ವಿಜಯೇಂದ್ರ, ಅಶೋಕ್ ನೇಮಕದ ಬೆನ್ನಿಗೇ ಬಿಜೆಪಿಯಲ್ಲಿ ತಳಮಳ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಯಡಿಯೂರಪ್ಪರ ಮಗ ವಿಜಯೇಂದ್ರ, ಮತ್ತು ಅದೇ ಬಣದ ಆರ್ ಅಶೋಕ್ ಆಯ್ಕೆ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರ ಮುನಿಸು ಹೆಚ್ಚಾದ ಲಕ್ಷಣಗಳು ಕಾಣಿಸುತ್ತಿವೆ. ಹಲವು ಬಿಜೆಪಿ ನಾಯಕರ ಅಸಮಾಧಾನ ಸ್ಫೋಟಗೊಂಡಿದೆ.
ಹಾಗಾಗಿ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಾದ ಈ ಹೊತ್ತಲ್ಲೇ, ಆಡಳಿತ ಪಕ್ಷದ ಮೇಲೆ ಮುಗಿ ಬೀಳುವುದೋ, ಪಕ್ಷದೊಳಗಿನ ಆಂತರಿಕ ಮುನಿಸು ಶಮನ ಮಾಡುವುದೋ ಎಂಬ ಗೊಂದಲದಲ್ಲಿ ಬಿಜೆಪಿ ಇದೆ. ಯತ್ನಾಳ್, ಬೆಲ್ಲದ್ , ಸಿಟಿ ರವಿ ಬೆನ್ನಲ್ಲೇ ಇದೀಗ ಆ ಪಕ್ಷದ ಹಿರಿಯ ರಾಜಕಾರಣಿ ಸೋಮಣ್ಣ ತಿರುಗಿಬಿದ್ದಿದ್ದಾರೆ. " ಡಿಸೆಂಬರ್ 6ರ ತನಕ ವರಿಷ್ಠರು ಏನೂ ಮಾತನಾಡಬಾರದು ಅಂತ ಸೂಚಿಸಿದ್ದಾರೆ. ಅದರ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಅರವಿಂದ್ ಲಿಂಬಾವಳಿ ಮಾತಿಗೆ ನನ್ನ ಸಮ್ಮತಿ ಇದೆ. ಪಕ್ಷದಲ್ಲಿ ಸೋಮನಹಳ್ಳಿ ಮುದುಕಿ ಕಥೆ ರೀತಿ ಆಗಿದೆ" ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಅಸಮಾಧಾನಿತರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.
ಸಾಲದ್ದಕ್ಕೆ ನನ್ನನ್ನು ಸೋಲಿಸಿದ್ದು ಬೇರಾರೂ ಅಲ್ಲ, ನನ್ನ ಜೊತೆಯಲ್ಲಿದ್ದವರು, ಪಕ್ಷದ ಮಹಾನ್ ನೇತಾರ ಎನಿಸಿಕೊಂಡವರೇ ನನ್ನನ್ನು ಸೋಲಿಸಿದರು. ಎಲ್ಲವನ್ನೂ ಡಿಸೇಂಬರ್ 6 ರ ಬಳಿಕ ವರಿಷ್ಠರಿಗೆ ಹೇಳುತ್ತೇನೆ ಎಂದೂ ಸೋಮಣ್ಣ ಹೇಳಿದ್ದಾರೆ. ವಿಜಯೇಂದ್ರ ಆಯ್ಕೆ ಬೆನ್ನಲ್ಲೇ ಕೆಂಡಾಮಂಡಲರಾಗಿದ್ದ ಯತ್ನಾಳ್, ಬಿವೈ ವಿಜಯೇಂದ್ರ ಬಿಜೆಪಿ ರಾಜಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ನಡೆದ ಪದಗ್ರಹಣ ಸಮಾರಂಭದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸಿಡುಕಿ , "ನಿಮಗ್ಯಾಕೆ ಅಷ್ಟು ಕಾಳಜಿ, ಇಂಥ ಪ್ರಶ್ನೆಗಳನ್ನು ಮಾಧ್ಯಮದವರು ಕೇಳಬಾರದು. ಮಾಧ್ಯಮ ಯಾವುದಾದರೂ ಪಕ್ಷ ಅಥವಾ ವ್ಯಕ್ತಿಯನ್ನು ವಹಿಸಿಕೊಂಡು ಮಾತಾಡಬಾರದು, ಯಾವನೋ ಚಿಂದಿ ಚೋರ್ ನನ್ನು ಅಧ್ಯಕ್ಷನೋ ಮತ್ತೊಂದೋ ಮಾಡಿ ಅವನನ್ನು ಮಾಧ್ಯಮದವರು ಆ ಹುಲಿ ಈ ಹುಲಿ ಅಂತ ಪ್ರೊಜೆಕ್ಟ್ ಮಾಡಿದರೆ ತಾನ್ಯಾಕೆ ಪ್ರತಿಕ್ರಿಯೆ ನೀಡಬೇಕು" ಎಂದು ವಿಜಯೇಂದ್ರ ಆಯ್ಕೆಗೆ ಅಸಮಾಧಾನವನ್ನು ನೇರವಾಗಿಯೇ ಹೊರ ಹಾಕಿದ್ದರು.
ಹೇಳಿಕೆ ಬೆನ್ನಲ್ಲೇ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿ, "ಯತ್ನಾಳ್ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗುತ್ತಿದೆ. ಅವರು ಅಭಿಪ್ರಾಯವನ್ನ ಹೇಳಲು ಸ್ವತಂತ್ರರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅವರವರ ಅಭಿಪ್ರಾಯಗಳು ಇರುತ್ತೆ. ಎಲ್ಲರ ಅಭಿಪ್ರಾಯದ ಮೇರೆಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದು ಯತ್ನಾಳ್ ಗೆ ಹೇಳಿದ್ದಾರೆ.
ಇನ್ನೊಂದೆಡೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತಿದ್ದ ಸಿಟಿ ರವಿ ಕೂಡಾ ವಿಜಯೇಂದ್ರ ಆಯ್ಕೆ ಬೆನ್ನಲ್ಲೇ 'ಈಗ ಏನಾದ್ರೂ ಮಾತಾಡಿದ್ರೆ ತಿರುಗುಬಾಣವಾಗುತ್ತೆ' ಅಂತ ಹೇಳಿದ್ರು. ಅಲ್ಲದೆ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದರು. ರಾಜ್ಯಾಧ್ಯಕ್ಷನಾಗಿ ಆಯ್ಕೆ ಆದ ಬೆನ್ನಲ್ಲೇ , ಅಸಮಾಧಾನಿತರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅತೃಪ್ತರ ಜೊತೆ ಚರ್ಚೆ ನಡೆಸುತ್ತೇನೆ ಎಂದಿದ್ದ ವಿಜಯೇಂದ್ರ, ಪಕ್ಷದಿಂದ ಮತ್ತೆ ಮತ್ತೆ ಕೇಳಿ ಬರುತ್ತಿರುವ ಅಸಮಾಧಾನದ ಮಾತುಗಳಿಂದ ಬೇಸತ್ತು "ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಯನ್ನು ವಿರೋಧಿಸಿದಂತೆ" ಎಂದೂ ಹೇಳಿದ್ದರು.
ಇನ್ನು, ಪ್ರತಿಪಕ್ಷ ನಾಯಕನ ಆಯ್ಕೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಪಕ್ಷದ ರಾಜ್ಯಾಧ್ಯಕ್ಷ ನೇಮಕಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದರು. "ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೆ ಒಪ್ಪುತ್ತಿದ್ದೆವು. ಆದರೆ, ನಮಗಿಂತ ಕಿರಿಯ ವಯಸ್ಸಿನ ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ? ರಾಜಾಧ್ಯಕ್ಷರ ನೇಮಕ ವಿಚಾರದಲ್ಲಿ ಇತರ ಹಿರಿಯರನ್ನ ಪರಿಗಣಿಸಬೇಕಿತ್ತು ಎಂದು ರಮೇಶ್ ಜಾರಕಿಹೊಳಿ ನೇರವಾಗಿ ವೀಕ್ಷಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೇಳಿಕೆ ಬೆನ್ನಲ್ಲೆ ವಿಜಯೇಂದ್ರ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಭೇಟಿ ಬಳಿಕ ಮಾತನಾಡಿರುವ ರಮೇಶ್ ಜಾರಕಿಹೊಳಿ, 'ಸಾಕಷ್ಟು ನೋವಿದೆ. ಅದನ್ನು ಈಗ ಹೇಳಲು ಸಾಧ್ಯವಿಲ್ಲ. ಸುನಿಲ್‌ಕುಮಾರ್, ಯತ್ನಾಳ್ ಅವರ ಜತೆಯೂ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ವಿಜಯೇಂದ್ರ ಹಾಗೂ ಆರ್.ಅಶೋಕ ಅವರಿಗೆ ಸಂಪೂರ್ಣ ಸಹಕಾರ ನೀಡಲು ನಿರ್ಧರಿಸಿದ್ದೇವೆ. ಲೋಕಸಭಾ ಚುನಾವಣೆ ಬಳಿಕ ಮತ್ತೆ ಚರ್ಚೆ ಮಾಡಲಾಗುವುದು. 'ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ' ಎಂದಿದ್ದಾರೆ.
ಯಡಿಯೂರಪ್ಪ ಪಾಳಯದ ಇಬ್ಬರು ಸದಸ್ಯರಿಗೆ ಪ್ರಮುಖ ಸ್ಥಾನಗಳನ್ನು ನೀಡಿರುವುದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಟವನ್ನು ಕೆರಳಿಸಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ವಿಚಾರ. ಯತ್ನಾಳ್, ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ವರಿಷ್ಠರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸುವ ಮೂಲಕ ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದರೆ, ಸಿಟಿ ರವಿ, ಅಶ್ವತ್ಥನಾರಾಯಣ್, ಸುನೀಲ್ ಕುಮಾರ್ ರಂತವರು ಮುನಿಸು ಇದ್ದರೂ ತೋರಿಸಿಕೊಳ್ಳದೆ ಬಹಿರಂಗವಾಗಿ ಹೇಳಿಕೆ ಕೊಡೋದ್ರಿಂದ ಹಿಂದೆ ಸರಿದಿದ್ದಾರೆ.
ಈ ನಡುವೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಅಸಮಧಾನ ವ್ಯಕ್ತಪಡಿಸಿ, ‘ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆಯೇ ಗೆದ್ದಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಹೊಂದಾಣಿಕೆ ಮಾಡಿಕೊಳ್ಳುವವರ ಕಾಲ’ ಎಂದು ಲೇವಡಿ ಮಾಡಿದ್ದಾರೆ.
‘ಬಿ.ವೈ.ವಿಜಯೇಂದ್ರ ಅವರನ್ನು ಅಳೆದು, ತೂಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದೂ ಇದೇ ವೇಳೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಇದೇ ಸಂದರ್ಭ ಕಾಂತರಾಜ್ ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿ, ‘ಕಾಂತರಾಜ್ ಆಯೋಗದ ವರದಿಯ ಮೂಲಪ್ರತಿ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಆ ವರದಿಯ ಸಾಫ್ಟ್‌ಕಾಪಿ ಕಂಪ್ಯೂಟರ್‌ನಲ್ಲಿ ಇರುತ್ತದೆ. ಅದನ್ನು ಕಳ್ಳತನ ಮಾಡಲು ಆಗುವುದಿಲ್ಲವಲ್ಲ’ ಎಂದು ಹೇಳಿದ ಅವರು, ‘ಈ ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಾಮಾಜಿಕವಾಗಿ ಯೋಚಿಸಬೇಕು’ ‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಕಾಂತರಾಜ್ ಆಯೋಗದಿಂದ ವರದಿ ಪಡೆದಿದ್ದರು. ಈಗ ವರದಿ ಜಾರಿಗೆ ಸಿಎಂ ಒಲವು ತೋರಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಈ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ, ಈ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿ. ಸದನದೊಳಗೆ ಈ ವಿಷಯ ಚರ್ಚೆಗೆ ತರಲಿ’ ಎಂದು ಆಗ್ರಹಿಸಿದ್ದಾರೆ.
ಇದು ಜಾತಿಗಣತಿ ಬಗ್ಗೆ ಬಿಜೆಪಿ ನಿಲುವಿಗೆ ತದ್ವಿರುದ್ಧ ಹೇಳಿಕೆ . ಹಾಗಾಗಿ ಪಕ್ಷಕ್ಕೆ ಮುಜುಗರವಾಗಿದೆ. ಇನ್ನು, ಸೋಮಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ , ಸೋಮಣ್ಣ ಒಳ್ಳೆಯ ಸಂಘಟಕ. ಅವರ ಜತೆ ಮಾತನಾಡುತ್ತೇವೆ. ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂದೆ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯೊಳಗಿನ ಆಂತರಿಕ ಒಳ ಬೇಗುದಿಯ ಈ ಎಲ್ಲಾ ಹೇಳಿಕೆಗಳ ನಡುವೆ,
ಬಿಜೆಪಿ ಮುಖಂಡರಾದ ವಿ. ಸೋಮಣ್ಣ ಮತ್ತು ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಡಿಸಿಎಂ ಡಿಕೆಶಿವಕುಮಾರ್ ಅವರು ಕೂಡಾ ಬಿಜೆಪಿ, ಜೆಡಿಎಸ್ ನಿಂದ ಹಲವು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ನವೆಂಬರ್ 15ರ ಬಳಿಕ ಪಕ್ಷ ಸೇರಲಿದ್ದಾರೆ ಎಂದೂ ಇತ್ತೀಚೆಗೆ ಹೇಳಿದ್ದರು. ಸೋಮಣ್ಣ, ಅರವಿಂದ ಲಿಂಬಾವಳಿಯಂತಹ ನಾಯಕರು ಕಾಂಗ್ರೆಸ್ ಗೆ ಹೋದರೆ ಅದು ಬಿಜೆಪಿಗೆ ಲೋಕಸಭಾ ಚುನಾವಣೆ ವೇಳೆ ದೊಡ್ಡ ಹಿನ್ನಡೆಯಾಗಲಿದೆ.
ಇದೀಗ ಸೋಮಣ್ಣ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಹೆಚ್ಚಾಗಿದೆ. 'ಪಕ್ಷ ಯಾರ ಮನೆತನಕ್ಕೆ ಸೀಮಿತವಲ್ಲ, ಎಲ್ಲದಕ್ಕೂ ಕಾಲ ಬರಲಿ. ದಶಕಗಳ ನನ್ನ ಹೋರಾಟ ಏನು ಅಂತ ನಾನು ತೋರಿಸ್ತೀನಿ' ಅಂತ ಸೋಮಣ್ಣ ಸ್ಟ್ರಾಂಗಾಗೇ ಮಾತನಾಡಿರೋದು, ಕೊನೆಗೆ ಬಿಜೆಪಿ ನಾಯಕರ ಈ ಮುನಿಸು, ಆರೋಪಗಳು ಎಲ್ಲಿಗೆ ಹೋಗಿ ತಲುಪುತ್ತೆ?, ವಿಜಯೇಂದ್ರ ಮತ್ತು ಅಶೋಕ್ ಯಾವ ರೀತಿ ಇದನ್ನು ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.