ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಯ ಹಿರಿಯ ಸಂಸದರ ಎದುರು ಸೆಣಸಲಿರುವ ಕಾಂಗ್ರೆಸ್ ನ ಯುವನಾಯಕಿ

Update: 2024-04-17 04:30 GMT
ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಯ ಹಿರಿಯ ಸಂಸದರ ಎದುರು ಸೆಣಸಲಿರುವ ಕಾಂಗ್ರೆಸ್ ನ ಯುವನಾಯಕಿ
  • whatsapp icon

ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಳೆದ 20 ವರ್ಷಗಳಿಂದಲೂ ಬಿಜೆಪಿ ತೆಕ್ಕೆಯಲ್ಲಿಯೇ ಇದೆ. ಈ ಬಾರಿಯೂ ಗೆಲ್ಲುವ ಯತ್ನ ನಡೆಸಿದೆ. ಈ ನಡುವೆ ಕಾಂಗ್ರೆಸ್ ಮೊದಲು ತನ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದ ಮೇಲೆ ಮತ್ತೊಮ್ಮೆ ಹಿಡಿತ ಸಾಧಿಸಲು ಲೆಕ್ಕಾಚಾರ ಹಾಕುತ್ತಿದೆ.

ಈ ಬಾರಿ ಬಿಜೆಪಿಯಿಂದ ಪಿ.ಸಿ. ಗದ್ದಿಗೌಡರ 5ನೇ ಬಾರಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನಿಂದ ಕಣದಲ್ಲಿರುವುದು ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ್.

ಪ್ರಾಥಮಿಕ ಮಾಹಿತಿ

ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಾಕ್ಷರತೆ ಪ್ರಮಾಣ ಶೇ.59.78.

ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ.ಅವೆಂದರೆ, ಮುಧೋಳ, ತೇರದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ಹಾಗೂ ನರಗುಂದ. 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 3ರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬಾಗಲಕೋಟೆ ಕ್ಷೇತ್ರದ ಒಟ್ಟು ಮತದಾರರು 17,90,118 ಅವರಲ್ಲಿ ಪುರುಷ ಮತದಾರರು 8,87,780, ಮಹಿಳಾ ಮತದಾರರು 9,02,239 ಮತ್ತು ಇತರರು 99.

ಕಳೆದ ಚುನಾವಣೆಗಳಲ್ಲಿನ ಚುನಾವಣಾ ಫಲಿತಾಂಶ:

2004, 2009, 2014 ಹಾಗೂ 2019ರ ನಾಲ್ಕೂ ಚುನಾವಣೆಗಳಲ್ಲಿಯೂ ಬಿಜೆಪಿಯ ಪಿ.ಸಿ. ಗದ್ದಿಗೌಡರ್ ಗೆಲುವು.


 



ಕಳೆದ ಚುನಾವಣೆಗಳಲ್ಲಿನ ಮತ ಹಂಚಿಕೆ:

2014 ಬಿಜೆಪಿಗೆ ಶೇ.52.95, ಕಾಂಗ್ರೆಸ್ಗೆ ಶೇ.42.16.

2019 ಬಿಜೆಪಿಗೆ ಶೇ.55.17, ಕಾಂಗ್ರೆಸ್ಗೆ ಶೇ.41.21.

1951ರಿಂದ 1962ರವರೆಗೂ ವಿಜಯಪುರ ಉತ್ತರ ಮತ್ತು ವಿಜಯಪುರ ದಕ್ಷಿಣ ಎಂದು ದ್ವಿಸದಸ್ಯ ಕ್ಷೇತ್ರಗಳಿದ್ದವು.

ಈಗಿನ ಬಾಗಲಕೋಟೆ ಆ ಮೂರು ಚುನಾವಣೆಗಳಲ್ಲಿಯೂ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರ ಎಂಬ ಹೆಸರಿನಲ್ಲಿತ್ತು.

1967ರಲ್ಲಿ ಬಾಗಲಕೋಟೆಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ರಚಿಸಲಾಯಿತು.

ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಮತ್ತು ನಾಲ್ವರು ಸಿಎಂಗಳು ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಹಾಗೂ ಸೋತ ಹೆಗ್ಗಳಿಕೆ ಬಾಗಲಕೋಟೆ ಜಿಲ್ಲೆಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಿ.ಡಿ. ಜತ್ತಿ ಹಾಗೂ ಹುನಗುಂದದ ಎಸ್.ಆರ್. ಕಂಠಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕರು.

ಇವರಲ್ಲದೆ ಬೇರೆ ಬೇರೆ ಸಂದರ್ಭಗಳಲ್ಲಿ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಇಲ್ಲಿನ ಬೇರೆ ಬೇರೆ ಕ್ಷೇತ್ರಗಳಿಗೆ ಬಂದು ಸ್ಪರ್ಧಿಸಿದ್ದಾರೆ.

1967ರಿಂದ ನಡೆದ 14 ಚುನಾವಣೆಗಳಲ್ಲಿ ಮೊದಲ 7 ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಗೆಲುವು ಸಾಧಿಸಿಕೊಂಡು ಬಂದಿತ್ತು.

ಕಾಂಗ್ರೆಸ್ ಭದ್ರಕೋಟೆಯನ್ನು ಮೊದಲ ಸಲ ಮುರಿದವರು ಎಚ್.ವೈ. ಮೇಟಿ. 1996ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಅವರು ಗೆದ್ದು ಬೀಗಿದರು.

ಅದಾದ ಬಳಿಕ 1998ರಲ್ಲಿ ಲೋಕಶಕ್ತಿ ಯಿಂದ ಅಜಯ್ ಕುಮಾರ್ ಸರ್ನಾಯಕ್ ಗೆದ್ದರೆ, ಮತ್ತೆ ಕಾಂಗ್ರೆಸ್ ಗೆದ್ದಿತ್ತು.

ಆದರೆ 2004ರಿಂದ ಇಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದೆ. ಬಿಜೆಪಿಯ ಪಿ.ಸಿ. ಗದ್ದಿಗೌಡರ್ ಸತತ 4 ಗೆಲುವುಗಳನ್ನು ಸಾಧಿಸಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ನ ಸಂಗನಗೌಡ ಪಾಟೀಲ್ 1967ರಿಂದ 1977ರವರೆಗೆ ಸತತ ಮೂರು ಗೆಲುವುಗಳನ್ನು ಸಾಧಿಸಿದ್ದೇ ಹೆಗ್ಗಳಿಕೆಯಾಗಿತ್ತು.


 




 



ಬಿಜೆಪಿಯಿಂದ 5ನೇ ಸಲ ಕಣದಲ್ಲಿ ಗದ್ದಿಗೌಡರ್

ಬಾಗಲಕೋಟೆ ಈ ಬಾರಿ ತೀವ್ರ ಜಿದ್ದಾಜಿದ್ದಿನ ಕಣವಾಗುವ ಎಲ್ಲ ಸಾಧ್ಯತೆಗಳೂ ಇವೆ. ಬಿಜೆಪಿ ಐದನೇ ಗೆಲುವನ್ನು ಕಾಣುವ ಆಸೆಯಲ್ಲಿದ್ದರೆ, ಕಾಂಗ್ರೆಸ್ಗೆ ಮರಳಿ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳುವ ಉದ್ದೇಶವಿದೆ.

ಪಿ.ಸಿ ಗದ್ದಿಗೌಡರ್ ಬಿಜೆಪಿಯಿಂದ ನಾಲ್ಕು ಬಾರಿ ಗೆದ್ದಿದ್ದರೂ, ಈ ಬಾರಿ ಅವರಿಗೆ ವಯಸ್ಸಿನ ಕಾರಣದಿಂದಾಗಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಬೇರೆಯವರೂ ಟಿಕೆಟ್ಗಾಗಿ ಪೈಪೋಟಿಯಲ್ಲಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಮತ್ತೊಮ್ಮೆ ಗದ್ದಿಗೌಡರ್ ಅವರಿಗೇ ಟಿಕೆಟ್ ನೀಡಿದೆ.

ಕಾಂಗ್ರೆಸ್ನಿಂದ ಮಂತ್ರಿ ಮಗಳು ಸಂಯುಕ್ತಾ ಪಾಟೀಲ್

ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ವೀಣಾ ಕಾಶಪ್ಪನವರ ಮತ್ತೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರಾದರೂ, ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಅವರಲ್ಲದೆ ಇನ್ನೂ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರಾದರೂ, ಕಡೇ ಗಳಿಗೆಯಲ್ಲಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ್ ಅವರನ್ನು ಕಾಂಗ್ರೆಸ್ ಇಲ್ಲಿಂದ ಕಣಕ್ಕಿಳಿಸಿದೆ. ಇದು ಮುಖ್ಯವಾಗಿ ವೀಣಾ ಕಾಶಪ್ಪನವರ ಅಸಮಾಧಾನಕ್ಕೆ ಕಾರಣವಾಗಿದೆಯಾದರೂ ಕಾಂಗ್ರೆಸ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

ಸಂಯುಕ್ತಾ ಪಾಟೀಲ್ ಹೊರಗಿನವರು ಎಂಬ ಅಸಮಾಧಾನವೂ ಕಾಂಗ್ರೆಸ್ ವಲಯದಲ್ಲೇ ಇದೆಯಾದರೂ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಅಭ್ಯರ್ಥಿ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ.

ಸಂಯುಕ್ತಾ ಪಾಟೀಲರ ದೊಡ್ಡಪ್ಪನ ಮಗ ಹರ್ಷಗೌಡ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರೂ, ದೊಡ್ಡಪ್ಪ ಶಿವಶರಣಗೌಡ ಮಾತ್ರ ಸಂಯುಕ್ತಾ ಪರವಾಗಿಯೇ ಪ್ರಚಾರದಲ್ಲಿ ತೊಡಗಿರುವುದು ವಿಶೇಷ.

ಈ ಕ್ಷೇತ್ರ ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೊಂದಿದ್ದು, ಅಭ್ಯರ್ಥಿಗಳು ಅದೇ ಸಮಾಜದವರೇ ಆಗಿದ್ದಾರೆ. 16 ಬಾರಿ ಅವರೇ ಗೆದ್ದಿದ್ದಾರೆ. ಒಮ್ಮೆ ಮಾತ್ರ ಕುರುಬ ಸಮುದಾಯದ ಅಭ್ಯರ್ಥಿ ಗೆದ್ದಿದ್ದರು.

ಜಾತಿಬಲದಲ್ಲಿಯೇ ನಿಶ್ಚಯವಾಗಲಿರುವ ಬಾಗಲಕೋಟೆ ಕದನ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿ ಅಂತಿಮವಾಗಿ ಗೆಲ್ಲುವವರು ಯಾರು ಎಂಬುದನ್ನು ನೋಡಬೇಕಿದೆ.

ಬಿಜೆಪಿಯ ಹಿರಿಯ ಅನುಭವಿ ಸಂಸದರ ಎದುರು ಕಾಂಗ್ರೆಸ್ ಯುವನಾಯಕಿಯನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ತೆಕ್ಕೆಗೆ ಸೆಳೆದುಕೊಳ್ಳಲು ಹೊರಟಿದೆ.

ಸಂಸದರಾಗಿ ಗದ್ದಿಗೌಡರ್ ಅವರ ಕಾರ್ಯವೈಖರಿ ಬಗ್ಗೆ ಕ್ಷೇತ್ರದ ಜನರಿಗೆ ಸಮಾಧಾನವಿಲ್ಲ. ನಿರುದ್ಯೋಗ ನಿವಾರಣೆಯಲ್ಲಿ, ಹೊಸ ಕೈಗಾರಿಕೆ ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ದೂರು ವ್ಯಾಪಕವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಹಾಯ ಮಾಡಿದ ಸಂತ್ರಸ್ತರ ನೆರವಿಗೆ ಬಂದಿಲ್ಲ ಎಂಬ ದೂರೂ ಇದೆ.

ಆದರೆ ಇವೆಲ್ಲವನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಸಫಲರಾಗುತ್ತಾರೆ ಎಂಬ ಪ್ರಶ್ನೆಯೂ ಇದೆ. ಹೊರಗಿನವರು ಎಂಬ ಹಣೆಪಟ್ಟಿ, ವಿಜಯಾನಂದ ಕಾಶಪ್ಪನವರ ಮುನಿಸು, ಹಿಂದುತ್ವ - ಇವೆಲ್ಲದರ ಎದುರು ಗ್ಯಾರಂಟಿ ಅಸ್ತ್ರ ಹಾಗೂ ತಳಮಟ್ಟದ ಚುರುಕಿನ ಪ್ರಚಾರದ ಮೂಲಕ ಸಂಯುಕ್ತಾ ಪಾಟೀಲ್ ಗೆಲ್ಲುತ್ತಾರಾ ಎಂದು ನೋಡಬೇಕಾಗಿದೆ.

20 ವರ್ಷಗಳಿಂದ ತೆಕ್ಕೆಯಲ್ಲಿಟ್ಟುಕೊಂಡಿರುವ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳುವ ಸವಾಲು ಬಿಜೆಪಿಯೆದುರು ಇದ್ದರೆ, ಅದನ್ನು ಕಸಿದುಕೊಳ್ಳುವ ನಿಟ್ಟಿನ ಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಹರೀಶ್ ಎಚ್.ಕೆ.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!