ಎಲ್ಲ ಸ್ವತಂತ್ರ ಧ್ವನಿಗಳನ್ನೂ ಕಟ್ಟಿ ಹಾಕಲು ಕೇಂದ್ರದ ಹೊಸ ಕಾನೂನು
ಬಹುತೇಕ ಎಲ್ಲ ಪತ್ರಿಕೆಗಳು, ಟಿವಿ ಚಾನಲ್ ಗಳು ಸಂಪೂರ್ಣವಾಗಿ ಸರಕಾರದ ತುತ್ತೂರಿಯಾಗಿ, ಜನವಿರೋಧಿಯಾಗಿರುವಾಗ ದೇಶದ ಜನರ ಪಾಲಿನ ಏಕೈಕ ಆಶಾಕಿರಣವಾಗಿರುವುದು ಯೂಟ್ಯೂಬ್. ಅಲ್ಲಿ ನೂರಾರು ಸಣ್ಣ, ಮಧ್ಯಮ ಹಾಗು ದೊಡ್ಡ ಸಂಖ್ಯೆಯ subscribers ಇರುವ ನೂರಾರು ಪತ್ರಕರ್ತರು ನಿಜವಾದ ಪತ್ರಿಕಾ ಧರ್ಮ ಪಾಲಿಸಿ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಲುಪಿಸುತ್ತಿದ್ದಾರೆ. ಸರಕಾರಕ್ಕೆ ಕಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಈಗ ಆ ಸ್ವತಂತ್ರ ವೇದಿಕೆಗೂ ಸಂಚಕಾರ ತರಲು ವೇದಿಕೆ ಸಿದ್ಧವಾಗಿದೆ. ಡಿಜಿಟಲ್ ಮಾಧ್ಯಮವನ್ನು ಮಾತ್ರವಲ್ಲ ಎಲ್ಲ ಡಿಜಿಟಲ್ ವೇದಿಕೆಗಳನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವಂತೆ, ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ 2023ನ್ನು ತರುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಮುಖ್ಯವಾಗಿ ಇದು ಸ್ವತಂತ್ರ ಯೂಟ್ಯೂಬರ್ಗಳಿಗೆ ಗಂಡಾಂತರಕಾರಿಯಾಗಿ ಪರಿಣಮಿಸಲಿದೆ. ಯೂಟ್ಯೂಬರ್‌ಗಳನ್ನೂ ನಿರ್ಬಂಧಿಸಲು, ಅವರಿಗೆ ಕಡಿವಾಣ ಹಾಕಲು ಮತ್ತೊಂದು ದಿಕ್ಕಿನಿಂದ ಸರ್ಕಾರ ತಯಾರಿ ನಡೆಸುತ್ತಿದೆ ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ ಕೇವಲ ರಾಜಕೀಯ ಸುದ್ದಿ ವಿಶ್ಲೇಷಣೆ ಮಾಡುವವರು ಮಾತ್ರವಲ್ಲ ಮನರಂಜನೆ ಮತ್ತಿತರ ವಿಭಾಗಗಳ ಯೂಟ್ಯೂಬರ್ ಗಳನ್ನೂ ಕಾನೂನಿನ ಕುಣಿಕೆಗೆ ಸಿಲುಕಿಸಿ ಬಿಡುವಷ್ಟು ಅವಕಾಶವನ್ನು ಹೊಸ ಕಾನೂನಿನಲ್ಲಿ ಇಡಲಾಗಿದೆ.
ಈ ಮಸೂದೆ ಪಾಸಾದರೆ ಯೂಟ್ಯೂಬರ್ಗಳು, ವಾಟ್ಸ್ ಆ್ಯಪ್ ಗ್ರೂಪ್ಗಳನ್ನು ನಡೆಸುವವರು ಸಹ ಬ್ರಾಡ್ ಕಾಸ್ಟರ್ ಎಂಬ ಹಣೆ ಪಟ್ಟಿಯಡಿ ಬಂದುಬಿಡುವಷ್ಟು ಈ ಕಾನೂನು ವಿಶಾಲವಾಗಿದೆ. ಹಾಗಾಗಿ, ಕಠಿಣ ಕಾನೂನು ಕ್ರಮ ಎದುರಿಸುವ ಸ್ಥಿತಿ ತಲೆದೋರುತ್ತದೆ.
ಯಾವುದೇ ಸರಕಾರಿ ಅಧಿಕಾರಿ ಯಾವಾಗ ಬೇಕಾದರೂ ಬಂದು ಅಂಥವರ ಕ್ಯಾಮರಾ, ಕಂಪ್ಯೂಟರ್, ಮೊಬೈಲ್ ಎಲ್ಲವನ್ನೂ ತನಿಖೆಗೆ ಎಂದು ತೆಗೆದುಕೊಂಡು ಹೋಗಬಹುದು. ಇದರ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಎಂದರೆ, ಯಾರನ್ನು ಬೇಕಾದರೂ, ಯಾವುದೇ ಡಿಜಿಟಲ್ ವೇದಿಕೆಯನ್ನೂ ಬ್ರಾಡ್ ಕಾಸ್ಟರ್ ಎಂದು ಹೇಳಿ ಕ್ರಮ ಕೈಗೊಳ್ಳಬಹುದು.
ಸರ್ಕಾರದ ಮತ್ತು ಇಂದಿನ ಪರಿಸ್ಥಿತಿಯ ಬಗ್ಗೆ ಯಾರು ಯಾವುದೇ ರೂಪದಲ್ಲಿ ಒಂದು ಮಾತು ಹೇಳಿದರೂ ಅದು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒಂದು ನೆಪವಾಗಿಬಿಡಬಹುದು. ಪತ್ರಕರ್ತರು ಮಾತ್ರವಲ್ಲ, ಹಾಸ್ಯ ಕಲಾವಿದರೂ ಇದರ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಒಬ್ಬ ಕಾಮಿಡಿಯನ್, ಅಥವಾ ಒಬ್ಬ ಅಡುಗೆ ಯೂಟ್ಯೂಬರ್ ತನ್ನ ವಿಡಿಯೋದಲ್ಲಿ ರಸ್ತೆ ಸ್ಥಿತಿ, ರೈಲುಗಳಲ್ಲಿನ ಪರಿಸ್ಥಿತಿ ಹೀಗೆ ಯಾವುದೇ ವಿಷಯದ ಬಗ್ಗೆ ಏನಾದರು ಹೇಳಿದರೂ ಅದನ್ನೂ ಈ ಕಾನೂನು ವ್ಯಾಪ್ತಿ ಯೊಳಗೆ ತರುವ ಸಾಧ್ಯತೆಗಳಿವೆ.
ಕುಕರಿ ಶೋಗಳಲ್ಲಿ ಬೇಳೆಕಾಳುಗಳನ್ನು ಬೇಯಿಸುವಾಗ " ಈಗ ಬೇಳೆಕಾಳು ಮತ್ತು ಎಣ್ಣೆ ದುಬಾರಿಯಾಗುತ್ತಿದೆ" ಎಂದು ಹೇಳುವವರೂ ಇಲ್ಲಿ ಕ್ರಮಕ್ಕೆ ತುತ್ತಾಗುವ ಸ್ಥಿತಿಯಿದೆ. ಹೀಗೆ ಈ ಮಸೂದೆ ಅಂತರ್ಜಾಲದಲ್ಲಿ ಯಾವುದೇ ರೀತಿಯ ಕಮೆಂಟ್ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಒಳಗೊಳ್ಳುತ್ತದೆ. ಅಷ್ಟು ಅವಕಾಶವನ್ನು ಇದರಲ್ಲಿ ಇಡಲಾಗಿದೆ.
ಪ್ರಚಲಿತ ವಿಚಾರಗಳ ಬಗ್ಗೆ ಮಾತನಾಡುವ ಯಾರನ್ನೂ ಕಾನೂನು ಕ್ರಮಕ್ಕೆ ಒಳಪಡಿಸುವ ಅವಕಾಶವನ್ನು ಸರ್ಕಾರಕ್ಕೆ ಈ ಮಸೂದೆ ಕೊಡಲಿದೆ.
ಸಾಕ್ಷಿ ಮಲಿಕ್ ಅಂಥ ಅನ್ಯಾಯಕ್ಕೊಳಗಾದವರ ಕಣ್ಣೀರು, ರಾಹುಲ್ ಗಾಂಧಿಯಂಥ ವಿಪಕ್ಷ ನಾಯಕರ ಮಾತುಗಳು ಪ್ರಮುಖ ದಿನಪತ್ರಿಕೆಗಳಲ್ಲಿ, ಟಿವಿ ಚಾನಲ್ ಗಳಲ್ಲಿ ಹೇಗೂ ಬರೋದೇ ಇಲ್ಲ. ಇನ್ನು ಮುಂದೆ ಅವು ಸ್ವತಂತ್ರ ಯೂಟ್ಯೂಬರ್ ಗಳ ಚಾನಲ್ ಗಳಲ್ಲೂ ಕಾಣದೇ ಹೋಗುವ ದಿನಗಳು ಇನ್ನು ಮುಂದೆ ಬಂದರೂ ಅಚ್ಚರಿಯಿಲ್ಲ.
ಪ್ರತಿಪಕ್ಷ ಮುಕ್ತ ಸಂಸತ್ತನ್ನು, ಪ್ರತಿಭಟನೆಯೇ ಇಲ್ಲದ ಬೀದಿಗಳನ್ನು , ಕ್ರೀಡಾಪಟುಗಳೇ ಇಲ್ಲದ ಮೈದಾನಗಳನ್ನು, ಪ್ರಶ್ನೆಗಳನ್ನೇ ಕೇಳದ ಮೀಡಿಯಾವನ್ನು ಬಯಸುವವರು ದೇಶವನ್ನು ಆಳುತ್ತಿರುವ ಸಂದರ್ಭದಲ್ಲಿ ತಲೆದೋರಿರುವ ಬಹುದೊಡ್ಡ ಆತಂಕಗಳಲ್ಲಿ ಇದೂ ಒಂದಾಗಿದೆ.ಮಡಿಲ ಮೀಡಿಯಾಗಳಲ್ಲಿ ಸಂಸತ್ತಿನಿಂದ ಅಮಾನತಾದವರ ಬಗ್ಗೆ ಚರ್ಚೆಯಾಗುವುದಿಲ್ಲ. ಅದಾನಿಯಂಥ ಉದ್ಯಮ ದೈತ್ಯರ ಅಕ್ರಮಗಳ ಬಗ್ಗೆ ಚರ್ಚೆಯಾಗುವುದಿಲ್ಲ. ರಫೇಲ್ನಂತ ಹಗರಣಗಳ ಬಗ್ಗೆ ಚರ್ಚೆಯೇ ಇಲ್ಲ. ನಿರುದ್ಯೋಗ, ಹಣದುಬ್ಬರ, ರೈತರ, ಕಾರ್ಮಿಕರ, ಬಡವರ ದುಸ್ಥಿತಿ - ಯಾವುದರ ಬಗ್ಗೆಯೂ ಚರ್ಚೆಯಾಗುವುದೇ ಇಲ್ಲ.
ಅಂಥ ಚರ್ಚೆಗೆ ಇರುವ ಏಕೈಕ ಜಾಗವಾದ ಯೂಟ್ಯೂಬ್ ಚಾನೆಲ್ಗಳ ಮೇಲೆ ಸರ್ಕಾರ ಇನ್ನು ಪ್ರಹಾರ ನಡೆಸಲಿದೆ. ಈ ಮಸೂದೆಯೊಳಗಿನ ನಿಬಂಧನೆಗಳು ಹೇಗಿವೆಯೆಂದರೆ, ಯಾವುದೇ ಡಿಜಿಟಲ್ ವೇದಿಕೆಯಲ್ಲಿರುವ ಯಾರನ್ನೇ ಆದರೂ ಇದರ ಅಡಿಯಲ್ಲಿ ತರಬಲ್ಲ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ.
ಆನ್‌ಲೈನ್‌ನಲ್ಲಿ ವೀಡಿಯೊ ಮಾಡುತ್ತಿರುವವರು, ಅದನ್ನು ಮರುಪೋಸ್ಟ್ ಮಾಡುವವರು, ಫಾರ್ವರ್ಡ್ ಮಾಡುವವರು ಎಲ್ಲರೂ ಇದರಡಿಯಲ್ಲಿ ಬಂದು ಬಿಡುತ್ತಾರೆ. ಇಂಥವರೇ ಇದರ ವ್ಯಾಪ್ತಿಗೆ ಬರುತ್ತಾರೆ ಎಂಬುದು ಸ್ಪಷ್ಟವಿಲ್ಲದಿರೋದೇ ಈ ಹೊಸ ಕಾನೂನಿನ ಬಹುದೊಡ್ಡ ಸಮಸ್ಯೆ.
ಅಂದರೆ, ಸರ್ಕಾರ ತನಗೆ ಯಾರ ವಿರುದ್ಧ ಕ್ರಮ ಜರುಗಿಸಬೇಕೆನ್ನಿಸಿದರೂ ಅವರನ್ನು ನೆಪ ಹುಡುಕಿ ಇದರ ವ್ಯಾಪ್ತಿಯೊಳಕ್ಕೆ ತಂದು ಕ್ರಮ ಜರುಗಿಸಲು ಅವಕಾಶವಾಗಲಿದೆ. ಈಗಿರುವ ವೇದಿಕೆಗಳಷ್ಟೇ ಅಲ್ಲ, ಮುಂದೆ ಬರಲಿರುವ ಟೆಕ್ನಾಲಜಿಯನ್ನೂ ಇದರೊಳಗೆ ತರಲು ಸಾಧ್ಯವಾಗುವಂತೆ ಇದರ ವ್ಯಾಪ್ತಿಯನ್ನು ವ್ಯಾಪಕವಾಗಿ ಇಡಲಾಗಿದೆ.
ಕೇಬಲ್ ಟಿವಿ ಮೇಲೆ ನಿಯಂತ್ರಣದ ಬಳಿಕ, ಈಗ ಇಂಟರ್ನೆಟ್ ಮೇಲೆ ಹಿಡಿತ, ಅದರ ಮೂಲಕ ಸೋಷಿಯಲ್ ಮೀಡಿಯಾದ ಮೇಲೆ ಲಗಾಮು.
ವ್ಯಂಗ್ಯವೆಂದರೆ, ಇದೆಲ್ಲಕ್ಕೂ ದೇಶ ರಕ್ಷಣೆಯ ಉದ್ದೇಶವನ್ನು ಸರ್ಕಾರ ಪ್ರತಿಪಾದಿಸುತ್ತಿರುವುದು. ಈ ಮಸೂದೆ ಬಂದಲ್ಲಿ, ಯಾವುದೇ ವೀಡಿಯೊ ಅಥವಾ ಡಿಜಿಟಲ್ ಕಂಟೆಂಟ್ ಮಾಡುವವರೂ ಬ್ರಾಡ್ ಕಾಸ್ಟರ್ ಎಂದು ನೊಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ, ಇಲ್ಲದೇ ಇದ್ದಲ್ಲಿ ದಂಡ ತೆರಬೇಕಾಗುತ್ತದೆ. ಅಂತೂ ಸರ್ಕಾರದ ನಿಯಂತ್ರಣಕ್ಕೆ ಒಳಪಡಬೇಕಾಗುತ್ತದೆ ಎಂಬುದು ಅಂತಿಮವಾಗಿ ಇದರ ಅರ್ಥ.
ದಂಡ ಎನ್ನುವುದು ತಾತ್ಕಾಲಿಕ ಅಮಾನತು, ಸದಸ್ಯತ್ವ ರದ್ದತಿ, ಸಲಹೆ, ಎಚ್ಚರಿಕೆ, ಖಂಡನೆ ಇಲ್ಲವೆ ದೊಡ್ಡ ಪ್ರಮಾಣದ ವಿತ್ತೀಯ ದಂಡವೂ ಆಗಿರಬಹುದು. ಇಲ್ಲಿ ನಿಯಂತ್ರಣ ಮೂರು ಲೇಯರ್ಗಳಲ್ಲಿ ಆಗುತ್ತದೆ. ಮೊದಲನೆಯದು, ಪ್ರಸಾರಕರು ಮತ್ತು ಆಪರೇಟರ್ಗಳ ಸ್ವಯಂ ನಿಯಂತ್ರಣ ಎರಡನೆಯದು ಸ್ವಯಂ ನಿಯಂತ್ರಣ ಸಂಸ್ಥೆಗಳು (SRO). ಮೂರನೆಯದು ಪ್ರಸಾರ ಸಲಹಾ ಮಂಡಳಿ (BAC).
ಪ್ರತಿ ಬ್ರಾಡ್ ಕಾಸ್ಟರ್ ವಿಷಯ ಮೌಲ್ಯಮಾಪನ ಸಮಿತಿಯನ್ನು (CEC) ಹೊಂದಿರಬೇಕಿದ್ದು, ಅದು ಪ್ರಸಾರವಾಗುವ ಎಲ್ಲಾ ವಿಷಯಗಳನ್ನು ಪ್ರಮಾಣೀಕರಿಸಬೇಕಿರುತ್ತದೆ. ಎಲ್ಲಾ ಬ್ರಾಡ್ಕಾಸ್ಟರ್ ಮತ್ತು ಆಪರೇಟರ್‌ಗಳು ಸ್ವಯಂ ನಿಯಂತ್ರಣ ಸಂಸ್ಥೆಗಳ (SRO) ಭಾಗವಾಗುವುದರಿಂದ, ಈ SRO ಗಳು ಎಲ್ಲಾ ಕುಂದುಕೊರತೆಗಳು, ಮೇಲ್ಮನವಿಗಳು, ವೈಯಕ್ತಿಕ ಬ್ರಾಡ್ಕಾಸ್ಟರ್ಗಳು ತಿಳಿಸದ ಇತರ ವಿಚಾರಗಳನ್ನು ಪರಿಹರಿಸುತ್ತವೆ.
ಇನ್ನು, ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆ ಉಲ್ಲಂಘನೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಪ್ರಸಾರ ಸಲಹಾ ಮಂಡಳಿ ಇರುತ್ತದೆ. ಇಲ್ಲಿ, ಯಾವುದೇ ಯೂಟ್ಯೂಬರ್ಗೆ ಸಂಬಂಧಪಟ್ಟ ಕ್ಯಾಮೆರಾ, ಲ್ಯಾಪ್ಟಾಪ್, ಫೋನ್ ಇತ್ಯಾದಿಗಳನ್ನು ಈ ಸಲಹಾ ಮಂಡಳಿ ಶಿಫಾರಸು ಮಾಡಿದ ನಂತರ ಸರ್ಕಾರ ನಿರ್ಧಾರ ತೆಗೆದುಕೊಂಡ ಬಳಿಕ ಸರ್ಕಾರಿ ಅಧಿಕಾರಿಗಳು ಒಯ್ಯುತ್ತಾರೊ ಅಥವಾ ಇದೆಲ್ಲದರ ಮಧ್ಯೆಯೇ ಅದು ನಡೆಯುತ್ತದೆಯೊ ಎಂಬುದು ಕೂಡ ಅಸ್ಪಷ್ಟವಾಗಿಯೇ ಇದೆ.
ಯೂಟ್ಯೂಬ್‌ನಂತಹ ವೇದಿಕೆಗಳು ಇಂದಿನ ಕಾಲದಲ್ಲಿ ಸ್ವತಂತ್ರ ಧ್ವನಿಯ ನೆಲೆ. ಅವೇ ಇನ್ನು ಕಣ್ಮರೆಯಾಗಿಬಿಟ್ಟರೆ ಉಳಿಯುವುದು ಏನು?. ಸರ್ಕಾರವನ್ನು ಪ್ರಶ್ನಿಸುವ ಹತ್ತಿಪ್ಪತ್ತು ಮುಖ್ಯ ವಾಹಿನಿಯ ಪತ್ರಕರ್ತರೂ ಇಲ್ಲದ ಸ್ಥಿತಿಯನ್ನು ಈಗಾಗಲೇ ಕಾಣುತ್ತಿದ್ದೇವೆ. ಹೀಗಿರುವಾಗ, ಯೂಟ್ಯೂಬರ್ಗಳ ಬಾಯನ್ನೂ ಸರ್ಕಾರ ಮುಚ್ಚಿಸಿಬಿಟ್ಟರೆ ಪತ್ರಿಕಾ ಸ್ವಾತಂತ್ರ್ಯವೆಂಬುದು ಪೂರ್ತಿ ಇಲ್ಲದಂತಾಗಿಯೇ ಹೋಗಲಿದೆ. ಇಡೀ ಸೋಷಿಯಲ್ ಮೀಡಿಯವನ್ನು ನಿಯಂತ್ರಿಸಬೇಕೆಂಬ ಸರ್ಕಾರದ ಇಚ್ಛೆ ಈ ಮಸೂದೆಯ ಮೂಲಕ ಪೂರ್ತಿಯಾಗಲಿದೆ. ಸರ್ಕಾರದ ತುತ್ತೂರಿಯಾಗಿರುವ ಗೋದಿ ಮೀಡಿಯಾಗಳಿಗೆ ಹೊರತಾದುದನ್ನು ನೋಡಬಯಸುವ, ಅದನ್ನು ಹಂಚಿಕೊಳ್ಳಲು ಬಯಸುವ ಜನರ ಸ್ವಾತಂತ್ರ್ಯವನ್ನೂ ಈ ಮಸೂದೆಯ ಮೂಲಕ ಸರ್ಕಾರ ಕಸಿದುಕೊಳ್ಳಲಿದೆ. ಅಲ್ಲಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದರ ಸರ್ವನಾಶವೇ ಆಗಿಬಿಟ್ಟಂತಾಗಲಿದೆ.