ಕಡಿಮೆ. ಹೆಚ್ಚಿನ ಸಂಖ್ಯೆಯಲ್ಲಿ ಏಕ ಸದಸ್ಯ ಜಾತಿಗಳೂ ಇವೆ. ಮತ್ತೊಂದು ಪರಮಾವಧಿ ಎಂದರೆ ಮೂರೂ ಜಾತಿ ಗುಂಪುಗಳು-ಬ್ರಾಹ್ಮಣರು, ಕುಣಬಿಗಳು ಮತ್ತು ಚಮ್ಮಾರರು-ಪ್ರತಿಯೊಬ್ಬರೂ ಒಂದು ಕೋಟಿಗಿಂತ ಹೆಚ್ಚಿದ್ದಾರೆ. ಈ ಮೂವರು ಕೆಳಗಿರುವ 1,848 (ಶೇ. 96) ಜಾತಿಗಳ ಸಂಖ್ಯೆಯಷ್ಟು ಜನರನ್ನು ಹೊಂದಿದ್ದಾರೆ.

ಸ್ಥಳೀಕರಣ: 1,929 ಜಾತಿ ಗುಂಪುಗಳಲ್ಲಿ 1,432 (ಶೇ.74) ಒಂದು ಪ್ರದೇಶದಲ್ಲಿ ಮಾತ್ರ ಕಂಡು ಬಂದಿದೆ. 1,780(ಶೇ. 92) ನಾಲ್ಕು ಪ್ರದೇಶಗಳಲ್ಲಿ ಹರಡಿತ್ತು ಮತ್ತು ಕೇವಲ ಬ್ರಾಹ್ಮಣರು ಮತ್ತು ರಜಪೂತರು ಅಖಿಲ ಭಾರತ ಮಟ್ಟದಲ್ಲಿ ನೆಲೆಸಿದ್ದರು. ಸ್ಥಳೀಕರಣದ ಮಾದರಿಯು, ಪ್ರದೇಶಗಳಲ್ಲಿ ಬದಲಾಗುತ್ತಿರುವಂತೆ ತೋರುತ್ತಿದೆ. ಉದಾಹರಣೆಗೆ, ಪೂರ್ವ ಮತ್ತು ದಕ್ಷಿಣ ಪ್ರದೇಶಗಳು ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ದೊಡ್ಡ ಜಾತಿಯ ಗುಂಪುಗಳ ಹೆಚ್ಚಿನ ಸ್ಥಳೀಕರಣವನ್ನು ಹೊಂದಿದ್ದವು, ಅವುಗಳು ಪ್ರಾದೇಶಿಕವಾಗಿ ಹರಡಿಕೊಂಡಿವೆ.

ಅಸ್ಥಿರ ಮತ್ತು ಅಸ್ಪಷ್ಟತೆ: ಸಾಮಾಜಿಕ- ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳು ವಿಶೇಷವಾಗಿ ಸ್ವಾತಂತ್ರ್ಯದ ನಂತರ ಜಾತಿಗಳ ರಚನೆ ಮತ್ತು ಪರಿಕಲ್ಪನೆಯಲ್ಲಿ ಹಲವಾರು ಸ್ಪಷ್ಟತೆಗಳನ್ನು ಪರಿಚಯಿಸಿತು, ಜನಗಣತಿ-ರೀತಿಯ ಕಾರ್ಯ ವಿಧಾನದ ಮೂಲಕ ಅವುಗಳನ್ನು ಎಣಿಸುವಲ್ಲಿ ಅಗಾಧವಾದ ಸಮಸ್ಯೆಗಳನ್ನು ಉಂಟು ಮಾಡಿತು. ಉದಾಹರಣೆಗೆ-ವಲಸೆಯ ಮಾದರಿಗಳು ಮತ್ತು ಜಾತಿ ಸಂಯೋಜನೆಗಳಲ್ಲಿನ ಬದಲಾವಣೆಗಳು, ಜಾತಿ ಉದ್ಯೋಗದ ಸಂಬಂಧ ಮತ್ತು ಜಾತಿ ಗುಂಪುಗಳ ಸ್ವಭಾವದಲ್ಲಿ ವ್ಯಾಪಕವಾಗಿ ಬದಲಾಗುತ್ತದೆ. ಇದು ವಿವಿಧ ಹಂತಗಳಲ್ಲಿ ಜಾತಿಯ ಗ್ರಹಿಕೆಯಲ್ಲಿ ಅಸ್ಪಷ್ಟತೆಗಳನ್ನು ಪರಿಚಯಿಸುತ್ತದೆ.

ಭಾರತದಲ್ಲಿ ಜಾತಿಯು ಸಾಮಾಜಿಕ ಮತ್ತು ರಾಜಕೀಯ ಸಂವಾದದ ಅವಿಭಾಜ್ಯ ಅಂಗವಾಗಿ ಮುಂದುವರಿಯುವುದರಿಂದ ಜನಗಣತಿಯ ಮೂಲಕ ಜಾತಿ ದತ್ತಾಂಶವನ್ನು ಸಂಗ್ರಹಿಸುವ ಪ್ರಶ್ನೆಯು ಭಾರತದ ಮುಂದಿನ ಜನಗಣತಿಯ ಮೊದಲು ಖಂಡಿತವಾಗಿಯೂ ಮತ್ತೆ ಸ್ಥಾನ ಪಡೆಯಬೇಕು. ಜಾತಿಗಳನ್ನು ಉಳಿಸಿಕೊಳ್ಳುವುದಾದರೆ ಜನಗಣತಿಯಲ್ಲಿ ಅವುಗಳ ಎಣಿಕೆಯನ್ನು ಬಿಟ್ಟುಬಿಡುವುದರಿಂದ ಸಮಾನತೆಯ ಸಮಾಜವನ್ನು ತರುವುದಿಲ್ಲ ಎಂದು ಇಲ್ಲಿ ಉಲ್ಲೇಖಿಸುವುದು ಸಂದರ್ಭಕ್ಕೆ ಹೊರತಾಗಿಲ್ಲ.

ಜಾತಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ಜಾತಿಗಳ ಸಮೀಕ್ಷೆಯ ದತ್ತಾಂಶದ ಅಗತ್ಯವಿದೆ ಮತ್ತು ಹಿಂದುಳಿದ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗಳ ಕುರಿತು ಜಾತಿ ಆಧಾರಿತ ಜನಗಣತಿಯು ಆಳವಾದ ದತ್ತಾಂಶವನ್ನು ಒದಗಿಸುತ್ತದೆಯಾದ್ದರಿಂದ ಅದು ಅತ್ಯಗತ್ಯ. ಆ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಗತಿಗಳೇ ಅವುಗಳ ಪುರೋಭಿವೃದ್ಧಿಗೆ ಪೂರಕವಾಗಿ ನಿಖರವಾದ ದತ್ತಾಂಶಗಳನ್ನು ಪ್ರಭುತ್ವಕ್ಕೆ ಒದಗಿಸುತ್ತವೆ. ಪ್ರಭುತ್ವವು ಯಾವುದೇ ರಾಜಕೀಯ ಸುಳಿಯಲ್ಲಿ ಸಿಲುಕದೆ ಮನಃಪೂರ್ವಕವಾಗಿ ಬಲಹೀನ ಜಾತಿಗಳ ಏಳಿಗೆಗೆ ಕಾರ್ಯಕ್ರಮ ರೂಪಿಸಬೇಕಿದೆ. ಪ್ರಭುತ್ವದ ಗಮನ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಬಲಾಢ್ಯ ಜಾತಿಗಳತ್ತ ಸರ್ವಥಾ ಅಲ್ಲ.

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎನ್. ಲಿಂಗಪ್ಪ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!