ಭರವಸೆ ಮೂಡಿಸುವ ಒಂದು ರಂಗಪ್ರಯೋಗ

ಸಂಕೀರ್ಣ ಕಥಾವಸ್ತುವನು್ನ ಪರಿಣಾಮಕಾರಿಯಾಗಿ ರಂಗದ ಮೇಲೆ ಮೂಡಿಸಿದ ಯುವ ತಂಡ

Update: 2024-01-15 04:00 GMT
Editor : Ismail | Byline : ನಾ.ದಿವಾಕರ

ಒಟ್ಟಾರೆಯಾಗಿ ನಟನ ರಂಗಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳ ಈ ಪ್ರಥಮ ಪ್ರಯೋಗ ಪ್ರೇಕ್ಷಕರ ಮನ ಸೆಳೆಯುತ್ತದೆ. ಈ ಕಲಾವಿದರಲ್ಲಿ ಕನ್ನಡ ರಂಗಭೂಮಿಯ ಭವಿಷ್ಯವನ್ನು ಕಾಣುವ ಆಶಾ ಭಾವನೆ ಮೂಡುತ್ತದೆ. ಇದೇ ಮಟ್ಟದ ಸೃಜನಶೀಲತೆಯೊಂದಿಗೆ ಇಂತಹುದೇ ಸಂದೇಶಾತ್ಮಕ ರಂಗಪ್ರಯೋಗಗಳಿಗೆ ಈ ಯುವ ಕಲಾವಿದರು ತೆರೆದುಕೊಳ್ಳಲಿ ಎಂಬ ಆಶಯದೊಂದಿಗೇ, ಇಂತಹ ಪ್ರಯೋಗಗಳಿಗೆ ಕಾರಣಕರ್ತೃವಾದ ಮಂಡ್ಯ ರಮೇಶ್ ಮತ್ತು ಅವರ ನಟನ ಸಂಸ್ಥೆ ಇನ್ನೂ ವಿಸ್ತರಿಸುತ್ತಾ, ಕನ್ನಡ ರಂಗಸೇವೆಯಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸುವತ್ತ ಸಾಗಲಿ ಎಂದು ಆಶಿಸುತ್ತೇನೆ.

ಇಡೀ ಸಮಾಜವೇ ಹಲವು ದಿಕ್ಕುಗಳಲ್ಲಿ ವಿಘಟಿತವಾಗಿ, ಹಲವಾರು ಕವಲುಗಳಲ್ಲಿ ಒಡೆಯುತ್ತಾ ಸಾಮಾನ್ಯ ಜನಜೀವನದ ನಡುವೆ ಪ್ರಕ್ಷುಬ್ಧತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿರತವಾಗಿರುವ ಸಂದಿಗ್ಧ ಕಾಲದಲ್ಲಿ ‘ಸುಧಾರಣೆ-ಪರಿವರ್ತನೆ-ಬದಲಾವಣೆ’ ಮುಂತಾದ ಕ್ಲಿಷ್ಟ ಪದಗಳು ಕ್ಲೀಷೆಗಳಾಗುತ್ತಾ ಹೋಗುತ್ತವೆ. ಚರಿತ್ರೆಯಲ್ಲಿ ಆಗಿಹೋದ ದಾರ್ಶನಿಕರ ತತ್ವಾದರ್ಶಗಳು, ಸಿದ್ಧಾಂತಗಳು ಹಾಗೂ ಕೆಲವೊಮ್ಮೆ ದರ್ಶನಗಳೂ ಸಹ ಸಮಾಜದೊಳಗಿನ ಸಮಸ್ತರನ್ನೂ ಸಮನ್ವಯದ ನೆಲೆಯಲ್ಲಿ ಒಂದಾಗಿಸುವುದರ ಬದಲು ಮತ್ತಷ್ಟು ವಿಘಟನೆಯತ್ತ ಕೊಂಡೊಯ್ಯುವ ಸಂದಿಗ್ಧತೆಯನ್ನೂ ನಾವು ಎದುರಿಸುತ್ತಿದ್ದೇವೆ. ತತ್ವ-ಸಿದ್ಧಾಂತಗಳು ಐಕ್ಯತೆಯ ಸೇತುವೆಗಳಾಗುವುದರ ಬದಲು ಅನೈಕ್ಯತೆಯ ಕಂದರಗಳಾಗುತ್ತಿರುವುದಕ್ಕೆ ಕಾರಣ ನಾವೇ ಸೃಷ್ಟಿಸಿಕೊಂಡಿರುವ ಅಸ್ಮಿತೆಗಳ ಚೌಕಟ್ಟುಗಳು ಮತ್ತು ಸಿದ್ಧಮಾದರಿಯ ಸಾಂಸ್ಕೃತಿಕ ನೆಲೆಗಳು.

ವರ್ತಮಾನದ ಭಾರತ ಇಂತಹ ಒಂದು ಕಾಲಘಟ್ಟವನ್ನು ತಲುಪಿದೆ. ಜಡಗಟ್ಟಿ ಹೋಗಬೇಕಿದ್ದ ಪ್ರಾಚೀನ ನಡವಳಿಕೆಗಳೆಲ್ಲವೂ ಮರುಹುಟ್ಟು ಪಡೆಯುತ್ತಾ, ರೂಪಾಂತರಗೊಂಡು, ನವನವೀನ ಮಾದರಿಯಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ ನುಸುಳುತ್ತಿವೆ. ಮತ್ತೊಂದೆಡೆ ಈ ರೂಪಾಂತರಿ ಪ್ರವೃತ್ತಿಗಳನ್ನು ಸಮರ್ಥಿಸಿ ಪೋಷಿಸುವಂತಹ ಸಾಂಸ್ಕೃತಿಕ ಚಿಂತನಾ ವಾಹಿನಿಗಳು, ಬೋಧನಾ ಮಾರ್ಗಗಳು ಪುನರಾವರ್ತಿತ ಧಾರ್ಮಿಕ ಆಚರಣೆಗಳ

ಮೂಲಕ ಮನೆಮನೆಯಲ್ಲಿ ನೆಲೆಗೊಳ್ಳುತ್ತಿವೆ. ಮಿಲೇನಿಯಂ ಜನಸಂಖ್ಯೆ ಎಂದೇ ಕರೆಯಲಾಗುವ ಒಂದು ಸಮಾಜ, ೨೦-೩೦ರ

ವಯೋಮಾನದ ಒಂದು ಬೃಹತ್ ಸಮೂಹ, ಇಂತಹ ಸಂಕೀರ್ಣತೆ

ಗಳ ನಡುವೆಯೇ, ಭಾರತದ ನೆಲಮೂಲ ಸಂಸ್ಕೃತಿಯಲ್ಲಿ ಅಡಗಿರುವ ಮೌಲ್ಯಗಳನ್ನು ಅರಿಯದೆ, ಬೌದ್ಧಿಕವಾಗಿ ಯಾವುದೋ ಒಂದು ಅಸ್ಮಿತೆಯ ಕೋಶಬಂದಿಗಳಾಗಿ, ನವ ಉದಾರವಾದ-ಮತಾಧಾರಿತ ರಾಜಕಾರಣದಿಂದ ಭ್ರಮಾಧೀನರಾಗಿದ್ದಾರೆ.

ರಂಗಭೂಮಿಯ ಜವಾಬ್ದಾರಿ

ಚಿಕಿತ್ಸಕ ಗುಣದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನಾಯಕತ್ವವೇ ಇಲ್ಲದ ಇಂತಹ ವಿಷಮ ಸನ್ನಿವೇಶದಲ್ಲಿ ಸಮಾಜ ಸುಧಾರಣೆ ಮತ್ತು ಪರಿವರ್ತನೆ ಎಂಬ ಪದಗಳು ಬೇರೆಯೇ ಅರ್ಥ ಪಡೆದುಕೊಳ್ಳುತ್ತವೆ. ಈ ಪದಗಳನ್ನು ಅಕ್ಷರಶಃ ಸಾಕಾರಗೊಳಿಸುವ ಬಹುದೊಡ್ಡ ಜವಾಬ್ದಾರಿ ನಾಗರಿಕತೆಯ ಮೇಲಿರುವಂತೆಯೇ, ಸಮಾಜವನ್ನು ಪ್ರತಿನಿಧಿಸುವ ಹಾಗೂ ಅದರ ಅಂತರಾಳವನ್ನು ಬಿಂಬಿಸುವ ಕಲಾಭಿವ್ಯಕ್ತಿಯ ಸಾಧನಗಳ ಮೇಲಿದೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿ ಈ ಜವಾಬ್ದಾರಿಯನ್ನು ಸ್ವಾಪೇಕ್ಷೆಯಿಂದ ಹೊರದೆ ಹೋದರೆ ಬಹುಶಃ ಈ ಮಿಲೇನಿಯಂ ಜನಸಂಖ್ಯೆ ಭ್ರಮಾಧೀನ ಸ್ಥಿತಿಯಲ್ಲೇ ವೃದ್ಧಾಪ್ಯವನ್ನೂ ಪೂರೈಸಿ ಪರ್ಯಾವಸಾನಗೊಳ್ಳುತ್ತದೆ. ಈ ಮೂರೂ ವಲಯಗಳಲ್ಲಿರುವ ಸೃಜನಾತ್ಮಕತೆ, ಬೌದ್ಧಿಕ ಸ್ವಾಯತ್ತತೆ ಹಾಗೂ ಮಾರ್ಗ ಸ್ವಾತಂತ್ರ್ಯದ ಅಂಶಗಳೇ ಸಮಾಜದಲ್ಲಿ ಆಶಾಭಾವನೆ ಮೂಡಿಸಲು ನೆರವಾಗುತ್ತದೆ.

ಪ್ರಸ್ತುತ ಸಂದರ್ಭಲ್ಲಿ ಈ ಹೊರೆಯನ್ನು ಜವಾಬ್ದಾರಿಯುತವಾಗಿ ಹೊತ್ತು ತನ್ನ ಸೃಜನಶೀಲ ಕೋಶಗಳಿಂದ ಸಮಾಜದ ಆಂತರಿಕ ತರತಮಗಳನ್ನು ಭೇದಿಸುವ ಪ್ರಯತ್ನ ಮಾಡುತ್ತಿರುವುದು ಬಹುಶಃ ರಂಗಭೂಮಿ ಒಂದೇ ಎನ್ನಬಹುದು. ಏಕೆಂದರೆ ಸಾಹಿತ್ಯ ವಲಯ ಬಹುಮಟ್ಟಿಗೆ ತನ್ನ ವಂದಿಮಾಗಧ ಮೂಲ ಬೇರುಗಳನ್ನು ಶೋಧಿಸುವುದರಲ್ಲಿ ತೊಡಗಿದೆ. ಇತರ ದೃಶ್ಯಕಲೆಗಳು ಮಾರುಕಟ್ಟೆಯ ಪ್ರಭಾವದಿಂದ ವಾಣಿಜ್ಯೀಕರಣಕ್ಕೊಳಗಾಗಿ ತನ್ನ ಅಂತಃಸತ್ವವನ್ನು ಕಳೆದುಕೊಂಡಿವೆ. ಇದು ರಂಗಭೂಮಿಯ ಜವಾಬ್ದಾರಿಯನ್ನು ಹೆಚ್ಚಿಸಿರುವುದೂ ಹೌದು ಹಾಗೆಯೇ ಇದನ್ನು ಪ್ರತಿನಿಧಿಸುವ ರಂಗಕರ್ಮಿಗಳು ಬಹುಮಟ್ಟಿಗೆ ತಮ್ಮ ಸಾಂಸ್ಕೃತಿಕ ನೈತಿಕತೆಯನ್ನು ಉಳಿಸಿಕೊಂಡು ಸಾಮಾಜಿಕ ಸವಾಲುಗಳಿಗೆ ವಿಮುಖವಾಗದೆ, ಅಂತರ್ಮುಖಿಯಾಗದೆ, ತಳಮಟ್ಟದ ಸಮಾಜದ ಒಳಹೊರಗುಗಳನ್ನು ಭೇದಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಮೈಸೂರಿನಲ್ಲಿರುವ ಹತ್ತಾರು ರಂಗತಂಡಗಳು ಈ ಹಾದಿಯಲ್ಲಿ ಸಾಗುತ್ತಿದ್ದು, ಮಂಡ್ಯ ರಮೇಶ್ ಅವರ ನಟನ ರಂಗಶಾಲೆ ಈ Caravan ನ ಒಂದು ಭಾಗವಾಗಿದೆ.

ನಟನ ರಂಗಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳ ಕಲಿಕಾರ್ಥ ಸಿದ್ಧಪಡಿಸಿದ ಡಾ. ಚಂದ್ರಶೇಖರ ಕಂಬಾರ ವಿರಚಿತ ‘ಮಹಾಮಾಯಿ’ ನಾಟಕದ ಎರಡನೇ ಪ್ರದರ್ಶನವನ್ನು ನೋಡಿದಾಗ ಮೇಲೆ ವ್ಯಕ್ತಪಡಿಸಿದ ಭರವಸೆಗಳು ಹುಸಿಯಾಗಲಾರವು ಎಂಬ ಆಶಾಭಾವನೆ ಮೂಡಿದ್ದಂತೂ ಸತ್ಯ. ಮೊದಲನೆಯದಾಗಿ ಈ ೨೨ ಯುವ ಕಲಾವಿದರು ತಮ್ಮ ವಿದ್ಯಾರ್ಜನೆ ಮತ್ತು ಜೀವನೋಪಾಯದ ಮಾರ್ಗಗಳನ್ನು ಅರಸುತ್ತಲೇ ರಂಗಭೂಮಿಯನ್ನು ಕಲಾಭಿವ್ಯಕ್ತಿಯ ಸೇತುವೆಯಾಗಿ ಆಯ್ದುಕೊಂಡಿರುವುದು ವರ್ತಮಾನದ ಸಂದರ್ಭದಲ್ಲಿ ಆಶಯದಾಯಕ ಬೆಳವಣಿಗೆ. ರಂಗಭೂಮಿಯನ್ನು ಕೇವಲ ನಟನೆಗಾಗಿ ಅಥವಾ ಸಮಾಜದಲ್ಲಿ ಸೃಷ್ಟಿಯಾಗುವ ಅಸ್ತಿತ್ವ-ಅಸ್ಮಿತೆಗಳಿಗಾಗಿ ಪ್ರವೇಶಿಸದೆ, ಅಂತರ್ಮುಖಿಯಾಗಿರಬಹುದಾದ ಸಮಾಜದ ಒಂದು ಬಾಹ್ಯ ಚಹರೆಯಾಗಿ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸುವ ಮೂಲಕ, ಇದೇ ಸಮಾಜವನ್ನು ಕಾಡುತ್ತಿರುವ ಹತ್ತುಹಲವಾರು ಜಟಿಲ ಸಿಕ್ಕುಗಳನ್ನು ಬಿಡಿಸುವ ಒಂದು ಮಾರ್ಗವಾಗಿ ರಂಗಪ್ರವೇಶ ಮಾಡುವುದು ಈ ಕಾಲದ ತುರ್ತು. ಈ ಯುವ ಕಲಾಪಡೆ ಅಂತಹ ಒಂದು ಔನ್ನತ್ಯದೊಂದಿಗೆ ‘ಮಹಾಮಾಯಿ’ಯ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ್ದಾರೆ ಎನಿಸುತ್ತದೆ.

ಸಂಕೀರ್ಣ ವಸ್ತುವಿನ ‘ಮಹಾಮಾಯಿ’

ಈ ಭಾವನೆ ಮೂಡಲು ಕಾರಣ ಈ ಯುವತಂಡ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು. ಮನುಷ್ಯನ ಹುಟ್ಟು ಸಾವಿನ ನಡುವೆ ಸದಾಕಾಲವೂ ಏರ್ಪಡುತ್ತಲೇ ಇರುವ ಒಂದು ತಾತ್ವಿಕ ತಿಕ್ಕಾಟವನ್ನು ಉಪನಿಷತ್ತಿನ ನಚಿಕೇತನ ಕಾಲದಿಂದಲೂ ನೋಡುತ್ತಲೇ ಬಂದಿದ್ದೇವೆ. ಬದುಕುವ ಹಂಬಲ ಮನುಷ್ಯ ಸಹಜ ಹಾಗೆಯೇ ಮನುಷ್ಯನ ಸಾವು ನಿಶ್ಚಿತ. ಅವಕಾಶವಿದ್ದಷ್ಟೂ ಬದುಕುವ ಹಪಹಪಿಯೊಡನೆಯೇ ಆಧುನಿಕ ಮಾನವನೂ ಸಹ ಸಾವಿನೊಡನೆ ಸೆಣಸಾಡುತ್ತಾ ದೀರ್ಘಕಾಲ ಪಯಣಿಸುವ ಅವಕಾಶಗಳನ್ನು ಆಧುನಿಕ ವಿಜ್ಞಾನ, ತಂತ್ರಜ್ಞಾನ ಸೃಷ್ಟಿಸಿದೆ. ಆದರೂ ಯಾವುದೋ ಒಂದು ಗಳಿಗೆಯಲ್ಲಿ ಮನುಷ್ಯ ತನ್ನ ಹತೋಟಿಯನ್ನು ಕಳೆದುಕೊಂಡು ನಿರ್ಗಮಿಸಬೇಕಾಗುತ್ತದೆ. ಅದಕ್ಕೆ ಅತಿಮಾನುಷ ಅಥವಾ ಅತೀತ ಶಕ್ತಿ ಕಾರಣವೋ ಅಥವಾ ಜೀವಶಾಸ್ತ್ರದ ವೈಜ್ಞಾನಿಕ ಸಹಜ ಪ್ರಕ್ರಿಯೆ ಕಾರಣವೋ ಎನ್ನುವುದು ಇಂದಿಗೂ ಚರ್ಚೆಯಲ್ಲಿರುವ ವಿಷಯ. ಈ ನಡುವೆಯೇ ಸಾಹಿತ್ಯ ಲೋಕದಲ್ಲಿ ಸಾವು ಬದುಕಿನ ಹೋರಾಟ ಹಾಗೂ ಲೌಕಿಕ-ಅತೀತ ಶಕ್ತಿಗಳ ನಡುವಿನ ತಾತ್ವಿಕ ಸಂಘರ್ಷಗಳ ಸುತ್ತ ಹಲವು ಸೃಜನಶೀಲ ಕೃತಿಗಳನ್ನೂ ನಾವು ಕಂಡಿದ್ದೇವೆ. ಡಾ. ಚಂದ್ರಶೇಖರ ಕಂಬಾರ ಅವರ ‘ಮಹಾಮಾಯಿ’ ಅಂತಹುದೇ ಒಂದು ಜನಪದೀಯ ಕಥಾವಸ್ತು ಹೊಂದಿರುವ ನಾಟಕ.

ಅಲೌಕಿಕ ಶಕ್ತಿಯ ಮೇಲೆ ಅಪಾರ ನಂಬಿಕೆಯನ್ನಿರಿಸಿಕೊಂಡೇ ತಮ್ಮ ಜನಪದೀಯ ಹಿನ್ನೆಲೆಯ ಸಾಹಿತ್ಯವನ್ನು ರಚಿಸಿರುವ ಕಂಬಾರರು ಆಧುನಿಕತೆಯನ್ನು ಧಿಕ್ಕರಿಸುವವರೇನಲ್ಲ. ಆದರೆ ಮನುಷ್ಯ ಸಮಾಜದ ಪ್ರಾಚೀನ ನಂಬಿಕೆ-ನಡವಳಿಕೆ-ಜೀವನಶೈಲಿಗಳನ್ನು ತಳಮಟ್ಟದಲ್ಲೇ ಸ್ಪರ್ಶಿಸುತ್ತಲೇ ಸಾಮಾನ್ಯ ಮನುಷ್ಯರು ಅಲೌಕಿಕ ಶಕ್ತಿಗಳನ್ನು ಆರಾಧಿಸುವ, ವೈಭವೀಕರಿಸುವ ಹಾಗೂ ಅವುಗಳಿಗೇ ಶರಣಾಗುವ ಸಾಮಾಜಿಕ ಸನ್ನಿವೇಶಗಳನ್ನು ಕಂಬಾರರು ತಮ್ಮ ಅಕ್ಷರಗಳಲ್ಲಿ ಅಳವಡಿಸುತ್ತಾರೆ. ಈ ಪ್ರಯತ್ನದ ಮೂಲಕವೇ ಕುಸಿಯುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳೊಡನೆಯೂ ಅನುಸಂಧಾನ ಮಾಡುತ್ತಾ ಸಂವೇದನಾಶೀಲ ಸಮಾಜಕ್ಕೆ ಬೇಕಾದ ಒಂದು ಸಂದೇಶವನ್ನು ನೀಡಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲೇ ಕಾವ್ಯ, ಕಥನ ಮತ್ತು ನಾಟಕ ಈ ಮೂರನ್ನೂ ಏಕೀಕರಿಸಿ ರಚಿಸಿರುವ ಒಂದು ನಾಟಕವಾಗಿ ‘ಮಹಾಮಾಯಿ’ ಇಷ್ಟವಾಗುತ್ತದೆ.

‘ಮಹಾಮಾಯಿ’ ಒಂದು ಸಂಕೀರ್ಣ ಕಥಾವಸ್ತುವನ್ನು ಹೊಂದಿರುವ ನಾಟಕ. ನಾಟಕಕಾರನ ಮೂಲ ಸ್ಥಾಯಿಗೆ ಚ್ಯುತಿ ಬಾರದಂತೆ ಇದಕ್ಕೆ ರಂಗರೂಪ ನೀಡಿ ಅಳವಡಿಸುವ ಸ್ವಾಯತ್ತತೆ-ಸ್ವಾತಂತ್ರ್ಯ ಯಾವುದೇ ಸೃಜನಶೀಲ ರಂಗಕರ್ಮಿಗೆ ಇದ್ದೇ ಇರುತ್ತದೆ. ಇದನ್ನೇ ಪ್ರಭಾವಶಾಲಿಯಾಗಿ ಬಳಸಿಕೊಂಡಿರುವ ನಿರ್ದೇಶಕ ಮೇಘ ಸಮೀರ ‘ಮಹಾಮಾಯಿ’ಯನ್ನು ರಂಗಪ್ರೇಕ್ಷಕರ ಮುಂದಿಡಲು ಆಯ್ಕೆ ಮಾಡಿರುವುದು ನುರಿತ ಕಲಾತಂಡವನ್ನಲ್ಲ. ನಟನ ರಂಗಶಾಲೆಯ ಡಿಪ್ಲೊಮ ವಿದ್ಯಾರ್ಥಿಗಳನ್ನು. ತಮ್ಮ ಪ್ರಥಮ ರಂಗಪ್ರಯೋಗದಲ್ಲೇ ರಂಗಭೂಮಿಯಲ್ಲಿ ಇರುವಂತಹ ಕೌಶಲ, ವೈವಿಧ್ಯತೆ, ಕಲಾಭಿವ್ಯಕ್ತಿಯ ವಿಭಿನ್ನ ಆಯಾಮಗಳು, ಆಂಗಿಕ-ಭಾವುಕ ಅಭಿನಯದ ಮಜಲುಗಳನ್ನು ಬಹಳ ಶ್ರದ್ಧೆಯಿಂದ ನಿಭಾಯಿಸುವ ಮೂಲಕ ನಟನ ಯುವತಂಡ ರಂಗಭೂಮಿಗೆ ಒಂದು ಉತ್ತಮ ಪ್ರಯೋಗವನ್ನು ನೀಡಿರುವುದು ಪ್ರಶಂಸನೀಯ.

 

ಮೂಲ ಕಥಾ ಹಂದರ

ಮನುಷ್ಯನ ಬದುಕುವ ಹಂಬಲಕ್ಕೆ ಜೊತೆಜೊತೆಯಾಗೇ ಇರುವ ನಿಷ್ಕಲ್ಮಶ ಮಾನವ ಪ್ರೀತಿ ಮತ್ತು ಮನುಜ ಸಂಬಂಧಗಳು ತಾನೇ ನಂಬುವ ವಿಧಿಯ ನಿಯತಿಗಳನ್ನೂ ಮೀರಿ ಗೆಲ್ಲಲು ಸಾಧ್ಯ ಎಂಬ ಕಥಾವಸ್ತುವನ್ನು ‘ಮಹಾಮಾಯಿ’ ಹೊಂದಿದೆ. ಸಾಕು ಮಗ ಸಂಜೀವ ಶೆಟವಿ ತಾಯಿಯಿಂದ ಒಂದು ಅಮೂಲ್ಯ ವೈದ್ಯವಿದ್ಯೆ ಪಡೆಯುತ್ತಾನೆ. ಅವನ ಚಿಕಿತ್ಸೆಗೆ ಮುನ್ನವೇ ಆಕೆ ಪ್ರತ್ಯಕ್ಷವಾಗಿ ರೋಗಿಯ ಸಾವು ಬದುಕನ್ನು ನಿಶ್ಚಿತವಾಗಿ ಹೇಳುವ ಅಭ್ಯಾಸವೂ ಸಂಜೀವನಿಗೆ ಕರಗತವಾಗಿರುತ್ತದೆ. ರಾಜಕುವರಿಯ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಿ ಆಕೆಯನ್ನು ಬದುಕಿಸಲು ಸಂಜೀವನಿಗೆ ಶೆಟವಿ ತಾಯಿ ಅಡ್ಡಿಯಾಗುತ್ತಾಳೆ. ಸಾವನ್ನು ಸ್ವೀಕರಿಸಿ ಮಾಯಿಬೆಟ್ಟದ ಗುಹೆಯನ್ನು ಪ್ರವೇಶಿಸಲು ಹೋಗುವ ರಾಜಕುವರಿಯನ್ನು ಅಕಸ್ಮಾತ್ತಾಗಿ ಸಂಧಿಸುವ ಸಂಜೀವ ಶಿವ ಆಕೆಯನ್ನು ಗುಣಪಡಿಸುವುದೇ ಅಲ್ಲದೆ ದೈವಶಕ್ತಿಯುಳ್ಳ ಮದ್ದಿನ ಬಳ್ಳಿಯನ್ನು ಆಕೆಯ ಕೊರಳಿಗೆ ಹಾಕುತ್ತಲೇ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಶೆಟವಿ ತಾಯಿಯ ನಿಯತಿ ಮತ್ತು ದೈವೀಕ ಶಕ್ತಿ ಒಂದೆಡೆ, ಸಂಜೀವ ಶಿವನ ವೈದ್ಯವಿದ್ಯೆ ಮತ್ತು ಮಾನವ ಪ್ರೇಮ ಮತ್ತೊಂದೆಡೆ, ಈ ಸಂಘರ್ಷದಲ್ಲಿ ಕೊನೆಗೆ ಸಂಜೀವನ ಪ್ರೀತಿ ಗೆಲ್ಲುತ್ತದೆ. ಪ್ರೀತಿಗೆ ಸಾವನ್ನೂ ಗೆಲ್ಲುವ ಶಕ್ತಿ ಇದೆ ಎಂಬ ಸಂದೇಶವನ್ನು ಸಶಕ್ತವಾಗಿ ಈ ನಾಟಕ ನೀಡುತ್ತದೆ.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಲೋಕ ಎದುರಿಸುತ್ತಿರುವ ದ್ವಂದ್ವದ ನಡುವೆಯೇ ಅಲ್ಲಿರಬೇಕಾದ ಚಿಕಿತ್ಸಕ ಗುಣ ಮತ್ತು ಪ್ರೀತಿ ಎನ್ನುವ ಸಂಜೀವಿನಿಯ ಮಹತ್ವವನ್ನು ಗಮನದಲ್ಲಿಟ್ಟು ನೋಡಿದಾಗ ವಾಣಿಜ್ಯೀಕರಣಗೊಂಡ ವೈದ್ಯವೃತ್ತಿ ಹಣವಿಲ್ಲದ ರೋಗಿಗಳ ಪಾಲಿಗೆ ಕಂಟಕಪ್ರಾಯವಾಗಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಲೌಕಿಕ-ಅತಿಮಾನುಷ ಶಕ್ತಿಗಳ ನಡುವಿನ ಸಂಘರ್ಷದ ನಡುವೆಯೇ ಇಂದು ಜನಸಾಮಾನ್ಯರು ಮಾರುಕಟ್ಟೆಯೊಡನೆಯೂ ಸೆಣಸಾಡುತ್ತಲೇ ಆಯುಷ್ಯ ವೃದ್ಧಿಗೆ ಪ್ರಯತ್ನಿಸಬೇಕಾಗಿದೆ. ಮನುಷ್ಯನ ಬದುಕುವ ಹಂಬಲ ಮತ್ತು ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಯಾವುದೇ ಲೌಕಿಕ-ಅಲೌಕಿಕ ಶಕ್ತಿಗಳ ವಿರುದ್ಧ ಮಾನವ ಸಮಾಜ ಹೋರಾಡುತ್ತಲೇ ಬಂದಿದೆ. ‘ಮಹಾಮಾಯಿ’ ನಾಟಕವು ಜನಪದೀಯ ಶೈಲಿಯಲ್ಲಿ, ದೇವರಿಲ್ಲದ ಕಾಲ್ಪನಿಕ ಲೋಕದಲ್ಲಿ ಸಾವಿನ ನಿಯತಿಯನ್ನು ವಿಧಿಸುವ ಅತಿಮಾನುಷ ಶಕ್ತಿಯ ಜಗತ್ತಿನಲ್ಲಿ ತೆರೆದುಕೊಳ್ಳುತ್ತದೆ. ಆದರೆ ಇಲ್ಲಿಯೂ ನಿಯತಿಯನ್ನು ಮೀರಿ ಪ್ರೀತಿ-ಮಾನವ ಸಂಬಂಧಗಳು ಗೆಲ್ಲುತ್ತವೆ.

ರಂಗರೂಪದ ಸೌಂದರ್ಯ

ಈ ಕಥಾವಸ್ತುವೇ ಸಂಕೀರ್ಣವಾದದ್ದು ಹಾಗೂ ಇದನ್ನು ಆಧುನಿಕ ಸಮಾಜದ ಮುಂದೆ ಪ್ರಸ್ತುತಪಡಿಸುವಾಗ ಕೆಲವು ಎಚ್ಚರಿಕೆಗಳನ್ನೂ ಗಮನಿಸುತ್ತಲೇ ರಂಗರೂಪಕ್ಕೆ ಅಳವಡಿಸಬೇಕಾಗುತ್ತದೆ. ನಾಟಕವನ್ನು ವಿನ್ಯಾಸಗೊಳಿಸಿ, ಸಂಗೀತ ಸಂಯೋಜನೆ ಮಾಡಿ, ನಿರ್ದೇಶಿಸಿರುವ ಮೇಘ ಸಮೀರ ಈ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಅವರ ಗೆಲುವಿಗೆ ಕಾರಣ ನಟನ ರಂಗಶಾಲೆಯ ವಿದ್ಯಾರ್ಥಿಗಳ ಅದ್ಭುತ ಕಲಾಪ್ರೌಢಿಮೆ ಮತ್ತು ಅಭಿವ್ಯಕ್ತಿ. ಜನಪದ, ಯಕ್ಷಗಾನ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಮೇಳೈಸಿಕೊಂಡು ಸಿದ್ಧವಾಗಿರುವ ‘ಮಹಾಮಾಯಿ’ ರಂಗಪ್ರಯೋಗ, ರಂಗಪ್ರೇಕ್ಷಕರನ್ನು ಎರಡು ಗಂಟೆಗಳ ಕಾಲ ಹಿಡಿದಿಡುವುದರಲ್ಲಿ ಯಶಸ್ವಿಯಾಗುತ್ತದೆ. ಬೆಳಕಿನ ವಿನ್ಯಾಸ ಮತ್ತು ಸಂಗೀತ ಕಥಾವಸ್ತುವಿಗೆ ಪೂರಕವಾಗಿರುವುದಷ್ಟೇ ಅಲ್ಲದೆ ರಂಗಸಜ್ಜಿಕೆ ಪ್ರೇಕ್ಷಕರನ್ನು ಒಂದು ಹೊಸ ಲೋಕಕ್ಕೆ ಕೊಂಡೊಯ್ಯುವಂತಿರುವುದು ಇಡೀ ತಂಡದ ಪರಿಶ್ರಮಕ್ಕೆ ಸಲ್ಲುವ ಶ್ರೇಯ.

ಶೆಟವಿ ತಾಯಿ ಪಾತ್ರಧಾರಿಯ (ಪುಣ್ಯಶ್ರೀ) ಅಭಿನಯ ಬಹುಕಾಲ ನೆನಪಿನಲ್ಲಿರುವಂತಹುದು ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಟ್ಟಾರೆಯಾಗಿ ನೋಡಿದಾಗ ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿರುವುದು ಸಹ ಗಮನಾರ್ಹ. ಯಾವುದೇ ರಂಗಪ್ರಯೋಗದಲ್ಲಿ ಅವಶ್ಯವಾಗಿ ಇರಬೇಕಾದ ತಲ್ಲೀನತೆ, ತನ್ಮಯತೆ, ಭಾವಶ್ರದ್ಧೆ ಹಾಗೂ ತೊಡಗುವಿಕೆಯನ್ನು ಎಲ್ಲ ಕಲಾವಿದರಲ್ಲೂ ಗುರುತಿಸಬಹುದು. ಆಂಗಿಕ-ಭಾವಾಭಿವ್ಯಕ್ತಿಯಲ್ಲಿ, ಸಂಭಾಷಣೆಯಲ್ಲಿ ಕಾಣುವ ಸಮನ್ವಯತೆ ಈ ಯುವ ಕಲಾವಿದರ ಪ್ರೌಢಿಮೆಯ ಬಗ್ಗೆ ಮೆಚ್ಚುಗೆ ಮೂಡಿಸುವಂತಿದೆ. ರಂಗಭೂಮಿಯ ಒಂದು ಅತ್ಯವಶ್ಯ ಲಕ್ಷಣ ಎನ್ನಬಹುದಾದ ಸೃಜನಶೀಲತೆಗೆ ಪೂರಕವಾಗಿ ಕಥಾ ಹಂದರವನ್ನು ರಂಗರೂಪದಲ್ಲಿ ಪ್ರಸ್ತುತಪಡಿಸುವ ಕಲಾವಿದರಲ್ಲಿ ಇರಬೇಕಾದ ಸಮನ್ವಯದ ಭಾವ ‘ಮಹಾಮಾಯಿ’ ನಾಟಕದ ಯುವ ತಂಡದಲ್ಲಿ ಕಾಣಬಹುದು. ತಮ್ಮ ಪ್ರಥಮ ಪ್ರಯೋಗದಲ್ಲೇ ಇದನ್ನು ದಾಖಲಿಸಿರುವುದು ನಟನ ಶಾಲೆಯ ಈ ತಂಡದ ಹೆಗ್ಗಳಿಕೆ.

‘ಮಹಾಮಾಯಿ’ ಡಿಪ್ಲೊಮೊ ವಿದ್ಯಾರ್ಥಿಗಳ ಪ್ರಥಮ ಪ್ರಯೋಗವಾಗಿರುವುದರಿಂದ ವಿಮರ್ಶಾತ್ಮಕವಾಗಿ ನೋಡುವುದು ಅಪೇಕ್ಷಣೀಯ ಅಲ್ಲ. ಆದರೂ ಭವಿಷ್ಯದ ಭರವಸೆಗಳಂತೆ ಕಾಣುವ ಕಲಾವಿದರ ಹಿತದೃಷ್ಟಿಯಿಂದ, ನೇಪಥ್ಯದಲ್ಲಿ ನಿಂತು ನೋಡಿದಾಗ ನಿರ್ದೇಶಕರು ಗಮನಿಸಬೇಕಾದ ಕೆಲವು ಅಂಶಗಳನ್ನು ಉಲ್ಲೇಖಿಸೋಣ ಎನಿಸುತ್ತದೆ. ಒಂದು ಸಂಕೀರ್ಣ ಕಥಾವಸ್ತುವಿನ, ಗಂಭೀರ ವಿಷಯವನ್ನು ಉದ್ದೇಶಿಸುವ ‘ಮಹಾಮಾಯಿ’ಯಲ್ಲಿ ಹಾಸ್ಯದ ಲೇಪನ ತುಸು ಹೆಚ್ಚಾದಂತೆ ಭಾಸವಾಗುತ್ತದೆ. ತಕ್ಷಣದ ಪ್ರೇಕ್ಷಕರಿಗೆ ಆಪ್ಯಾಯಮಾನವಾಗಿ ಕಾಣಬಹುದಾದರೂ ನಾಟಕ ವಸ್ತುವಿನ ಗಂಭೀರತೆಯ ದೃಷ್ಟಿಯಿಂದ, ಹಾಸ್ಯ ಸನ್ನಿವೇಶಗಳನ್ನು ಕಡಿಮೆ ಮಾಡಬಹುದು ಅಥವಾ ತೆಳುವಾಗಿಸಬಹುದು.

ಒಂದೆರಡು ಕಡೆ, ಸಮೂಹ ಧ್ವನಿಯಲ್ಲಿ ಅಸ್ಪಷ್ಟತೆ ಕಂಡುಬರುತ್ತದೆ. ಒಂದೆರಡು ದೃಶ್ಯಗಳಲ್ಲಿ ಕಲಾವಿದರು ಇನ್ನೂ ಹೆಚ್ಚಿನ ತನ್ಮಯತೆ-ತಲ್ಲೀನತೆಯನ್ನು ರೂಢಿಸಿಕೊಳ್ಳಬಹುದು ಎನಿಸುತ್ತದೆ.

ಒಟ್ಟಾರೆಯಾಗಿ ನಟನ ರಂಗಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳ ಈ ಪ್ರಥಮ ಪ್ರಯೋಗ ಪ್ರೇಕ್ಷಕರ ಮನ ಸೆಳೆಯುತ್ತದೆ. ಈ ಕಲಾವಿದರಲ್ಲಿ ಕನ್ನಡ ರಂಗಭೂಮಿಯ ಭವಿಷ್ಯವನ್ನು ಕಾಣುವ ಆಶಾ ಭಾವನೆ ಮೂಡುತ್ತದೆ. ಇದೇ ಮಟ್ಟದ ಸೃಜನಶೀಲತೆಯೊಂದಿಗೆ ಇಂತಹುದೇ ಸಂದೇಶಾತ್ಮಕ ರಂಗಪ್ರಯೋಗಗಳಿಗೆ ಈ ಯುವ ಕಲಾವಿದರು ತೆರೆದುಕೊಳ್ಳಲಿ ಎಂಬ ಆಶಯದೊಂದಿಗೇ, ಇಂತಹ ಪ್ರಯೋಗಗಳಿಗೆ ಕಾರಣಕರ್ತೃವಾದ ಮಂಡ್ಯ ರಮೇಶ್ ಮತ್ತು ಅವರ ನಟನ ಸಂಸ್ಥೆ ಇನ್ನೂ ವಿಸ್ತರಿಸುತ್ತಾ, ಕನ್ನಡ ರಂಗಸೇವೆಯಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸುವತ್ತ ಸಾಗಲಿ ಎಂದು ಆಶಿಸುತ್ತೇನೆ.

(‘ಮಹಾಮಾಯಿ’ ನಾಟಕದ ಎರಡನೇ ಪ್ರದರ್ಶನ ಇದೇ ೭ನೆಯ ತಾರೀಕು ನಟನದಲ್ಲಿ ಪ್ರದರ್ಶನಗೊಂಡಿತ್ತು)

Writer - ವಾರ್ತಾಭಾರತಿ

contributor

Editor - Ismail

contributor

Byline - ನಾ.ದಿವಾಕರ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!