ದಲಿತ-ಮುಸ್ಲಿಮ್ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಭೀಮಸೇನೆ ಕಟ್ಟಿದ ಬಿ. ಶ್ಯಾಮಸುಂದರ್

Update: 2023-12-24 06:38 GMT

 ಭಾರತದ ದಲಿತ ಹೋರಾಟದ ಚರಿತ್ರೆ ಬರೆಯುವಾಗ ‘ಭೀಮ ಸೇನೆಯ ಅಧ್ಯಾಯವನ್ನು ಮರೆಯುವಂತಿಲ್ಲ. ಕಲಬುರಗಿಯ ಭೀಮನಗರದಲ್ಲಿ ನಡೆದ ಡಾ.ಅಂಬೇಡ್ಕರ್ ಅವರ 69ನೆಯ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಶ್ಯಾಮಸುಂದರ್ ‘ಭಾರತೀಯ ಭೀಮ ಸೇನಾ ಸಂಘಟನೆಯನ್ನು ಅಧಿಕೃತವಾಗಿ ಘೋಷಿಸಿದರು. ಆಗ ಮಲ್ಲಿಕಾರ್ಜುನ ಖರ್ಗೆಯವರು ಸೇನೆಯ ಆರಂಭಿಕ ಅಧ್ಯಕ್ಷರಾಗಿದ್ದರು. ದೇಶಾದ್ಯಂತ ಸುಮಾರು 2 ಲಕ್ಷ ಜನ ಭೀಮಸೇನೆಯ ಸದಸ್ಯರಿದ್ದರು. ಈ ಮೂಲಕ ಮೂಢನಂಬಿಕೆಗಳ ವಿರುದ್ಧ ದಲಿತರಲ್ಲಿ ಜಾಗೃತಿ ಮೂಡಿಸಿದರು.

ಸಚಿವರೊಬ್ಬರ ಪ್ರಾರ್ಥನೆ

 ದೇಶದ ಎಲ್ಲ ನಾಯಕರು ಅಳಿಯಲಿ

ಓ ಶಂಭು ನಾನು ನೋರಲ್ ಅರ್ಪಿಸುತ್ತೇನೆ.

5 ಅಥವಾ 6 ಭಿನ್ನಮತೀಯರು ಅಳಿಯಲಿ

ಅವರಲ್ಲಿ 20 ಅಥವಾ 25 ಜನರು ಅತಿಯಾದ ಜ್ವರದಿಂದ ನರಳಲಿ.

ಸದಾ ಏನನ್ನಾದರೂ ಕೂಗಾಡಿ ಕಿರುಚಾಡುವ ಈ ಎಲ್ಲಾ ವಿರೋಧಿ ಜನರು ಅಳಿಯಲಿ

 

ನಿಜಲಿಂಗಪ್ಪನವರ ಬೆನ್ನುಮೂಳೆ ಮುರಿಯಲಿ ಏಕೆಂದರೆ ಸದಾ ಅವರು ಈ ಸಚಿವರ ಬಗ್ಗೆ ಚಿಂತಿಸುತ್ತಾರೆ. ದೊಡ್ಡ ಮನುಷ್ಯರಾದ ಸಾಹುಕಾರ ಚನ್ನಯ್ಯ ಅವರ ಅಂಗಡಿ ಸುಟ್ಟು ಭಸ್ಮವಾಗಲಿ, ಏಕೆಂದರೆ ಅವರಿಂದ ನಮ್ಮ ಶತ್ರುಗಳಿಗೆ ಆಗಿಂದಾಗ್ಗೆ ನೆರವು ದೊರೆಯುತ್ತಿದೆ. ವಿಧಾನ ಸೌಧದ ಎಲ್ಲಾ ಇಟ್ಟಿಗೆ ಮತ್ತು ಕಲ್ಲುಗಳು ಉರುಳಿ ಹೋಗಲಿ, ಏಕೆಂದರೆ ಈ ಕಟ್ಟಡದಿಂದಾಗಿ ಹನುಮಂತಯ್ಯನವರ ಹೆಸರು ಚಿರಪರಿಚಿತವಾಗಿದೆ. ಮಾತನಾಡುವ ಎಲ್ಲರ ಬಾಯಿಗಳು ಮಣ್ಣಿನಿಂದ ತುಂಬಲಿ ಏಕೆಂದರೆ ಅವರು ನಿಜವ ನುಡಿಯುತ್ತಾರೆ. ಬಡಜನರ ಎಲ್ಲಾ ಗುಡಿಸಲುಗಳು ಸುಟ್ಟು ಭಸ್ಮವಾಗಲಿ ಏಕೆಂದರೆ ಅವರು ಸದಾ ನ್ಯಾಯ, ನ್ಯಾಯ ಎಂದು ಕೂಗುತ್ತಿರುತ್ತಾರೆ ಮತದಾರರ ಎಲ್ಲಾ ಬಸ್ತಿಗಳು ಅಥವಾ ವಸತಿ ಪ್ರದೇಶಗಳು ಸುಟ್ಟು ಭಸ್ಮವಾಗಲಿ, ಏಕೆಂದರೆ ಅವರು ಸದಾ ನಮ್ಮನ್ನು ಭ್ರಷ್ಟರು ಮತ್ತು ಸ್ವಜನಪಕ್ಷಪಾತಿಗಳೆಂದು ನಿಂದಿಸುತ್ತಾರೆ. ಈ ಎಲ್ಲಾ ಅಧಿಕಾರಿಗಳಿಗೂ ಹೃದಯಾಘಾತವಾಗಲಿ, ಏಕೆಂದರೆ ಅವರು ಸಚಿವರು ಮಾಡುವ ಆದೇಶಗಳೆಲ್ಲ ತಪ್ಪು ಎಂದು ಹೇಳುತ್ತಾರೆ. ಸಚಿವ ಸಂಪುಟದ ಎಲ್ಲಾ ಕಡತಗಳನ್ನು ಇಲಿಗಳು ತಿನ್ನಲಿ, ಏಕೆಂದರೆ ಅದರಲ್ಲಿರುವ ಆದೇಶಗಳು ಒಳ್ಳೆಯವಲ್ಲ. ಕೇಂದ್ರ ಸರಕಾರದ ಹಡಗು ಮುಳುಗಲಿ, ಏಕೆಂದರೆ ಅಲ್ಲಿಂದಲೇ ನೀವು ಸದಾ ಹೊಸ ಆದೇಶಗಳನ್ನು ಪಡೆಯುತ್ತೀರಿ. ಇಡೀ ಮೈಸೂರು ರಾಜ್ಯ ನಾಶವಾಗಲಿ ಮತ್ತು ಹಾಳಾಗಲಿ ನಾನು ಮತ್ತು ನಮ್ಮ ನಾಯಕ ಜತ್ತಿ ಮಾತ್ರಾ ಬದುಕಲಿ.

ಅರೆ ಈ ಕವಿತೆಯನ್ನು ಬರೆದ ಕವಿ ಯಾರು? ಈ ಕವಿತೆ ಯಾವ ಸಂಕಲನದಲ್ಲಿದೆ? ಇದೊಂದು ರಾಜಕೀಯ ಕವಿತೆ ಇದ್ದಂತಿದೆ ಇದನ್ನು ಯಾರು ಬರೆದವರು ಎನ್ನುವ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಮೂಡಿರಬಹುದು. ಈ ಮೇಲಿನ ಗದ್ಯರೂಪಿ ಚೂರು ವಾಚ್ಯವಾಗಿ ಕಾಣುವ ಈ ಕವಿತೆಯನ್ನು ಬರೆದದ್ದು ಕವಿಯಲ್ಲ, ಈ ಕವಿತೆ ಯಾವ ಸಂಕಲನದಲ್ಲಿಯೂ ಬಂದಿಲ್ಲ. ಆದರೆ ಈ ಕವಿತೆಯನ್ನು 1961ರ ಮಾರ್ಚ್ 23ರಂದು ನಡೆದ ಮೈಸೂರು ರಾಜ್ಯದ ವಿಧಾನಸಭಾ ಕಲಾಪದಲ್ಲಿ ಭಾಲ್ಕಿ ಕ್ಷೇತ್ರದಿಂದ ಆರಿಸಿ ಶಾಸಕರಾಗಿದ್ದ ಬಿ.ಶ್ಯಾಮಸುಂದರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಡಿ ಜತ್ತಿ (1958-1962) ಕಾಲದ ಅವ್ಯವಸ್ಥೆ ಮತ್ತು ವಿಪರೀತ ಭ್ರಷ್ಟಾಚಾರಕ್ಕೆ ಮನನೊಂದು ಈ ಮೇಲಿನ ಕವಿತೆಯನ್ನು ಹೇಳುತ್ತಾರೆ. ಆಗ ಸಭಾಧ್ಯಕ್ಷರು ‘‘ಇದೇನು ಹೇಳುತ್ತಿದ್ದೀರಿ?’’ ಎಂದು ಕೇಳಿದಾಗ ಶ್ಯಾಮಸುಂದರ್ ಅವರು ‘‘ಇದು ಸಚಿವರೊಬ್ಬರ ಪ್ರಾರ್ಥನೆ. ಇದು ನಮ್ಮ ಸರಕಾರ ನಡೆಸುತ್ತಿರುವ ಜನರ ಮನೋಭಾವವನ್ನು ಸೂಚಿಸುತ್ತದೆ ಮತ್ತು ರಾಜ್ಯದಲ್ಲಿ ಈ ರೀತಿಯಲ್ಲಿಯೇ ಆಡಳಿತ ನಡೆಸಲಾಗುತ್ತಿದೆ. ನೀವು ರಾಜ್ಯಾದ್ಯಂತ ಆಡಳಿತವನ್ನು ಗಮನಿಸಿದರೆ, ಸಚಿವರ ಆದೇಶಗಳನ್ನು ಎಲ್ಲಿ ಯಾರು ಪಾಲಿಸುತ್ತಿದ್ದಾರೆ, ಪೊಲೀಸರು ಸಚಿವರ ಆದೇಶವನ್ನು ಎಂದೂ ಪಾಲಿಸುವುದೇ ಇಲ್ಲ. ಕಂದಾಯ ಅಧಿಕಾರಿಗಳು ಎಂದೂ ಸಚಿವರ ಆದೇಶಗಳಿಗೆ ಬೆಲೆ ಕೊಟ್ಟದ್ದೇ ಇಲ್ಲ. ಯಾವುದೇ ಸಚಿವರ ಆದೇಶವನ್ನು ಎಲ್ಲಿಯೂ ಮನ್ನಿಸುತ್ತಿಲ್ಲ. ಇದು ವಾಸ್ತವ ಸಂಗತಿ. ನನ್ನ ಊರಿನ ಇಂತಿಂತಹ ಅಧಿಕಾರಿಗಳು ಈ ಸಚಿವರನ್ನು ಯಾರು ಕೇರ್ ಮಾಡುತ್ತಾರೆ ಎಂದು ಹೇಳಿರುವ ಬಗ್ಗೆ ನಾನು ಒಂದೆರಡು ಬಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಇದು ಈಗಿರುವಂಥ ಪರಿಸ್ಥಿತಿ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಇದೆಲ್ಲ ಏಕೆ ಈ ರೀತಿಯಾಗುತ್ತಿದೆ? ಏನು ವಿಷಯ? ನೀವು ನಿಮ್ಮ ವ್ಯವಹಾರಗಳ ಬಗ್ಗೆ ತೀವ್ರ ಗಮನ ಹರಿಸದಿರುವುದೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಮೇಲಿನ ಕವಿತೆಯ ಮೂಲಕ ನನ್ನ ಅಭಿಪ್ರಾಯವನ್ನು ಮಂಡಿಸಿದೆ’’ ಎನ್ನುತ್ತಾರೆ.

 ಹಾಗಾದರೆ ಈ ಬಿ. ಶ್ಯಾಮ ಸುಂದರ್ ಯಾರು? ಇವರೇಕೆ ಆಳುವ ಸರಕಾರದ ವಿರುದ್ಧ ಇಷ್ಟು ಕಟುವಾಗಿ ಪ್ರಶ್ನಿಸುತ್ತಿದ್ದಾರೆ ಎಂದೂ ಪ್ರಶ್ನೆ ಮೂಡಬಹುದು. ದಕ್ಷಿಣ ಭಾರತದ ಅಂಬೇಡ್ಕರ್ ಎಂದೇ ಗುರುತಿಸಲ್ಪಡುವ ಬಿ.ಶ್ಯಾಮಸುಂದರ್ ಅವರು ಅಂಬೇಡ್ಕರ್ ಅವರ ಹೋರಾಟದ ರಥವನ್ನು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಎಳೆದವರು. ಮೂಲತಃ ಮಹಾರಾಷ್ಟ್ರದ ಔರಾಂಗಬಾದ್ನ ಅಸ್ಪಶ್ಯ ಸಮುದಾಯವಾದ ‘ಮಾಲಾ ಜಾತಿಗೆ ಸೇರಿದ ಬದುಲಾ ಮಾಣಿಕ್ಯಂ ಮತ್ತು ಸುಧಾಬಾಯಿ ದಂಪತಿಗೆ 21.12.1908ರಂದು ಶ್ಯಾಮಸುಂದರ್ ಜನಿಸುತ್ತಾರೆ. ತಂದೆ ರೈಲ್ವೆ ನೌಕರಿಯಲ್ಲಿದ್ದರು. 1913ರಲ್ಲಿ ಕ್ರಿಸ್ತ ಮಿಶನರಿಯ ಸೆವನ್ ಪ್ಲವರ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಆ ಹೊತ್ತಿಗೆ 1915ರಲ್ಲಿ ಹೈದರಾಬಾದ್ಗೆ ತಂದೆಯ ನೌಕರಿ ವರ್ಗವಾದಾಗ ಹೈದರಾಬಾದ್ನಲ್ಲಿಯೇ ಶ್ಯಾಮಸುಂದರ್ ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಪಡೆದರು. ಕಾನೂನಿನ ಪದವಿ ಜತೆ, ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ಪದವಿ ಪಡೆದರು.

ವಿದ್ಯಾರ್ಥಿ ದೆಸೆಯಲ್ಲಿಯೇ 1930ರಲ್ಲಿ ಹೈದರಾಬಾದ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 1931 ರಿಂದ 34ರ ತನಕ ಯಂಗ್ ಮೆನ್ಸ್ ಅಸೋಸಿಯೇಷನ್ ಆಫ್ ಹೈದರಾಬಾದ್ ಎಂಬ ಸಂಘಟನೆಯ ಸಂಚಾಲಕರಾಗಿ, 1932ರಲ್ಲಿ ಅವರು ‘ಸ್ವದೇಶಿ ಲೀಗ್ ಎಂಬ ಸಂಸ್ಥೆಯ ಸದಸ್ಯರಾಗಿ, ಲಿಟರರಿ ಸೊಸೈಟಿ ಆಫ್ ಹೈದರಾಬಾದ್ ಎಂಬ ಸಾಹಿತ್ಯಿಕ ಸಂಘಟನೆಯ ಅಧ್ಯಕ್ಷರಾಗಿಯೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡರು. ಡಾ. ಅಂಬೇಡ್ಕರ್ ಅವರು ಲಂಡನ್ನ ದುಂಡು ಮೇಜಿನ ಸಮ್ಮೇಳನದಲ್ಲಿ ಮಂಡಿಸಿದ ನಿಲುವನ್ನು ಬೆಂಬಲಿಸಲು ಶ್ಯಾಮಸುಂದರ್ ‘ಗ್ರಾಜ್ಯುವೇಟ್ ಅಸೋಶಿಯೇಷನ್ ಎಂಬ ಯುವಕರ ಸಂಘಟನೆ ಕಟ್ಟಿದರು. ತಂದೆಯ ಮರಣದ ನಂತರ ಕೆಲ ಕಾಲ ದೂದಧರಿ ಮಹಾರಾಜ ಅವರ ಆಶ್ರಮದಲ್ಲಿ ತಂಗಿದರು. ಸಮಾಜ ಸೇವೆಗಾಗಿಯೇ ಮದುವೆಯನ್ನು ನಿರಾಕರಿಸಿ ಬ್ರಹ್ಮಚಾರಿಯಾಗುವ ನಿರ್ಧಾರ ಮಾಡಿ ಕೊನೆತನಕ ಹಾಗೇ ಉಳಿದರು.

 ಪಂಡಿತ್ ಮದನ್ಮೋಹನ್ ಮಾಲವೀಯ ಅವರ ಅಧ್ಯಕ್ಷತೆಯಲ್ಲಿ 1936ರಲ್ಲಿ ಪುಣೆಯಲ್ಲಿ ನಡೆದ ಹಿಂದೂ ಮಹಾಸಭೆಯ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ ಹಿಂದೂ ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸಿದರು. 1942ರಲ್ಲಿ ‘ಭಾರತೀಯ ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದ ಸಮಾವೇಶದ ಅಧ್ಯಕ್ಷತೆ ವಹಿಸಿದ ಶ್ಯಾಮಸುಂದರ್ 64 ಪುಟಗಳ ತನ್ನ ವಿದ್ವತ್ಪೂರ್ಣ ಭಾಷಣ ಮಾಡಿದರು. 1945ರಲ್ಲಿ ಭಾರತೀಯ ಡಿಪ್ರೆಸ್ಡ್ ಕ್ಲಾಸಸ್ ಅಸೋಸಿಯೇಷನ್ನ ಅಧ್ಯಕ್ಷರಾದರು. 1946ರಲ್ಲಿ ಹಿಂದುಳಿದ ವರ್ಗದ ಜನರ ಐಕ್ಯತೆಗಾಗಿ ‘ಇಂಡಿಪೆಂಡೆಂಟ್ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್ ಎಂಬ ಸಂಘಟನೆ ಆರಂಭಿಸಿದರು. 1947ರಲ್ಲಿ ಹೈದರಾಬಾದ್ ಶಾಸನ ಸಭೆಯ ಸದಸ್ಯರಾಗಿ, 1948ರಲ್ಲಿ ಅಲ್ಲಿನ ಉಪಸಭಾಪತಿಗಳೂ ಆದರು. ಶ್ಯಾಮಸುಂದರ್ ಅವರು, ನಿಜಾಮ್ ಸರಕಾರದ ಮಂತ್ರಿಗಳಾಗಿದ್ದಾಗ, ದಲಿತರ ಶಿಕ್ಷಣಕ್ಕಾಗಿ ಶೋಷಿತ ಕಲ್ಯಾಣ ಸಮಿತಿಗೆ ಒಂದು ಕೋಟಿ ರೂ.ಗಳ ಆರ್ಥಿಕ ಸಹಾಯ ಪಡೆದು, ಔರಂಗಾಬಾದ್ನಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ 28 ವಸತಿ ನಿಲಯಗಳನ್ನು ಸ್ಥಾಪಿಸಿದರು. ಈ ನಿಧಿಯಲ್ಲಿ ಡಾ. ಅಂಬೇಡ್ಕರ್ ಅವರು ಆರಂಭಿಸಿದ, ಹಣಕಾಸಿನ ತೊಂದರೆಯಲ್ಲಿದ್ದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಶೈಕ್ಷಣಿಕ ಕೆಲಸಗಳಿಗಾಗಿ 12 ಲಕ್ಷ ಸಹಾಯ ಧನ ನೀಡಿದ್ದರು.

ಪ್ಯಾರಿಸ್ನಲ್ಲಿ 1948ರಲ್ಲಿ ಏರ್ಪಡಿಸಲಾಗಿದ್ದ ‘ಯುನೈಟೆಡ್ ನೇಶನ್ಸ್ ಸೆಕ್ಯೂರಿಟಿ ಕೌನ್ಸಿಲ್ನಲ್ಲಿ ಹೈದರಾಬಾದ್ ಸಂಸ್ಥಾನದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಅಲ್ಲಿ ಭಾರತದ ದಮನಿತ ಸಮುದಾಯಗಳ ಬಗ್ಗೆ ಅಪೂರ್ವ ಒಳನೋಟದ ಭಾಷಣ ಮಾಡಿದರು. ದಲಿತರ ಏಳಿಗೆಯ ಕಾರಣವನ್ನು ಮುಂದುಮಾಡಿ ಹೈದರಾಬಾದಿನ ನಿಜಾಮ್ ಭಾರತ ಗಣರಾಜ್ಯಕ್ಕೆ ಸೇರುವುದು ಬೇಡ ಎನ್ನುವ ನಿಲುವು ತಾಳುತ್ತಾರೆ. ಇದಕ್ಕಾಗಿ 1950-51ರಲ್ಲಿ ಭಾರತ ಸರಕಾರದಿಂದ ಒಂದು ವರ್ಷ ಜೈಲುವಾಸ ಅನುಭವಿಸಿ ಬಂಧ ಮುಕ್ತರಾದರು. ಆ ನಂತರವೂ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನೆ ಆರಂಭಿಸಿದರು. 1957ರಲ್ಲಿ ಮೈಸೂರು ರಾಜ್ಯದ ಭಾಲ್ಕಿ ಜಂಟಿ ಮತಕ್ಷೇತ್ರದಿಂದ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು 1962ರ ತನಕ ವಿಧಾನಸಭಾ ಸದಸ್ಯರಾಗಿ ಅಪೂರ್ವ ಸೇವೆ ಸಲ್ಲಿಸಿದರು.

 ಭಾರತದ ದಲಿತ ಹೋರಾಟದ ಚರಿತ್ರೆ ಬರೆಯುವಾಗ ‘ಭೀಮ ಸೇನೆಯ ಅಧ್ಯಾಯವನ್ನು ಮರೆಯುವಂತಿಲ್ಲ. ಕಲಬುರಗಿಯ ಭೀಮನಗರದಲ್ಲಿ ನಡೆದ ಡಾ.ಅಂಬೇಡ್ಕರ್ ಅವರ 69ನೆಯ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಶ್ಯಾಮಸುಂದರ್ ‘ಭಾರತೀಯ ಭೀಮ ಸೇನಾ ಸಂಘಟನೆಯನ್ನು ಅಧಿಕೃತವಾಗಿ ಘೋಷಿಸಿದರು. ಆಗ ಮಲ್ಲಿಕಾರ್ಜುನ ಖರ್ಗೆಯವರು ಸೇನೆಯ ಆರಂಭಿಕ ಅಧ್ಯಕ್ಷರಾಗಿದ್ದರು. ದೇಶಾದ್ಯಂತ ಸುಮಾರು 2 ಲಕ್ಷ ಜನ ಭೀಮಸೇನೆಯ ಸದಸ್ಯರಿದ್ದರು. ಈ ಮೂಲಕ ಮೂಢನಂಬಿಕೆಗಳ ವಿರುದ್ಧ ದಲಿತರಲ್ಲಿ ಜಾಗೃತಿ ಮೂಡಿಸಿದರು. ಪೆರಿಯಾರ್ ಅವರ ಪ್ರಭಾವದಿಂದ ದೇವರ ಪಟಗಳ ಸುಡುವ ಚಳವಳಿ ಶುರುಮಾಡಿ ದೊಡ್ಡ ಸಂಚಲನ ಉಂಟುಮಾಡಿದರು. ಅನ್ಯಾಯದ ವಿರುದ್ಧದ ಪ್ರತಿಭಟನೆಯನ್ನು ಜನಪ್ರಿಯಗೊಳಿಸಿದರು. ಅವರ ಕಿಚ್ಚಿನ ಭಾಷಣಗಳಿಂದಾಗಿ ಜೈಲುವಾಸವನ್ನೂ ಅನುಭವಿಸಿದರು.

 ಶ್ಯಾಮಸುಂದರ್ ಅಪೂರ್ವ ಚಿಂತಕರೂ ಆಗಿದ್ದರು ‘ದೆ ಬರ್ನ್ (ಇಂಗ್ಲೀಷ್), ‘ಭೀಮ ಸೇನಾ - ಅವರ್ ಪಾಸ್ಟ್ ಆ್ಯಂಡ್ ಪ್ರಸೆಂಟ್ (ಇಂಗ್ಲಿಷ್), ನ್ಯಾಶನಲ್ ಇಂಟಿಗ್ರೇಶನ್ ಆ್ಯಂಡ್ ಪ್ರಾಬ್ಲಮ್ ಆಫ್ ಮೈನಾರಿಟಿಸ್ (ಇಂಗ್ಲಿಷ್) ಪ್ರಾಬ್ಲಮ್ಸ್ ಆಫ್ ಶೆಡ್ಯೂಲ್ಡ್ ಕಾಸ್ಟ್ (ಇಂಗ್ಲಿಷ್) ಮುಂತಾದ ಹದಿನೆಂಟು ಕೃತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಿ. ಶ್ಯಾಮಸುಂದರರು ನಿರ್ಮಿಸಿದ ‘ದಲಿತ ಮುಸ್ಲಿಮ್ ಒಕ್ಕೂಟ ಮಹತ್ವದ ಕೊಡುಗೆ. ದಮನಿತ ಈ ಎರಡೂ ಸಮುದಾಯಗಳ ಸಾಮಾಜಿಕ ಸ್ವರೂಪವನ್ನು ಆಳವಾಗಿ ಅಧ್ಯಯನ ಮಾಡಿ ಒಕ್ಕೂಟವನ್ನು ಕಟ್ಟಿದ್ದರು. ಇದು ಎರಡೂ ಸಮುದಾಯಗಳ ಪರಸ್ಪರ ಒಳಿತಿಗಾಗಿತ್ತು. ಔರಂಗಾಬಾದಿನಲ್ಲಿ ನಡೆದ ದಮನಿತರ  ಸಮಾವೇಶದ ಅಧ್ಯಕ್ಷತೆ ವಹಿಸಿ ಮುಸಲ್ಮಾನರೊಂದಿಗೆ ಕೈಗೂಡಿಸಿ ಮೇಲ್ವರ್ಗದ ಹಿಂದೂಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಕಾಲ ಈಗ ಬಂದಿದೆ ಎಂದು ಹೇಳಿದ್ದರು. ಇದು ರಾಮಸ್ವಾಮಿ ಪೆರಿಯಾರ್ ಅವರ ಕನಸೂ ಆಗಿತ್ತು. ದಲಿತರಿಗೆ ‘‘ಬಿಟ್ಟಿ ಜಾಕ್ರಿ ಬಿಡಬೇಕು, ಸ್ವಾಭಿಮಾನದಿಂದ ಬದುಕಬೇಕು’’ ಎಂಬ ಘೋಷವಾಕ್ಯವನ್ನು ನೀಡಿದರು. ಈ ಮೂಲಕ ದಲಿತರಲ್ಲಿ ಅರಿವಿನ ಜಾಗೃತಿ ಮೂಡಿಸುವುದು ಶ್ಯಾಮಸುಂದರರ ಕನಸಾಗಿತ್ತು.

 ಶ್ಯಾಮಸುಂದರ್ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಮೆಚ್ಚಿನ ಹೋರಾಟದ ಸಂಗಾತಿಯಾಗಿದ್ದರು, ಪೆರಿಯಾರರು ‘‘ಭಾರತ ದೇಶದಲ್ಲಿ ಹಿಂದೂ ಧರ್ಮದ ಲ್ಲಿನ ಕೆಟ್ಟ ವಿಚಾರಗಳ ಹಾಗೂ ಅದರಲ್ಲಿನ ವರ್ಣಾಶ್ರಮದ ಬಗ್ಗೆ ಯಾವ ವ್ಯಕ್ತಿ ವಿರೋಧ ಮಾಡುತ್ತಾನೋ ಅಂತಹ ವ್ಯಕ್ತಿಯ ಹೆಸರು ಹಾಗೂ ವಿಚಾರಗಳನ್ನು ಕಡೆಗಣಿಸಿ ಅವರನ್ನು ಪ್ರಸಿದ್ಧಿಗೆ ಬರದ ಹಾಗೆ ಅಜ್ಞಾತರನ್ನಾಗಿ ಮಾಡುತ್ತಾರೆ. ಇದೇ ರೀತಿಯಲ್ಲಿ ಬಿ. ಶ್ಯಾಮಸುಂದರರು ತಮ್ಮ ಜೀವನದ ಕೊನೆಯವರೆಗೂ ದಲಿತರ ಉದ್ಧಾರಕ್ಕೆ ಟೊಂಕ ಕಟ್ಟಿಕೊಂಡು, ಅನೇಕ ಕಾರ್ಯಚಟುವಟಿಕೆಗಳನ್ನು ಜರುಗಿಸಿದ್ದರೂ ಕೂಡ ಅವರ ಹೆಸರು ಜನನಾಯಕರ ಪಟ್ಟಿಯಲ್ಲಿ ಸೇರದೇ ಇದ್ದುದು ಅಕ್ಷರಶಃ ಸತ್ಯ’’ ಎಂದು ನೋವಿನಿಂದ ನುಡಿಯುತ್ತಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಅರುಣ್ ಜೋಳದಕೂಡ್ಲಿಗಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!