ಭಗತ್ ಸಿಂಗ್: ಸ್ಫೂರ್ತಿಯಾಗಿ ಉಳಿದ ಕ್ರಾಂತಿಕಾರಿ
ಆ ವೀರ ಮಾರನೇ ದಿನ ನೇಣಿಗೆ ಕೊರಳೊಡ್ಡಬೇಕಿತ್ತು. ವಕೀಲರು ಕೊನೆಯದಾಗಿ ಭೇಟಿಯಾದಾಗ, ತಾನು ಕೇಳಿದ್ದ ಲೆನಿನ್ ಕುರಿತ ಪುಸ್ತಕ ಸಿಕ್ಕಿತೇ ಎಂದು ಕೇಳಿದ್ದ ಆತ, ಪುಸ್ತಕ ಕೈಗೆ ಸಿಕ್ಕಿದ್ದೇ ಓದಲು ಕುಳಿತೇಬಿಟ್ಟಿದ್ದನ್ನು ಕಂಡು ವಕೀಲರಿಗೇ ಅಚ್ಚರಿಯಾಗಿತ್ತು. ನಾಳೆ ನೇಣಿಗೆ ಕೊರಳೊಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ ಎನ್ನಿಸಿತ್ತು. ದೇಶದ ಜನರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದ ವಕೀಲರಿಗೆ, ‘‘ಸಾಮ್ರಾಜ್ಯಶಾಹಿಗೆ ಧಿಕ್ಕಾರ, ಇಂಕ್ವಿಲಾಬ್ ಜಿಂದಾಬಾದ್’’ ಎಂದು ಉತ್ತರಿಸಿದ್ದ ಆ ದಿಟ್ಟ ಹೋರಾಟಗಾರ.
ಗಲ್ಲಿಗೇರುವ ಸಮಯ ಹತ್ತಿರವಾಗಿತ್ತು. ಅದಕ್ಕೂ ಮುನ್ನ ಆ ಸ್ವಾತಂತ್ರ್ಯ ವೀರ ತನ್ನ ತಾಯಿಯ ಬಳಿ ಹೇಳಿದ್ದು ಹೀಗೆ: ‘‘ಅಮ್ಮಾ, ನಿನ್ನ ಮಗ ಇಡೀ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ಗಲ್ಲಿಗೇರುವಾಗ ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಇಂಗ್ಲಿಷರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣೀರಿಡಬಾರದು.’’ ಆ ದಿಟ್ಟ ತಾಯಿಯ ಕಣ್ಣಲ್ಲೂ, ಹಾಗೆಯೇ ಆಗಲಿ ಎಂಬ ಒಪ್ಪಿಗೆಯ ಭಾವವಿತ್ತು.
ಆ ವೀರ ಮಾರನೇ ದಿನ ನೇಣಿಗೆ ಕೊರಳೊಡ್ಡಬೇಕಿತ್ತು. ವಕೀಲರು ಕೊನೆಯದಾಗಿ ಭೇಟಿಯಾದಾಗ, ತಾನು ಕೇಳಿದ್ದ ಲೆನಿನ್ ಕುರಿತ ಪುಸ್ತಕ ಸಿಕ್ಕಿತೇ ಎಂದು ಕೇಳಿದ್ದ ಆತ, ಪುಸ್ತಕ ಕೈಗೆ ಸಿಕ್ಕಿದ್ದೇ ಓದಲು ಕುಳಿತೇಬಿಟ್ಟಿದ್ದನ್ನು ಕಂಡು ವಕೀಲರಿಗೇ ಅಚ್ಚರಿಯಾಗಿತ್ತು. ನಾಳೆ ನೇಣಿಗೆ ಕೊರಳೊಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ ಎನ್ನಿಸಿತ್ತು. ದೇಶದ ಜನರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದ ವಕೀಲರಿಗೆ, ‘‘ಸಾಮ್ರಾಜ್ಯಶಾಹಿಗೆ ಧಿಕ್ಕಾರ, ಇಂಕ್ವಿಲಾಬ್ ಜಿಂದಾಬಾದ್’’ ಎಂದು ಉತ್ತರಿಸಿದ್ದ ಆ ದಿಟ್ಟ ಹೋರಾಟಗಾರ.
ನೇಣುಗಂಬದ ಬಳಿ ಕರೆದೊಯ್ಯಲು ಸೈನಿಕ ಬಂದಾಗಲೂ ಲೆನಿನ್ ಕುರಿತ ಪುಸ್ತಕವನ್ನೋದುತ್ತಿದ್ದ ಆ ದಿಟ್ಟ ಹೋರಾಟಗಾರ ಸ್ವಲ್ಪವೂ ವಿಚಲಿತಗೊಳ್ಳದೆ, ‘‘ಪುಸ್ತಕ ಓದಿ ಮುಗಿಸಿದ ನಂತರ ಬಂದರಾಗುತ್ತದಲ್ಲವೆ?’’ ಎಂದು ಗಂಭೀರವಾಗಿಯೇ ಕೇಳಿದ್ದ ಎಂದು ಹೇಳಲಾಗುತ್ತದೆ.
ಅವರೇ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಭಗತ್ ಸಿಂಗ್ ಅಚ್ಚಳಿಯದ ಹೆಸರು. ಪ್ರತಿಯೊಬ್ಬರ ಬಾಯಲ್ಲಿ ಮೊದಲು ಬರುವ ಹೆಸರು. ತನ್ನ ಅಸಾಧಾರಣ ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್.
ಭಗತ್ ಸಿಂಗ್ ಜನಿಸಿದ್ದು 1907ರ ಸೆಪ್ಟಂಬರ್ 28ರಂದು, ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ. ಭಗತ್ ಸಿಂಗ್ ತಂದೆ ಕಿಶನ್ ಸಿಂಗ್, ತಾಯಿ ವಿದ್ಯಾವತಿ. ಭಗತ್ ಸಿಂಗ್ ಕುಟುಂಬಸ್ಥರು ಸದಾ ರಾಜಕೀಯವಾಗಿ ಸಕ್ರಿಯರಾಗಿದ್ದರು.
ಭಗತ್ ಮೇಲೆ ತೀವ್ರ ಪ್ರಭಾವ ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್. ಅವರು ಉಗ್ರ ಭಾಷಣಕಾರರಾಗಿದ್ದು, ಬ್ರಿಟಿಷರ ವಿರುದ್ಧ ಚಳವಳಿಗಳನ್ನು ಸಂಘಟಿಸುತ್ತಿದ್ದರು. ಭಗತ್ ಸಿಂಗ್ ಅವರನ್ನು ಪ್ರಭಾವಿಸಿದ್ದ ಇನ್ನೊಬ್ಬ ವ್ಯಕ್ತಿ ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕರ್ತಾರ್ ಸಿಂಗ್ ಸರಭ್. ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸರಭ್ ಅವರನ್ನು 1915ರಲ್ಲಿ ನೇಣಿಗೇರಿಸಲಾಯಿತು. ಆಗ ಅವರಿಗೆ 20 ವರ್ಷ ವಯಸ್ಸು. ‘‘ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸುವ ಏನನ್ನೂ ನಾನು ಮಾಡಿಲ್ಲ. ನನಗೆ ಬೇಕಾಗಿರುವುದು ಸ್ವಾತಂತ್ರ್ಯ ಮಾತ್ರ. ಅದೊಂದೇ ನನ್ನ ಕನಸು’’ ಎಂಬ ಸರಭ್ ಅವರ ಮಾತುಗಳು ಭಗತ್ ಸಿಂಗ್ ಅವರಲ್ಲಿ ಕ್ರಾಂತಿಯ ಮನೋಭಾವವನ್ನು ಉದ್ದೀಪನಗೊಳಿಸಿದ್ದವು.
ಕರ್ತಾರ್ ಸಿಂಗ್ ಸರಭ್ ಅವರಂತೆ ಭಗತ್ ಕೂಡ ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಬಲಿದಾನಗೈದವರು. ಗಲ್ಲಿಗೇರಿದಾಗ 23ರ ಹರೆಯ.
ಭಗತ್ ಸಿಂಗ್, 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ ತಮ್ಮ 12ನೇ ವಯಸ್ಸಿನಲ್ಲಿ ಭೇಟಿ ನೀಡಿದ್ದರು. ಅದಾದ ಬಳಿಕ ಭಗತ್ ಸಿಂಗ್ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ತಮ್ಮ ಹಳ್ಳಿಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾಗಿ ಬದಲಾದರು. ಮನೆಯಲ್ಲಿ ಮದುವೆಗೆ ಒತ್ತಾಯ ಶುರುವಾದಾಗ ಅದನ್ನೊಪ್ಪದೆ 1924ರಲ್ಲಿ ಮನೆಬಿಟ್ಟು ಕಾನ್ಪುರಕ್ಕೆ ಹೋದ ಭಗತ್, ಅಲ್ಲಿ ಚಂದ್ರಶೇಖರ್ ಆಝಾದ್, ಬಿ.ಕೆ. ದತ್, ಜೆ.ಸಿ. ಚಟರ್ಜಿ, ಬಿಜೊಯ್ ಕಮಾರ್ ಸಿನ್ಹಾರಂಥ ಹೋರಾಟಗಾರರ ಸಂಪರ್ಕಕ್ಕೆ ಬಂದರು. ಮಹಾತ್ಮಾ ಗಾಂಧಿಯವರ ಬಗ್ಗೆ ಗೌರವವಿದ್ದರೂ, ಅವರ ದಾರಿಯ ಬಗ್ಗೆ ಭಗತ್ ಸಿಂಗ್ ಹೆಚ್ಚು ನಂಬಿಕೆ ಹೊಂದಿರಲಿಲ್ಲ. ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್ ಬಿಸ್ಮಿಲ್ ಅವರ ನಾಯಕತ್ವದಡಿ 1924ರ ಅಕ್ಟೋಬರ್ನಲ್ಲಿ ಹಿಂದೂಸ್ಥಾನ್ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಆ ಸಂಘಟನೆಯ ಚಟುವಟಿಕೆಗಳನ್ನು ಭಗತ್ ಹತ್ತಿರದಿಂದ ಗಮನಿಸುತ್ತಿದ್ದರು.
ದಿಲ್ಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬ್ರಿಟಿಷರು ಸಭೆ ನಡೆಸುತ್ತಿದ್ದ ವೇಳೆ ಬಾಂಬ್ ಎಸೆದ ಅವರು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಯಾರನ್ನೇ ಆಗಲಿ ಕೊಲ್ಲುವುದು ಬಾಂಬ್ ಎಸೆಯುವುದರ ಉದ್ದೇಶವಾಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್ ಸಿಂಗ್ ಮತ್ತು ಅವರ ಗೆಳೆಯರಾದ ರಾಜಗುರು ಮತ್ತು ಸುಖದೇವ್ ಉದ್ದೇಶವಾಗಿತ್ತು. ಹೀಗಾಗಿ, ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ, ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು. ಈ ಘೋಷಣೆ ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು.
1931ರ ಮಾರ್ಚ್ 24ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಭಗತ್ ಸಿಂಗ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದುರು 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಇದನ್ನು ಗಮನಿಸಿದ ಬ್ರಿಟಿಷರು, ನೇಣಿಗೇರಿಸುವ ಸಮಯವನ್ನು 11 ಗಂಟೆ ಹಿಂದೂಡಿ, 1931ರ ಮಾರ್ಚ್ 23ರಂದು ಬೆಳಗ್ಗೆ 7:30ಕ್ಕೆ ಗಲ್ಲಿಗೇರಿಸಿದ್ದರು.
ಭಗತ್ ಸಿಂಗ್ ಜಾತಿವಿರೋಧಿಯಾಗಿದ್ದರು. ಮಾರ್ಕ್ಸ್ ವಾದದ ಬಗ್ಗೆ ಹೆಚ್ಚು ಒಲವಿದ್ದ ಅವರು, ಅಂದಿನ ಹಿಂದೂ ಮಹಾ ಸಭಾದ ವಿರೋಧಿಯಾಗಿದ್ದರು. ಚರಿತ್ರೆ ಈ ದೇಶದ ಪಾಲಿಗೆ ಉಳಿಸಿರುವ ಬಹು ದೊಡ್ಡ ಸ್ಫೂರ್ತಿ ಚೇತನಗಳಲ್ಲಿ ಭಗತ್ ಅವರ ದಿಟ್ಟತನವೂ ಒಂದು.