ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಮತ್ತೆ ಬಿಜೆಪಿ ಹೊಸ ಆಟ ?

Update: 2023-12-02 12:55 GMT

ಅಮಿತ್ ಶಾ |Photo: PTI 

ಆರ್. ಜೀವಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ತಳಮಳಕ್ಕೆ ಒಳಗಾಗಿರೋ ಬಿಜೆಪಿ ಮತ್ತೆ ವಿವಾದಗಳನ್ನು ಕೆದಕಿ ಕೋಲಾಹಲವೆಬ್ಬಿಸಿ, ಅದರ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ನೋಡುತ್ತಿದೆಯೆ?. ಹಿಂದೂ ಮುಸ್ಲಿಂ ವಿಚಾರ ನಿರೀಕ್ಷಿತ ಪರಿಣಾಮ ತರುತ್ತಿಲ್ಲ ಅನ್ನೋದು ಮನವರಿಕೆಯಾದ ಬಳಿಕ ಅದನ್ನು ಬೇರೆ ದಿಕ್ಕುಗಳಿಂದ ಸಾಧಿಸಿಕೊಳ್ಳಲು ಮುಂದಾಗಿದೆಯೆ?.

ನಾಲ್ಕು ವರ್ಷಗಳ ಬಳಿಕ ಮತ್ತೆ ಬಿಜೆಪಿ ​ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ​ ಯನ್ನು ನೆನಪು ಮಾಡಿಕೊಳ್ಳುತ್ತಿರೋದು ನೋಡಿದರೆ ಹಾಗೇ ಅನ್ನಿಸ್ತಿದೆ. ಮೊನ್ನೆ ಕೋಲ್ಕತ್ತಾದಲ್ಲಿ ಬಿಜೆಪಿಯ ಲೋಕಸಭಾ ಪ್ರಚಾರಕ್ಕೆ ಚಾಲನೆ ನೀಡಿದ​ ಕೇಂದ್ರ ಗೃಹ ಸಚಿವ ಅಮಿತ್ ಶಾ, ​ಪೌರತ್ವ ತಿದ್ದುಪಡಿ ಕಾಯ್ದೆ​ ಸಿಎಎ​ ಯನ್ನು ಕೇಂದ್ರ ಸರ್ಕಾರ ಜಾರಿಗೆ ತರ್ತಿದೆ. ಅದನ್ನ ಯಾರೂ ತಡೆಯೋಕ್ಕೆ ಸಾಧ್ಯವಿಲ್ಲ ಅಂದಿದ್ಧಾರೆ.

ವಿವಾದದ ಬಳಿಕ ತಣ್ಣಗಾಗಿದ್ದ ಸಿಎಎ ಕುರಿತು ಲೋಕಸಭೆ ಚುನಾವಣೆ ಹತ್ತಿರವಾಗ್ತಿರೋ ಹೊತ್ತಲ್ಲಿ ಬಿಜೆಪಿ ಹೀಗೇ ಘೋಷಿಸಿರೋದು ಹೊಸ ಚರ್ಚೆಗೆ ಕಾರಣವಾಗಿದೆ. ಮತ್ತೆ ಸಿಎಎಯನ್ನೇ ಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ತಂತ್ರವಾಗಿಸಿಕೊಳ್ಳಲಿದೆಯೆ ಅನ್ನೋ ಅನುಮಾನ ಶುರುವಾಗಿದೆ.

ಸಿಎಎ ಜಾರಿ ಮಾಡಿಯೇ ಸಿದ್ಧ ಎಂದು ಅಮಿತ್ ಶಾ ಹೇಳಿರೋದರ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು?. ದಿಢೀರನೆ ಸಿಎಎ ನೆನಪಾಗಿದ್ದು ಹೇಗೆ ? ಲೋಕಸಭಾ ಚುನಾವಣೆಗೆ ಸಿಎಎ ಯನ್ನೂ ಬಳಸಿಕೊಳ್ಳುವ ಹುನ್ನಾರವೇ?. ಸಿಎಎ ವಿರುದ್ಧ ಆಂದೋಲನ ಶುರುವಾದರೆ ಅದನ್ನು ಮುಂದಿನ ಗೆಲುವಿಗೆ ಬಳಸಿಕೊಳ್ಳುವ ರಣತಂತ್ರ ಇದಾಗಿದೆಯೆ?​.

ಪಂಚರಾಜ್ಯ ಚುನಾವಣೆ ಫಲಿತಾಂಶ ಡಿಸೆಂಬರ್ 3ರಂದು ಬರುತ್ತದೆ. ಅಲ್ಲಿನ ಸೋಲು ಗೆಲುವು ಏನೇ ಇದ್ದರೂ ಬಿಜೆಪಿ ಫೋಕಸ್ ಲೋಕಸಭೆ ಚುನಾವಣೆ ಮೇಲೆ.ಇಂಥ ಹೊತ್ತಲ್ಲಿ ಏಕೆ ಇದ್ದಕ್ಕಿದ್ದಂತೆ ಸಿಎಎ ಮಾತು ಬಿಜೆಪಿ​ ವರಿಷ್ಠರ ಬಾಯಲ್ಲಿ ಬಂದಿದೆ?.

2024ರ ಮಾರ್ಚ್ 30ರೊಳಗಾಗಿ ಸಿಎಎ ಅಂತಿಮ ಕರಡು ಸಿದ್ಧವಾಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಗೃಹಖಾತೆ ರಾಜ್ಯಸಚಿವ ಅಜಯ್ ಮಿಶ್ರಾ ಹೇಳಿದ್ದರು. ಅದಾದ ಬೆನ್ನಲ್ಲೇ ಅಮಿತ್ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯುತ್ತ, ಯಾರೇ ವಿರೋಧಿಸಿದರೂ ಸಿಎಎ ಜಾರಿಯಾಗೋದನ್ನು ತಪ್ಪಿಸೋಕೆ ಸಾಧ್ಯವಿಲ್ಲ ಅಂದಿದ್ಧಾರೆ.

ಇದು ಒಂದೆಡೆಗೆ ಲೋಕಸಭೆ ಚುನಾವಣೆಗೆ ಬಿಜೆಪಿ ತಂತ್ರದ ಭಾಗವಾಗಿರುವಾಗಲೇ, ಪ್ರತಿಪಕ್ಷಗಳಿಗೆ, ವಿರೋಧಿಗಳಿಗೆ ಅದರ ಹೊಸ ಆಟದ ಕುರಿತ ಎಚ್ಚರಿಕೆಯೂ ಆಗಿರೋ ಹಾಗಿದೆ. ಏಪ್ರಿಲ್ ಮೇ ಹೊತ್ತಲ್ಲಿ ಚುನಾವಣೆ ಇರುವಾಗ ಮಾರ್ಚ್ನಲ್ಲಿ ಸಿಎಎ, ಎನ್ಆರ್ಸಿ ತಂದು​ ದೇಶಾದ್ಯಂತ ಗೊಂದಲ, ಕೋಲಾಹಲ ಎಬ್ಬಿಸೋದು ಬಿಜೆಪಿಯ ಉದ್ದೇಶವಾಗಿರೋ ಹಾಗಿದೆ.

ಸಿಎಎ ವಿರುದ್ಧ ಆಂದೋಲನ ಶುರುವಾಗುತ್ತೆ, ಶುರುವಾಗಬೇಕು ಅಂತಲೇ ಅದು ಬಯಸೋದು ಮತ್ತು ಅದನ್ನು ಚುನಾವಣೆಗೆ ಸರಿಯಾಗಿಯೇ ಬಳಸಿಕೊಳ್ಳೋದು ಅದರ ತಂತ್ರ​ ಆಗಿರುವ ಹಾಗೆ ಕಾಣುತ್ತಿದೆ.

ಈ ಹಿಂದೆ ಶಾಹೀನ್ ಬಾಗ್ ಆಂದೋಲನ ನಡೆದಾಗ ಏನೇನಾಯ್ತು ಅನ್ನೋದನ್ನು ನೋಡಿದ್ದೇವೆ. ಎಷ್ಟು ಕಟುವಾಗಿ ಆಗ ಬಿಜೆಪಿ ನಡೆದುಕೊಂಡಿತು ಅನ್ನೋದು ದೇಶಕ್ಕೇ ಗೊತ್ತಿದೆ. ಈಗ ಲೋಕಸಭೆ ಚುನಾವಣೆಗೆ ಎರಡು ತಿಂಗಳಿಗೆ ಮೊದಲು ಸಿಎಎ ಜಾರಿಗೆ ತರೋದು, ಅದರ ವಿರುದ್ಧ ಆಂದೋಲನ ಶುರುವಾಗುತ್ತಿದ್ದಂತೆ ಅದನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳೋದು ನಡೆ​ಯಲಿದೆಯೇ ?.

ಆಗ​ ದೇಶಾದ್ಯಂತ ಸಿಎಎ ವಿರುದ್ಧ ನಡೆದ ಆಂದೋಲನವನ್ನು, ವಿಶೇಷವಾಗಿ ದಿಲ್ಲಿಯ ಶಾಹೀನ್ ಬಾಗ್ ಚಳವಳಿಯನ್ನು ಹತ್ತಿಕ್ಕಲು, ಅದರ ವಿರುದ್ಧ ಅಪಪ್ರಚಾರ ಮಾಡಲು ಏನೇನೆಲ್ಲ ಆಟವಾಡಿತೊ, ಅದಕ್ಕಾಗಿ ​ಮಡಿಲ ಮೀಡಿಯಾಗಳನ್ನು ಹೇಗೆಲ್ಲ ಬಳಸಿಕೊಂಡಿತೊ ಅದನ್ನೇ ಈಗಲೂ ಮಾಡಲಿದೆಯೆ?

ಒಂದು ವಿಚಾರವಂತೂ ಬಿಜೆಪಿಗೆ ಗೊತ್ತಾಗಿ ಹೋಗಿದೆ. ಹಿಂದೂ ಮುಸ್ಲಿಂ ವಿಚಾರ ಇಟ್ಟುಕೊಂಡು ಮೊದಲಿನ ಹಾಗೆ ಆಟವಾಡೋದು ಈಗ ಅಷ್ಟು ಸುಲಭವಿಲ್ಲ. ಕರ್ನಾಟಕದಲ್ಲಿ ಆ ತಂತ್ರ ಸಂಪೂರ್ಣ ವಿಫಲವಾಗಿದೆ. ಸ್ವತಃ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರೇ ಇಲ್ಲಿ ಪ್ರಚೋದನಕಾರಿಯಾಗಿ ಮಾತಾಡಿದರೂ, ಕೋಮುವಾದ ಕೆರಳಿಸಲು ನೇರವಾಗಿಯೇ ಪ್ರಯತ್ನಿಸಿದರೂ ಅದರಿಂದ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ ಇಲ್ಲಿ ಹೀನಾಯವಾಗಿ ಸೋತು ಹೋಯಿತು.

ಪಂಚ ರಾಜ್ಯ ಚುನಾವಣೆಯಲ್ಲೂ ಹಿಂದೂ ಮುಸ್ಲಿಂ ಕಾರ್ಡ್ ಹೆಚ್ಚು ನಡೆಯೋ ಹಾಗೆ ಕಾಣ್ತಾ ಇಲ್ಲ.

ಅಲ್ಲಿ ಬಿಜೆಪಿ ಗೆದ್ದರೂ ಅದರ ಹಿಂದೆ ಅಲ್ಲಿನ ಪ್ರಬಲ ಬಿಜೆಪಿ ನಾಯಕರು ಹಾಗು ಅವರ ಜಾತಿ ಲೆಕ್ಕಾಚಾರ ನಡೆದಿದೆಯೇ ಹೊರತು ಹಿಂದೂ ಮುಸ್ಲಿಂ ಕೋಮು ಧ್ರುವೀಕರಣ ಅಷ್ಟಾಗಿ ವರ್ಕ್ ಔಟ್ ಆಗಿಲ್ಲ.

​ಇತ್ತೀಚಿಗಿನ ಕೆಲವು ಪ್ರಮುಖ ಬೆಳವಣಿಗೆಗಳೂ ದೇಶದಲ್ಲಿ ಐಕ್ಯದ, ಒಗ್ಗಟ್ಟಿನ ಸಂದೇಶವನ್ನೇ ರವಾನಿಸಿವೆ. ​ ಕ್ರಿಕೆಟ್ ವಿಶ್ವಕಪ್ ​ಉದ್ದಕ್ಕೂ ಟೀಂ ಇಂಡಿಯಾ ಪರವಾಗಿ​ ವಿರಾಟ್, ರೋಹಿತ್ ಜೊತೆ ಮೊಹಮ್ಮದ್ ಶಮಿ, ಸಿರಾಜ್ ಎಷ್ಟು ಅದ್ಭುತವಾಗಿ ಆಡಿದ್ರು ಅನ್ನೋದನ್ನು ದೇಶ ನೋಡಿದೆ.

ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರನ್ನು​ ಜೀವ ಪಣಕ್ಕಿಟ್ಟು ಹೊರತಂದ​ ಅಂತಿಮ ಕಾರ್ಯಾಚರಣೆ ಟೀಂ​ನ​ ಉಸ್ತುವಾರಿ ಹೊತ್ತಿದ್ದು ವಕೀಲ್ ಹಸನ್ ಹಾಗು ಮುನ್ನಾ ಖುರೇಶಿ ​ಎಂದು ದೇಶ ಗಮನಿಸಿದೆ.

ಇಲ್ಲೆಲ್ಲ ಒಂದಾಗಿ, ತಂಡವಾಗಿ ಹೋರಾಡುವ ಒಗ್ಗಟ್ಟೇ ಕಂಡಿದೆ. ಹಿಂದೂ ಮುಸ್ಲಿಂರು ಒಟ್ಟಾಗಿದ್ದ​ರೇ ಲಾಭ ಅನ್ನೋ​ ಸಂದೇಶವೇ ಪ್ರಚಾರವಾಗಿದೆ. ಇವೆರಡೂ ದೊಡ್ಡ ಇವೆಂಟ್ ಗಳಲ್ಲಿ ಬಿಜೆಪಿಗೆ, ಸಂಘ ಪರಿವಾರಕ್ಕೆ ಹಿಂದೂ ಮುಸ್ಲಿಂ ಎಂದು ವಿಭಜಿಸುವ ಯಾವ ಅವಕಾಶವೂ ಸಿಕ್ಕಿಲ್ಲ. ಹೀಗಿರುವಾಗ ಬಿಜೆಪಿ ಇನ್ನೇನು ರಣತಂತ್ರ ಮಾಡಬಹುದು ಅನ್ನೋ ಯೋಚನೆಗೆ ಬಿದ್ದಿದೆ. ಕೋಮು ಧ್ರುವೀಕರಣವನ್ನು ಬೇರೆ ಮಾರ್ಗದಿಂದ ಮಾಡೋದು ಈಗ ಅದರ ತಂತ್ರವಾಗಿರಲಿದೆ.

ಇದಕ್ಕೆ ಸರಿಯಾಗಿ, ಜನವರಿ 22ಕ್ಕೆ ರಾಮ ಮಂದಿರದಲ್ಲಿ ​ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿದೆ. ನೂತನ ಸಂಸತ್ ಭವನ ಉದ್ಘಾಟನೆ ವೆಳೆ ವಿಜೃಂಭಿಸಿದ ರೀತಿಯಲ್ಲೇ ಮೋದಿ ತಾವೊಬ್ಬರೇ ಇಲ್ಲಿಯೂ ಮತ್ತೊಮ್ಮೆ ಮೆರೆದಾಡಲಿದ್ದಾರೆ. ಮೋದಿಯಿಂದಾಗಿ ರಾಮಮಂದಿರ ನಿರ್ಮಾಣ ಆಯ್ತು ಅನ್ನೋ ಭಾವನೆಯನ್ನು ಜನರ ಮನಸಲ್ಲಿ ಬಿತ್ತೋ ಕೆಲಸ ನಡೆಯಲಿದೆ.

ಇದಕ್ಕೆಲ್ಲ ​ಮಡಿಲ ಮೀಡಿಯಾವನ್ನು ಬಳಸುವುದು ಅನಂತರ ಅದನ್ನು ಮೋದಿ ಮಹಿಮೆಯ ಪ್ರಚಾರಕ್ಕೆ ಬಳಸೋದು ನಡೆಯಲಿದೆ.

ಪ್ರಧಾನಿ ತಿರುಪತಿಗೆ ಹೋದರೆ ಕ್ಯಾಮೆರಾ ಹೋಗುತ್ತದೆ. ಕೇದಾರನಾಥಕ್ಕೆ ಹೋದರೆ ಅಲ್ಲಿಯೂ ಕ್ಯಾಮೆರಾ ಹೋಗುತ್ತದೆ. ಕ್ಯಾಮೆರಾ ಮತ್ತು ಮೋದಿ ಮಧ್ಯೆ ಯಾರೂ ಅಡ್ಡ ಬಾರದ ಹಾಗೆ ಬಿಜೆಪಿ ವ್ಯವಸ್ಥೆ ಮಾಡುತ್ತದೆ. ​ಅಂತಹ ಎಲ್ಲ ದೊಡ್ಡ ಇವೆಂಟ್ ಗಳಲ್ಲೂ ಮೋದಿ ಮಾತ್ರ ಇರ್ತಾರೆ. ಬೇರೆ ಯಾವುದೇ ಗಣ್ಯರಿಗೆ ಅಲ್ಲಿಗೆ ಪ್ರವೇಶ ಇಲ್ಲ. ದೇಶದ ಸಂಸತ್ತಿನ ಯಜಮಾನರಾದ ರಾಷ್ಟ್ರಪತಿಯವರನ್ನೇ ಹೊರಗಿಟ್ಟು ಮೋದಿ ಒಬ್ಬರೇ ವಿಜೃಂಭಿಸಿ ಹೊಸ ಸಂಸತ್ತನ್ನು ಉದ್ಘಾಟಿಸಿದ್ದನ್ನು ಇಡೀ ದೇಶ ನೋಡಿದೆ.

ಹೀಗೆ ರಾಮಂದಿರವನ್ನೂ ಮೊದಿ ಗುಣಗಾನಕ್ಕೆ ಬಳಸೋದು, ಅದರ ಮೂಲಕ ಧ್ರುವೀಕರಣದ ಯತ್ನ ಮಾಡೋದು, ಅದಾದ ಬಳಿಕ ಸಿಎಎ ಜಾರಿ, ಇವೆರಡನ್ನೂ ಮತ್ತೆ ಅಧಿಕಾರ ಪಡೆಯೋಕ್ಕೆ ಆಯುಧವಾಗಿ ಮಾಡಿಕೊಳ್ಳೋದು ಬಿಜೆಪಿಯ ತಂತ್ರವಾಗಲಿದೆಯೆ ಎಂಬ ಅನುಮಾನ ಈಗ ಎದ್ದಿದೆ.

ಇನ್ನೊಂದೆಡೆ, ತನಿಖಾ ಏಜನ್ಸಿಗಳ ಬಳಕೆಯೂ ನಿರಂತರ. ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುವುದಕ್ಕೆ ಅದು ನಿರಂತರ ಪ್ರಯತ್ನ ಮಾಡುತ್ತಲೇ ಇರೋದು ಗೊತ್ತೇ ಇರುವ ವಿಚಾರ. ವಿಪಕ್ಷ ನಾಯಕರ ಮೇಲೆ, ಸಾಮಾಜಿಕ ಹೋರಾಟಗಾರರ ಮೇಲೆ, ಪ್ರಶ್ನಿಸುವ ಪತ್ರಕರ್ತರ ಮೇಲೆ ಉಗ್ರ ಕ್ರಮಕ್ಕೆ ಏಜನ್ಸಿಗಳು ಸದಾ ತಯಾರಾಗಿಯೇ ಇರೋದು ಇಲ್ಲಿನ ವಿಪರ್ಯಾಸ.

ಈ ನಡುವೆ, ರಾಹುಲ್ ಗಾಂಧಿ ಮತ್ತೊಮ್ಮೆ ಕೋರ್ಟ್ ವಿ​ಚಾರಣೆಗೆ ಡಿಸೆಂಬರ್ನಲ್ಲಿ ಹಾಜರಾಗಬೇಕಿದೆ. ಈ ಬಾರಿ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಬಿಜೆಪಿಯವರೊಬ್ಬರು ಹಾಕಿರೋ ಮಾನನಷ್ಟ ಮೊಕದ್ದಮೆ ರಾಹುಲ್ ಬೆನ್ನು ಹತ್ತಿದೆ. ನಿಜವಾಗಿಯೂ ದೇಶದ ಜನರ ಪಾಲಿಗೆ ಅಗತ್ಯವಿರೋ ವಿಚಾರಗಳನ್ನು ಬಿಜೆಪಿ ಎತ್ತೋದೇ ಇಲ್ಲ.

ಇತ್ತೀಚೆಗೆ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಒಂದು ಪ್ರಶ್ನೆ ಕೇಳಿದ್ದರು. 'ದೇಶದ ಜನರಿಗೆ ನೌಕರಿ ನೀಡೋ ಸರ್ಕಾರ ಬೇಕಾ, ಅಲ್ಲ, ಹಿಂದೂ ಮುಸ್ಲಿಂ ವಿಚಾರ ಮುಂದೆ ತರೋ ಸರ್ಕಾರ ಬೇಕಾ' ಎಂದು ಅವರು ಕೇಳಿದ್ದರು. ದೇಶದ ಜನರಿಗೆ ಬೇಕಿರೋದು ಉದ್ಯೋಗದಂಥ ಜೀವನದ ದಾರಿ.

ಆದರೆ ಬಿಜೆಪಿಗೆ ಅದಾವುದೂ ವಿಚಾರವೇ ಅಲ್ಲ. ನಿರುದ್ಯೋಗದ ವಿಚಾರದಲ್ಲಿ ಗೋದಿ ಮೀಡಿಯಾಗಳಂತೂ ಬಿಜೆಪಿಯನ್ನು ಪ್ರಶ್ನೆ ಮಾಡಲಾರವು.

ಬಿಜೆಪಿ ಎಲ್ಲರ ಗಮನವನ್ನೂ ಬೇರೆಡೆಗೆ ಸೆಳೆಯುತ್ತ ತನ್ನ ದೌರ್ಬಲ್ಯ ಮುಚ್ಚಿಕೊಳ್ಳುತ್ತಲೇ ಬಂದಿದೆ.

ಕಳೆದ ಹತ್ತು ವರ್ಷಗಳಲ್ಲಿ ಇದನ್ನೇ ಮಾಡಿಕೊಂಡು ಬಂದಿರೋ ಬಿಜೆಪಿ ಈಗ ಮತ್ತೆ ಚುನಾವಣೆ ಹೊತ್ತಲ್ಲಿ ಸಿಎಎ ವಿಚಾರವನ್ನು ಮುನ್ನೆಲೆಗೆ ತರುತ್ತಿರೋದು ಇದೇ ಉದ್ದೇಶದಿಂದ.

2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಾದಾಗ ಅದರಲ್ಲಿ ಸರಕಾರದ ಭಾರೀ ವೈಫಲ್ಯ ಚರ್ಚೆಯಾಗುವ ಬದಲು ಬಾಲಕೋಟ್ ವಾಯುದಾಳಿಯೇ ಎಲ್ಲ ಕಡೆ ಚರ್ಚೆಯಾಯಿತು.

ಮಡಿಲ ಮೀಡಿಯಾಗಳ ಕೃಪೆಯಿಂದಾಗಿ ಐದು ವರ್ಷಗಳ ಮೋದಿ ಸರಕಾರದ ಎಲ್ಲ ವೈಫಲ್ಯಗಳೂ ಬದಿಗೆ ಸರಿದು ಹೋದವು.

​ಈಗ ಮತ್ತೆ ಸಿಎಎ ವಿರುದ್ಧ ಚಳವಳಿ ನಡೆಯಬೇಕು, ಅದರ ಗದ್ದಲದಲ್ಲಿ ಬಿಜೆಪಿ ಸರ್ಕಾರ ಜನರಿಗಾಗಿ ಏನೂ ಮಾಡಿಲ್ಲ ಎಂಬ ಸತ್ಯವನ್ನು ಜನರು ಪೂರ್ತಿಯಾಗಿ ಮರೆತುಬಿಡಬೇಕು. ಜನರ ಮರೆವನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಬೇಕು. ಇದೇ ಆಗಿರಬಹುದಲ್ಲವೆ ಬಿಜೆಪಿಯ ಈಗಿನ ಲೆಕ್ಕಾಚಾರ?. ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಆಡಲಿರೋ ಈ ಹೊಸ ಆಟದಿಂದಾಗಿ ಅದು ಪ್ರತಿಪಕ್ಷಗಳನ್ನು ಬೆಚ್ಚಿಬೀಳಿಸಲಿದೆಯೆ?

ಅವುಗಳನ್ನು ಚದುರಿಸಲಿದೆಯೆ? ಹೇಳಿಕೊಳ್ಳುವುದಕ್ಕೆ ಯಾವ ಸಾಧನೆಗಳೂ ಇಲ್ಲದ ಬಿಜೆಪಿಯ ಈ ಆಟದಿಂದ ಮುಂದೆ ನಿಜವಾಗಿಯೂ ಆಗಲಿರುವುದೇನು?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!