ತೆಲಂಗಾಣ ಬಿಜೆಪಿ ಶಾಸಕರ ಸಂವಿಧಾನ ವಿರೋಧಿ ನಡೆ

Update: 2023-12-12 03:55 GMT

ಪಕ್ಷದ ಕಾರ್ಯಕತೆರ್ಯಾಗಿದ್ದರೂ ಸಂವಿಧಾನ ಬದ್ಧ ನಡವಳಿಕೆಗೆ ಆದ್ಯತೆಯನ್ನು ತೋರಿದ ರಾಜ್ಯಪಾಲರ ನಿರ್ಧಾರದ ಬಗ್ಗೆ ತೆಲಂಗಾಣ ಶಾಸಕರು ಮತ್ತು ನಮ್ಮ ಕರ್ನಾಟಕದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಇಂತಹ ವ್ಯಕ್ತಿಗಳಿಗೆ ನಾವು ಸಂವಿಧಾನವನ್ನು ಓದಿಸಬೇಕಿದೆ. ಜೊತೆಗೆ ಎಲ್ಲಾ ರಾಜಕಾರಣಿಗಳಿಗೆ ಸಂವಿಧಾನದ ಓದುವಿಕೆಯನ್ನು ಕಡ್ಡಾಯ ಮಾಡಬೇಕಿದೆ. ಏಕೆಂದರೆ ವರ್ತಮಾನದ ಭಾರತದಲ್ಲಿ ಪಕ್ಷ ಭೇದವಿಲ್ಲದೆ ಪ್ರತಿಯೊಬ್ಬ ಸಚಿವ ಮತ್ತು ಶಾಸಕ ಮತ್ತು ಸಂಸದರು ತಮ್ಮ ಕ್ಷೇತ್ರದಲ್ಲಿ ತಮ್ಮದೇ ಜಾತಿ ಸಮುದಾಯದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ಭವಿಷ್ಯದ ಭಾರತಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ತೆಲಂಗಾಣ ರಾಜ್ಯದ ನೂತನ ವಿಧಾನಸಭೆಗೆ ಆಯ್ಕೆಯಾಗಿರುವ ಎಂಟು ಮಂದಿ ಭಾರತೀಯ ಜನತಾ ಪಕ್ಷದ ಶಾಸಕರು ಹಂಗಾಮಿ ಸಭಾಧ್ಯಕ್ಷ ಅಕ್ಬರುದ್ದೀನ್ ಉವೈಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸಂವಿಧಾನ ಬದ್ಧ ಶಾಸನಸಭೆಗೆ ಆಯ್ಕೆಯಾಗಲು ನಮ್ಮಲ್ಲಿ ಯಾವುದೇ ಕನಿಷ್ಠ ವಿದ್ಯಾರ್ಹತೆಯನ್ನು ನಿರ್ದಿಷ್ಟ ಪಡಿಸದಿರುವುದು ಇಂತಹ ಅನಾಹುತಗಳಿಗೆ ಕಾರಣವಾಗಿದೆ. ವಿದ್ಯೆಗಿಂತ ಹೆಚ್ಚಾಗಿ ಹಣಬಲ, ತೋಳ್ಬಲ ಮತ್ತು ಜಾತಿ ಹಾಗೂ ಧರ್ಮದ ಬೆಂಬಲವಿದ್ದರೆ ಯಾರು ಬೇಕಾದರೂ ಭಾರತದ ಸಂಸತ್ತಿಗೆ ಅಥವಾ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಹೋಗಬಹುದಾಗಿದೆ. ಇದು ಇಂತಹ ಅಮಾನವೀಯ ನಡುವಳಿಕೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಶೇ.80ಕ್ಕೂ ಹೆಚ್ಚು ಮಂದಿ ಕೋಟ್ಯಧೀಶ್ವರರು ಭಾರತದ ಶಾಸನ ಸಭೆಗಳಿಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.

ತೆಲಂಗಾಣದ ಶಾಸಕರು ಪ್ರಮಾಣವಚನ ಸ್ವೀಕರಿಸುವುದಕ್ಕೆ ನಿರಾಕರಿಸಲು ನೀಡಿರುವ ಕಾರಣವು ಇಡೀ ಭಾರತದ ನಾಗರಿಕರು ತಲೆ ತಗ್ಗಿಸುವ ಸಂಗತಿ. ಸಂವಿಧಾನ ನಿಯಮ 188ರ ನಿಯಮದ ಪ್ರಕಾರ ಪ್ರತಿಯೊಬ್ಬ ಜನಪ್ರತಿನಿಧಿ ಅಂದರೆ ಶಾಸಕನು ಶಾಸನ ಸಭೆಯಲ್ಲಿ ಜನಪ್ರತಿನಿಧಿಯಾಗಿ ಕೂರುವ ಮುನ್ನ ಆಯಾ ರಾಜ್ಯಗಳ ರಾಜ್ಯಪಾಲರು ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿಗಳಿಂದ ಸಂವಿಧಾನ ಬದ್ಧ ಪ್ರಮಾಣ ವಚನವನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ವಿಧಾನಸಭೆಗೆ ಆಯ್ಕೆಯಾದ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಅಥವಾ ಸಭಾಧ್ಯಕ್ಷರನ್ನಾಗಿ ರಾಜ್ಯಪಾಲರು ನೇಮಕ ಮಾಡುವುದು ಈವರೆಗೆ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ.

ವಿಶಾಲ ಆಂಧ್ರಪ್ರದೇಶವು 2014ರಲ್ಲಿ ವಿಭಜನೆಗೊಂಡು ತೆಲಂಗಾಣ ಮತ್ತು ಆಂಧ್ರ ಎಂಬ ಹೆಸರಿನಲ್ಲಿ ಎರಡು ರಾಜ್ಯಗಳು ಅಸ್ತಿತ್ವಕ್ಕೆ ಬಂದ ನಂತರ ತೆಲಂಗಾಣದಲ್ಲಿ ನಡೆದ ಮೂರನೇ ವಿಧಾನ ಸಭಾ ಚುನಾವಣೆಯ ನೂರ ಹತ್ತೊಂಬತ್ತು ಸದಸ್ಯರಲ್ಲಿ ಆಯ್ಕೆಯಾದ ಅತ್ಯಂತ ಹಿರಿಯ ಸದಸ್ಯರೆಂದರೆ, ಕಾಂಗ್ರೆಸ್ ಪಕ್ಷದ ಉತ್ತಮ್ ಕುಮಾರ್ ರೆಡ್ಡಿ ಹಾಗೂ ಹಿಂದಿನ ವಿಶಾಲಾಂಧ್ರ ವಿಧಾನ ಸಭೆಯೂ ಒಳಗೊಂಡಂತೆ ಒಟ್ಟು ಆರು ಬಾರಿ ಆಲ್ ಇಂಡಿಯಾ ಮಜ್ಲಿಸೆ ಇತ್ತ್ತೆಹಾದುಲ್ ಮುಸ್ಲಿಮೀನ್ ಪಕ್ಷದಿಂದ (ಎಐಎಂಐಎಂ) ಆಯ್ಕೆಯಾಗಿರುವ ಅಕ್ಬರುದ್ದೀನ್ ಉವೈಸಿ ಮಾತ್ರ. ಉತ್ತಮ್ ಕುಮಾರ್ ರೆಡ್ಡಿ ಅವರು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪ್ರಕ್ಷದ ಸರಕಾರದಲ್ಲಿ ನೂತನ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದಲ್ಲಿರುವ ಕಾರಣ ಹಂಗಾಮಿ ಸ್ಪೀಕರ್ ಆಗುವ ಅವಕಾಶವು ಅಕ್ಬರುದ್ದೀನ್ ಉವೈಸಿಗೆ ದೊರೆಯಿತು.

ವಾಸ್ತವವಾಗಿ ತೆಲಂಗಾಣ ರಾಜ್ಯದ ರಾಜಕೀಯದಲ್ಲಿ ಹೈದರಾಬಾದ್ ಕ್ಷೇತ್ರದ ಸಂಸದ ಅಸದುದ್ದೀನ್ ಉವೈಸಿ ಸ್ಥಾಪಿಸಿರುವ ಎಐಎಂಐಎಂ ಎಂಬ ಪ್ರಾದೇಶಿಕ ಪಕ್ಷವು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ವಿರೋಧಿ ನಿಲುವು ತಳೆದಿರುವ ಪಕ್ಷವಾಗಿದೆ. ಆದರೆ, ಬಹುತೇಕ ಮಂದಿ ತೆಲಂಗಾಣದಲ್ಲಿ ಈ ಪಕ್ಷವನ್ನು ಬಿಜೆಪಿಯ ಅಂಗಪಕ್ಷವೆಂದು ಗೇಲಿ ಮಾಡುವುದುಂಟು. ಏಕೆಂದರೆ ಉತ್ತರ ಪ್ರದೇಶ ಮತ್ತು ನೆರೆಯ ಆಂಧ್ರದಲ್ಲಿ ಬಿಜೆಪಿ ವಿರೋಧಿ ಮತಗಳನ್ನು ವಿಂಗಡಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಈ ಪಕ್ಷವು ಕಾರಣವಾಗುತ್ತಿದೆ. ಉತ್ತರ ಪ್ರದೇಶದ ವಿಧಾನ ಸಭೆಯ ಚುನಾವಣೆಯಲ್ಲಿ 55 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಅಭ್ಯರ್ಥಿಗಳು ಕೇವಲ ಎರಡರಿಂದ ಐದು ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಈ ಕ್ಷೇತ್ರಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಅಭ್ಯರ್ಥಿಗಳು ಮತ್ತು ಅಸಾಸುದ್ದೀನ್ ಉವೈಸಿ ಪಕ್ಷದ ಅಭ್ಯರ್ಥಿಗಳು ತಲಾ ಐದರಿಂದ ಹತ್ತು ಸಾವಿರ ದಲಿತರು ಹಾಗೂ ಮುಸ್ಲಿಮರ ಮತಗಳನ್ನು ಕಸಿದುಕೊಂಡು ಆದಿತ್ಯನಾಥ್ ಯೋಗಿ ನೇತೃತ್ವದ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಕಾರಣವಾಗಿದ್ದರು.

ತೆಲಂಗಾಣದ ವಿಧಾನಸಭಾ ಸದಸ್ಯ ಅಕ್ಬರುದ್ದೀನ್ ಉವೈಸಿ ಅಸದುದ್ದೀನ್ ಉವೈಸಿ ಅವರ ಕಿರಿಯ ಸಹೋದರ. ಹಿರಿಯ ಸದಸ್ಯ ಎಂಬ ಅರ್ಹತೆಯ ಮೇರೆಗೆ ತೆಲಂಗಾಣದ ರಾಜ್ಯಪಾಲ ಶ್ರೀಮತಿ ತಮಿಳು ಇಸೈ ಸುಂದರ ರಾಜನ್ ಅವರು ಅಕ್ಬರುದ್ದೀನ್ ಉವೈಸಿ ಅವರನ್ನು ಹಂಗಾಮಿ ಸಭಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಪ್ರಮಾಣ ವಚನ ಬೋಧಿಸಿದ್ದರು. 2019ರಲ್ಲಿ ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಪಾಲರಾಗಿ ನೇಮಕಗೊಂಡ ತಮಿಳು ಇಸೈ ಅವರ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಅಥವಾ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಬೇಕಿತ್ತು. ಆದರೆ, ಅವರಿಗೆ ಸಂವಿಧಾನದ ನಡಾವಳಿಗಳ ಕುರಿತು ಪ್ರಜ್ಞೆ ಇರುವ ಕಾರಣ ರಾಜ್ಯಪಾಲರ ನಿರ್ಧಾರವನ್ನು ಗೌರವಿಸಿದರು. ತಮ್ಮದೇ ಪಕ್ಷದ ವತಿಯಿಂದ ನೇಮಕಗೊಂಡ ರಾಜ್ಯಪಾಲರು ತಮ್ಮಂತೆ ಜಾತಿ ಮತ್ತು ಧರ್ಮದ ಕೊಳ್ಳಿದೆವ್ವಗಳಾಗಿ ಕುಣಿಯಲಿಲ್ಲ ಎಂದು ಆಕ್ರೋಶಗೊಂಡ ಎಂಟು ಮಂದಿ ಬಿಜೆಪಿ ಶಾಸಕರು ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿ ವಿಧಾನ ಸಭೆಯಿಂದ ಹೊರ ನಡೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಬದ್ಧವಾಗಿ ಪಕ್ಷಾತೀತ ನಿಲುವಿನಿಂದ ನಡೆದುಕೊಳ್ಳಬೇಕಾದ ರಾಜ್ಯಪಾಲರುಗಳು ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಪಕ್ಷದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದು ಇವರ ನಡವಳಿಕೆಗಳು ಸುಪ್ರೀಂ ಕೋರ್ಟಿನಿಂದ ತೀವ್ರವಾದ ಆಕ್ರೋಶ ಮತ್ತು ಟೀಕೆಗೆ ಒಳಗಾಗಿವೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಪಾಲರುಗಳ ವರ್ತನೆಯಿಂದ ಅಲ್ಲಿನ ರಾಜ್ಯಗಳ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇವರ ವರ್ತನೆಗಳು ಭಾರತದ ಪ್ರಜ್ಞಾವಂತ ನಾಗರಿಕರಲ್ಲಿ ಅಸಹ್ಯ ಹುಟ್ಟಿಸಿವೆ. ತೆಲಂಗಾಣದ ರಾಜ್ಯಪಾಲ ಶ್ರೀಮತಿ ತಮಿಳು ಇಸೈ ಸುಂದರರಾಜನ್ ಸಾಮಾನ್ಯ ಹೆಣ್ಣು ಮಗಳಲ್ಲ. ಅವರ ವಿದ್ಯಾರ್ಹತೆ, ಅನುಭವ, ಸಾಮಾಜಿಕ ಸೇವೆ ಇವೆಲ್ಲವೂ ಅವರನ್ನು ಪಕ್ಷಗಳನ್ನು ಮೀರಿ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವಂತೆ ಮಾಡಿವೆ. ಈ ಕಾರಣಕ್ಕಾಗಿ ಅವರು ಹಿಂದಿನ ತೆಲಂಗಾಣದಲ್ಲಿ ಬಿಆರ್ಎಸ್ ಸರಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ಗೆ ಯಾವುದೇ ಕಿರಿ ಕಿರಿ ಉಂಟು ಮಾಡಲಿಲ್ಲ.

ತಮಿಳುನಾಡು ಜಿಲ್ಲೆಯ ನಾಗರಕೋಯಿಲ್ ಪ್ರದೇಶದವರಾದ ತಮಿಳು ಇಸೈ ಅವರು ಚೆನ್ನೈ ನಗರದ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಖ್ಯಾತ ಸ್ತ್ರೀ ರೋಗದ ತಜ್ಞೆಯಾಗಿ ಚೆನ್ನೈನಗರದ ಎಂಜಿಆರ್ ಆಸ್ಪತ್ರೆಯಲ್ಲಿ ಪ್ರಸಿದ್ಧಿಯಾಗಿದ್ದರು. ಜೊತೆಗೆ ತಮಿಳುನಾಡಿನ ಅಖಿಲ ಭಾರತ ವೈದ್ಯಕೀಯ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ತಮಗೆ ಇದ್ದ ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರೂ ವೈದ್ಯಕೀಯ ಪದವೀಧರರಾಗಿ ಜೀವನಕ್ಕೆ ಕಾಲಿಡುವ ಮುನ್ನವೇ ಅಕಾಲ ಮೃತ್ಯುವಿಗೆ ಈಡಾದ ನಂತರ ಅವರು ರಾಜಕೀಯ ಪ್ರವೇಶ ಮಾಡಿದರು. ಚೆನ್ನೈ ಮತ್ತು ತೂತ್ತುಕುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಟ್ಟು ಆರು ಬಾರಿ ಸೋಲನ್ನು ಅನುಭವಿಸಿದ್ದರು. ನಂತರ ಬಿಜೆಪಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿದ್ದ ಇವರನ್ನು ಮೋದಿಯವರು 2019ರಲ್ಲಿ ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಕ ಮಾಡಿದರು.

ಪಕ್ಷದ ಕಾರ್ಯಕತೆರ್ಯಾಗಿದ್ದರೂ ಸಂವಿಧಾನ ಬದ್ಧ ನಡವಳಿಕೆಗೆ ಆದ್ಯತೆಯನ್ನು ತೋರಿದ ರಾಜ್ಯಪಾಲರ ನಿರ್ಧಾರದ ಬಗ್ಗೆ ತೆಲಂಗಾಣ ಶಾಸಕರು ಮತ್ತು ನಮ್ಮ ಕರ್ನಾಟಕದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಇಂತಹ ವ್ಯಕ್ತಿಗಳಿಗೆ ನಾವು ಸಂವಿಧಾನವನ್ನು ಓದಿಸಬೇಕಿದೆ. ಜೊತೆಗೆ ಎಲ್ಲಾ ರಾಜಕಾರಣಿಗಳಿಗೆ ಸಂವಿಧಾನದ ಓದುವಿಕೆಯನ್ನು ಕಡ್ಡಾಯ ಮಾಡಬೇಕಿದೆ. ಏಕೆಂದರೆ ವರ್ತಮಾನದ ಭಾರತದಲ್ಲಿ ಪಕ್ಷ ಭೇದವಿಲ್ಲದೆ ಪ್ರತಿಯೊಬ್ಬ ಸಚಿವ ಮತ್ತು ಶಾಸಕ ಮತ್ತು ಸಂಸದರು ತಮ್ಮ ಕ್ಷೇತ್ರದಲ್ಲಿ ತಮ್ಮದೇ ಜಾತಿ ಸಮುದಾಯದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ಭವಿಷ್ಯದ ಭಾರತಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!