ಬಿಜೆಪಿ, ಸಂಘ ಪರಿವಾರ ಎಲ್ಲವೂ ಈಗ ಮೋದಿ ಕೃಪೆಯಲ್ಲಿ
ಮೂರು ಹಿಂದಿ ರಾಜ್ಯಗಳ ಹೊಸ ಸಿಎಂ ಆಯ್ಕೆ ಆಗಿದೆ. ಮೂರೂ ರಾಜ್ಯಗಳಲ್ಲಿ ಅತ್ಯಂತ ಅಚ್ಚರಿಯ ಸಿಎಂಗಳು ಆಯ್ಕೆಯಾಗಿದ್ದಾರೆ.
ಆ ಮೂರೂ ಆಯ್ಕೆಗಳು ವಿಪಕ್ಷಗಳಿಗೆ ಮಾತ್ರವಲ್ಲ, ಸ್ವತಃ ಬಿಜೆಪಿಗೇ, ಅದರಲ್ಲೂ ಆಯಾ ರಾಜ್ಯಗಳ ಬಿಜೆಪಿ ಘಟಾನುಘಟಿ ನಾಯಕರಿಗೇ ಇದೇನಾಗುತ್ತಿದೆ ಎಂದು ಮೈಮುಟ್ಟಿ ನೋಡಿಕೊಳ್ಳುವಷ್ಟು ಅಚ್ಚರಿ ತಂದಿವೆ.
ಮೂರೂ ರಾಜ್ಯಗಳ ಸಿಎಂ ಆಯ್ಕೆ ರವಾನಿಸುವ ಸಂದೇಶ ಮಾತ್ರ ಒಂದೇ. ಈ ದೇಶದಲ್ಲಿ ಮತ್ತು ಬಿಜೆಪಿಯಲ್ಲಿ ಜೊತೆಗೆ ಸಂಘ ಪರಿವಾರದಲ್ಲೂ ಈಗ ಏನೇ ಆಗಬೇಕಿದ್ರೂ ಅದಕ್ಕೆ ದಿಲ್ಲಿಯಿಂದ ಒಂದು ಮುದ್ರೆ ಬೀಳಲೇಬೇಕು. ಅದೇನೇ ಬೆಳವಣಿಗೆ ಇದ್ದರೂ ಅದರ ಸುತ್ತಲೇ ಆಗಬೇಕು.
ಅಲ್ಲಿಂದ ಸೂಚಿಸಿದಂತೆಯೇ ಎಲ್ಲವೂ ನಡೆಯಬೇಕು. ಅದಕ್ಕೆ ವಿರುದ್ಧವಾಗಿ ನಡೆಯುವವರಿಗೆ ಇಲ್ಲಿ ಭವಿಷ್ಯವಿಲ್ಲ. ಅಲ್ಲಿಂದ ಯೆಸ್ ಅಂದ್ರೆ ಮಾತ್ರ ಯೆಸ್ , ಇಲ್ದಿದ್ರೆ ಇಲ್ಲಿ ಯಾರು ಎಸ್ ಹೇಳಿದ್ರೂ ಆ ಕೆಲಸ ಆಗೋದಿಲ್ಲ.
ಆ ಮುದ್ರೆಯ ಹೆಸರು ನರೇಂದ್ರ ಮೋದಿ. ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಿಗೆ ಸರಿಸಿ ಹೊಸ ನಾಯಕನಿಗೆ ಸಿಎಂ ಪಟ್ಟ ನೀಡಿದ್ದ ಬಿಜೆಪಿ, ರಾಜಸ್ಥಾನದಲ್ಲೂ ವಸುಂಧರಾ ರಾಜೇ ಅಂಥ ಪ್ರಭಾವಿ ನಾಯಕಿಯನ್ನು ಸುಮ್ಮನಾಗಿಸಿದೆ ಮತ್ತು ಸಿಎಂ ಹುದ್ದೆಗೆ ಅಚ್ಚರಿಯ ಆಯ್ಕೆ ಮಾಡಿದೆ.
ಮೊದಲ ಬಾರಿಗೆ ಶಾಸಕನಾಗಿರುವ ವ್ಯಕ್ತಿಗೆ ಸಿಎಂ ಪಟ್ಟ ಕೊಟ್ಟಿರುವ ಲೆಕ್ಕದಲ್ಲಂತೂ ಇದು ನಿಜಕ್ಕೂ ಭಾರೀ ಅಚ್ಚರಿಯ ಆಯ್ಕೆಯೇ ಆಗಿದೆ.
ಹಾಗೆ ಬಿಜೆಪಿ ವರಿಷ್ಠರ ಕೃಪೆ ಗೆ ಪಾತ್ರವಾಗಿರುವುದು ಭಜನ್ ಲಾಲ್ ಶರ್ಮಾ ಎಂಬ ಬ್ರಾಹ್ಮಣ ಸಮುದಾಯದ ನಾಯಕ ಮತ್ತು ಅಮಿತ್ ಶಾ ಅವರ ಆಪ್ತ.
ಘಟಾನುಘಟಿಗಳನ್ನು ಬದಿಗೆ ಸರಿಸಿ, ಮೊದಲ ಬಾರಿಗೆ ಶಾಸಕರಾದವರಿಗೂ ಸಿಎಂ ಹುದ್ದೆಯಂಥ ಜವಾಬ್ದಾರಿ ನೀಡಬಲ್ಲ ಪಕ್ಷ ಬಿಜೆಪಿ ಎಂದು ಹೇಳಿಕೊಳ್ಳುವುದಕ್ಕೆ ಈ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಧಾರಾಳವಾಗಿಯೇ ಬಳಸಿಕೊಳ್ಳಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಛತ್ತೀಸ್ಗಢದಲ್ಲೂ ಅದು ಇಂಥದೇ ಅಚ್ಚರಿಯ ಆಯ್ಕೆಯನ್ನು ಮಾಡಿತ್ತು.
ಹಳಬರನ್ನು ಬದಲಿಸುವುದು, ಹೊಸ ನಾಯಕತ್ವ ಬೆಳೆಸುವುದು ಸ್ವಾಗತಾರ್ಹ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಅಂತ ಡಿವಿಜಿ ಯವರೇ ಹೇಳಿದ್ದಾರಲ್ವಾ. ಕಾಂಗ್ರೆಸ್ ಸಕಾಲಕ್ಕೆ ಅಂತಹ ಹೆಜ್ಜೆ ಇಡದೇ ಇರುವುದಕ್ಕೆ ಇವತ್ತು ಭಾರೀ ಬೆಲೆ ತೆತ್ತಿದೆ. ಅದಕ್ಕಾಗಿ ಬಿಜೆಪಿಗೆ, ಪ್ರಧಾನಿ ಮೋದಿ ಅವರನ್ನು ಅಭಿನಂದಿಸೋಣ.
ಆದರೆ ಇಲ್ಲೊಂದು ಪ್ರಮುಖ ಪ್ರಶ್ನೆಯಿದೆ. ಈ ಬದಲಾವಣೆಗಳು ಆಗುತ್ತಿರೋದು ಯಾವ ಕಾರಣಕ್ಕೆ ?. ಇದು ರಾಜ್ಯಗಳಲ್ಲಿ ಹೊಸ ನಾಯಕತ್ವ ರೂಪಿಸುವ ಪ್ರಯತ್ನವೇ ?. ಅಥವಾ ಪ್ರಭಾವೀ ಸ್ಥಳೀಯ ರಾಜಕೀಯ ನಾಯಕತ್ವವೇ ಇಲ್ಲದೆ ವರಿಷ್ಠರ ಆಜ್ಞಾನುಯಾಯಿ ವ್ಯವಸ್ಥೆ ರೂಪಿಸುವ ಕೆಲಸವೇ ?. ಎಲ್ಲವನ್ನೂ ದಿಲ್ಲಿಗೆ ಕೇಂದ್ರೀಕೃತಗೊಳಿಸುವ ಐಡಿಯಾವೆ ?. ಈ ಪ್ರಶ್ನೆಗಳನ್ನು ಚರ್ಚಿಸುವ ಮೊದಲು ರಾಜಸ್ಥಾನದ ಹೊಸ ಮುಖ್ಯಮಂತ್ರಿಯಾಗಿರುವ ಭಜನ್ ಲಾಲ್ ಶರ್ಮಾ ರಾಜಕೀಯ ಹಿನ್ನೆಲೆಯನ್ನು ಕೊಂಚ ಗಮನಿಸೋಣ.
ಭಜನ್ ಲಾಲ್ ಶರ್ಮಾ ರಾಜಕೀಯ ಬದುಕು ಶುರುವಾಗಿದ್ದು ಎಬಿವಿಪಿ ಮೂಲಕ. ಬಳಿಕ ಅವರು ಆರ್‌ಎಸ್‌ಎಸ್‌ನಲ್ಲೂ ಸಕ್ರಿಯರಾಗಿದ್ದರು
ನಾಲ್ಕು ಬಾರಿ ರಾಜಸ್ಥಾನ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಭದ್ರಕೋಟೆ ಎನ್ನಲಾಗುವ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಜನ್ ಲಾಲ್ ಶರ್ಮಾ, 48 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಬ್ರಾಹ್ಮಣ, ಜಾಟ್ ಹಾಗೂ ರಜಪೂತರೇ ರಾಜಸ್ಥಾನದಲ್ಲಿ ಬಹುಸಂಖ್ಯಾತರು. ಈ ಪೈಕಿ ಬ್ರಾಹ್ಮಣ ಸಮುದಾಯದ ನಾಯಕನಿಗೆ ಸಿಎಂ ಪಟ್ಟ ನೀಡಿದಂತಾಗಿದೆ.
ಸಿಎಂ ರೇಸ್ನಲ್ಲಿದ್ದ ರಜಪೂತ್ ಸಮುದಾಯದ ದಿಯಾ ಕುಮಾರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಅವರ ಜೊತೆ ದಲಿತ ಸಮುದಾಯದ ಪ್ರೇಮ್ ಚಂದ್ ಬೈರ್ವಾ ಅವರಿಗೂ ಉಪ ಮುಖ್ಯಮಂತ್ರಿ ಹುದ್ದೆ ಒಲಿದಿದೆ. ವಸುಂಧರಾ ರಾಜೆ, ಬಾಲಕನಾಥ್‌ರಂಥ ಘಟಾನುಘಟಿ ನಾಯಕರಿದ್ದರೂ, ಮೊದಲ ಸಲ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ಅವರಿಗೆ ಬಿಜೆಪಿ ಹೈಕಮಾಂಡ್ ಸಿಎಂ ಪಟ್ಟ ಕಟ್ಟಿದೆ.
ಅದಕ್ಕಿಂತ ಹೆಚ್ಚಾಗಿ, ಸಿಎಂ ಹುದ್ದೆ ರೇಸ್ನಲ್ಲಿದ್ದ ವಸುಂಧರಾ ರಾಜೇ ಅವರಿಂದಲೇ ಭಜನ್ ಲಾಲ್ ಶರ್ಮಾ ಹೆಸರು ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪವಾಗುವಂತೆ ಮಾಡುವ ಮೂಲಕ, ರಾಜೇ ಅವರು ಸದ್ಯಕ್ಕಂತೂ ತೊಡಕಾಗದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಸಿಎಂ ಆಯ್ಕೆ ಶಾಸಕಾಂಗ ಸಭೆಯಲ್ಲೇ ಪ್ರಜಾತಾಂತ್ರಿಕ ರೀತಿಯಲ್ಲೇ ಆಯಿತು ಎಂಬುದನ್ನೂ ತೋರಿಸಲಾಗಿದೆ. ವಿಡಿಯೋಗಳಲ್ಲಿ ವಸುಂಧರಾ ಅವರೇ ಹೊಸ ಸಿಎಂ ಹೆಸರು ಸೂಚಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಬಹಳ ಸುಂದರವಾಗಿ ಮೂಡಿ ಬಂದಿದೆ.
ಚುನಾವಣೆ ಗೆದ್ದ ಮೂರೂ ರಾಜ್ಯಗಳಲ್ಲೂ ಸಿಎಂ ಹುದ್ದೆಗೆ ಬಿಜೆಪಿ ಹೊಸಬರಿಗೆ ಮಣೆ ಹಾಕಿದೆ ಎಂಬುದು ವಿಶೇಷ. ಛತ್ತೀಸ್‌ಗಢದಲ್ಲಿ ಬಹುಸಂಖ್ಯಾತ ಬುಡಕಟ್ಟು ಸಮುದಾಯಕ್ಕೆ ಮಣೆ ಹಾಕಿದ್ದ ಬಿಜೆಪಿ, ವಿಷ್ಣುದೇವ್ ಸಾಯ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಮಧ್ಯಪ್ರದೇಶದಲ್ಲಿ ಕೂಡ ಪ್ರಬಲ ನಾಯಕರನ್ನೆಲ್ಲ ಬದಿಗೆ ಸರಿಸಿ, ಒಬಿಸಿ ಸಮುದಾಯದ ಮೋಹನ್ ಯಾದವ್ ಅವರಿಗೆ ಪಟ್ಟ ನೀಡಲಾಗಿದೆ.
ಈಗ ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಲಾಗಿದೆ.
ಇನ್ನು ಘಟಾನುಘಟಿ ನಾಯಕರನ್ನು ಬದಿಗೆ ತಳ್ಳುವ ವಿಚಾರ. ಇಂಥ ನಡೆಯ ಮೂಲಕ, ಬಿಜೆಪಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬಲ್ಲ ಪಕ್ಷವಾಗಿದೆ ಎಂಬ ಅಭಿಪ್ರಾಯವನ್ನು ಹೊರಗಡೆ ಬಿಂಬಿಸುತ್ತಲೇ, ತನ್ನ ನಿಜವಾದ ಉದ್ದೇಶವನ್ನೂ ಬಿಜೆಪಿಯ ದೆಹಲಿ ನಾಯಕತ್ವ ಸಾಧಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ಬಿಜೆಪಿಯ ಅಚ್ಚರಿಯ ಆಯ್ಕೆ ಎಂಬುದು ಒಂದೇ ಕಲ್ಲಿನಿಂದ ಎರಡಲ್ಲ, ಹಲವು ಹಕ್ಕಿಗಳನ್ನು ಹೊಡೆಯುವ ಜಾಣ ತಂತ್ರವಾಗಿದೆ.
ಬಿಜೆಪಿ ವರಿಷ್ಠರ ಪಾಲಿಗೆ ಪರ್ಯಾಯ ನಾಯಕತ್ವ ಎಂಬುದು ಒಂದೆಡೆ ಪ್ರಚಾರಕ್ಕೆ ಸರಕಾಗಿ ಸಿಗುವ ಹೆಗ್ಗಳಿಕೆ.
ಅದರ ಜೊತೆಗೇ, ತಾವು ಹೇಳಿದಂತೆ ಕೇಳಿಕೊಂಡಿರುವ ವ್ಯವಸ್ಥೆಯ ಮೂಲಕ ರಿಮೋಟ್ ಆಳ್ವಿಕೆ ನಡೆಸುವ ಉದ್ದೇಶವನ್ನೂ ಸಾಧಿಸಿಕೊಂಡಂತಾಗುತ್ತದೆ.
ಮೋದಿ, ಶಾ ಜೋಡಿ ತಮಗೆ ಪರ್ಯಾಯವಾಗಬಲ್ಲ ಯಾವುದೇ ನಾಯಕರನ್ನು ಸರಿಯಾದ ಸಮಯ ನೋಡಿಕೊಂಡು ಎಲ್ಲಿ ಹೊಸಕಬೇಕೊ ಅಲ್ಲಿಯೇ ಹೊಸಕಿಬಿಡುತ್ತದೆ ಎಂಬುದಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿನ ಉದಾಹರಣೆ. ಬಿಜೆಪಿಯ ದೆಹಲಿ ನಾಯಕತ್ವ ಹೇಗೆ ಶಿವರಾಜ್ ಸಿಂಗ್ ಚೌಹಾಣ್ , ವಸುಂಧರಾ ರಾಜೇ ಅಂಥ ಹಿರಿಯರನ್ನು, ಮಾಜಿ ಸಿಎಂಗಳನ್ನು ಪಕ್ಷದ ಶಿಸ್ತಿನ ಕಾರ್ಯಕರ್ತರನ್ನಾಗಿಸುತ್ತದೆ ಎಂಬುದಕ್ಕೆ ಈ ವಿದ್ಯಮಾನ ನಿದರ್ಶನವಾಗಿದೆ.
ಎರಡನೇ ಹಂತದ ನಾಯಕರನ್ನು ತಯಾರು ಮಾಡಬೇಕಿರುವುದು ಸರಿ. ಆದರೆ ಬಿಜೆಪಿಯಲ್ಲಿ ಮಾತ್ರ ಅದು ನಿಜವಾಗಿಯೂ ಅರ್ಹ ನಾಯಕರನ್ನು, ತಮಗೆ ಪರ್ಯಾಯವಾಗಬಲ್ಲವರನ್ನು ಹಣಿಯುವ ತಂತ್ರವೇ ಆಗಿದೆ ಎಂಬುದು ವಿಪರ್ಯಾಸ. ಗುಜರಾತ್ ನ ಭೂಪೇಂದ್ರ ಪಟೇಲ್, ಉತ್ತರಾಖಂಡ್ ನ ಪುಷ್ಕರ್ ಸಿಂಗ್ ಧಾಮಿ, ಅಸ್ಸಾಂ ನ ಹಿಮಾಂತ್ ಬಿಸ್ವ ಶರ್ಮ, ಮಹಾರಾಷ್ಟ್ರದ ಏಕನಾಥ್ ಶಿಂಧೆ, ಹರ್ಯಾಣದ ಮನೋಹರ್ ಲಾಲ್ ಖಟ್ಟರ್, ಗೋವಾದ ಪ್ರಮೋದ್ ಸಾವಂತ್ ಎಲ್ಲರೂ ಮೋದಿ ಶಾ ಅವರ ಇಶಾರೆಯಂತೆ ನಡೆಯುವವರೇ.
ಉತ್ತರ ಪ್ರದೇಶದ ಆದಿತ್ಯನಾಥ್ ಮಾತ್ರ ಡಿಫರೆಂಟ್. ಅವರನ್ನೂ ಈ ಹಿಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಬದಿಗೆ ಸರಿಸುವ ವ್ಯವಸ್ಥಿತ ಪ್ರಯತ್ನ ನಡೆದಿತ್ತು. ಆದರೆ ಅದು ವಿಫಲವಾಯಿತು. ಇದು ರಾಜ್ಯಗಳಲ್ಲಿ ಮಾತ್ರವಲ್ಲ ದಿಲ್ಲಿಯಲ್ಲೂ ಹೀಗೇ ನಡೆಯುತ್ತಿದೆ.
ಈಗ ಎಲ್ಲವೂ ಮೋದಿ ಕೇಂದ್ರೀಕೃತ. ಬಿಜೆಪಿಯಲ್ಲಂತೂ ಮೋದಿ, ಅಮಿತ್ ಶಾ ಅವರನ್ನು ಎದುರಿಸುವ ನಾಯಕರೇ ಇಲ್ಲ. ಮೊದಲು ಬಿಜೆಪಿಯೊಳಗೆ ವಾಜಪೇಯಿ, ಅಡ್ವಾಣಿ ಕಾಲದ ಹಿರಿಯರನ್ನು ಪಕ್ಕಕ್ಕೆ ಸರಿಸಲಾಯಿತು. ರಾಜನಾಥ್ ಸಿಂಗ್ ರಂತಹ ಘಟಾನುಘಟಿ ನಾಯಕ ಈಗ ಮೋದಿ ಶಾ ಹೇಳಿದ್ದನ್ನು ಜಾರಿ ಮಾಡಿ ಬರುವ ವೀಕ್ಷಕರಾಗಿದ್ದಾರೆ.
ಬಿಜೆಪಿ ಮಾತ್ರವಲ್ಲ ಸಂಘ ಪರಿವಾರವೂ ಈಗ ಮೋದಿ ಕೇಂದ್ರೀಕೃತ. ಅತ್ತ ನೋಡಿದರೆ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ವನವಾಸಿ ಕಲ್ಯಾಣ್ ಸಂಘ ಹೀಗೆ ಎಲ್ಲ ಸಂಘಟನೆಗಳಲ್ಲೂ ಈ ಸರಕಾರದ ನೀತಿಯನ್ನು ವಿರೋಧಿಸುವವರನ್ನು, ಟೀಕಿಸುವವರನ್ನು ಹಂತ ಹಂತವಾಗಿ ನಿವಾರಿಸುತ್ತಲೇ ಬರಲಾಗಿದೆ. ಮೋದಿ, ಶಾ ಹೇಳಿದ್ದಕ್ಕೆ ಮೊಹರು ಒತ್ತುವವರನ್ನೇ ನೇಮಿಸುತ್ತಾ ಬೆಳೆಸುತ್ತಾ ಬರಲಾಗಿದೆ. ಆರೆಸ್ಸೆಸ್ ನಲ್ಲೂ ಅಷ್ಟೇ. ಅಲ್ಲೀಗ ಕಾರ್ಯಕರ್ತರಿಗೆ ಬೇಕಾದಷ್ಟು ಸೌಲಭ್ಯ, ಸಂಪನ್ಮೂಲ ಜೊತೆಗೆ ರಾಜಕೀಯಕ್ಕೂ ಬರುವ ಅವಕಾಶ ಎಲ್ಲವೂ ಧಾರಾಳವಾಗಿ ಸಿಗುವಂತೆ ಮಾಡಲಾಗಿದೆ. ಆದರೆ ಮೋದಿಯವರ ಇಶಾರೆ ತಪ್ಪಬಾರದು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
ಆರೆಸ್ಸೆಸ್ ಗೂ ಈಗ ಇದೆಲ್ಲ ಅನಿವಾರ್ಯವಾಗಿದೆ. ಅದರ ಅಜೆಂಡಾಗಳನ್ನು ಹೇಗೂ ಮೋದಿ ಸರಕಾರ ಒಂದೊಂದಾಗಿ ಜಾರಿ ಮಾಡುತ್ತಿದೆ.
ರಾಮ ಮಂದಿರ ಆಯ್ತು, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಯ್ತು, ಅದಕ್ಕೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ಕೊಟ್ಟಾಯ್ತು...
ಈಗ ಸಮಾನ ನಾಗರಿಕ ಸಂಹಿತೆ ಮಾತು ಕೇಳಿ ಬರುತ್ತಿದೆ. ಹಾಗಾಗಿ ಆಕ್ಷೇಪಿಸುವ ಮಾತೆಲ್ಲಿ ?.
ಸರಕಾರ ಇದ್ದರೆ, ಆಡಳಿತ ನಮ್ಮ ಕೈಯಲ್ಲಿ ಇದ್ದರೆ ತಾನೇ ಇದೆಲ್ಲವನ್ನೂ ಮಾಡಲು ಸಾಧ್ಯ ?. ಅದನ್ನು ಮೋದಿಯವರು ಮಾಡ್ತಾ ಇದ್ದಾರೆ.
ಹಾಗಾಗಿ ಅವರ ಜೊತೆ ಸಹಕರಿಸಿ ಮುಂದುವರಿಯುವುದೇ ಸೂಕ್ತ ಎಂದು ಆರೆಸ್ಸೆಸ್ ಕೂಡ ಭಾವಿಸಿದಂತಿದೆ ಎನ್ನುತ್ತಾರೆ ವಿಶ್ಲೇಷಕರು.
ಮೋದಿ ಸಂಪುಟದಲ್ಲೂ ಒಮ್ಮೆ ನೋಡಿ. ಬಿಜೆಪಿಯ 303 ಲೋಕಸಭಾ ಸದಸ್ಯರು ಗೆದ್ದಿದ್ದಾರೆ. ಆದರೆ ಮೋದಿ ಸಂಪುಟದಲ್ಲಿ ಹೆಚ್ಚಿನ ಪ್ರಭಾವೀ ಖಾತೆಗಳು ಇರುವುದು ಜನರಿಂದ ನೇರವಾಗಿ ಆಯ್ಕೆಯಾಗದ ರಾಜ್ಯಸಭಾ ಸದಸ್ಯರ ಬಳಿ. ವಿದೇಶಾಂಗ ಖಾತೆ, ವಿತ್ತ ಖಾತೆ, ಆರೋಗ್ಯ ಖಾತೆ, ರೈಲ್ವೆ ಖಾತೆ, ಶಿಕ್ಷಣ, ವಾಣಿಜ್ಯ ಖಾತೆ, ಪೆಟ್ರೋಲಿಯಂ ಖಾತೆ ಗಳನ್ನು ವಹಿಸಿಕೊಂಡಿರುವ ಜೈಶಂಕರ್, ನಿರ್ಮಲಾ ಸೀತಾರಾಮನ್, ಮನ್ಸೂಖ್ ಮಾಂಡವಿಯ , ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಹರದೀಪ್ ಪುರಿ - ಇವರೆಲ್ಲರೂ ಭಾರೀ ಪ್ರತಿಭಾವಂತರು, ಆದರೆ ಇವರ್ಯಾರು ಗಟ್ಟಿ ರಾಜಕೀಯ ನೆಲೆ ಇರುವವರೇ ಅಲ್ಲ. ಇವರಿಗೆ ಸ್ವಂತ ರಾಜಕೀಯ ವರ್ಚಸ್ಸು, ಪ್ರಭಾವ ಇಲ್ಲ, ಯಾವ ರಾಜ್ಯಗಳಲ್ಲೂ ಇವರಿಗೆ ರಾಜಕೀಯ ನೆಲೆ ಇಲ್ಲ. ಆದರೆ ಮೋದಿ ಸರಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರುಗಳು ಇವರು.
ಅಂದರೆ ರಾಜಕೀಯವಾಗಿ ಅತ್ಯಂತ ದುರ್ಬಲವಾಗಿರುವವರಿಗೆ ಅತ್ಯಂತ ದೊಡ್ಡ ಹುದ್ದೆ ನೀಡಿ ಅವರನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿಡುವ ಒಂದು ವ್ಯವಸ್ಥೆ ಈಗ ದಿಲ್ಲಿಯಲ್ಲಿ ಜಾರಿಯಲ್ಲಿದೆ. ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾದ ಬೆನ್ನಿಗೇ ದೇಶದ ಮಾಜಿ ಮುಖ್ಯ ನ್ಯಾಯಾಧೀಶರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಿ ಸುಪ್ರೀಂ ಕೋರ್ಟ್ ಕೂಡ ಸರಕಾರಕ್ಕಿಂತ ಮೇಲಿಲ್ಲ ಎಂದು ತೋರಿಸಲಾಗಿದೆ.
ಇನ್ನು ಸಿಬಿಐ, ಈಡಿ, ಐಟಿ ಸಹಿತ ಎಲ್ಲ ಪ್ರಮುಖ ಕೇಂದ್ರೀಯ ಸಂಸ್ಥೆಗಳ ಮೇಲೆ ಪ್ರಧಾನಿ ಕಚೇರಿಯ ಪ್ರಭಾವ ಎಷ್ಟಿದೆ ಎಂಬುದು ಈಗ ಜಗಜ್ಜಾಹೀರು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ರಾಜಕೀಯ ಹಾದಿ ಬಹುಶಃ ಮುಗಿದಂತಿದೆ. ವಸುಂಧರಾ ರಾಜೇ ಅವರದ್ದೂ ರಾಜಸ್ಥಾನ ರಾಜಕೀಯ ಮುಗಿದ ಹಾಗೆಯೇ. ಅವರೀಗ ಮಗನನ್ನು ಮುಂದೆ ತರಲು ಪ್ರಯತ್ನಿಸುತ್ತಿದ್ದಾರೆ.
ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ರನ್ನು, ಮಧ್ಯಪ್ರದೇಶದಲ್ಲಿ ನರೇಂದ್ರ ಸಿಂಗ್ ರನ್ನು ಸ್ಪೀಕರ್ ಮಾಡಿ ಮೇಲೆ ಕೂರಿಸಲಾಗಿದೆ.
ಒಂದು ವ್ಯಂಗ್ಯವೆಂದರೆ, ಕುಟುಂಬ ರಾಜಕಾರಣವನ್ನು ವಿರೋಧಿಸುವುದಾಗಿ ಹೇಳುತ್ತಲೇ ಮೋದಿ ಶಾ ಜೋಡಿ, ಕುಟುಂಬ ರಾಜಕಾರಣದ ದೌರ್ಬಲ್ಯಗಳನ್ನೂ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ ಜಾಣ್ಮೆಯಿಂದಲೇ ಬಳಸಿಕೊಳ್ಳುತ್ತದೆ ಎಂಬುದು. ಗೆದ್ದ ಮೂರೂ ರಾಜ್ಯಗಳಲ್ಲಿನ ನಾಯಕತ್ವಕ್ಕೆ ಬಿಜೆಪಿಯ ಅಚ್ಚರಿಯ ಆಯ್ಕೆಗಳ ಹಿಂದೆ ಇರುವುದು ಪರ್ಯಾಯ ನಾಯಕತ್ವವನ್ನು ಹಣಿಯುವ ಮತ್ತು ಹೊಸಕಿ ಹಾಕುವ ತಂತ್ರ ಹಾಗೂ ಬಲೆಗೆ ಬೀಳಿಸುವ ತಂತ್ರವೇ ಎಂಬುದು ಮಾತ್ರ ಕಟು ಸತ್ಯ.