ಪ್ರಮುಖ ವಿಪಕ್ಷ ಕಾಂಗ್ರೆಸ್ ಗಿಂತ ಬಿಜೆಪಿ ಆಸ್ತಿ ಏಳೂವರೆ ಪಟ್ಟು ಹೆಚ್ಚು !

Update: 2023-09-13 17:10 GMT
Editor : Ismail | Byline : ಆರ್. ಜೀವಿ

Photo: PTI 

ದೇಶದಲ್ಲಿ ನಿಜವಾಗಿಯೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುತ್ತಿದೆಯೆ?. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಕಾಡುವುದಕ್ಕೆ ಹಲವು ಕಾರಣಗಳಿವೆ. ಈ ಬಗ್ಗೆ ಹಲವಾರು ಅಧ್ಯಯನಗಳು, ತನಿಖಾ ವರದಿಗಳು ಪ್ರಕಟವಾಗುತ್ತಲೇ ಇವೆ. ಮುಖ್ಯವಾಗಿ, ಕಳೆದ 9 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಆರ್ಥಿಕವಾಗಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಗಿಂತ ಹಲವು ಪಟ್ಟು ಪ್ರಬಲವಾಗಿದೆ ಮತ್ತು ಅದಕ್ಕೆ ಹರಿದು ಬರುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಲೇ ಇದೆ. ದೇಶದ ಚುನಾವಣೆಗಳನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ ಅತ್ಯಂತ ದುರ್ಬಲವಾಗಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಹಾಗು ಮತ ಎಣಿಕೆಯ ಬಳಿಕ ಆಯೋಗದ ಹಲವು ನಡೆಗಳು ಗಂಭೀರ ಅನುಮಾನ ಮೂಡಿಸಿವೆ.

ಚುನಾವಣಾ ಆಯೋಗದಂತೆಯೇ ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೂ ಸರ್ಕಾರ ತನ್ನ ಬಿಗಿ ಹಿಡಿತದಲ್ಲಿ ಇರಿಸಿಕೊಂಡಿದೆ.

ದೇಶದ ಬಹುಪಾಲು ಮಾಧ್ಯಮಗಳೂ ಸರ್ಕಾರದ ತಾಳಕ್ಕೆ ಕುಣಿಯುವಂಥವೇ ಆಗಿವೆ.

ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತೊಂದು ರೀತಿಯಲ್ಲಿ ಈ ದೇಶದಲ್ಲಿ ತಲ್ಲಣ ಸೃಷ್ಟಿಸಿವೆ.

ಮೋದಿ ಸರ್ಕಾರದ ನಿರ್ಧಾರಗಳಂತೂ ತೀರಾ ಏಕಪಕ್ಷೀಯವಾಗಿರುವಂತೆ ಕಾಣುತ್ತಿ​ವೆ. ಮೋದಿ ಸರ್ಕಾರದ ಕಾರ್ಯವೈಖರಿ ಹೇಗಿದೆ ಅಂದ್ರೆ ಅಲ್ಲಿ ಯಾವಾಗ ಏನಾಗಬಹುದು ಎಂದು ಊಹಿಸುವುದೇ ಅಸಾಧ್ಯ ಎಂಬಂತಾಗಿದೆ. ಬಾಲಿವುಡ್ ಚಿತ್ರದಂತೆ ಅಲ್ಲಿ ಜನರಿಗೆ ಯಾವಾಗ ಏನು ಬೇಕಾದರೂ ಸರ್ಪ್ರೈಸ್ ನಡೆ ಇರಬಹುದು.

ಕಳೆದ ವಾರ, ದಿಢೀರನೆ ಸಂಸತ್ತಿನ ವಿಶೇಷ ಅಧಿವೇಶನದ ಬಗ್ಗೆ ಅದು ಘೋಷಿಸಿತು. ಈ ವಿಶೇಷಾಧಿವೇಶನದ ಅಜೆಂಡಾ ಏನು ಎಂಬುದು ಇನ್ನೂ ದೇಶದ ಜನರಿಗೆ ಅಧಿಕೃತವಾಗಿ ಗೊತ್ತಿಲ್ಲ. ಅಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವದ ಮಂಡನೆಯಾಗಬಹುದು ಎಂಬ ಊಹಾಪೋಹ ಎದ್ದಿವೆ. ಅಧಿವೇಶನ ಘೋಷಣೆ ಬೆನ್ನಿಗೇ , ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ವಿಚಾರದಲ್ಲಿ ಪರಿಶೀಲನೆಗೆ ಅದು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿರುವುದು ಇಂಥ ಸಾಧ್ಯತೆಗೆ ಪುಷ್ಠಿ ನೀಡುತ್ತಿದೆ.

ಒಂದು ದೇಶ ಒಂದು ಚುನಾವಣೆ ಸಾಧ್ಯತೆ ಬಗ್ಗೆ ದೇಶ ಚರ್ಚಿಸುತ್ತಿರುವಾಗಲೇ ಇನ್ನೊಂದು ಬಹು ದೊಡ್ಡ ಸರ್ಪ್ರೈಸ್ ನೀಡಿತು ಮೋದಿ ಸರಕಾರ.

ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಬದಲಿಸಲು ಮೋದಿ ಸರ್ಕಾರ ಮುಂದಾಗಿದೆಯೆ ಎಂಬ ಅನುಮಾನವೂ ಈಗ ಎದ್ದಿದೆ. ಜಿ20 ಔತಣಕೂಟದ ಆಹ್ವಾನಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎನ್ನುವ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬಳಸಿದ್ದನ್ನು ನೋಡಿದೆವು. ಈಗ ಜಿ 20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿಯೇ ದೇಶದ ಹೆಸರನ್ನು ಭಾರತ್ ಎಂದು​ ನಮೂದಿಸಿಕೊಂಡಿದ್ದಾರೆ. ಹೀಗೆ ತಮಗಿಷ್ಟ ಬಂದಿದ್ದನ್ನು ಅದರ ಪರಿಣಾಮಗಳು, ಮಹತ್ವ ಯಾವುದನ್ನೂ ಯೋಚಿಸದೆ ಬೇಕಾದ ಹಾಗೆ ಮಾಡುತ್ತಾ ಹೋಗುವ ಒಂದು ಪದ್ದತಿಯೇ ಬೆಳೆದು ಬಿಟ್ಟಿದೆ.

ಆತಂಕಕಾರಿ ಸಂಗತಿಯೆಂದರೆ, ದೇಶದ ವಿಚಾರದಲ್ಲಿನ ಇಂಥ ಮಹತ್ವದ ವಿದ್ಯಮಾನಗಳೆಲ್ಲವೂ ಪ್ರತಿಪಕ್ಷಗಳ ಜೊತೆ ಕನಿಷ್ಠ ಸೌಜನ್ಯದ ಸಮಾಲೋಚನೆಯೂ ಇಲ್ಲದೆ ನಡೆಯುತ್ತಿವೆ ಎಂಬುದು. ತಾನು ಏನೇ ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯಲ್ಲಿ ಸರ್ಕಾರ ನಡೆಯುತ್ತಿರುವ ರೀತಿಗೆ ಕಾರಣವಾಗಿರುವುದು ಅದಕ್ಕಿರುವ ಭರ್ಜರಿ ಬಹುಮತ.

ಇದನ್ನು ವಿಪರ್ಯಾಸವೆನ್ನಬೇಕೆ ?

ತನಗಿರುವ ಬಹುಮತವನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುವ ರೀತಿ ಇದಲ್ಲವೇ ?. ನಮಗೀಗಾಗಲೇ ಗೊತ್ತಿರುವಂತೆ, ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು, ತನಿಖಾ ಏಜನ್ಸಿಗಳನ್ನು ತನ್ನ ಕಾರ್ಯ ಸಾಧಿಸಿಕೊಳ್ಳಲು, ತನ್ನ ವಿರೋಧಿಗಳನ್ನು ಹಣಿಯಲು ಸರ್ಕಾರ ಬಳಸಿಕೊಳ್ಳುತ್ತಿದೆ. ಮಾಧ್ಯಮಗಳು ಸಂಪೂರ್ಣವಾಗಿ ಅದರ ನಿಯಂತ್ರಣದಲ್ಲಿವೆ. ಇಲ್ಲದವುಗಳ ವಿರುದ್ಧ ತನ್ನ ಅಧಿಕಾರವನ್ನೇ ಅಸ್ತ್ರವಾಗಿ ಅದು ಪ್ರಯೋಗಿಸುತ್ತಿದೆ. ದುರ್ಬಲರು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಅವ್ಯಾಹತವಾಗಿವೆ.

ಇಷ್ಟೆಲ್ಲದರ ಹೊರತಾಗಿಯೂ, ದೇಶದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತಿವೆ ಎಂದಾದರೆ, ಅದಷ್ಟೇ ಮುಖ್ಯವಾಗುತ್ತದೆ. ಅಷ್ಟಾದರೆ ಸಾಕು ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಹಾಗಾಗುತ್ತಿದೆಯೆ? ಅಂಥ ಸ್ಥಿತಿ ನಿಜವಾಗಿಯೂ ಇಂದಿನ ಸಂದರ್ಭದಲ್ಲಿ ದೇಶದಲ್ಲಿದೆಯೆ? ಭಾರತದಲ್ಲಿ ಚುನಾವಣೆಗಳು ನಿಜವಾಗಿಯೂ ಮುಕ್ತ ಮತ್ತು ನ್ಯಾಯೋಚಿತವಾಗಿವೆಯೆ?

ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಮೊದಲನೆಯದು, ಆಡಳಿತಾರೂಢ ಪಕ್ಷದ ಅಸಾಧಾರಣ ಆರ್ಥಿಕ ಬಲ.

ಎರಡನೆಯದು, ಚುನಾವಣಾ ಆಯೋಗದ ಅವಸ್ಥೆ. ಈಚೆಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿರುವ ಎಂಟು ರಾಷ್ಟ್ರೀಯ ಪಕ್ಷಗಳ ಆರ್ಥಿಕ ಬಲದ ಡೇಟಾ ಪ್ರಕಾರ, ಆಡಳಿತಾರೂಢ ಬಿಜೆಪಿ 2021 - 22 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ ಕಾಂಗ್ರೆಸ್‌ಗಿಂತ ಏಳೂವರೆ ಪಟ್ಟು ಹೆಚ್ಚಾಗಿದೆ. ಒಂದೆರಡಲ್ಲ, ಏಳೂವರೆ ಪಟ್ಟು ಹೆಚ್ಚು.

ಬಿಜೆಪಿ ಘೋಷಿಸಿರುವ ಆಸ್ತಿ 6,046.81 ಕೋಟಿ ರೂಪಾಯಿ ಆಗಿದ್ದರೆ ಕಾಂಗ್ರೆಸ್ ನದ್ದು ಕೇವಲ 805.68 ಕೋಟಿ ರೂಪಾಯಿ. ಈ ವ್ಯತ್ಯಾಸವನ್ನೊಮ್ಮೆ ಗಮನಿಸಿ. ಎಲ್ಲಿಯ 800 ಕೋಟಿ ಎಲ್ಲಿಯ 6000 ಕೋಟಿ ? . ಇದು ಘೋಷಿತ ಆಸ್ತಿಯ ಮೊತ್ತ ಮಾತ್ರ. ಬಿಜೆಪಿಗಿರುವ ಅಧಿಕಾರ ಹಾಗು ಪ್ರಭಾವದಿಂದ ಅದಕ್ಕೆ ಇನ್ನೆಷ್ಟು ಆರ್ಥಿಕ ಅಥವಾ ಇನ್ನಿತರ ಶಕ್ತಿ ಸಿಗುತ್ತದೆ ಎಂಬುದನ್ನು ಯಾರೂ ಸುಲಭವಾಗಿ ಯೋಚಿಸಬಹುದು.

ಅಧಿಕಾರದಲ್ಲಿರುವ ಪಕ್ಷ ವಿರೋಧ ಪಕ್ಷಕ್ಕಿಂತ ಶ್ರೀಮಂತವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲವಾದರೂ, ಈ ಅಂತರ ಮಾತ್ರ ​ತೀರಾ ದೊಡ್ಡದಾಗಿದೆ. 2004 ಮತ್ತು 2014ರ ನಡುವೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆ ಅವಧಿಯಲ್ಲಿ ಕಾಂಗ್ರೆಸ್ ಅಪರೂಪಕ್ಕೊಮ್ಮೆ ಬಿಜೆಪಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತವಾಗಿತ್ತು ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ.

ಆದರೆ ಬಿಜೆಪಿಯ ಈಗಿನ ಆರ್ಥಿಕ ಪ್ರಾಬಲ್ಯ ಮಾತ್ರ ಕಣ್ಣಿಗೆ ರಾಚುವಂತಿದೆ. ಇದಕ್ಕೂ, ಬಿಜೆಪಿಗಿರುವ ಭಾರೀ ಬಹುಮತ ಹಾಗು ಅಧಿಕಾರವೇ ಕಾರಣವಾಗಿರಲೂ ಬಹುದು ಎನ್ನಲಾಗುತ್ತದೆ. 1989ರಿಂದ 2014ರ ಅವಧಿ ಹೆಚ್ಚಾಗಿ ಸಮ್ಮಿಶ್ರ ಸರ್ಕಾರಗಳ ಯುಗವಾಗಿತ್ತು.

ಆದರೆ, 2014ರ ನಂತರ ಅತ್ಯಂತ ಪ್ರಬಲ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಅದಕ್ಕಿರುವ ಬಹುಮತದ ಬಲವೇ ಅದರ ಶ್ರೀಮಂತಿಕೆಯನ್ನೂ ಹೆಚ್ಚಿಸಿದೆಯೆ? ಈ ಕಾರಣದಿಂದಾಗಿಯೇ ಅದಕ್ಕೆ ದೊಡ್ಡ ಮಟ್ಟದಲ್ಲಿ ಚುನಾವಣಾ ನಿಧಿ ಹರಿದುಬಂದಿದೆಯೆ?. ಹಾಗಾದರೆ, ಆಡಳಿತ ಪಕ್ಷದ ಹಣಬಲ ಪ್ರಮುಖ ಪ್ರತಿಪಕ್ಷಕ್ಕಿಂತ ಏಳೂವರೆ ಪಟ್ಟು ಹೆಚ್ಚು ಇರುವ ದೇಶದಲ್ಲಿ ನಡೆವ ಚುನಾವಣೆಗಳು ಇನ್ನೂ ನ್ಯಾಯಸಮ್ಮತವಾಗಿಯೇ ಇವೆಯೆ? ಅಥವಾ ಹಾಗಿರುವುದು ಸಾಧ್ಯವೆ?.

ಇನ್ನೊಂದು ವಿಚಾರವೆಂದರೆ, ಇದು ಕೇವಲ ಚುನಾವಣಾ ಹಣಕಾಸಿನ ಅತಿ ದೊಡ್ಡ ವ್ಯತ್ಯಾಸದ ವಿಷಯ ಮಾತ್ರವಾಗಿ ಉಳಿದಿಲ್ಲ ಎಂಬುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕಾದ ಚುನಾವಣಾ ಆಯೋಗ ಈ ದೇಶದಲ್ಲಿ ಅಂಥ ಜವಾಬ್ದಾರಿ ನಿರ್ವಹಿಸುವುದಕ್ಕೆ ಎಷ್ಟರ ಮಟ್ಟಿಗೆ ಸ್ವತಂತ್ರವಾಗಿದೆ ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತಿದೆ.

ಚುನಾವಣಾ ಆಯೋಗದ ಸ್ವಾಯತ್ತತೆ ಕಳೆದೊಂದು ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಕುಸಿದಿದೆ. ಅದು ಕೇಂದ್ರ ಸರ್ಕಾರ ಹೇಳಿದಂತೆ ಕೇಳುವ ಹೌದಪ್ಪ ಆಗಿದೆ ಎಂಬುದು ರಹಸ್ಯವಾಗಿಲ್ಲ.​ 2019 ರ ಲೋಕಸಭಾ ಚುನಾವಣೆಯಲ್ಲಂತೂ ಚುನಾವಣಾ ಆಯೋಗ ಕೇಂದ್ರ ಸರಕಾರದ ಅಧೀನ ಸಂಸ್ಥೆಯಂತೆಯೇ ಕಾರ್ಯ ನಿರ್ವಹಿಸಿತು ಎಂಬ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಬಿಜೆಪಿ ನಾಯಕರ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚಕಾರವೆತ್ತದ ಅಥವಾ ಹೆಸರಿಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಆಯೋಗ​, ವಿಪಕ್ಷ ನಾಯಕರ ಪ್ರತಿಯೊಂದು ನಡೆಯ ಮೇಲೆ ಹದ್ದಿನ ಕಣ್ಣಿಟ್ಟು ಕ್ರಮ ತೆಗೆದುಕೊಳ್ಳುತ್ತಿತ್ತು ಎಂಬುದು ಗುಟ್ಟೇನಲ್ಲ. ಕೇರಳದಲ್ಲಿ ರಾಜ್ಯಸಭಾ ಚುನಾವಣೆಯನ್ನು ಘೋಷಿಸಲು ವಿಳಂಬ ಮಾಡಿದ್ದು, ಜನರಿಗೆ ಉಚಿತ ಕೊಡುಗೆಗಳ ಕುರಿತ ಪ್ರಧಾನಿ ಹೇಳಿಕೆ ಬೆನ್ನಿಗೇ ಅದಕ್ಕೆ ಪೂರಕ ಹೇಳಿಕೆ ಕೊಟ್ಟಿದ್ದು ಇಂತಹ ಹತ್ತು ಹಲವು ಉದಾಹರಣೆಗಳಿವೆ.

2019ರ ಚುನಾವಣೆಯಲ್ಲಿ, ಇವಿಎಂ ಮತ ಎಣಿಕೆ ಪೂರ್ತಿಗೊಳಿಸಿ ಫಲಿತಾಂಶ ಪ್ರಕಟಿಸುವ ಮೊದಲು ಒಂದೇ ಒಂದು ವಿವಿಪ್ಯಾಟ್ ಸ್ಲಿಪ್ ಅನ್ನು ಸಹ ಎಣಿಸಲಿಲ್ಲ. ಮತ್ತು ತಾಳೆ ಮಾಡಲಿಲ್ಲ ಎಂಬ ಆರೋಪಗಳಿವೆ. ಇದು ಮತದಾನ ಮತ್ತು ಎಣಿಕೆ ತಿರುಚುವಿಕೆಯ ಸಾಧ್ಯತೆಗೆ ಕಾರಣವಾಯಿತು ಎನ್ನಲಾಗುತ್ತದೆ. ಬಹಳಷ್ಟು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕೂ ಇವಿಎಂನಲ್ಲಿ ಎಣಿಕೆಯಾದ ಮತಕ್ಕೂ ತಾಳೆ ಆಗದೇ ಇದ್ದ ಬಗ್ಗೆ ಆಗ ದಿ ಕ್ವಿಂಟ್ ವರದಿ ಮಾಡಿತ್ತು. ಅದಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿತ್ತು. ಇದು ಕೊನೆಗೆ ಸುಪ್ರೀಂ ಕೋರ್ಟ್ ಗೂ ತಲುಪಿತ್ತು.

ಚುನಾವಣೆಗೆ ಬಳಸಿದ ವಿವಿಪ್ಯಾಟ್ ಸ್ಲಿಪ್ಗಳನ್ನು ಒಂದು ವರ್ಷ ಇಟ್ಟುಕೊಳ್ಳಬೇಕು. ಆ ಬಳಿಕವೇ ಅವುಗಳನ್ನು ನಾಶ ಮಾಡಬೇಕು ಎಂಬ ನಿಯಮವಿದೆ. ಹಾಗಿದ್ದೂ, 2019ರ ಲೋಕಸಭಾ ಚುನಾವಣೆ ಮುಗಿದ ನಾಲ್ಕೇ ತಿಂಗಳೊಳಗೆ ಚುನಾವಣಾ ಆಯೋಗ ಅಲ್ಲಿ ಬಳಸಿದ ವಿವಿಪ್ಯಾಟ್ ಸ್ಲಿಪ್ಗಳನ್ನು ನಾಶ ಮಾಡಿದ್ದನ್ನೂ ದಿ ಕ್ವಿಂಟ್ ಬಯಲಿಗೆಳೆದಿತ್ತು. ಎಲ್ಲ ಪಾರದರ್ಶಕವಾಗಿ ನಡೆದಿದ್ದರೆ ಅಷ್ಟು ತುರ್ತಿನಲ್ಲಿ ವಿವಿಪ್ಯಾಟ್ ಸ್ಲಿಪ್ಗಳನ್ನು ಏಕೆ ನಾಶ ಮಾಡಬೇಕಿತ್ತು ಎಂಬ ಪ್ರಶ್ನೆ ಎದ್ದಿತ್ತು.​ ಚುನಾವಣಾ ಅಕ್ರಮಗಳು ದೇಶದಲ್ಲಿ ವ್ಯಾಪಕವಾಗಿಯೇ ನಡೆಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವೆನ್ನುವಂತಾಗಿದೆ.

ಉತ್ತರಪ್ರದೇಶದ ಘೋಸಿಯಲ್ಲಿ ಮೊನ್ನೆ ನಡೆದ ವಿಧಾನಸಭಾ ಉಪಚುನಾವಣೆ ವೇಳೆಯಲ್ಲಿ ಅನೇಕ ಮುಸ್ಲಿಂ ಮತದಾರರು ಸ್ವತಂತ್ರವಾಗಿ ಮತ ಚಲಾಯಿಸುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ವಿಚಾರವಾಗಿ ಅದು ಆಯೋಗಕ್ಕೆ ದೂರನ್ನೂ ಸಲ್ಲಿಸಿದೆ.

ಬೂತ್ ನಂಬರ್ 137 ರಲ್ಲಿ ಚುನಾವಣಾ ಅಧಿಕಾರಿ ಮುಸ್ಲಿಮರಿಗೆ ಮತ ಚಲಾಯಿಸಲು ಬಿಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಅರವಿಂದ್ ಕುಮಾರ್ ಸಿಂಗ್ ಆರೋಪಿಸಿದ್ದಾರೆ. ಮುಸ್ಲಿಮರು ಓಟು ಹಾಕಲು ಬೂತ್ ಗೆ ಬಂದಾಗ ನಿಮ್ಮ ಓಟು ಈಗಾಗಲೇ ಹಾಕಿ ಆಗಿದೆ ಎಂದು ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮುಸ್ಲಿಂ ಮತದಾರರು ಆಕ್ಷೇಪ ವ್ಯಕ್ತಪಡಿಸಿದಾಗ ಅಲ್ಲಿದ್ದ ಪೊಲೀಸ್ ಅಧಿಕಾರಿ ಹಾಗು ಚುನಾವಣಾ ಅಧಿಕಾರಿ ಮುಸ್ಲಿಮರ ಅವಹೇಳನ ಮಾಡಿದ್ದಾರೆ. ಅದೇ ರೀತಿ ದೌಲತ್ ಪುರ್ ಗ್ರಾಮದ ಮುಖ್ಯಸ್ಥ ಹಾಗು ಬೂತ್ ನಂಬರ್ 419 ರ ಬೂತ್ ಏಜೆಂಟ್ ಅವರಿಗೆ ಅಲ್ಲಿನ ನಿವಾಸಿಗಳು ಬಿಜೆಪಿಗೇ ಓಟು ಹಾಕುವಂತೆ ಮಾಡಬೇಕೆಂದು ಒತ್ತಡ ಹಾಕಲಾಗಿತ್ತು ಎಂದೂ ಅರವಿಂದ್ ಸಿಂಗ್ ಆರೋಪಿಸಿದ್ದಾರೆ.

ಚುನಾವಣೆಗೆ ಮೊದಲು ಬಿಜೆಪಿಗೇ ಓಟು ಹಾಕುವಂತೆ ಅಲ್ಲಿನ ಪೊಲೀಸ್ ಅಧಿಕಾರಿಗಳು ಹೇಳಿದ್ದರು ಎಂದೂ ಅಲ್ಲಿನ ಮುಸ್ಲಿಂ ಮತದಾರರು ಹೇಳಿದ್ದನ್ನು ನ್ಯೂಸ್ ಕ್ಲಿಕ್ ವರದಿ ಮಾಡಿತ್ತು. ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ಹತ್ತು ಶಾಸಕರೊಂದಿಗೆ ಐಜಿಪಿ ಅಖಿಲೇಶ್ ಕುಮಾರ್ ರನ್ನು ಭೇಟಿಯಾಗಿ ಮುಸ್ಲಿಂ ಮತದಾರರಿಗೆ ಬೆದರಿಕೆ ಹಾಕುತ್ತಿರುವ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ಮೊನ್ನೆ ಮೊನ್ನೆ ನಡೆದ ಈ ಗಂಭೀರ ಘಟನೆ ಎಲ್ಲೂ ಚರ್ಚೆಯೇ ಆಗಿಲ್ಲ.

ಮತದಾರರ ಪಟ್ಟಿಯ ವಿಚಾರದಲ್ಲಿ ನಡೆಯುತ್ತಿರುವ ಕೈಚಳಕಗಳು, ಮತದಾರರ ಹೆಸರುಗಳನ್ನು ಅಳಿಸುವುದು ಮೊದಲಾದ ಆರೋಪಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅಶೋಕ ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಸಬ್ಯ ಸಾಚಿ ದಾಸ್ ಸಂಶೋಧನಾ ಪ್ರಬಂಧ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದಿನ ಹಕೀಕತ್ತು ಬೇರೆಯೇ ಇದೆಯೇ ಎಂಬ ಅನುಮಾನವನ್ನು ಮೂಡಿಸಿದೆ.

ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿಯೇ ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿ ಬಿಜೆಪಿಯ ಅನುಮಾನಾಸ್ಪದ ಗೆಲುವಿನ ಪ್ರಕರಣಗಳು ಹೆಚ್ಚಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಅದರೊಂದಿಗೆ, 2019ರ ಚುನಾವಣೆಯಲ್ಲಿ ನಿಜವಾಗಿಯೂ ತಿರುಚುವಿಕೆನಡೆದಿದೆಯೆ ಎಂಬ ಅನುಮಾನ ಇನ್ನಷ್ಟು ಜಾಸ್ತಿಯಾಗಿದೆ.

ಆದರೆ ಆಳವಾದ ಅಧ್ಯಯನ ಮಾಡಿ ಅದರ ಫಲಿತಾಂಶವನ್ನು ಜನರ ಮುಂದಿಟ್ಟ ಆ ಪ್ರೊಫೆಸರ್ ರನ್ನು ಅಭಿನಂದಿಸಿ ಅವರು ಹೇಳಿದ ವಿಷಯಗಳನ್ನು ಗಂಭೀರವಾಗಿ ಚರ್ಚಿಸುವ ಬದಲು ಅವರು ರಾಜೀನಾಮೆ ನೀಡುವಂತೆ ಮಾಡಲಾಯಿತು. ಅವರ ಬೆನ್ನಿಗೆ ಬೇಹು ಅಧಿಕಾರಿಗಳನ್ನು ಬಿಡಲಾಯಿತು. ಹಾಗಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಾದ ಚುನಾವಣಾ ಪ್ರಕ್ರಿಯೆಯನ್ನು ನಿಜವಾಗಿಯೂ ಇಂಥ ದುರವಸ್ಥೆಗೆ ತಂದಿಡಲಾಗಿದೆಯೆ?. ಚುನಾವಣಾ ವ್ಯವಸ್ಥೆಯನ್ನು ಈ ಸ್ಥಿತಿಗೆ ತಳ್ಳಿ ಗೆಲುವು ಪಡೆಯುವ ಪ್ರಬಲ ಪಕ್ಷ ಈ ದೇಶವನ್ನು ಎಂಥ ಸ್ಥಿತಿಗೆ ​ಕೊಂಡೊಯ್ದೀತು?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!