ಡಿ ಕೆ ಶಿವಕುಮಾರ್ ಜೊತೆ ಕೈ ಮುಸ್ಲಿಂ ನಾಯಕರ ಸಭೆ

Update: 2023-08-09 17:29 GMT

ಕಾಂಗ್ರೆಸ್ ಮುಸ್ಲಿಂರನ್ನು ಓಲೈಸುತ್ತಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದವರು ಆರೋಪಿಸುತ್ತಲೇ ಇರುತ್ತಾರೆ. ಆದರೆ, ಕಾಂಗ್ರೆಸ್ನಲ್ಲಿ ಕಾಂಗ್ರೆಸ್ ಮುಸ್ಲಿಂರನ್ನು ಓಲೈಸುತ್ತಿದೆಯೇ ಅಥವಾ ಮುಸ್ಲಿಮರೇ ಕಾಂಗ್ರೆಸ್ಸಿಗರನ್ನು ಓಲೈಸುತ್ತಿದ್ದಾರೆಯೇ ಎಂದು ಗೊತ್ತಾಗದ ಸ್ಥಿತಿ. ಕಾಂಗ್ರೆಸ್ ಮುಸ್ಲಿಮರಿಂದ ಎಲ್ಲ ಬೆಂಬಲ ಪಡೆದುಕೊಂಡು ಆಮೇಲೆ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ತಕರಾರುಗಳು ಇರುವುದು ಅಷ್ಟಾಗಿ ಚರ್ಚೆಯಾಗುವುದಿಲ್ಲ. ಈ ವಿಚಾರ ಆಗೀಗೊಮ್ಮೆ ಚರ್ಚೆಗೆ ಬಂದರೂ, ಹಾಗೆಯೇ ಹಿಂದಕ್ಕೆ ಸರಿದುಹೋಗುತ್ತದೆ.

ಈ ಸಲದ ವಿಧಾನಸಭೆ ಚುನಾವಣೆಯಲ್ಲಂತೂ ಮುಸ್ಲಿಂರು ಒಗ್ಗಟ್ಟಿನಿಂದ ಮತ ಹಾಕಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ಯಾರಿಗೂ ಎರಡು ಮಾತಿಲ್ಲ. ಆದರೆ ಸಂಪುಟದಲ್ಲಿ ನಿಜವಾಗಿಯೂ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತ ಪ್ರಾತಿನಿಧ್ಯ ಸಿಕ್ಕಿದೆಯೆ ಎಂಬ ಪ್ರಶ್ನೆ ಎದ್ದಿತ್ತು.

ವಿಧಾನ ಸಭಾ ಚುನಾವಣೆಯಲ್ಲಿ ಮುಸ್ಲಿಮರು ಒಗ್ಗಟ್ಟಿನಿಂದ ಓಟು ಹಾಕಿದರೂ ಅವರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಮತ್ತು ಅದನ್ನು ಸರಿದೂಗಿಸಿದಂತೆ ತೋರಿಸಲು ಹೆಣಗಾಡುತ್ತಿದೆ ಎಂಬುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಕಾಣಿಸುತ್ತದೆ. ಕೇಸರಿ ಪಡೆಯ ಪ್ರಾಬಲ್ಯವಿರುವ ದಕ್ಷಿಣ ಕನ್ನಡದಲ್ಲಿ ಪ್ರಭಾವಿ ನಾಯಕರಾಗಿದ್ದ ಯುಟಿ ಖಾದರ್ ಅವರನ್ನು ಸ್ಪೀಕರ್ ಆಗಿಸಿದ್ದೂ ಸೇರಿದಂತೆ ಹಲವು ವಿಚಾರಗಳು ಮುಸ್ಲಿಂ ನಾಯಕರ ಬೇಸರಕ್ಕೆ ಕಾರಣವಾಗದೆ ಇಲ್ಲ.

ಸಂಪುಟ ರಚನೆ ವೇಳೆ, ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ತನ್ವೀರ್ ಸೇಠ್, ನಾಲ್ಕನೇ ಬಾರಿಗೆ ಶಾಸಕರಾದ ಎನ್.ಎ.ಹ್ಯಾರಿಸ್, ಯುವನಾಯಕ ರಿಜ್ವಾನ್ ಅರ್ಷದ್, ಏಕೈಕ ಮುಸ್ಲಿಂ ಮಹಿಳೆ ಶ್ರೀಮತಿ ಖನೀಜ್ ಫಾತಿಮಾ ಅಂತಹ ಪ್ರಬುದ್ಧ ಶಾಸಕರು ಇದ್ದರೂ ಕಾಂಗ್ರೆಸ್ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಎರಡು ಸಚಿವ ಸ್ಥಾನ ಕೊಟ್ಟಿದ್ದರೂ ಯಾವುದೇ ಪ್ರಭಾವೀ ಖಾತೆ ಕೊಟ್ಟಿಲ್ಲ ಎಂಬ ದೂರೂ ಇತ್ತು.

ಈ ಬಾರಿಯ ಸಂಪುಟ ರಚನೆಯಲ್ಲಿ ಬಹುತೇಕ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಬಹಳಷ್ಟು ಕಸರತ್ತು ನಡೆಸಿದೆ. ಆದರೆ ಕೊನೆಗೆ ಮುಸ್ಲಿಮರಿಗೆ ಹಾಗು ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ. ಅದರ ಬೆನ್ನಿಗೇ ಅರ್ಹ, ಅನುಭವೀ ಮುಸ್ಲಿಂ ಅಧಿಕಾರಿಗಳನ್ನೂ ಪ್ರಮುಖ ಹುದ್ದೆಗಳಿಗೆ ಪರಿಗಣಿಸದೆ ಕಡಗಣಿಸಲಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಯಿತು.

ಕಾಂಗ್ರೆಸ್ನಿಂದ ಮುಸ್ಲಿಂರ ಕಡೆಗಣನೆ ಆಗುತ್ತಿದೆ ಎಂಬ ಆರೋಪಗಳ ನಡುವೆಯೇ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಮುಸ್ಲಿಂ ನಾಯಕರ ಸಭೆ ನಡೆಯಿತು. ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಹಾಗೂ ನಿಗಮ ಮಂಡಳಿ ನೇಮಕ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕಾಪಾಡಬೇಕು ಎಂಬ ಒತ್ತಾಯ ಈ ಸಭೆಯಲ್ಲಿ ಕೇಳಿಬಂತು.

ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕರು, ಸಂಸದರು, ವಿಧಾನ ಪರಿಷತ್ ,ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾಧ್ಯಕ್ಷರು, ಮಾಜಿ ಜಿಲ್ಲಾಧ್ಯಕ್ಷರ ಈ ಸಭೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕರೆದಿದ್ದರು. ಪಕ್ಷ ಸಂಘಟನೆ ಮತ್ತಿತರ ವಿಚಾರಗಳನ್ನು ಚರ್ಚಿಸುವುದಕ್ಕೆಂದು ಹೇಳಲಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಕೂಡ ಪಾಲ್ಗೊಂಡಿದ್ದರು.

ಸಭೆಯಲ್ಲಿ ವ್ಯಕ್ತವಾದ ಅಸಮಾಧಾನಗಳೇನು ಮತ್ತು ಮುಸ್ಲಿಂ ನಾಯಕರ ಬೇಡಿಕೆಗಳು ಏನು ಎಂಬುದನ್ನು ಒಮ್ಮೆ ಗಮನಿಸೋಣ. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಕುರಿತು ಚರ್ಚೆ ನಡೆಸಲಾಯಿತು ಎಂದು ಕೆಪಿಸಿಸಿ ಮೂಲಗಳು ಹೇಳಿವೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಬಿಬಿಎಂಪಿಯ 198 ವಾರ್ಡುಗಳನ್ನು ಪುನರ್ ವಿಂಗಡಣೆ ಮಾಡಿ 243ಕ್ಕೆ ಹೆಚ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವಾಜಿನಗರ, ಚಾಮರಾಜಪೇಟೆ, ಜಯನಗರ, ಶಾಂತಿನಗರ, ಬ್ಯಾಟರಾಯನಪುರ, ಹೆಬ್ಬಾಳ, ಬಿಟಿಎಂ ಲೇಔಟ್ ಸೇರಿದಂತೆ ಇನ್ನಿತರ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲುವಂತಹ ವಾರ್ಡುಗಳನ್ನು ವಿಂಗಡಿಸಿ, ಮೀಸಲಾತಿ ಬದಲಾವಣೆ ಮಾಡಿ ಅವರ ಪ್ರಾತಿನಿಧ್ಯವೇ ಇಲ್ಲದಂತಾಗಿಸಲು ಪ್ರಯತ್ನಿಸಲಾಗಿತ್ತು ಎಂಬ ಆರೋಪವಿದೆ.

ಈಚೆಗಷ್ಟೆ ರಾಜ್ಯ ಸರಕಾರ ಬಿಬಿಎಂಪಿಯ ವಾರ್ಡುಗಳ ಸಂಖ್ಯೆಯನ್ನು 225ಕ್ಕೆ ಇಳಿಸಿ ಆದೇಶ ಹೊರಡಿಸಿರುವುದರಿಂದ, ಈ ಹಿಂದೆ ಬಿಬಿಎಂಪಿಯ ವಾರ್ಡ್ ವಿಂಗಡಣೆಯಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮುಸ್ಲಿಮ್ ಮುಖಂಡರು ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದರು.

ರಾಜ್ಯದ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಜಿಲ್ಲಾ ಪಂಚಾಯಿತಿಗಳಲ್ಲಿ ಮುಸ್ಲಿಮ್ ಸಮುದಾಯದ ಚುನಾಯಿತ ಪ್ರತಿನಿಧಿಗಳು ಗೆಲುವು ಸಾಧಿಸಲು ಆಗುತ್ತಿಲ್ಲ. ಅದೇ ರೀತಿ, ತಾಲೂಕು ಪಂಚಾಯಿತಿಗಳಲ್ಲೂ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ವಿಚಾರವೂ ಚರ್ಚೆಗೆ ಬಂತು. ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಅವರು ಗೆಲ್ಲುವಂತೆ ರಣತಂತ್ರ ರೂಪಿಸಬೇಕು ಎಂಬ ಚರ್ಚೆಯೂ ನಡೆಯಿತು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಆಯೋಗ, ವಕ್ಫ್ ಬೋರ್ಡ್ ಹಾಗೂ ಹಜ್ ಸಮಿತಿ ಹೊರತುಪಡಿಸಿ ಇತರೆ ನಿಗಮ, ಮಂಡಳಿಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಆದುದರಿಂದ, ವಿಭಾಗವಾರು ಹಾಗೂ ಪ್ರತಿಯೊಂದು ಜಿಲ್ಲೆಯೂ ಒಳಗೊಂಡಂತೆ ಪಕ್ಷದ ಮುಸ್ಲಿಮ್ ಕಾರ್ಯಕರ್ತರಿಗೆ, ಮುಖಂಡರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಮುಂದೆ ಇಡಲಾಯಿತು.

ಬಿಜೆಪಿ ಸರಕಾರದ ಅವಧಿಯಲ್ಲಿ ಮುಸ್ಲಿಮ್ ಸಮುದಾಯದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ. ಮುಸ್ಲಿಮ್ ಅಧಿಕಾರಿಗಳಿಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನೆ ನೀಡಲಾಗಿತ್ತು. ಈಗ ಸಾಮಾಜಿಕ ನ್ಯಾಯವನ್ನು ಪಾಲಿಸಿ, ಅರ್ಹ ಮುಸ್ಲಿಮ್ ಅಧಿಕಾರಿಗಳಿಗೂ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಗಲಭೆಗಳಲ್ಲಿ ಬಂಧನಕ್ಕೊಳಗಾಗಿರುವ ಅಮಾಯಕರನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನೂ ಮುಂದಿಡಲಾಯಿತು. ಸಭೆಯ ಬಳಿಕ ಇದೆಲ್ಲದರ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಜೊತೆ ಸದೃಢವಾಗಿ ನಿಂತಿರುವ ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಎಲ್ಲ ಬೇಡಿಕೆಗಳು ನ್ಯಾಯಸಮ್ಮತ. ಸರಕಾರ ಹಾಗೂ ಪಕ್ಷದ ಹಂತದಲ್ಲಿ ಸಾಧ್ಯವಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಸ್ಲಿಮ್ ಮುಖಂಡರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ .

ಲೋಕಸಭೆ ಚುನಾವಣೆಯಲ್ಲಿ 2 ಸ್ಥಾನ ನೀಡಬೇಕೆಂಬ ಮುಸ್ಲಿಂ ನಾಯಕರ ಬೇಡಿಕೆ ಬಗ್ಗೆಯೂ ಉತ್ತರಿಸಿರುವ ಡಿಕೆ ಶಿವಕುಮಾರ್, ಅದರಲ್ಲಿ ತಪ್ಪೇನಿದೆ? ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇದೆಯೊ ಅಲ್ಲಿ ಟಿಕೆಟ್ ನೀಡಲಾಗುವುದು ಎಂದೂ ಹೇಳಿರುವುದು ವರದಿಯಾಗಿದೆ. ಆದರೆ ವಿಧಾನ ಪರಿಷತ್ ನಾಮನಿರ್ದೇಶನ ವಿವಾದದ ಬಗ್ಗೆ ಮಾತ್ರ ಅವರು ಪ್ರತಿಕ್ರಿಯಿಸಿಲ್ಲ.

ಎಂ.ಆರ್.ಸೀತಾರಾಮ್, ಸುಧಾಮ್ ದಾಸ್ ಮತ್ತು ಮನ್ಸೂರ್ ಅಲಿ ಖಾನ್ ನಾಮನಿರ್ದೇಶನದ ಬಗ್ಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವ ಶಾಸ್ತ್ರಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಇದರ ಬಗ್ಗೆ ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

ಈ ಮಧ್ಯೆ, ಮನ್ಸೂರ್ ಅಲಿ ಖಾನ್ ಬದಲು ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ಧಾರೆ ಎಂಬುದೂ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಧಾಮ್ ದಾಸ್ ನಾಮನಿರ್ದೇಶನಕ್ಕೂ ಕಾಂಗ್ರೆಸ್ನ ಪರಿಶಿಷ್ಟ ಜಾತಿ ಎಡಗೈ ಬಣದ ಪ್ರಮುಖ ನಾಯಕರ ಆಕ್ಷೇಪವಿರುವುದಾಗಿ ತಿಳಿದುಬಂದಿದೆ. ಅದೇನೇ ಇದ್ದರೂ, ಭಾನುವಾರದ ಸಭೆಯಲ್ಲಿ ಮುಸ್ಲಿಂ ನಾಯಕರು ಎತ್ತಿರುವ ವಿಚಾರಗಳು ಮತ್ತವರ ಬೇಡಿಕೆಗಳು ಬಹಳ ಮಹತ್ವದ್ದಾಗಿವೆ.

ಮುಸ್ಲಿಂ ನಾಯಕರ ಎಲ್ಲ ಅಸಮಾಧಾನಕ್ಕೆ, ಆಕ್ಷೇಪಗಳಿಗೆ ಸಭೆಯಲ್ಲಿದ್ದು ಸಾಕ್ಷಿಯಾದ ಡಿಕೆ ಶಿವಕುಮಾರ್, ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರಾದರೂ, ಅದು ಮುಸ್ಲಿಂ ನಾಯಕರ ಅಸಮಾಧಾನಕ್ಕೆ ತೇಪೆ ಹಚ್ಚುವ ಯತ್ನವೇ ಎಂಬ ಅನುಮಾನವೂ ಕಾಡುತ್ತದೆ.

ಯಾಕೆಂದರೆ, ಸಭೆಯಲ್ಲಿ ಆಕ್ಷೇಪ ವ್ಯಕ್ತವಾದ ಹಾಗೆ ನಿಗಮ ಮಂಡಳಿಗಳಿಗೆ ಮುಸ್ಲಿಂರ ನೇಮಕ ವಿಚಾರ ಬಂದಾಗ ಪರಿಗಣನೆಗೆ ತೆಗೆದುಕೊಳ್ಳುವುದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಆಯೋಗ, ವಕ್ಫ್ ಬೋರ್ಡ್ ಹಾಗೂ ಹಜ್ ಸಮಿತಿ - ಇಷ್ಟೆ. ಇದೇ ರೀತಿ ಸಂಪುಟದಲ್ಲಿಯೂ ಮುಸ್ಲಿಂ ಸಮುದಾಯದವರಿಗೆ ಕೊಡುವ ಖಾತೆಗಳು ವಕ್ಫ್ ಮತ್ತು ಅಲ್ಪಸಂಖ್ಯಾತ, ಹಜ್ ಇಂಥವು ಮಾತ್ರ.

ಅಲ್ಲಿಗೆ ಪ್ರಾತಿನಿಧ್ಯದ ಹೆಸರಿನ ಹಂಚಿಕೆ ಮುಗಿದುಬಿಡುತ್ತದೆ. ಆದರೆ ಅಂಥ ಪ್ರಾತಿನಿಧ್ಯದಿಂದ ಆ ಸಮುದಾಯಕ್ಕೆ ನಿಜವಾಗಿಯೂ ಏನಾದರೂ ಲಾಭವಾಯಿತೆ? ಈ ಪ್ರಶ್ನೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಇನ್ನು ಮುಸ್ಲಿಂ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲೂ, ಅಭ್ಯರ್ಥಿಯನ್ನು ಬೇರೆ ಪ್ರಭಾವಿ ನಾಯಕರೇ ನಿರ್ಧರಿಸುತ್ತಾರೆಯೇ ಹೊರತು ಮುಸ್ಲಿಂ ಸಮುದಾಯವೇ ತಮ್ಮ ಅಭ್ಯರ್ಥಿ ಇಂಥವರಾಗಬೇಕೆಂದು ಆರಿಸಿಕೊಳ್ಳುವ ಅವಕಾಶವಿಲ್ಲ ಮತ್ತು ಹಾಗೆ ಕೇಳುವ ಮಟ್ಟದಲ್ಲಿ ಯಾವ ನಾಯಕರೂ ಇಲ್ಲ.

ಹೀಗಿರುವಾಗ, ಕಾಂಗ್ರೆಸ್ ಜೊತೆಗೆ ದೃಢವಾಗಿ ನಿಂತಿರುವ ಆ ಸಮುದಾಯದ ಪರವಾಗಿ ನ್ಯಾಯಯುತವಾಗಿ ಯೋಚಿಸಬೇಕಿರುವುದು, ಸಾಮಾಜಿಕ ನ್ಯಾಯದ ವಿಚಾರದಲ್ಲಿ ತುಂಬ ಬದ್ಧತೆಯುಳ್ಳ ಸಿದ್ದರಾಮಯ್ಯನವರಂಥ ನಾಯಕರ ಜವಾಬ್ದಾರಿಯಾಗಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಸ್ಲಿಂ ಸಮುದಾಯ ಸಾಕಷ್ಟು ನೋವುಂಡಿದೆ. ಈಗ ಜೆಡಿಎಸ್ ಕೂಡ ಆ ಪಕ್ಷಕ್ಕೆ ಮತ ಹಾಕಿಲ್ಲ ಅಂತ ಮುಸ್ಲಿಂ ಸಮುದಾಯದ ಬಗ್ಗೆ ಅಸಮಾಧಾನಗೊಂಡಿದೆ. ಈ ಕಡೆ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿದ ಕಾಂಗ್ರೆಸ್ ಅದರ ಸಂಪೂರ್ಣ ಲಾಭ ಪಡೆದು ಅಧಿಕಾರಕ್ಕೇರಿ ಮುಸ್ಲಿಮರನ್ನು ಕಡೆಗಣಿಸಿದರೆ ಸಂಪೂರ್ಣ ತಪ್ಪು ಸಂದೇಶ ರಾಜಕೀಯವಾಗಿ ಹೋಗುತ್ತದೆ. ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಒಂದು ಪ್ರಮುಖ ಹುದ್ದೆಗೆ ಅಥವಾ ಸ್ಥಾನಕ್ಕೆ ಅಂತಿಮಗೊಳಿಸಿದ ಬಳಿಕ ಆಕ್ಷೇಪ ಬಂದರೆ ಹೆಚ್ಚೆಂದರೆ ಅಭ್ಯರ್ಥಿಯನ್ನು ಬದಲಾಯಿಸಿ ಅದೇ ಸಮುದಾಯದ ಇನ್ನೊಬ್ಬರಿಗೆ ಆ ಸ್ಥಾನ ಕೊಡಬಹುದೇ ಹೊರತು ಆ ಸಮುದಾಯದ ಪ್ರಾತಿನಿಧ್ಯವನ್ನೇ ಕತ್ತರಿಸಿ ಇನ್ನೊಬ್ಬರಿಗೆ ಅವಕಾಶ ಮಾಡಿ ಕೊಡುವುದು ಸೂಕ್ತವಲ್ಲ. ಅದೂ ಸಿದ್ದರಾಮಯ್ಯ ಅವರಂತಹ ನಾಯಕರು ಸಿಎಂ ಆಗಿರುವಾಗ ಅಂತಹದ್ದು ನಡೆಯಲೇ ಬಾರದು.

ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಎಂಬುದನ್ನು ಅದರ ನಿಜವಾದ ಅರ್ಥದ ಹಿನ್ನೆಲೆಯಿಂದ ಪರಿಶೀಲಿಸಬೇಕಾಗಿರುವುದು ಮುಖ್ಯ. ಒಗ್ಗಟ್ಟಾಗಿ ಓಟು ಹಾಕಿದ ಸಮುದಾಯವನ್ನು ಗೆದ್ದ ನಂತರ ಕಡೆಗಣಿಸಿದ ಕಳಂಕ ಕಾಂಗ್ರೆಸ್ಗೆ ಅಂಟದಂತೆ ನೋಡಿಕೊಳ್ಳಬೇಕು. ಹಾಗೆ ಆಗಬೇಕೆಂದರೆ, ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯದ ನಿಲುವು ಮಾತಿನಲ್ಲಿ ಮಾತ್ರವಾಗದೆ, ಅನುಷ್ಠಾನದ ಹಂತದಲ್ಲಿ ಕಾಣಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!