ಶಾಲೆಗಳಿಗೆ ಬಾಂಬ್ ಬೆದರಿಕೆ: ಫೇಕ್‌ನ್ಯೂಸ್ ಹುನ್ನಾರ ಮತ್ತು ಕಾರ್ಲ್‌ಸನ್ ವಿವರಣೆ

Update: 2023-12-03 03:45 GMT

ಮಕ್ಕಳ ವಿಚಾರದಲ್ಲಿ ಜನರನ್ನುpanic ಗೆ ತುತ್ತಾಗಿಸುವುದು ತುಂಬಾ ಸುಲಭ. ಎಂಥವರಾದರೂ ಬೇಗ ಆತಂಕಕ್ಕೆ ಒಳಗಾಗುತ್ತಾರೆ. ಫೇಕ್‌ನ್ಯೂಸ್‌ಗಳನ್ನು ಹರಡಲು ಪೂರ್ವ ತಯಾರಿಯಾಗಿ ಸಮಾಜದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸುವ ಕುರಿತ ಕಾರ್ಲ್‌ಸನ್‌ನ ವಿವರಣೆ ಮತ್ತು 2018ರಲ್ಲಿ ನಡೆದ ಮಕ್ಕಳ ಕಳ್ಳತನದ ಸಮೂಹ ಸನ್ನಿಯ ವಿದ್ಯಮಾನವನ್ನು ತೂಗಿ ನೋಡಿದಾಗ, ಶಾಲೆಗಳಿಗೆ ಬಾಂಬ್ ಬೆದರಿಕೆಯು ಸಹ Social standard ಗಳನ್ನು ಪತನಗೊಳಿಸುವ ಸಲುವಾಗಿ social anxiety ಹುಟ್ಟುಹಾಕುವ ಹುನ್ನಾರದ ಭಾಗದಂತೆ ಭಾಸವಾಗದಿರದು.

ಹೇಳಿಕೇಳಿ ಇದು ಫೇಕ್‌ನ್ಯೂಸ್‌ಗಳ ಕಾಲ. ಇಂತಹ ಸಮಯದಲ್ಲಿ ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆಯ ಇ-ಮೇಲ್ ಅನ್ನು ನಾವು ಹೇಗೆಲ್ಲ ಪರಿಗಣಿಸಬೇಕು? ಒಂದಂತೂ ಸತ್ಯ, ಇದು ನಿಜಕ್ಕೂ ಗಂಭೀರ ಪ್ರಕರಣ. ಭಯೋತ್ಪಾದಕ ಸಂಚಿನಿಂದ ಈ ಕೃತ್ಯ ನಡೆದಿದ್ದರೂ, ಕಿಡಿಗೇಡಿತನಕ್ಕೆ ನಡೆಸಿದ್ದರೂ, ಆರೋಪಿಗಳಿಗೆ ಉಗ್ರ ಶಿಕ್ಷೆಯನ್ನೇ ನೀಡಬೇಕು. ಯಾಕೆಂದರೆ ಎರಡೂ ಸಾಧ್ಯತೆಗಳಲ್ಲಿ ‘ಭಯ’ವನ್ನು ‘ಉತ್ಪಾದಿಸು’ವುದೇ ಉದ್ದೇಶವಾಗಿದೆ.

ಆದರೆ ಇದರಾಚೆಗೂ ನಾವು ಈ ಪ್ರಕರಣವನ್ನು ಬಿಡಿಸಿನೋಡುವ ಅಗತ್ಯವಿದೆ. ಇದು ಚುನಾವಣೆಯ ವರ್ಷ. 2024ಕ್ಕೆ ಲೋಕಸಭಾ ಚುನಾವಣೆ ಎದುರಾಗಲಿದೆ. ಎಲೆಕ್ಷನ್ ಎಂಬುದು ಈಗ ಮೊದಲಿನಂತೆ ಮತದಾರನ ನಿರ್ಣಯವಾಗಿ ಉಳಿದಿಲ್ಲ. ಪಕ್ಷ ಮತ್ತು ಸಿದ್ಧಾಂತಗಳ ನಡುವೆ ಅಧಿಕಾರಕ್ಕಾಗಿ ನಡೆಯುವ ಅಕ್ಷರಶಃ ಯುದ್ಧದ ರೂಪ ಪಡೆದಿದೆ. ಗೆಲ್ಲುವುದಕ್ಕೆ ಏನು ಮಾಡಿದರೂ ತಪ್ಪಲ್ಲ ಎಂಬುದು ಹೊಸ ಸಹಜತೆಯಾಗಿ ಸ್ವೀಕಾರಗೊಂಡಿದೆ. ಅದರರ್ಥ ಫೇಕ್‌ನ್ಯೂಸ್‌ಗಳು ತಮ್ಮ ಚಲಾವಣೆಯ ಉತ್ತುಂಗವನ್ನು ತಲುಪುವ ಕಾಲ. ಕೇವಲ ಭಾರತದ ರಾಜಕಾರಣಕ್ಕೆ ಸೀಮಿತಗೊಳಿಸಿ ಈ ಮಾತು ಹೇಳುತ್ತಿಲ್ಲ. ಅಮೆರಿಕದಂತಹ ದೇಶದಲ್ಲೂ ಚುನಾವಣೆಗಳನ್ನು ಫೇಕ್‌ನ್ಯೂಸ್ ಜಾಲ ಪ್ರಭಾವಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಕ್‌ನ್ಯೂಸ್‌ಗಳ ಪ್ರಭಾವ ಅಗಾಧವಾಗಿತ್ತು. ಈ ಬಗ್ಗೆ ಮಿನ್ನೆಸೋಟ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಆಗಿದ್ದ ಮ್ಯಾಟ್ ಕಾರ್ಲ್‌ಸನ್ ಸುದೀರ್ಘ ಅಧ್ಯಯನ ನಡೆಸಿದರು. ಅವರ ಅಭಿಪ್ರಾಯವನ್ನು ಆಧಾರವಾಗಿಟ್ಟುಕೊಂಡು ಈಗಿನ ಬಾಂಬ್ ಬೆದರಿಕೆ ಪ್ರಕರಣವನ್ನು ವಿಶ್ಲೇಷಿಸಿ ನೋಡಿದಾಗ, ಇತರ ಸುಳಿವುಗಳ ಸಾಧ್ಯತೆಗಳೂ ಗೋಚರಿಸುತ್ತವೆ.




 


ಫೇಕ್‌ನ್ಯೂಸ್‌ಗಳನ್ನು informational moral panic ಎಂದು ವರ್ಗೀಕರಿಸುವ ಕಾರ್ಲ್ ಸನ್, ತುರ್ತು-ರಾಜಕೀಯ-ಉದ್ದೇಶಿತ (ಚುನಾವಣೆ ಹಿನ್ನೆಲೆಯ) ಫೇಕ್‌ನ್ಯೂಸ್‌ಗಳು ತಮ್ಮ ಗರಿಷ್ಠ ಪ್ರಭಾವವನ್ನು ಬೀರಬೇಕೆಂದರೆ, ಸಮಾಜದಲ್ಲಿ social standard ಗಳ ನೀಳ ಕುಸಿತವಿರಬೇಕು ಎಂದು ಹೇಳುತ್ತಾರೆ. ಸಮಾಜದಲ್ಲಿ ಪ್ರಜ್ಞಾವಂತಿಕೆ ಮತ್ತು ನೈತಿಕ ಮಾನದಂಡಗಳು ಸದೃಢವಾಗಿದ್ದಾಗ ಫೇಕ್‌ನ್ಯೂಸ್‌ಗಳು ಅಷ್ಟಾಗಿ ಪ್ರಭಾವ ಬೀರಲಾರವು. ಸಮಾಜದಲ್ಲಿ ಆ ಮಟ್ಟದ ಪ್ರಬುದ್ಧತೆಯಿದ್ದಾಗ ಚುನಾವಣೆಯನ್ನು ಗೆಲ್ಲುವ ತುರ್ತು ಕಾರಣಕ್ಕೆ ರಾಜಕೀಯ ಪಕ್ಷಗಳು ಅಥವಾ ಸೈದ್ಧಾಂತಿಕ ಗುಂಪುಗಳು ಹುಟ್ಟುಹಾಕುವ ಫೇಕ್‌ನ್ಯೂಸ್‌ಗಳನ್ನು ಜನ ಸರಿ, ತಪ್ಪುಗಳ ನಿಷ್ಕರ್ಷೆಗೆ ಒಡ್ಡುತ್ತಾರೆ. ಅಂತಹ ಫೇಕ್‌ನ್ಯೂಸ್‌ಗಳು ಹೆಚ್ಚೆಂದರೆ, ತಮ್ಮ ಬೆಂಬಲಿಗರನ್ನು ತೃಪ್ತಪಡಿಸಬಹುದೇ ವಿನಾ, ಅವುಗಳಿಗೆ ಮತದಾರರ ಹೊಸ ವಿಸ್ತಾರ ದಕ್ಕುವುದಿಲ್ಲ. ಹಾಗಾಗಿ ಚುನಾವಣೆಯ ಸನಿಹದಲ್ಲಿ social standardಳನ್ನು ಅಧೋಗತಿಗೆ ತಳ್ಳುವ ಹುನ್ನಾರಗಳನ್ನು ಚಾಲ್ತಿಗೆ ತರಲಾಗುತ್ತದೆ. ಇದನ್ನು ಸಾಧ್ಯವಾಗಿಸುವ ವಿಧಾನವೇ social anxiety ಸೃಷ್ಟಿಸುವುದು. ಅರ್ಥಾತ್ ಜನರನ್ನು ಸಮೂಹ ಸನ್ನಿಗಳ ಬಲಿಪಶುಗಳನ್ನಾಗಿ ಆತಂಕಕ್ಕೆ ತಳ್ಳಿ, ಅವರ ಸಾಮಾಜಿಕ ಮೌಲ್ಯಗಳೇ ಕುಸಿಯುವಂತೆ ಮಾಡಿ, ಆನಂತರ ತಮ್ಮ ಉದ್ದೇಶಿತ ಫೇಕ್‌ನ್ಯೂಸ್‌ಗಳನ್ನು ಪೆಡಲ್ ಮಾಡಿ ಅದರ ಲಾಭ ಪಡೆಯುವುದು. ಇದು ಕಾರ್ಲ್‌ಸನ್ ವಿವರಣೆಯ ಸಾರಾಂಶ.

ಹಾಗಾದರೆ, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇರಿಸಿರುವ ಬೆದರಿಕೆಯೂ social anxiety ಸೃಷ್ಟಿಯ ಒಂದು ಭಾಗವೇ? 2019ರ ಚುನಾವಣೆಯ ಪೂರ್ವದಲ್ಲಿ ನಡೆದ ಒಂದಷ್ಟು ಬೆಳವಣಿಗೆಗಳನ್ನು ಅವಲೋಕಿಸಿದಾಗ, ಕಾರ್ಲ್‌ಸನ್ ಹೇಳಿದಂತೆ, ಈ ಬಾಂಬ್ ಬೆದರಿಕೆಯು ಅದರದೇ ಭಾಗದಂತೆ ಭಾಸವಾಗುತ್ತದೆ. ಮೊದಲನೆಯ ದಾಗಿ, social anxietyಯನ್ನು ಹೇಗೆ ಹುಟ್ಟುಹಾಕ ಲಾಗುತ್ತದೆ? ಸಮಾಜದಲ್ಲಿ ಈಗಾಗಲೇ ಇರುವ ಪೂರ್ವಗ್ರಹ ಹಾಗೂ ಸಾಮುದಾಯಿಕ ಬಲಹೀನತೆಗಳನ್ನು ‘ವಾಸ್ತವಿಕ ಸವಾಲುಗಳಂತೆ ಕಟೆದು ನಿಲ್ಲಿಸುವ ಮೂಲಕ’ social anxiety ಉತ್ಪಾದಿಸಲಾಗುತ್ತದೆ. ಆಯಾ ಕಾಲದ ಪರಿಣಾಮಕಾರಿ ಮಾಧ್ಯಮಗಳನ್ನು ಬಳಸಿಕೊಂಡೇ ಇದನ್ನು ಸಾಧಿಸಲಾಗುತ್ತಿದೆ. ಇವತ್ತು ಇಲೆಕ್ಟ್ರಾನಿಕ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾಗಳು ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾಗಿರುವುದರಿಂದ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ.

2018ರಲ್ಲಿ, ಅಂದರೆ ಲೋಕಸಭಾ ಚುನಾವಣೆ ಇನ್ನು ಕೆಲವು ತಿಂಗಳುಗಳು ಇರುವಾಗ ಇಡೀ ದೇಶದಲ್ಲಿ ‘ಮಕ್ಕಳ ಕಳ್ಳತನ’ದ ದೊಡ್ಡ ವದಂತಿ ಹಬ್ಬಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಬಹಳಷ್ಟು ಜನರ ವಾಟ್ಸ್‌ಆ್ಯಪ್‌ಗೆ ಬಂದು ಬಿದ್ದ ಸಂದೇಶಗಳ ಸರಣಿಯೊಂದು ಹೀಗೆ ಹೆದರಿಸಿತ್ತು, ‘‘ಸ್ನೇಹಿತರೇ, ಎಚ್ಚರ! ನಮ್ಮ ಏರಿಯಾದಲ್ಲಿ ಹತ್ತು ಮಂದಿ ಅನಾಮಿಕರು ಬಿಸ್ಕತ್ತು ಕೊಟ್ಟು ಪುಸಲಾಯಿಸಿ, ಮೂವರು ಮಕ್ಕಳನ್ನು ಅಪಹರಿಸಿದ್ದಾರೆ. ನೋಡಲು ಭಿಕ್ಷುಕರಂತೆ ಕಾಣುವ, ನಮ್ಮದಲ್ಲದ ಭಾಷೆ ಮಾತಾಡುವ ಇವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರು ಕೊಟ್ಟ ಮಾಹಿತಿಯಂತೆ ಇನ್ನೂ ನಾಲ್ಕು ನೂರು ಜನ ನಗರದಲ್ಲಿ ಪಸರಿಸಿದ್ದಾರಂತೆ. ನಿಮ್ಮ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ. ಭಿಕ್ಷುಕರಂತೆ ಕಾಣುವವರ ಬಗ್ಗೆ ಎಚ್ಚರಿಕೆಯಿಂದಿರಿ!.’’ ಈ ಒಂದು ಸಂದೇಶ ದೇಶದ ಉದ್ದಗಲಕ್ಕೂ ವ್ಯಾಪಿಸಿ ಕೇವಲ ಕೆಲವೇ ತಿಂಗಳ ಅಂತರದಲ್ಲಿ 22 ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡಿತ್ತು!social anxietyಗೆ ತುತ್ತಾಗಿದ್ದ ಜನಸಮೂಹದಲ್ಲಿ social standardಗಳು ಅಧಃಪತನವಾದ ಪರಿಣಾಮ, ಅನುಮಾನಾಸ್ಪದ ಎನಿಸಿ ದವರ ಮೇಲೆ ಮುಗಿಬಿದ್ದು ಗುಂಪುಹಲ್ಲೆ ನಡೆಸಿ ಕೊಂದಿದ್ದರು. ಬೆಂಗಳೂರಿನ ಚಾಮರಾಜಪೇಟೆಯಲ್ಲೇ ರಾಜಸ್ಥಾನದಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ಕಾಲರಾಮ್ ಎಂಬ ಕಾರ್ಮಿಕನನ್ನು ಜನ ಗುಂಪುಗೂಡಿ, ಮಕ್ಕಳ ಕಳ್ಳ ಎಂದು ಆರೋಪಿಸಿ, ಹಗ್ಗ ಕಟ್ಟಿ ಎಳೆದಾಡಿ, ಹೊಡೆದು ಕೊಂದಿದ್ದರು. ಜಾರ್ಖಂಡ್ (9), ತಮಿಳುನಾಡು (2), ಆಂಧ್ರಪ್ರದೇಶ (4), ಅಸ್ಸಾಮ್ (2) ಹೀಗೆ ದೇಶದ ನಾನಾ ಕಡೆ ಅಮಾಯಕರನ್ನು ಉದ್ರಿಕ್ತ ಗುಂಪುಗಳು ಕೊಂದು ಹಾಕಿದ್ದವು.

ಮಕ್ಕಳ ವಿಚಾರದಲ್ಲಿ ಜನರನ್ನುpanicಗೆ ತುತ್ತಾಗಿಸುವುದು ತುಂಬಾ ಸುಲಭ. ಎಂಥವರಾದರೂ ಬೇಗ ಆತಂಕಕ್ಕೆ ಒಳಗಾಗುತ್ತಾರೆ. ಫೇಕ್‌ನ್ಯೂಸ್‌ಗಳನ್ನು ಹರಡಲು ಪೂರ್ವ ತಯಾರಿಯಾಗಿ ಸಮಾಜದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸುವ ಕುರಿತ ಕಾರ್ಲ್‌ಸನ್‌ನ ವಿವರಣೆ ಮತ್ತು 2018ರಲ್ಲಿ ನಡೆದ ಮಕ್ಕಳ ಕಳ್ಳತನದ ಸಮೂಹ ಸನ್ನಿಯ ವಿದ್ಯಮಾನವನ್ನು ತೂಗಿ ನೋಡಿದಾಗ, ಶಾಲೆಗಳಿಗೆ ಬಾಂಬ್ ಬೆದರಿಕೆಯು ಸಹ social standrd ಗಳನ್ನು ಪತನಗೊಳಿಸುವ ಸಲುವಾಗಿ social anxiety ಹುಟ್ಟುಹಾಕುವ ಹುನ್ನಾರದ ಭಾಗದಂತೆ ಭಾಸವಾಗದಿರದು.

ನಿರ್ದಿಷ್ಟವಾಗಿ, ಶಾಲೆಗಳಿಗೆ ಬಂದಿರುವ ಬೆದರಿಕೆಯ ಇ-ಮೇಲ್‌ನಲ್ಲಿ ಬಳಸಲಾಗಿರುವ ಭಾಷೆ ಮತ್ತು ಉದ್ದೇಶಗಳು ಈ ಅನುಮಾನವನ್ನು ದಟ್ಟವಾಗಿಸುತ್ತವೆ. ಕೋಮುಧ್ರುವೀಕರಣದ ವಿಷಗಾಳಿ ತನ್ನ ಪರಾಕಾಷ್ಠೆ ತಲುಪಿರುವ ಇವತ್ತಿನ ಭಾರತದ ವಾತಾವರಣದಲ್ಲಿ, ಒಂದು ನಿರ್ದಿಷ್ಟ ಕೋಮಿನ ವಿರುದ್ಧ ನಕಾರಾತ್ಮಕ ಅಭಿಪ್ರಾಯ ರೂಪುಗೊಳ್ಳುವಂತೆ, ಈಗಾಗಲೇ ಆ ಸಮುದಾಯದೆಡೆಗಿರುವ ಪೂರ್ವಗ್ರಹಗಳು ಮತ್ತಷ್ಟು ಕರಾಳಗೊಳ್ಳುವಂತೆ ಬೆದರಿಕೆಯ ಭಾಷೆಯನ್ನು ಬಳಸಲಾಗಿದೆ. ಸಹಜವಾಗಿಯೇ ಕಾರ್ಲ್ ಸನ್ ಹೇಳಿದಂತೆ, ಸಮಾಜದಲ್ಲಿರುವ ಪೂರ್ವಗ್ರಹಗಳನ್ನೇ ಬಳಸಿಕೊಂಡು ಸಮಸ್ಯೆಯೊಂದನ್ನು ವಾಸ್ತವಿಕಗೊಳಿಸುವ ಹುನ್ನಾರ ಇದಾಗಿರಬಹುದೇ? ಹೀಗೆ ಅನುಮಾನಿಸಲು ಕಾರಣಗಳಿಗೆ ಕೊರತೆಯಿಲ್ಲ. ಯಾರನ್ನು, ಹೇಗೆ ಬೇಕಾದರೂ ಬಳಸಲ್ಪಡಬಹುದಾದ ಇವತ್ತಿನ ಕಾಲಘಟ್ಟದ ದುರಂತವು ನಮ್ಮನ್ನು ಎಚ್ಚರಿಸುತ್ತಲೇ ಇರಬೇಕಾಗುತ್ತದೆ.

ಹಾಗೊಂದು ವೇಳೆ, ಇದು ನಿಜಕ್ಕೂ ಭಯೋತ್ಪಾದಕ ಕೃತ್ಯವೇ ಆಗಿದ್ದರೆ ನಾವಿದಕ್ಕೆ ಗಂಭೀರವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಲೇಬೇಕು; ಅಷ್ಟೇ ಗಂಭೀರವಾಗಿ ಕಾರ್ಲ್‌ಸನ್ ವಿವರಣೆಯ social anxietyಯ ಪ್ರಕರಣವಾಗಿದ್ದರೂ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಇವೆರಡೂ ಸಮಾಜಕ್ಕೆ ಮಾರಕ. ಚುನಾವಣೆ ಹತ್ತಿರವಿದೆ. ಫೇಕ್‌ನ್ಯೂಸ್‌ಗಳು ಅಬ್ಬರಿಸಲಿವೆ. ಅವುಗಳ ಅಬ್ಬರಕ್ಕೆ ಅನುಕೂಲ ವಾತಾವರಣ ನಿರ್ಮಿಸಲು ಸಮಾಜದಲ್ಲಿ ಆತಂಕವನ್ನು ಮಡುಗಟ್ಟಿಸಬಲ್ಲ ವದಂತಿಗಳೂ ಹರಿದಾಡುವ ಸಾಧ್ಯತೆ ಇದೆ. ನಮ್ಮ ವಿವೇಚನೆಯನ್ನು ಪರೀಕ್ಷೆಗೊಡ್ಡುವ ಪರಾಕಾಷ್ಠೆಯ ಕಾಲದಲ್ಲಿ ನಾವಿದ್ದೇವೆ ಎಂಬುದನ್ನು ನಾವೂ ಅರ್ಥ ಮಾಡಿಕೊಳ್ಳಬೇಕು, ಜನರಿಗೂ ಅರ್ಥ ಮಾಡಿಸಬೇಕು.

Writer - ವಾರ್ತಾಭಾರತಿ

contributor

Editor - Ismail

contributor

Byline - ಗಿರೀಶ್ ತಾಳಿಕಟ್ಟೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!