ಶ್ರೇಷ್ಠತೆಯ ವ್ಯಸನ

Update: 2023-12-03 05:12 GMT

ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ಆಗಷ್ಟೇ ಕಾನೂನು ಪದವಿ ಪಡೆದು, ನ್ಯಾಯವಾದಿಯಾಗಿ ಪ್ರಮಾಣ ಸ್ವೀಕರಿಸಿ ಮೊದಲ ಬಾರಿ ನ್ಯಾಯಾಲಯದ ಕೊಠಡಿ ಪ್ರವೇಶಿಸಿ ನ್ಯಾಯವಾದಿಗಳಿಗೆಂದೇ ಮೀಸಲಿರಿಸಿದ್ದ ಸ್ಥಳದಲ್ಲಿ ನನ್ನ ಬಲಗಾಲನ್ನು ಎಡಗಾಲಿನ ಮೇಲೆ ಹಾಕಿ ಕುಳಿತು ಕೊಂಡೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಮಧ್ಯ ವಯಸ್ಕ ವಕೀಲರೊಬ್ಬರು ಹಾಗೆ ಕಾಲ ಮೇಲೆ ಕಾಲು ಹಾಕಿ ಕೂರ ಬಾರದು; ಅದು ನ್ಯಾಯಾಧೀಶರಿಗೆ ತೋರುವ ಅಗೌರವವಾಗುತ್ತದೆ; ನ್ಯಾಯಾಧೀಶರು ನೋಡಿದರೆ ಬಯ್ಯುತ್ತಾರೆ ಎಂದರು. ಬಿಸಿ ರಕ್ತದ ತರುಣನಾಗಿದ್ದ ನಾನು ಅದಕ್ಕೆ ‘‘ನನ್ನ ಒಂದು ಕಾಲಿನ ಮೇಲೆ ಇನ್ನೊಂದು ಕಾಲು ಹಾಕಿ ಕುಳಿತರೆ ನ್ಯಾಯಾಧೀಶರಿಗೆ ಹೇಗೆ ಅಗೌರವ ತೋರಿಸಿದಂತೆ ಆಗುತ್ತದೆ?’’ ಎಂದು ಕೇಳಿ, ‘‘ನ್ಯಾಯಾಧೀಶರು ನನ್ನನ್ನು ವಿಚಾರಿಸಿದರೆ ಹೀಗೇ ಹೇಳುವೆ’’ ಎಂದೆ. ಇದಕ್ಕೆ ಅವರ ಬಳಿ ಉತ್ತರವಿರಲಿಲ್ಲ! ಅದಕ್ಕವರು ಇದು ನ್ಯಾಯಾಲಯದ ಶಿಷ್ಟಾಚಾರವೆಂದರು! ಸಾಮಾನ್ಯವಾಗಿ ಇಂತಹ ಶಿಷ್ಟಾಚಾರಗಳಿಗೆ ಯಾವುದೇ ತಾರ್ಕಿಕ ವಿವರಣೆ, ಆಧಾರಗಳಿರುವುದಿಲ್ಲ. ಹೆಚ್ಚಿನವು ಊಳಿಗಮಾನ್ಯ ವ್ಯವಸ್ಥೆಯಿಂದ ಜನ್ಯವಾದ ಶಿಷ್ಟಾಚಾರಗಳು ಹಾಗೂ ನಮ್ಮ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ರೂಢಿಸಿಕೊಂಡು ಬಂದ ಆಚರಣೆಗಳು.

ಈಗ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಟಗಾರ ಮಿಚೆಲ್ ಮಾರ್ಷ್ ಕೈಯಲ್ಲಿ ಬೀರಿನ ಗ್ಲಾಸ್ ಹಿಡಿದು ವಿಶ್ವ ಕಪ್ ಟ್ರೋಫಿಯನ್ನು ಆಧಾರವಾಗಿಟ್ಟುಕೊಂಡು ಕಾಲುಚಾಚಿ ಕುಳಿತ ಛಾಯಾಚಿತ್ರ ವೈರಲ್ ಆಗಿ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿರುವುದು, ಆಸ್ಟ್ರೇಲಿಯನ್ನರು ಸಂಸ್ಕಾರವಿಲ್ಲದ ನಾಯಿಗಳು, ಹಂದಿಗಳು, ಅವರಿಗೆ ಮೆಟ್ಟಿನಲ್ಲಿ ಹೊಡೆಯಬೇಕು ಎಂದು ನಿಂದಿಸುತ್ತಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸಿ ವಿಶ್ವಕಪ್ ಟ್ರೋಫಿಗೆ ಈ ರೀತಿ ಅಗೌರವ ತೋರಿದ್ದಕ್ಕೆ ಮಿಚೆಲ್ ಮಾರ್ಷ್‌ರಿಗೆ ಇನ್ನು ಮುಂದೆ ಭಾರತದಲ್ಲಿ ಆಡಲು ಅವಕಾಶ ಕೊಡಬಾರದೆಂದು ಕೋರಿರುವ ಅತಿರೇಕದ ಅರ್ಜಿ ಸಲ್ಲಿಕೆಯಾಗಿರುವುದು ಮೇಲೆ ಹೇಳಿದ ಘಟನೆಯನ್ನು ನೆನಪಿಸಿತು!

ಇಂತಹ ಪ್ರತಿರೋಧಕ್ಕೆ ಮುಖ್ಯ ಕಾರಣ ಶಿರ ಶ್ರೇಷ್ಠ, ಕಾಲು ಕನಿಷ್ಠ ಎಂಬ ಆಳವಾಗಿ ಬೇರೂರಿರುವ ಭಾವನೆ! ಹಾಗಾಗಿ ಕಾಲಿನಿಂದ ಮುಟ್ಟುವುದು ಅಗೌರವವೆಂಬ ನಂಬಿಕೆ ಹೆಚ್ಚಿನ ಭಾರತೀಯರಲ್ಲಿ ಆಳವಾಗಿ ಬೇರೂರಿದೆ. ಆದರೆ ನಮ್ಮ ನಂಬಿಕೆಗಳೇ ಪ್ರಪಂಚದಲ್ಲಿರುವ ಎಲ್ಲರ ನಂಬಿಕೆಯೂ ಆಗಿರಬೇಕಿಲ್ಲ. ನಮ್ಮ ಸಂಸ್ಕಾರವೇ ಎಲ್ಲರ ಸಂಸ್ಕಾರ ಆಗಿರಬೇಕಿಲ್ಲ. ಹಾಗಿರಬೇಕೆಂದು ಬಯಸುವುದು ಮೂರ್ಖತನವಾಗುತ್ತದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲೇ ಹತ್ತಿಪ್ಪತ್ತು ಕಿಲೋಮೀಟರುಗಳ ಅಂತರದಲ್ಲಿ ಶಿಷ್ಟಾಚಾರ, ಸಂಪ್ರದಾಯಗಳಲ್ಲಿ ಬದಲಾವಣೆ ಕಾಣುತ್ತೇವೆ. ಕೆಲವರಿಗೆ ‘ಬಲ’ ಶುಭವಾದರೆ ಇನ್ನು ಕೆಲವರಿಗೆ ‘ಎಡ’ವೇ ಶುಭ! ಕೆಲವರಿಗೆ ‘ಬಿಳಿ’ಯ ವಸ್ತ್ರ ಶುಭವಾದರೆ ಕೆಲವು ಪಂಗಡಗಳಿಗೆ ‘ಕಪ್ಪು’ ವಸ್ತ್ರವೇ ಶ್ರೇಷ್ಠ! ಹಲವರಿಗೆ ‘ಅಮಾವಾಸ್ಯೆ’ ಅನಿಷ್ಠವಾದರೆ ಕೆಲವರಿಗೆ ‘ಅಮಾವಾಸ್ಯೆ’ ಒಳ್ಳೆಯ ದಿನ! ಅಷ್ಟೇ ಏಕೆ ಶಿರ ಶ್ರೇಷ್ಠ ಕಾಲು ಕನಿಷ್ಠ ಎಂದು ನಂಬುವವರೂ ಮಠಾಧೀಶರ, ಜಗದ್ಗುರುಗಳ ಪಾದ ಪೂಜೆ ಮಾಡಿ, ಪಾದ ತೊಳೆದು, ಆ ನೀರನ್ನು ತೀರ್ಥವೆಂದು ಸ್ವೀಕರಿಸುವ, ‘ಶ್ರೇಷ್ಠ’ವಾದ ಶಿರಬಾಗಿ ‘ಕನಿಷ್ಠ’ವಾದ ಕಾಲಿಗೆ ಎರಗುವ ವಿಪರ್ಯಾಸವನ್ನೂ ನಾವು ನೋಡುತ್ತಿದ್ದೇವೆ! ಅದೇರೀತಿ ಮೌಖಿಕ, ಆಂಗಿಕ ಭಾಷೆಗಳಲ್ಲೂ ವಿಭಿನ್ನ ಜನ ಸಮುದಾಯಗಳಲ್ಲಿ ತೀರಾ ವಿರುದ್ಧವಾದ ನಂಬಿಕೆ, ಶಿಷ್ಟಾಚಾರಗಳಿವೆ. ನಮ್ಮಲ್ಲಿ ಹೊಟೇಲಿಗೆ ಹೋದಾಗ ವೈಟರ್‌ನನ್ನು ಕರೆಯಲು ಕಣ್ಸನ್ನೆ, ಕೈಸನ್ನೆ ಮಾಡಿ ಕರೆಯುವುದು ಸಾಮಾನ್ಯ. ಅದನ್ನು ಯಾರೂ ತಪ್ಪಾಗಿ ಭಾವಿಸುವುದಿಲ್ಲ. ಆದರೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಹೀಗೆ ಕರೆಯುವುದು ಬೆಲೆವೆಣ್ಣುಗಳನ್ನಂತೆ! ಹೀಗೆ ಅಮೆರಿಕದ ಹೊಟೇಲೊಂದರಲ್ಲಿ ಕೈಸನ್ನೆಯಿಂದ ವೈಟರ್‌ನನ್ನು ಕರೆದು ಆ ವೈಟರ್‌ನಿಂದ ಬಯ್ಗುಳ ತಿಂದಿದ್ದನ್ನು ಕುಂ.ವೀರಭದ್ರಪ್ಪನವರು ತಮ್ಮ ಆತ್ಮ ಕಥನ ‘ಗಾಂಧಿ ಕ್ಲಾಸು’ನಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಹೀಗೆ ಪ್ರತಿಯೊಂದು ಜನಾಂಗದ ಆಚಾರ, ವಿಚಾರಗಳು, ಸಾಂಸ್ಕೃತಿಕ ಮೌಲ್ಯಗಳು ಭಿನ್ನವಾಗಿರುತ್ತವೆ. ನಮಗೆ ಸರಿ ಎನಿಸಿದ್ದು ಇತರರಿಗೆ ಸರಿ ಎನಿಸದಿರಬಹುದು. ಅವರಿಗೆ ಸರಿ ಎನಿಸಿದ್ದು ನಮಗೆ ಸರಿ ಎನಿಸದಿರ ಬಹುದು. ಆದ್ದರಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ನೆಲೆಸಿರುವ, ಭಿನ್ನ ಧರ್ಮದ ಜನಗಳ ನಂಬಿಕೆಗಳೂ ನಮ್ಮಂತೆಯೇ ಇರಬೇಕು, ನಮ್ಮ ಸಂಪ್ರದಾಯ, ಶಿಷ್ಟಾಚಾರಗಳನ್ನು ಅವರೂ ಪಾಲಿಸಬೇಕೆಂದು ಬಯಸುವುದು ಬಾಲಿಶ. ಹಾಗೆಯೇ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ಇತರರ ನಡತೆ ಸರಿ ಇಲ್ಲ ಎಂದು ಆರೋಪಿಸುವುದರಲ್ಲಿ, ಅವರ ನಡವಳಿಕೆಗಳನ್ನು ಹೀಗಳೆಯುವುದರಲ್ಲಿ ಅರ್ಥವಿಲ್ಲ.

ಇನ್ನೊಂದು ದೇಶಕ್ಕೆ ಹೋದಾಗ ಅಲ್ಲಿನವರ ಶಿಷ್ಟಾಚಾರಗಳಿಗೆ ಗೌರವ ಕೊಡಬೇಕೆಂಬುದರಲ್ಲಿ ಯಾವ ತಕರಾರೂ ಇಲ್ಲ. ಆದರೆ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ಕಾಲುಚಾಚಿ ಕುಳಿತಿದ್ದು ಸಾರ್ವಜನಿಕವಾಗಿ ಅಲ್ಲ. ಖಾಸಗಿ ಕೋಣೆಯಲ್ಲಿ!(ಡ್ರೆಸಿಂಗ್ ರೂಮ್). ಹಾಗೆಯೇ ಆತ ಟ್ರೋಫಿಯನ್ನೇನು ಪಾದದಿಂದ ತುಳಿಯುತ್ತಿರಲಿಲ್ಲ! ಇಷ್ಟು ಸಣ್ಣ ಘಟನೆಯೊಂದನ್ನು ಈ ಪ್ರಮಾಣ ದಲ್ಲಿ ಬೆಳೆಸಿ ಆಸ್ಟ್ರೇಲಿಯನ್ನರನ್ನು ಟೀಕಿಸುತ್ತಿರುವುದಕ್ಕೆ ಕಾರಣ ನಮ್ಮ ಶಿಷ್ಟಾಚಾರ, ಸಾಂಸ್ಕೃತಿಕ ಮೌಲ್ಯಗಳೇ ಶ್ರೇಷ್ಠ ಎಂಬ ‘ಶ್ರೇಷ್ಠತೆಯ ವ್ಯಸನ’!

ಬೇಡರ ಕಣ್ಣಪ್ಪ, ಏಕಲವ್ಯ ಮುಂತಾದ ಕಥೆಗಳಲ್ಲಿ ಬರುವಂತೆ ಶುದ್ಧ-ಅಶುದ್ಧ, ತಪ್ಪು-ಒಪ್ಪುಗಳಿಗಿಂತ ಯಾವುದೇ ಕೆಲಸದಲ್ಲಿ ಏಕಾಗ್ರತೆ, ಶ್ರದ್ಧೆಗಳೇ ಮುಖ್ಯ. ಇಂತಹ ಶ್ರದ್ಧೆಯಿಂದ ಕ್ರಿಕೆಟ್ ಆಡುತ್ತಿರುವುದರಿಂದಲೇ ಆಸ್ಟ್ರೇಲಿಯನ್ನರು ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುವುದು ಸುಸಂಸ್ಕೃತಿ. ಅದುಬಿಟ್ಟು ಸಂಸ್ಕೃತಿ, ಶಿಷ್ಟಾಚಾರದ ಹೆಸರಿನಲ್ಲಿ ಅವರನ್ನು ನಿಂದಿಸುವುದು ನಮ್ಮ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಎಚ್.ಎಸ್. ನಂದಕುಮಾರ್, ಮಂಗಳೂರು

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!