ನೋಡಬಹುದಾದ ಕೊರಿಯನ್ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ‘ಹಂಟ್’

Update: 2024-02-04 04:55 GMT

2022ರಲ್ಲಿ ತೆರೆಕಂಡ ದಕ್ಷಿಣ ಕೊರಿಯಾದ ಜನಪ್ರಿಯ ನಟ ‘ಸ್ಕ್ವಿಡ್ ಗೇಮ್’ ವೆಬ್ ಸೀರೀಸ್ ಮುಖಾಂತರ ವಿಶ್ವವಿಖ್ಯಾತಿ ಪಡೆದ ಲೀ ಜಂಗ್ ಜೇ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ‘ಹಂಟ್’.

1980ರಲ್ಲಿ ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಸರ್ವಾಧಿಕಾರಿಯ ಆಡಳಿತದ ಕ್ರೌರ್ಯ ಮುಗಿಲು ಮುಟ್ಟಿದ್ದ ಕಾಲದ ರಾಜಕೀಯ ಒಳಸುಳಿಗಳನ್ನು ಚಿತ್ರ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ದಕ್ಷಿಣ ಕೊರಿಯಾದ ಮಿಲಿಟರಿ ಸರ್ವಾಧಿಕಾರಿ ಅಧ್ಯಕ್ಷ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆತನ ವಿರುದ್ಧ ವಿಫಲ ಹತ್ಯಾ ಪ್ರಯತ್ನ ನಡೆಯುತ್ತದೆ. ಇದರ ಹಿಂದಿರುವ ಷಡ್ಯಂತ್ರಗಳನ್ನು ಭೇದಿಸಲು ದ.ಕೊರಿಯಾದ ರಾಷ್ಟ್ರೀಯ ಭದ್ರತಾ ಸೇವೆ(ಕೆಸಿಐಎ)ಯ ವಿದೇಶಿ ಘಟಕ ಮತ್ತು ಆಂತರಿಕ ಘಟಕದ ಮುಖ್ಯಸ್ಥರಾದ ಪಾರ್ಕ್ ಮತ್ತು ಕಿಮ್ ರವರು ತಮ್ಮ ತಂಡದೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಕಣಕ್ಕೆ ಇಳಿಯುತ್ತಾರೆ. ತನಿಖೆ ಮುಂದುವರಿದಂತೆ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ಅಪನಂಬಿಕೆ, ಈರ್ಷೆ, ಮತ್ಸರ, ಸೇಡು ಬೆಳೆಯುತ್ತಾ ಹೋಗುತ್ತದೆ. ಅದೇ ರೀತಿ ಅಧ್ಯಕ್ಷರ ಹತ್ಯಾ ಪ್ರಯತ್ನದ ಷಡ್ಯಂತ್ರಗಳ ಹಿಂದಿನ ಕಠೋರ ಸತ್ಯಗಳು ಪ್ರೇಕ್ಷಕನ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಚಿತ್ರದ ಕಥೆ ಸಾಮಾನ್ಯವಾಗಿದ್ದರೂ ವೇಗದ ಚಿತ್ರಕತೆ ಮೂಲಕ ನಿರ್ದೇಶಕರು ಪ್ರೇಕ್ಷಕನನ್ನು ಅಚ್ಚರಿಯ ಕಡಲಿಗೆ ನೂಕುತ್ತಾರೆ.

2022ರ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದ ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಲೀ ಜಂಗ್ ಜೇ ಸ್ವತಃ ನಟಿಸಿದ್ದು, ಇನ್ನೊಂದು ಪ್ರಮುಖ ಪಾತ್ರದಲ್ಲಿ ಕೊರಿಯಾದ ಇನ್ನೋರ್ವ ಜನಪ್ರಿಯ ನಟ ಜಂಗ್ ವು ಸಂಗ್ ನಟಿಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಮನೋಜ್ಞ ಅಭಿನಯ, ಅದ್ಭುತ ಛಾಯಾಗ್ರಹಣ, ಚೇತೋಹಾರಿ ಸಂಗೀತ, ಮೊನಚಾದ ಸಂಕಲನ, 1980ರ ಕಾಲವನ್ನು ನೆನಪಿಸುವ ಪ್ರೊಡಕ್ಷನ್ ಡಿಸೈನಿಂಗ್ ಪ್ರೇಕ್ಷಕನನ್ನು ಎರಡು ಗಂಟೆಗಳ ಕಾಲ ಕಟ್ಟಿ ಹಾಕುವಲ್ಲಿ ಸಫಲವಾಗಿದೆ. ಚಿತ್ರದ ಪ್ರಮುಖ ಹೈಲೈಟ್ಸ್ ಸಾಹಸ ದೃಶ್ಯಗಳು. ಚಿತ್ರದಲ್ಲಿ ಬರುವ ಸ್ಟಂಟ್ ದೃಶ್ಯಾವಳಿಗಳು ಪ್ರೇಕ್ಷಕನನ್ನು ಮೋಡಿ ಮಾಡುತ್ತವೆ. ಚಿತ್ರದ ಕಥೆ ದಕ್ಷಿಣ ಕೊರಿಯಾದಲ್ಲಿ ನಡೆದ 1980 ಮೇ 18ರ ಗ್ವಾಂಗ್ಜು ಪ್ರಜಾಸತ್ತಾತ್ಮಕ ಚಳವಳಿ, 1983ರಲ್ಲಿ ನಡೆದ ಉತ್ತರ ಕೊರಿಯಾ ಪೈಲಟ್ ಲೀ ಯೂಂಗ್ ಪುಂಗ್ ದೇಶಾಂತರ ಪ್ರಕರಣ ಹಾಗೂ 1983ರಲ್ಲಿ ನಡೆದ ಆಂಗ್ ಸಾನ್ ಭಯೋತ್ಪಾದಕ ದಾಳಿ (ರಂಗೂನ್ ಬಾಂಬಿಂಗ್)..ಈ ಮೂರು ಪ್ರಮುಖ ಐತಿಹಾಸಿಕ ಘಟನೆಗಳೊಂದಿಗೆ ತಳಕು ಹಾಕಿಕೊಂಡಿದೆ.

ಲೀ ಮೋಗೆ ಛಾಯಾಗ್ರಹಣ, ಜೊ ಯೂಂಗ್ ವೂಕ್ ಸಂಗೀತ, ಕಿಮ್ ಸಂಗ್ ಬಮ್ರವರ ಸಂಕಲನ ಕಥೆಯ ಓಘಕ್ಕೆ ಪೂರಕವಾಗಿದೆ.

ಒಟ್ಟಿನಲ್ಲಿ ಆ್ಯಕ್ಷನ್ ಪ್ರಿಯರು ನೋಡಲೇಬೇಕಾದ ಚಿತ್ರ ‘ಹಂಟ್’.

ಚಿತ್ರ ಅಮೆಝಾನ್ ಪ್ರೈಮ್ನಲ್ಲಿ ಮೂಲ ಕೊರಿಯನ್ ಭಾಷೆಯೊಂದಿಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಡಬ್ಬಿಂಗ್ನಲ್ಲೂ ಲಭ್ಯವಿದೆ..

ಚಿತ್ರದ ರೇಟಿಂಗ್-IMDb-6.7/10

Rotten Tomatoes-6/10

Maturity Rating-U/A (16+)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸಲೀಂ ಅಬ್ಬಾಸ್ ವಳಾಲು

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!