ಜಾತಿ ಜನಗಣತಿ : ಬಿಜೆಪಿಗೆ ಏಕೆ ಹೆದರಿಕೆ ?

Update: 2023-09-25 13:39 GMT
Editor : Ismail | Byline : ಆರ್. ಜೀವಿ

Photo; PTI 

ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಿಂದುಳಿದ ವರ್ಗಗಳದ್ದು. ಆದರೆ ಆ ಪ್ರಮಾಣಕ್ಕೆ ಅನುಗುಣವಾಗಿ ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿದೆಯೆ​ ?​ ಸಿಗುತ್ತಿದೆಯೇ ? . ಹೀಗೆಂದು ಕೇಳಿಕೊಂಡರೆ ಸಿಗುವ ಉತ್ತರ ಆಘಾತಕಾರಿಯಾದುದಾಗಿದೆ. ಇದೇ ವಿಚಾರವನ್ನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಮತ್ತು ಬಿಜೆಪಿ ಏಕೆ ಜಾತಿ ಗಣತಿಗೆ ಹೆದರುತ್ತಿದೆ ಎಂಬುದಕ್ಕೆ ಕಾರಣವನ್ನೂ ಅಲ್ಲಿ ನಾವು ಗ್ರಹಿಸಬಹುದು.

ಹೊಸ ಸಂಸತ್ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ ಮಾತನಾಡುತ್ತ ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಕೆಲವು ವಿಚಾರಗಳನ್ನು ಮೊದಲು ಗಮನಿಸೋಣ.

1. ಈ ದೇಶದ ಲೋಕಸಭೆ, ವಿಧಾನಸಭೆಗಳು, ಆಡಳಿತ ಶಾಹಿ, ನ್ಯಾಯಾಂಗ, ಪತ್ರಿಕಾ ರಂಗ - ಇವೆಲ್ಲವುಗಳಲ್ಲಿ ಹಿಂದುಳಿದವರ ಪ್ರಾತಿನಿಧ್ಯ ಎಷ್ಟಿದೆ? ಅವರ ಭಾಗೀದಾರಿಕೆ ಎಷ್ಟಿದೆ? ಚೆಕ್ ಮಾಡಿ ನೋಡಿದರೆ, ಭಾರತ ಸರಕಾರದ 90 ಕಾರ್ಯದರ್ಶಿಗಳಲ್ಲಿ ಕೇವಲ ಮೂವರು ಮಾತ್ರ ಹಿಂದುಳಿದ ವರ್ಗಗಳಿಂದ ಬಂದವರು. ಇದನ್ನು ನೋಡಿ ನನಗೆ ಆಘಾತವಾಯಿತು. ದೇಶದ ಅತಿ ದೊಡ್ಡ ಜನಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳಿಂದ ಕೇವಲ 3 ಕಾರ್ಯದರ್ಶಿಗಳು ಎಂಬುದು ಬಹು ದೊಡ್ಡ ಅವಮಾನ. ಇದು ನಾಚಿಕೆಗೇಡು.

2. ದೇಶದ ಬಜೆಟ್ 44 ಲಕ್ಷ ಕೋಟಿ ಆಗಿದ್ದರೆ, ಅದರಲ್ಲಿ ಕೇವಲ ಶೇ.5 ಅಂದರೆ 2.47 ಲಕ್ಷ ಕೋಟಿ ಮಾತ್ರ ಇವರ ನಿಯಂತ್ರಣದಲ್ಲಿದೆ.

3. ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತದೆ. ಆದರೆ ಇಲ್ಲಿ ಏನಾಗುತ್ತಿದೆ?

ಈ ವಿಚಾರಗಳನ್ನು ಪ್ರಸ್ತಾಪಿಸಿದ ರಾಹುಲ್, ಈ ದೇಶದ ಒಬಿಸಿಗಳು, ದಲಿತರಿಗೆ, ಆದಿವಾಸಿಗಳಿಗೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬುದು ಗೊತ್ತಾಗಲು ಆದಷ್ಟು ಬೇಗ ಜಾತಿ ಗಣತಿ ನಡೆಯಲೇಬೇಕು​, ಅದರ ಫಲಿತಾಂಶ ಹೊರಬರಬೇಕು ಎಂದು ಒತ್ತಾಯಿಸಿದರು.

ಈ ಸರಕಾರ ಅದಾನಿಯ ವಿಷಯ ಹಾಗೂ ಜಾತಿ ಗಣತಿಯ ವಿಷಯ - ಇವೆರಡು ಚರ್ಚೆಗೆ ಬಂ​ದ ಕೂಡಲೇ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತದೆ. ಅದಕ್ಕೇನು ಕಾರಣ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ವಿಪಕ್ಷದವರು ಪ್ರತಿ ಬಾರಿ ಜಾತಿ ಗಣತಿಯ ವಿಷಯ ತೆಗೆದುಕೊಂಡ ಕೂಡಲೇ ಈ ಸರಕಾರ ಏನಾದರೊಂದು ಹೊಸ ವಿಷಯವನ್ನು ದಿಢೀರನೇ ತಂದು ಈ ದೇಶದ ಹಿಂದುಳಿಗ ವರ್ಗಗಳು ಹಾಗೂ ಈ ದೇಶದ ಎಲ್ಲ ಜನರ ಗಮನವನ್ನು ಬೇರೆಡೆಗೆ ತಿರುಗಿಸಿಬಿಡುತ್ತದೆ ಎಂದು ರಾಹುಲ್ ಹೇಳಿದರು.

ಇಲ್ಲಿ, ಜಾತಿ ಗಣತಿ ಬಿಜೆಪಿ ಸರ್ಕಾರಕ್ಕೆ ಬೇಕಿರದ ವಿಚಾರವಾಗಿದೆ ಮತ್ತದು ಜಾತಿ ಗಣತಿ ಬಗ್ಗೆ ಭಯಪಡುತ್ತಿದೆ ಎಂಬುದು ಒಂದು ಅಂಶ. ಬಿಜೆಪಿ ಮತ್ತು ಮೋದಿ ಸರ್ಕಾರ ಹೇಗೆ ಕೆಳ ವರ್ಗವನ್ನು ಕಡೆಗಣಿಸುತ್ತಿದೆ, ಹಿಂದುಳಿದ ವರ್ಗವನ್ನು ಹೇಗೆ ಕತ್ತಲಲ್ಲಿಡಲು ಬಯಸಿದೆ ಎಂಬುದು ಮತ್ತೊಂದು ಅಂಶ. ಯಾವುದನ್ನು ಮರೆಮಾಚುತ್ತ ತನ್ನನ್ನು ಉಳಿಸಿಕೊಳ್ಳುವ ತಂತ್ರ ರೂಪಿಸಿದೆಯೊ ಅದೆಲ್ಲವೂ ಜಾತಿ ಗಣತಿಯಿಂದ ನಿಜವಾದ ಅಂಕಿಅಂಶ ಬಹಿರಂಗವಾದಾಗ ವಿಫಲವಾಗುತ್ತದೆ ಮತ್ತು ತನ್ನ ಅಸ್ತಿತ್ವಕ್ಕೆ ಕಂಟಕವಾಗಲಿದೆ ಎಂಬುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿದೆ. ದಶಕಗಳ ಹಿಂದಿನ ಸನ್ನಿವೇಶವನ್ನು ಸ್ವಲ್ಪ ಗಮನಿಸಿದರೆ, ಸಾಮಾಜಿಕ ನ್ಯಾಯದ ರಾಜಕೀಯ ಬಹುಬೇಗ ಹೊಳಪು ಕಳೆದುಕೊಂಡಾಗ, ಕೋಮು ರಾಷ್ಟ್ರೀಯತೆಯ ಬಿಜೆಪಿಯ ಆಕ್ರಮಣಕಾರಿ ರಾಜಕೀಯ ತನ್ನ ಒಡಕಿನ ಆಟವನ್ನು ಮುನ್ನೆಲೆಗೆ ತರಲು ಅವಕಾಶವಾಯಿತು.

ಕಠೋರ ಹಿಂದುತ್ವದ ಪ್ರಚಾರ ಕೇವಲ ಭಾಗಶಃ ಯಶಸ್ಸನ್ನು ತರುತ್ತದೆ ಮತ್ತು ಕೆಳವರ್ಗದವರನ್ನು ಸೇರಿಸಿಕೊಳ್ಳದೆ ಪಕ್ಷ ದೊಡ್ಡ ಚುನಾವಣಾ ವಿಜಯಗಳನ್ನು ಸಾಧಿಸುವುದು ಕಷ್ಟ ಎಂದು ಬಿಜೆಪಿ ಕ್ರಮೇಣ ಅರಿತುಕೊಂಡಿತು. ಸಾಮಾಜಿಕ ನ್ಯಾಯದ ರಾಜಕೀಯ ಕೆಲವು ಪ್ರಬಲ ಜಾತಿಗಳಿಗೆ ಮಾತ್ರ ಲಾಭದಾಯಕವಾಗಿದೆ ಎಂದು ​ಬಿಜೆಪಿ ಆರೋಪಿಸಿತು.

ಹಿಂದುತ್ವ ರಾಜಕಾರಣದ ಅಡಿಯಲ್ಲಿ, ಕೆಳ ಜಾತಿಯ ಗುಂಪುಗಳಿಗೆ ಅಧಿಕಾರ ವಲಯಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಲಾಗುವುದು ಮತ್ತು ಅವರ ಸಬಲೀಕರಣಕ್ಕಾಗಿ ವಿಶೇಷ ಕಲ್ಯಾಣ ನೀತಿಗಳನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿತು. 2014ರಿಂದಲೂ ಕೆಳವರ್ಗದ ಗುಂಪುಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಬಳಸಿಕೊಂಡು ಬಿಜೆಪಿ ತಂತ್ರಗಾರಿಕೆ ಮಾಡಿಕೊಂಡೇ ಬಂತು.

ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗಳೆರಡರಲ್ಲೂ, ವಿಶೇಷವಾಗಿ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅದರ ಮತ ಮತ್ತು ಸ್ಥಾನಗಳ ಹಂಚಿಕೆ ವೃದ್ಧಿಸಿರುವುದಕ್ಕೆ ದಲಿತ, ಒಬಿಸಿ ಗುಂಪುಗಳ ಹೆಚ್ಚುತ್ತಿರುವ ಬೆಂಬಲವೇ ಕಾರಣ. ಇದೆಲ್ಲದರ ನಡುವೆಯೇ ​ ಒಬಿಸಿ ಸಮುದಾಯಗಳಲ್ಲಿ ಆಳವಾದ ಬಿರುಕುಗಳನ್ನು ಮೂಡಿಸುವ ಕೆಲಸವನ್ನೂ ​ಬಿಜೆಪಿ​ ಯಶಸ್ವಿಯಾಗಿಯೇ ಮಾಡಿತ್ತು.

ಹಿಂದುತ್ವ ರಾಜಕೀಯದಿಂದ ಆಮಿಷಕ್ಕೊಳಗಾಗಿ ಒಬಿಸಿ ಗುಂಪುಗಳು ಆರ್‌ಜೆಡಿ ಮತ್ತು ಎಸ್ಪಿಯಂಥ ಪಕ್ಷಗಳನ್ನು ತೊರೆದು ಬಿಜೆಪಿಯನ್ನು ನೆಚ್ಚತೊಡಗಿದವು. ಆದರೆ ಬಿಜೆಪಿಯ ಮಾತಿಗೆ, ಮಾಟಕ್ಕೆ ಮರುಳಾಗಿ ಅದನ್ನು ಬೆಂಬಲಿಸಿದ್ದ ಕೆಳವರ್ಗದ ಸ್ಥಿತಿಯೇನಾಯಿತು?. ಕೆಳವರ್ಗದ ಗುಂಪುಗಳ ಬೆಂಬಲದಿಂದ ಬಿಜೆಪಿ ಲಾಭ ಪಡೆದಿದ್ದರೂ, ಒಬಿಸಿಗಳ ಪಾಲಿಗೆ ದಕ್ಕಿದ್ದು ಅಷ್ಟರಲ್ಲೇ ಇದೆ. ಅವು ಹೆಚ್ಚುಕಡಿಮೆ ಇದ್ದ ಹಾಗೆಯೇ ಇವೆ.

ಅವುಗಳ ಸಾಮಾಜಿಕ ಪರಿಸ್ಥಿತಿಗಳಲ್ಲಿ​, ರಾಜಕೀಯ ಪ್ರಭಾವದಲ್ಲಿ ಯಾವುದೇ ನಿರ್ದಿಷ್ಟ ಬದಲಾವಣೆಯೇನೂ ಆಗಲಿಲ್ಲ. ಸಬಲೀಕರಣವನ್ನೂ ಕಾಣಲಿಲ್ಲ. ಅಧಿಕಾರದ ಪ್ರಮುಖ ಸ್ಥಾನಗಳಲ್ಲಿ ಮತ್ತು ದೊಡ್ಡ ವ್ಯಾಪಾರ, ಭೂಮಿ, ಕೈಗಾರಿಕೆಗಳು ಇತ್ಯಾದಿ ನಿರ್ಣಾಯಕ ಆರ್ಥಿಕ ಸ್ವತ್ತುಗಳ ನಿಯಂತ್ರಕರಾಗಿ ಅವರ ಪ್ರಾತಿನಿಧ್ಯ ಅತಿ ಕಡಿಮೆ. ಈ ಎಲ್ಲಾ ಕ್ಷೇತ್ರಗಳಲ್ಲಿ ​ಮೇಲ್ಜಾತಿಗಳದ್ದೇ ಪ್ರಾಬಲ್ಯ.

ವಾಸ್ತವ ಹೀಗಿರುವಾಗ, ಜಾತಿ ಗಣತಿಯ ಮೂಲಕ ಬಹಿರಂಗವಾಗಲಿರುವ ಸಂಗತಿಗಳು ತನ್ನ ಪಾಲಿಗೆ ಅಪಾಯಕಾರಿಯಾಗಲಿವೆ ಎಂಬ ಕಾರಣದಿಂದಲೇ ಬಿಜೆಪಿ ಅದನ್ನು ಮರೆಸಲು ಯತ್ನಿಸುತ್ತಿದೆ. ರಾಹುಲ್ ಗಾಂಧಿ ಹೇಳಿದಂತೆ, ಜಾತಿ ಗಣತಿ ವಿಚಾರ ಪ್ರಸ್ತಾಪವಾಗುತ್ತಲೇ ಗಮನವನ್ನು ಬೇರೆಡೆ ಸೆಳೆಯುವಂಥ ಇನ್ನಾವುದೋ ವಿಚಾರವನ್ನು ಅದು ಮುಂದೆ ತರುತ್ತದೆ.

ಒಬಿಸಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ವಿಚಾರ ಸ್ಪಷ್ಟವಾಗುತ್ತಿದ್ದಂತೆ ತನ್ನ ಪಾಲಿಗೆ ಹಿನ್ನಡೆಯಾಗಲಿದೆ ಎಂಬುದು ಬಿಜೆಪಿಯ ಭಯ. ಜಾತಿ ಗಣತಿಯಲ್ಲಿ ಒಬಿಸಿಗಳ ಸ್ಪಷ್ಟ ಎಣಿಕೆ ಆಗುತ್ತಿದ್ದಂತೆಯೇ ವಿವಿಧ ರಾಜ್ಯಗಳಲ್ಲಿ ಅವರ ಸಂಖ್ಯಾಬಲದ ಬಗ್ಗೆ ಪಕ್ಕಾ ಅಂಕಿಅಂಶ ಸಿಗುತ್ತದೆ. ರಾಜಕೀಯ, ನ್ಯಾಯಾಂಗ,​ ಅಧಿಕಾರ ಶಾಹಿ, ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮದಂತಹ ಹೆಚ್ಚಿನ ಅಧಿಕಾರ ಕ್ಷೇತ್ರಗಳು ​ಮೇಲ್ಜಾತಿಗಳಿಂದ ನಿಯಂತ್ರಿಸಲ್ಪಟ್ಟಿವೆ ಮತ್ತು ಏಕಸ್ವಾಮ್ಯವನ್ನು ಹೊಂದಿವೆ ಎಂಬುದು ಬಯಲಾಗುತ್ತದೆ.

ದಲಿತರು, ಹಿಂದುಳಿದವರ ಪಾಲಿಗೆ ನೆಪಮಾತ್ರ ಅವಕಾಶಗಳನ್ನಷ್ಟೆ ನೀಡಲಾಗಿದೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರವಾದರೂ, ಜಾತಿ ಗಣತಿಯ ಮೂಲಕ ಸಿಗಲಿರುವ ಹೊಸ ಅಂಕಿಅಂಶಗಳಿಂದ ಅದು ಇನ್ನಷ್ಟು ಸ್ಪಷ್ಟವಾಗುತ್ತದೆ. 2011 ರಲ್ಲಿ ಯುಪಿಎ ಸರಕಾರ ಇರುವಾಗ ನಡೆಸಿದ ಜಾತಿ ಗಣತಿಯ ವಿವರಗಳನ್ನು ಬಹಿರಂಗಪಡಿಸಿ ಎಂದೂ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಇತರ ವಿಪಕ್ಷಗಳೂ ಈ ಬೇಡಿಕೆ ಇಟ್ಟಿವೆ. ಬಿಹಾರದಲ್ಲಿ ಅಲ್ಲಿನ ಸರಕಾರ ಜಾತಿ ಗಣತಿ ನಡೆಸಿದೆ. ಶರದ್ ಪವಾರ್ , ಸ್ಟಾಲಿನ್ ಸಹಿತ ಪ್ರಮುಖ ವಿಪಕ್ಷ ನಾಯಕರೂ ದೇಶಾದ್ಯಂತ ಜಾತಿ ಗಣತಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಜಾತಿ ಗಣತಿ ಒಬಿಸಿ ಜನಸಂಖ್ಯೆಯ ಸಾಮಾಜಿಕ ಆರ್ಥಿಕ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸುತ್ತದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಪ್ರಾತಿನಿಧ್ಯ ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಇಂಥ ಸಾಮಾಜಿಕ ಸತ್ಯ ಬಯಲಾದಾಗ, ಸಾಮಾಜಿಕವಾಗಿ ಅಂಚಿನಲ್ಲಿರುವ ಗುಂಪುಗಳಲ್ಲಿ ಹೊಸ ರಾಜಕೀಯ ಪ್ರಜ್ಞೆ ಹೊರಹೊಮ್ಮಬಹುದು ಎಂಬುದು ಬಿಜೆಪಿಗೆ ಇರುವ ಆತಂಕ.

ಸಾಮಾಜಿಕ ನ್ಯಾಯಕ್ಕಾಗಿ ಹೊಸ ಚಳವಳಿಯನ್ನು ಪ್ರಾರಂಭಿಸಲು ಒಬಿಸಿ ಸಮುದಾಯ ಮುಂದಾದರೆ ತಾನು ಮೂಲೆಗುಂಪಾಗುವುದು ಖಚಿತ ಎಂಬುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತು. ಜಾತಿ ಗಣತಿ, ಉಪಜಾತಿ, ಸಮುದಾಯಗಳ ನಿಖರ ಚಿತ್ರ ಕೊಡಲಿರುವುದರಿಂದ ದೇಶದ ಜಾತಿ ಪರಿಕಲ್ಪನೆಯ ಚಿತ್ರವನ್ನೇ ಬದಲಿಸಲಿದೆ.

ಅಂತಿಮವಾಗಿ ಅದು ರಾಜಕೀಯವಾಗಿ ಉಂಟುಮಾಡಲಿರುವ ಪರಿಣಾಮಗಳು ಕುತೂಹಲಕಾರಿ. ಬಿಜೆಪಿಯ ಅಂತರ್ಗತ ಹಿಂದುತ್ವ ದೇಶದ ಪ್ರಜಾಪ್ರಭುತ್ವದಲ್ಲಿ ಆಡಿದ ಆಟವನ್ನು ನೋಡಿದ್ದೇವೆ, ನೋಡುತ್ತಲೇ ಇದ್ದೇವೆ. ದಲಿತರು, ದಮನಿತರು ಮತ್ತು ಆದಿವಾಸಿಗಳು ತಮಗಾಗಿರುವ ಪ್ರಾತಿನಿಧ್ಯದಲ್ಲಿನ ಅನ್ಯಾಯವನ್ನು ತಿಳಿಯುತ್ತಲೇ ಉಂಟಾಗಬಹುದಾದ ವಿದ್ಯಮಾನಗಳ ಬಗ್ಗೆ ಅದಕ್ಕೆ ಆತಂಕವಿದೆ. ಆಗ ಬಿಜೆಪಿಯ ಹಿಂದುತ್ವ ರಾಜಕಾರಣದ ಆಟ ನಡೆಯಲಾರದು. ಹಾಗಾಗಿಯೇ ಬಿಜೆಪಿಗೆ ಜಾತಿ ಗಣತಿ ಬೇಡವಾಗಿರುವುದು; ಜಾತಿ ಗಣತಿಯಿಂದ ಹೊರಬರಲಿರುವ ಸತ್ಯದ ಬಗ್ಗೆ ಅದಕ್ಕೆ ಭಯವಿರುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!