ಅಧಿವೇಶನದಲ್ಲಿ ಪರಸ್ಪರ ದೂಷಿಸಿಕೊಂಡ ಬಿಜೆಪಿ ಮುಖಂಡರು
ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿದ್ದ ಬಿಜೆಪಿ ಸ್ವತಃ ಭಾರೀ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿದ್ದ ಆಂತರಿಕ ಕಲಹ, ಹಿರಿಯ ನಾಯಕರ ನಡುವಿನ ಅಸಮಾಧಾನ, ಗೊಂದಲ ಎಲ್ಲವೂ ವಿಪಕ್ಷ ಹಾಗು ರಾಜ್ಯಾಧ್ಯಕ್ಷ ಸ್ಥಾನ ತುಂಬಿದರೆ ಕೊನೆಗೊಂಡೀತು ಎಂದು ಭಾವಿಸಿದ್ದ ಬಿಜೆಪಿಗೆ ಈಗ ಅದೇ ಬಗೆಹರಿಸಲಾಗದ ಬಹುದೊಡ್ಡ ಸಮಸ್ಯೆಯಾಗಿಬಿಟ್ಟಿದೆ.
ಯಾವಾಗ ಆಕಾಂಕ್ಷಿ ಹಿರಿಯರನ್ನು ಬದಿಗೆ ಸರಿಸಿ, ಯಡಿಯೂರಪ್ಪ ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಅವರ ಆಪ್ತರಿಗೆ ವಿಪಕ್ಷ ನಾಯಕ ಸ್ಥಾನ ನೀಡಲಾಯಿತೋ , ಅಲ್ಲಿಂದಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಬೆಳೆಯುತ್ತಲೇ ಹೋಗಿ ಇದೀಗ ಅವರ ಹೇಳಿಕೆಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆ ಬೆನ್ನಲ್ಲೇ, ವರಿಷ್ಠರು ಆರ್. ಅಶೋಕ್ ರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದರು. ಲೋಕಸಭೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಸದನದಲ್ಲಿ ಹಾಗು ಹೊರಗೆ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸಬೇಕೆಂಬ ಸಂದೇಶ ಕೊಟ್ಟಿದ್ದರು.
ಆದರೆ ವಿಪಕ್ಷ ನಾಯಕ ಆರ್. ಅಶೋಕ್ ಗೆ ಸದನದಲ್ಲಿ ಮೊದಲ ದಿನವೇ ಅವರದೇ ಪಕ್ಷದ ಯತ್ನಾಳ್ ರಿಂದ ತೀವ್ರ ಮುಖಭಂಗಕ್ಕೊಳಗಾಗುವಂತಾಗಿತ್ತು. ವಿರೋಧ ಪಕ್ಷದ ನಾಯಕರಿಗೆ ಶುಭಕೋರಿ ಮಾತನಾಡಿ ಎಂದು ಸದನದಲ್ಲಿ ಸ್ಪೀಕರ್ ಕೇಳಿದಾಗ ಕೈಸನ್ನೆಯಿಂದ ಪ್ರತಿಕ್ರಿಯೆ ನೀಡಿ ಯತ್ನಾಳ್ ನಿರಾಕರಣೆ ಮಾಡಿದ್ದು ಬಿಜೆಪಿ ನಾಯಕರನ್ನು ತೀವ್ರ ಮುಜುಗರಕ್ಕೀಡುಮಾಡಿತ್ತು.
ಅದಕ್ಕೂ ಮುನ್ನ, ವಿರೋಧ ಪಕ್ಷದ ನಾಯಕರ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದ ಯತ್ನಾಳ್ ಅವರು ರಮೇಶ್ ಜಾರಕಿಹೊಳಿ ಜೊತೆಗೆ ಸಭೆ ಆರಂಭಕ್ಕೂ ಮುನ್ನ ಹೊರ ನಡೆದಿದ್ದರು. ಅಲ್ಲದೆ, ಹೊಂದಾಣಿಕೆ ರಾಜಕಾರಣ ಮಾಡುವವರಿಗೆ ಮಣೆ ಹಾಕಲಾಗುತ್ತಿದೆ ಎಂದು ಆರೋಪ ಮಾಡಿದ್ದರು.
ಕಲಾಪಗಳಲ್ಲಿ ಒಗ್ಗಟ್ಟಾಗಿ ಆಡಳಿತ ಪಕ್ಷದ ವೈಫಲ್ಯವನ್ನು ಪ್ರಶ್ನಿಸಬೇಕಾಗಿದ್ದ ಬಿಜೆಪಿ ಈಗ ಆಂತರಿಕ ಭಿನ್ನಮತಗಳಿಂದಾಗಿ ಸ್ವತಃ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಇತರ ಶಾಸಕರ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಸರಕಾರವನ್ನು ಟೀಕಿಸಬೇಕಾಗಿದ್ದ ಬಿಜೆಪಿ ನಾಯಕರು ತಮ್ಮದೇ ನಾಯಕರನ್ನು ಟೀಕಿಸಿ ಸುದ್ದಿಯಾಗುತ್ತಿದ್ದಾರೆ.
ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್, ಮೊನ್ನೆ ಸದನದಲ್ಲೇ ಆರ್ ಅಶೋಕ್ ರನ್ನು ಟೀಕಿಸಿ, ಸದನದ ಮೊಗಸಾಲೆಯಲ್ಲಿ ಅವರಿಗೆ ಬೈದು ಸುದ್ದಿಯಾಗಿದ್ದರು.
ಈಗ ಅಶೋಕ್ ಅವರ ಕಚೇರಿಗೆ ಹೋಗಲು ವಿಶ್ವನಾಥ್ ನಿರಾಕರಿಸಿದ್ದಾರೆ. 'ಅಶೋಕ್ ಹೆಸರಿನ ನಾಮಫಲಕ ಇರುವವರೆಗೂ ನಾನು ಅವರ ಕೊಠಡಿಗೆ ಕಾಲಿಡುವುದಿಲ್ಲ' ಎಂದು ಹೇಳಿ ಅಶೋಕ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಸಮನ್ವಯ ಮೂಡಿಸಲು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಯಲ್ಲಿ ಸದನ ಆರಂಭಕ್ಕೆ ಮುನ್ನ ಪ್ರತಿನಿತ್ಯ ಶಾಸಕರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಆದರೆ ಆರ್.ಅಶೋಕ್ ಕೊಠಡಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಗೆ ತೆರಳಲು ಎಸ್. ಆರ್.ವಿಶ್ವನಾಥ್ ನಿರಾಕರಿಸಿದ್ದು, 'ಬೇಕಾದರೆ ಆರ್.ಅಶೋಕ್ ನಾಮಫಲಕ ತೆಗೆಯಲಿ, ಆಗ ಹೋಗುತ್ತೇನೆ' ಎಂದು ಮಾಧ್ಯಮ ಪ್ರತಿನಿಧಿಗಳ ಬಳಿ ಹೇಳಿಕೊಂಡಿದ್ದಾರೆ.
ಅತ್ತ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಅವರು ಯಡಿಯೂರಪ್ಪ ವಿರುದ್ಧ ಟೀಕೆಯನ್ನು ಮುಂದುವರಿಸಿದ್ದಾರೆ. ಜೊತೆಗೆ ನನ್ನನ್ನು ವಿಪಕ್ಷ ನಾಯಕನನ್ನಾಗಿಸಲು ವರಿಷ್ಠರು ಯಾಕೆ ಹಿಂಜರಿದಿದ್ದಾರೆ?' ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ವಿಪಕ ನಾಯಕ ಅಶೋಕ್ ಮತ್ತು ಶಾಸಕರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಕಳೆದ ಗುರುವಾರ ಅಧಿವೇಶನದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸರಕಾರದಿಂದ ಉತ್ತರ ಅಪೇಕ್ಷಿಸಿ ವಿಪಕ್ಷ ನಾಯಕ ಆರ್. ಅಶೋಕ್ ಸಭಾತ್ಯಾಗ ಮಾಡಿದ್ದರೆ, ಬಿಜೆಪಿಯ ಸದಸ್ಯ ಅಭಯ್ ಪಾಟೀಲ್ ಧರಣಿಗೆ ಮುಂದಾಗಿದ್ದರು. ಕೆಲವು ಸದಸ್ಯರು ಅಶೋಕ್ ಜೊತೆಗೆ ನಡೆದರೆ, ಕೆಲವರು ಪಾಟೀಲ್ ಜೊತೆಗೆ ನಿಂತದ್ದು ತೀವ್ರ ಮುಜುಗರಕ್ಕೆ ಕಾರಣವಾಗಿತ್ತು.
ನಿನ್ನೆ 'ಬಿ.ಎಸ್. ಯಡಿಯೂರಪ್ಪ ಪಕ್ಷದ ವರಿಷ್ಠರನ್ನು ಬ್ಯಾಕ್ ಮೇಲ್ ಮಾಡಿ ತಮ್ಮ ಪುತ್ರನನ್ನು ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಆತನನ್ನು ಲಿಂಗಾಯತ ಸಮುದಾಯ ಒಪ್ಪಿಕೊಳ್ಳುವುದಿಲ್ಲ' ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಜತೆ ಸಮಾಲೋಚನೆಯ ವೇಳೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಬರೀ ಶಿಸ್ತು, ಶಿಸ್ತು..ಎನ್ನುತ್ತಾರೆ. ನಾವೇನು ಗುಲಾಮರೇ?, ನಮಗೇನು ಶಕ್ತಿ ಇಲ್ಲವೇ?, ನಮ್ಮ ಹಿಂದೇನು ಜನ ಇದ್ದಾರೆ. ನೀವೆಲ್ಲರೂ ಗಟ್ಟಿಯಾಗಿ ನಿಲ್ಲಿ, ಎಲ್ಲರನ್ನೂ ಸರಿ ಮಾಡೋಣ' ಎಂದು ಶ್ರೀಗಳಿಗೆ ಸಲಹೆ ಮಾಡಿದರು.
'ನನಗೆ ಯಾವುದೇ ಆಸೆ ಇಲ್ಲ. ಪ್ರಾಮಾಣಿಕ ವ್ಯಕ್ತಿ ಬೇಕಿದ್ದರೆ ನನ್ನನ್ನು ವಿಧಾನಸಭೆ ವಿಪಕ್ಷ ನಾಯಕನನ್ನಾಗಿ ಮಾಡಲು ಮೇಲಿನವರು ಏಕೆ ಹೆದರಿದ್ದಾರೆ ಎಂಬುದು ನನಗೂ ಗೊತ್ತಿಲ್ಲ ಎಂದು ಯತ್ನಾಳ್ ಟೀಕಿಸಿದರು. ಯಡಿಯೂರಪ್ಪ, ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯದಲ್ಲಿ ಎಲ್ಲಿಯೂ ಹೋಗುವುದಿಲ್ಲ ಎಂದು ಹೆದರಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತೀನಿ, ಉಳಿದ ಕಡೆ ಹೋಗಲ್ಲ ಎಂದು ವರಿಷ್ಠರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಯತ್ನಾಳ್ ದೂರಿದರು.
ವಿ.ಸೋಮಣ್ಣನನ್ನು ಸೋಲಿಸಿದ್ದು ಯಾರು? ಲಿಂಗಾಯತರನ್ನು ಅಲ್ಲಿಗೆ ಕಳುಹಿಸಿ ಸೋಮಣ್ಣನನ್ನು ಬಲಿ ಕೊಟ್ಟರು. ಸೋಮಣ್ಣನನ್ನು ಗೋವಿಂದರಾಜ ನಗರ ಕ್ಷೇತ್ರದಲ್ಲಿ ನಿಲ್ಲಿಸಿದ್ದರೆ, 20-25 ಸಾವಿರ ಮತಗಳಿಂದ ಗೆಲ್ಲುತ್ತಿದ್ದರು. ಆದರೆ, ಸೋಮಣ್ಣನನ್ನು ಬಲಿಪಶು ಮಾಡಿದರು ಎಂದು ಆರೋಪಿಸಿದರು ಯತ್ನಾಳ್ .
'ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನೂ ಸೇರಿ ಕೆಲವು ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಕುತಂತ್ರ ಮಾಡಿದ್ದರು. ಆಶ್ಚರ್ಯದ ಸಂಗತಿ ಎಂದರೆ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ. ಇದೀಗ ಅವನು ಪಕ್ಷದ ರಾಜ್ಯಾಧ್ಯಕ್ಷ. ಬೊಮ್ಮಾಯಿಯವರೇ ಹಣ ಕಳಿಸಿದ ಬಗ್ಗೆ ನನಗೆ ಹೇಳಿದ್ದರು ಎಂದು ಯತ್ನಾಳ್ ಕಿಡಿಕಾರಿದ್ದಾರೆ.
‘ಸೋಮಣ್ಣ ಅವರನ್ನು ಬಲಿ ಕೊಟ್ಟಿದ್ದು ಇವರೇ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಾನು ರ್‍ಯಾಲಿ ನಡೆಸಿದ ಸಂದರ್ಭದಲ್ಲಿ, ನನ್ನನ್ನು ಬಂಧಿಸುವಂತೆ ಲಿಂಗಾಯತ ಸಮಾಜಕ್ಕೆ ಸೇರಿದ ಸಂದೀಪ ಪಾಟೀಲ ಎಂಬ ಪೊಲೀಸ್ ಅಧಿಕಾರಿಯನ್ನು ಇವರೇ ಕಳುಹಿಸಿದ್ದರು’ ಎಂದೂ ಅವರು ಆರೋಪಿಸಿದ್ದು ವಿಡಿಯೊದಲ್ಲಿದೆ.
‘ಹಿಂದೆ ಕನಿಷ್ಠ ಎಂಟು ಮಂದಿ ಪಂಚಮಸಾಲಿ ಸಮಾಜದ ಸಂಸದರು ಇರುತ್ತಿದ್ದರು. ಈಗ ಕರಡಿ ಸಂಗಣ್ಣ ಒಬ್ಬರೇ ಇದ್ದಾರೆ. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಸಂಸದ ಸ್ಥಾನ ತಪ್ಪಿಸುತ್ತಿದ್ದಾರೆ. ವಿಜಯೇಂದ್ರಗೆ ಯಾರು ಅಡ್ಡಗಾಲು ಆಗುತ್ತಾರೋ ಅವರನ್ನೆಲ್ಲ ತುಳಿಯುವ ಹುನ್ನಾರ ಮಾಡುತ್ತಿದ್ದಾರೆ. ಶಾಸಕ ವಿನಯ ಕುಲಕರ್ಣಿ ಅವರ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಲ್ಲಿಯೂ ಇವರ ಕೈವಾಡ ಇದೆ’ ಎಂದೂ ಅವರು ಆರೋಪಿಸಿದ್ದಾರೆ.
‘ಅಪ್ಪ– ಮಕ್ಕಳು ಏನು ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಪರೋಕ್ಷ ಬೆಂಬಲ ನೀಡಿದರು. ಕನಕಪುರದಲ್ಲಿಯೂ ಇವರ ಹೊಂದಾಣಿಕೆ ಇದೆ’ ಎಂದೂ ಕಿಡಿಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಮುರುಗೇಶ ನಿರಾಣಿ
'ಬಸನಗೌಡ ಪಾಟೀಲ ಯತ್ನಾಳ ಸ್ವಯಂಘೋಷಿತ ನಾಯಕ. ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದುರುದ್ದೇಶದಿಂದ ಟೀಕೆ ಮಾಡುತ್ತಿರುವ ಯತ್ನಾಳ ಅವರಿಗೆ ಸಮಾಜ ಹಾಗೂ ಪಕ್ಷ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.
‘ತಮ್ಮನ್ನು ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಾಡಬೇಕು ಎಂದು ಯತ್ನಾಳ ಹೇಳಿಕೊಂಡು ಓಡಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರನ್ನು ತಾರಾ ಪ್ರಚಾರಕರನ್ನಾಗಿ ಮಾಡಲಾಯಿತು. ಅವರ ಓಡಾಟಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಯಿತು. ಅವರು ಪ್ರಚಾರ ಮಾಡಿದ 40 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇ ಇಲ್ಲ’ ಎಂದು ವ್ಯಂಗ್ಯವಾಡಿದರು.
‘ವಿಜಯಪುರ ಜಿಲ್ಲೆಯಲ್ಲೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನಾಳಗೆ ಆಗಲಿಲ್ಲ. ಪಕ್ಷದ ನಾಯಕರ ವಿರುದ್ಧ ಟೀಕೆ ಮಾಡುವ ಮೂಲಕ ನಾಯಕರಾಗಲು ಹೊರಟಿದ್ದಾರೆ. ಈ ಹಿಂದೆ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ ಅವರಿಗೆ ಶೆಟ್ಟಿ, ಭಟ್ಟ ಎಂದು ನಿಂದಿಸಿದರು. ಬಳಿಕ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಹಾಗೂ ವಿಜಯ ಸಂಕೇಶ್ವರ ವಿರುದ್ಧ ಮಾತನಾಡಿದರು. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಅದೇ ರೀತಿ ಯತ್ನಾಳ ಕಥೆಯೂ ಆಗಲಿದೆ’ ಎಂದು ಅವರು ಎಚ್ಚರಿಸಿದರು.
ಇನ್ನೊಂದೆಡೆ ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿರುವ ಮಾಜಿ ಸಚಿವ ವಿ ಸೋಮಣ್ಣ ಕಳೆದ ತಿಂಗಳು ಪತ್ರಿಕಾಗೋಷ್ಠಿಯಲ್ಲಿ ಡಿಸೆಂಬರ್ ಆರಕ್ಕೆ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದರು.
ಈ ಬಗ್ಗೆ ಡಿಸೆಂಬರ್ ಆರರಂದು ತುಮಕೂರಲ್ಲಿ ಸೋಮಣ್ಣ ಬಳಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, " 45 ವರ್ಷ ನಾನು ಸಂಪೂರ್ಣವಾಗಿ ಸಿದ್ಧಗಂಗಾ ಮಠದಲ್ಲಿ ತೊಡಗಿಸಿಕೊಂಡಿದ್ದೇನೆ, ಹತ್ತಾರು ಕಾರ್ಯಕ್ರಮ ಮಾಡಿದ್ದೇನೆ. ಪಾರ್ಟಿ-ಗೀಟಿ ನಮ್ಮ ತಲೆಯಲ್ಲಿ ಇಲ್ಲ. ಕೆಲ ನಾಯಿ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಯ್ತು, ಸಿದ್ದಗಂಗಾ ಮಠವನ್ನು ಬೇರೆ ಮಠದೊಂದಿಗೆ ಹೋಲಿಕೆ ಮಾಡೋದು ಸರಿಯಲ್ಲ " ಎಂದು ಹೇಳಿದ್ದರು.
ಇದೇ ವೇಳೆ ಯತ್ನಾಳ್ ಹೇಳಿಕೆಗಳ ಪರ ಮಾತನಾಡಿದ ಅವರು , ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ, ನೇರವಾಗಿ ಹೇಳುವಂತಹವರು ಯಾರಿದ್ದಾರೆ. ಅವರ ನೋವನ್ನ ಡೈರೆಕ್ಟ್ ಆಗಿ ತೊಡಿಕೊಂಡಿದ್ದಾರೆ, ಯತ್ನಾಳ್ ಅವರು ಇತ್ತೀಚೆಗೆ ಭೇಟಿಯಾಗಿಲ್ಲ. ಕಾಲ ಬಂದಾಗ ಎಲ್ಲಾ ಸರಿ ಹೋಗುತ್ತೆ. ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಸೋಮಣ್ಣ ಹೇಳಿದರು.
ಇದೀಗ ವಿ.ಸೋಮಣ್ಣ ಅವರೊಂದಿಗೆ ಸಂಧಾನ ಪ್ರಯತ್ನ ಆರಂಭಿಸಿರುವ ದೆಹಲಿಯ ಬಿಜೆಪಿ ವರಿಷ್ಠರು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಮಾತುಕತೆ ವೇಳೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಉಪಸ್ಥಿತರಿರಬೇಕು. ವರಿಷ್ಠರ ಸಮ್ಮುಖದಲ್ಲಿ ಮುಖಾಮುಖಿ ಮಾತುಕತೆ ಆಗಲಿ ಎಂಬ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಿಂದ ಸೋಮಣ್ಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪಕ್ಪದ ಮುಖಂಡರೊಬ್ಬರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ತಾ ಅವರೊಂದಿಗೆ ಮಾತುಕತೆ ನಡೆಸಲು ಬರುವಂತೆ ಆಹ್ವಾನಿಸಿದ್ದಾರೆ. ಮಾತುಕತೆಗೆ ಬರಲು ಒಪ್ಪಿದ ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಕರೆಸಿ. ಜತೆಗೆ ಸಾಧ್ಯವಾದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಕರೆಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಹೀಗೆ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಬೇಕಿದ್ದ ಬಿಜೆಪಿ ಸ್ವತಃ ಮುಗಿಯದಷ್ಟು ಆಂತರಿಕ ಕಲಹಗಳಿಂದ ಕಂಗೆಟ್ಟು ಹೋಗಿದೆ. ಇದು ಹೇಗೆ ಸರಿಯಾಗಲಿದೆ, ಯಾವಾಗ ಸರಿಯಾಗಲಿದೆ ಎಂದು ಕಾದು ನೋಡಬೇಕು.