ನನ್ನನ್ನು ಬೇಕಿದ್ದರೆ ಬಂಧಿಸಿ, ಆದರೆ ಈ ಪ್ರಶ್ನೆಗಳನ್ನು ಕೇಳೇ ಕೇಳ್ತೀನಿ : ದಿಗ್ವಿಜಯ್ ಸಿಂಗ್

Update: 2024-01-19 03:35 GMT
Editor : Ismail | Byline : ಆರ್. ಜೀವಿ

ದಿಗ್ವಿಜಯ್ ಸಿಂಗ್ | Photo: PTI

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಇವಿಎಂ ಬಗ್ಗೆ ತಕರಾರೆತ್ತುತ್ತಲೇ ಬಂದಿರುವವರು. ಅವರನ್ನು ಸಂದರ್ಶಿಸಿರುವ ಪತ್ರಕರ್ತ ಅಜಿತ್ ಅಂಜುಮ್, ಸೋತಾಗಲೇ ಯಾಕೆ ಇವಿಎಂ ಬಗ್ಗೆ ಅನುಮಾನಗಳು ಏಳುತ್ತವೆ, ಗೆದ್ಧಾಗ ಸಂಭ್ರಮಿಸುತ್ತೀರಲ್ಲವೆ ಮುಂತಾಗಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅದಕ್ಕೆ ದಿಗ್ವಿಜಯ್ ಸಿಂಗ್ ಕೊಟ್ಟಿರುವ ಉತ್ತರದ ಸಂಗ್ರಹ ಇಲ್ಲಿದೆ.

2003ರಿಂದಲೂ ಇವಿಎಂ ಬಗ್ಗೆ ನನಗೆ ನಂಬಿಕೆಯಿಲ್ಲ. ಬಹಳಷ್ಟು ಪರಿಣಿತರು ಹೇಳಿರುವ ಹಾಗೆ ಈ ಯಂತ್ರವನ್ನೂ ಹ್ಯಾಕ್ ಮಾಡಬಹುದಾಗಿದೆ.

ಅದು ಯಾರು ಆ ಸಾಫ್ಟ್ವೇರ್ ಹಾಕಿದ್ಧಾರೊ ಅವರಿಗೆ ಬೇಕಾದಂತೆ ಕಾರ್ಯನಿರ್ವವಹಿಸುತ್ತದೆಯೆ ಹೊರತು ನಿಮಗೆ ಬೇಕಾದಂತೆ ಅಲ್ಲ. ತಿರುಚಬಹುದಾದ ಅವಕಾಶ​ ಅದರಲ್ಲಿ ಇದ್ದೇ ಇದೆ.

ಯಾವುದೇ ಮತದಾರನ ಹಕ್ಕು ತಾನು ಹಾಕಿದ ಮತ ಸರಿಯಾದವರಿಗೆ ಬಿತ್ತೆ ಎಂಬುದನ್ನು ತಿಳಿದುಕೊಳ್ಳುವುದು. ವಿವಿಪ್ಯಾಟ್ನಲ್ಲಿ ಪಕ್ಷದ ಹೆಸರು, ಅಭ್ಯರ್ಥಿ ಹೆಸರು ಮತ್ತು ಚಿಹ್ನೆ ಅಪ್ಲೋಡ್ ಆಗಿರುತ್ತದೆ. ಆದರೆ ಆ ಪ್ರಕ್ರಿಯೆ ಯಾವ ರೀತಿಯದು ಎಂಬುದರ ಬಗ್ಗೆ ಆಯೋಗ ಏನೂ ಹೇಳುವುದಿಲ್ಲ.

ಬಹಳಷ್ಟು ದೇಶಗಳು ಇವಿಎಂ ಬಳಸುತ್ತಿಲ್ಲ. ಭಾರತ ಮದರ್ ಆಫ್ ಡೆಮಾಕ್ರಸಿ ಎನ್ನುತ್ತಾರೆ ಪ್ರಧಾನಿ. ಆದರೆ ಅಂಥ ದೇಶದ ಮತದಾರನಿಗೆ ತನ್ನ ಮತ ತಾನು ಯಾರಿಗೆ ಹಾಕಿದೆನೊ ಅವರಿಗೇ ಬಿ​ದ್ದಿದೆಯೆ ಎಂದು ತಿಳಿದುಕೊಳ್ಳುವ ಅವಕಾಶವೇ ಇಲ್ಲವೆ?. ದಿಗ್ವಿಜಯ್ ಸಿಂಗ್ ಪ್ರಕಾರ, ಅವರಿಗೆ ಅನುಮಾನವಿರುವುದು ವಿವಿಪ್ಯಾಟ್ ಮೇಲೆ​ಯೇ. ನಾನು ಮತ ಹಾಕುತ್ತೇನೆ. ಆದರೆ ಅದು ​ಏನನ್ನು ಮುದ್ರಿಸುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಕಾಣಿಸುವುದು ಒಂದಾಗಿ, ಬೇರೆಯೇ ಮುದ್ರಿತವಾಗಲೂಬಹುದು​ ಎನ್ನುತ್ತಾರೆ ದಿಗ್ವಿಜಯ್ ಸಿಂಗ್.

ಚುನಾವಣಾ ಆಯೋಗಕ್ಕೆ ಪ್ರತಿಪಕ್ಷಗಳ ಭೇಟಿಗೆ ಅವಕಾಶ ಕೊಡುವುದಕ್ಕೇನು ಸಮಸ್ಯೆ? ​ಅಲ್ಲಿ ಪಾರದರ್ಶಕತೆ ಏಕಿಲ್ಲ?. ಮತದಾನದ ನಂತರ, ವಿವಿಪ್ಯಾಟ್ನಲ್ಲಿ ಮುದ್ರಿತ ಕಾಗದವನ್ನು ಮತದಾರನಿಗೆ ಕೊಟ್ಟು ಬ್ಯಾಲೆಟ್ ಬಾಕ್ಸ್​ ಗೆ ಹಾಕಿಸಲಿ. ಚುನಾವಣಾ ಆಯೋಗ ರಾಜಕೀಯ ಮಾಡಲು ಕೂತಿದೆಯೆ? ​ಎಂದು ಕೇಳಿದ್ದಾರೆ ದಿಗ್ವಿಜಯ್ ಸಿಂಗ್.

ಚುನಾವಣಾ ಆಯೋಗ ಚುನಾವಣೆ ನಡೆಸಬೇಕೇ ರಾಜಕೀಯ ಮಾಡಬೇಕೆ?. ರಾಜಕೀಯ ಮಾಡುವುದಾದರೆ ಅದನ್ನೇ ಆಡಲಿ.ಸೋಲನ್ನು ಜನರು ಕೊಟ್ಟ ತೀರ್ಮಾನ ಎಂದು ಒಪ್ಪಿಕೊಳ್ಳೋಣ. ಆದರೆ, ಮತ ತಾನು ಹಾಕಿರುವವರಿಗೇ ಬಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಕಾಶ ಇರ​ಲೇಬೇಕಲ್ಲವೆ?

ಯಾವ ಮಷಿನ್ ಯಾವ ಬೂತ್ಗೆ ಹೋಗಬೇಕು ಎಂಬುದು ಯಾಕೆ ಮೊದಲೇ ತೀರ್ಮಾನವಾಗುತ್ತದೆ?. ಮಷಿನ್ ಒಳಗೆ ಅಳವಡಿಸಲಾಗುವ ಸಾಫ್ಟ್ವೇರ್ ಬಗ್ಗೆ ಇರುವ ಸಂಶಯ ನಿವಾರಿಸುವ ಕೆಲಸವನ್ನು ಆಯೋಗ ಏಕೆ ಮಾಡುತ್ತಿಲ್ಲ?. ಏಕೆ​ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ?

ಸಾಫ್ಟ್ವೇರ್ ಯಾವುದು ಎಂಬುದು ಯಾಕೆ ನಿಗೂಢವಾಗಿರಬೇಕು?. ನಮಗೆ ಏಕೆ ಹೇಳುತ್ತಿಲ್ಲ?.

ನಿಷ್ಪಕ್ಷಪಾತ ಚುನಾವಣೆಗೆ ಪಾರದರ್ಶಕತೆ ಬೇ​ಕೇ ಬೇಡವೆ?. ಸಾಫ್ಟ್ವೇರ್ ಬಗ್ಗೆ ಹೇಳಬೇಕಿರುವುದು ಪಾರದರ್ಶಕತೆಯ ಭಾಗವೇ ಅಲ್ಲವೆ?.

ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅದರ ಬಗ್ಗೆ ಹೇಳುವುದಕ್ಕೇನು ಸಮಸ್ಯೆ?. ನಾವು ಹಾಕಿದ ಮತ ನಾವು ಬಯಸಿದವರಿಗೇ ಬಿದ್ದಿದೆ ಎಂಬದನ್ನು ಖಚಿತಪಡಿಸಿಕೊಳ್ಳಲು ಮುದ್ರಿತ ಕಾಗದವನ್ನು ನಮ್ಮ ಕೈಗೇ ಕೊಡಲಿ. ನಮಗೆ ಸಮಾಧಾನವಾಗುತ್ತದೆ, ನಂಬಿಕೆ ಬರುತ್ತದೆ. ಆಗ ತಕರಾರು ಎತ್ತುವ ಪ್ರಶ್ನೆಯೇ ಇರುವುದಿಲ್ಲ​ ಎನ್ನುತ್ತಾರೆ ದಿಗ್ವಿಜಯ್ ಸಿಂಗ್.

​ನೀವು ನನ್ನನ್ನೂ ಬಂಧಿಸಿದರೂ ಪರವಾಗಿಲ್ಲ,ನಾನು ಇವಿಎಂ ಕುರಿತ ಈ ಪ್ರಶ್ನೆಗಳನ್ನು ಎತ್ತದೇ ಬಿಡೋದಿಲ್ಲ, ಈ ಸಂಶಯಗಳ ನಿವಾರಣೆ ಆಗಲೇಬೇಕು ಎನ್ನುತ್ತಾರೆ ದಿಗ್ವಿಜಯ್ ಸಿಂಗ್. ಮೊದಲನೆಯದಾಗಿ, ಚುನಾವಣೆ ಪಾರದರ್ಶಕವಾಗಿರಬೇಕು. ಎರಡನೆಯದು, ನಾನು ಯಾರಿಗೆ ಮತ ಹಾಕಿದೆನೊ ಅವರಿಗೆ ಅದು ಹೋಯಿತೆ ಎನ್ನುವುದು​ ಮತದಾರನಿಗೆ ಖಾತ್ರಿಯಾಗಬೇಕು.

ಟೆಕ್ನಾಲಜಿಯಲ್ಲಿ​ ಬಹಳ ಮುಂದಿರುವ ದೇಶಗಳೂ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸುತ್ತಿವೆ. ಆದರೆ ನಮ್ಮ ಚುನಾವಣೆ ಇನ್ನಾರದೋ ತಂತ್ರಜ್ಞಾನದ ಮೂಲಕ ನಡೆಯಬೇಕೆ?​ ಯಾಕೆ ಹೀಗೆ ?. ​ದಿಗ್ವಿಜಯ್ ಸಿಂಗ್ ಪ್ರಕಾರ, ಇಡೀ ​ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ನೀವಿದನ್ನು ಒಪ್ಪಿ, ಇಲ್ಲವೆ ಬಿಡಿ. ಆದರೆ ಇದು ಸತ್ಯ.

ಜನಾದೇಶ ಇಂದು ಜನರ ಕೈಯಲ್ಲಿ ಇಲ್ಲ. ಅದು ಇವಿಎಂ ಮಷಿನ್ ಅನ್ನು ನಿಯಂತ್ರಿಸುವವರ ಕೈಯಲ್ಲಿ ಇದೆ. ನಿವೃತ್ತ ಐಪಿಎಸ್, ಐಎಫ್ಎಸ್ ಅಧಿಕಾರಿಗಳು, ಕಂಪ್ಯೂಟರ್ ಸೈನ್ಸ್ ಪರಿಣಿತರು ಸೇರಿದಂತೆ ವಿವಿಧ ವಲಯಗಳ 107 ಮಂದಿ ಕೆಲವು ಅನುಮಾನಗಳನ್ನು ಎತ್ತಿ 2022ರ ಮೇ ತಿಂಗಳಲ್ಲಿ ಆಯೋಗಕ್ಕೆ​ ಪತ್ರ ಬರೆದರು. ಆದರೆ ಅವರ ಮನವಿಗೆ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ಆಯೋಗ ಕೊಡಲಿಲ್ಲ.

ನಾವು ಕೇಳುತ್ತಿರುವುದು ನಮ್ಮ ಮೂಲಭೂತ ಹಕ್ಕನ್ನು ಮಾತ್ರ​ ಎನ್ನುತ್ತಾರೆ ದಿಗ್ವಿಜಯ್ ಸಿಂಗ್. ಚುನಾವಣಾ ಆಯೋಗ ಹೇಳಿದ ಹಾಗೆ ಇವಿಎಂ ಸಂಪೂರ್ಣ ಪಾರದರ್ಶಕ, ಸುರಕ್ಷಿತ ವಿಧಾನವೇ ಆಗಿರಬಹುದು. ಆದರೆ ಅದು ಅಷ್ಟು ಸುರಕ್ಷಿತ, ಅದರಲ್ಲಿ ಯಾವುದೇ ತಿರುಚುವಿಕೆಗೆ ಅವಕಾಶವೇ ಇಲ್ಲ ಎಂದು ದೇಶದ ಮತದಾರರು ಹಾಗು ಎಲ್ಲ ರಾಜಕೀಯ ಪಕ್ಷಗಳಿಗೆ ವಿಶ್ವಾಸ ಬರುವಂತಹ ಕೆಲಸ ಚುನಾವಣಾ ಆಯೋಗದಿಂದ ಆಗಬೇಕು.

ಅದಕ್ಕೆ ಮತದಾರರು ಹಾಗು ರಾಜಕೀಯ ಪಕ್ಷಗಳು ಎತ್ತುವ ಪ್ರಶ್ನೆಗಳಿಗೆ, ಸಂಶಯಗಳಿಗೆ ಸ್ಪಷ್ಟ ಉತ್ತರ ಸಿಗಬೇಕು. ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!