ರಾಹುಲ್ ಬೀದಿಗಿಳಿದ ಬೆನ್ನಿಗೇ ಶುರುವಾಯ್ತು ಷಡ್ಯಂತ್ರ !
ನಿನ್ನೆ ಬುಧವಾರ, ತೃಣಮೂಲ ಕಾಂಗ್ರೆಸ್ ನಾಯಕ ಷಹಜಹಾನ್ ಶೇಖ್ ಮನೆ ಮೇಲೆ 120 ಜನರ ಕೇಂದ್ರೀಯ ಪಡೆಗಳ ಸಿಬ್ಬಂದಿ ಜೊತೆ ಈ ಡಿ ದಾಳಿ ನಡೆಯಿತು. ತಲೆಮರೆಸಿಕೊಂಡಿರುವ ಷಹಜಹಾನ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಯಿತು.
ಇನ್ನು, ಸುಬೋಧ್ ಚಕ್ರವರ್ತಿ ,ಸುಜಿತ್ ಬೋಸ್, ಸುದೀಪ್ ಬಂದೋಪಾಧ್ಯಾಯ್,ತಪಸ್ ಪಾಲ್ ,ಶೃಂಜಾಯ್ ಘೋಷ್ ,ಕುನಾಲ್ ಘೋಷ್, ಅರ್ಪಿತಾ ಘೋಷ್, ಶತಾಬ್ದಿ ರಾಯ್, ಸೌಗತಾ ರಾಯ್,ಮುಕುಲ್ ರಾಯ್, ಕಾಕೋಳಿ ಘೋಷ್ ,ಪ್ರಸೂನ್ ಬ್ಯಾನರ್ಜಿ, ಅಪೂರ್ವ ಪೊದ್ದಾರ್, ಮದನ್ ಮುಖರ್ಜಿ, ಸುಬ್ರತ್ ಮುಖರ್ಜಿ, ಸೋಮನ್ ಚಟರ್ಜಿ, ಶಂಪ್ರದ ಮುಖರ್ಜಿ, ಇವೆಲ್ಲ ಈ ಡಿ ಅಂದ್ರೆ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಗಾಗಿರುವ, ಈಗಲೂ ಅದರ ನಿಗಾದಲ್ಲಿರುವ ಟಿ ಎಂ ಸಿ ನಾಯಕರ ಪಟ್ಟಿ. ಅಂದ ಹಾಗೆ ಈ ಪಟ್ಟಿ ಪೂರ್ಣ ಅಲ್ಲ, ಇನ್ನೂ ಕೆಲವು ಹೆಸರುಗಳಿವೆ.
ನಿನ್ನೆಯೇ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಸೀಟು ಹೊಂದಾಣಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆಯನ್ನು ಈಗ ಯಾವ ರೀತಿಯಿಂದ ನೋಡಬೇಕು ?. ಇಂಡಿಯಾ ಮೈತ್ರಿಕೂಟ ಹೋರಾಟಕ್ಕೆ ಅಣಿಯಾಗುವ ಮೊದಲೇ ಛಿದ್ರವಾಗಿ ಹೋಗಲಿದೆಯೆ?
ಈಗಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಅಂಥ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.ರಾಹುಲ್ ಗಾಂಧಿ ಬಿಜೆಪಿ ಹಾಗು ಮೋದಿ ಎದುರು ತೊಡೆ ತಟ್ಟಿ , ನನ್ನನ್ನು ನೀವು ಹೆದರಿಸೋದು ಅಸಾಧ್ಯ ಎಂದು ಘೋಷಿಸಿ ಬೀದಿಗಿಳಿದಿರುವಾಗಲೇ, ಇಂಡಿಯಾ ಮೈತ್ರಿಕೂಟವನ್ನು ಮುಗಿಸಿ ಬಿಡುವ ಪ್ಲ್ಯಾನ್ ಒಂದು ಸದ್ದಿಲ್ಲದೇ ಜಾರಿಯಾಗುತ್ತಿದೆಯೇ ?
ಮಣಿಪುರ, ಅಸ್ಸಾಂ ಗಳಲ್ಲಿ ಭಾರೀ ಸುದ್ದಿಯಾಗಿರುವ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳ ಪ್ರವೇಶಿಸುವ ಒಂದೇ ದಿನ ಮೊದಲು ಅಲ್ಲಿ ಮಮತಾ ಅವರ ಜೊತೆ ಹೆಜ್ಜೆ ಹಾಕದಂತೆ ತಡೆಯುವ ಷಡ್ಯಂತ್ರವೊಂದು ನಡೆಯಿತೇ ?
ಇಂಡಿಯಾ ಮೈತ್ರಿಪಕ್ಷಗಳು ಗುರಿ ಇಟ್ಟುಕೊಂಡಿರುವಂತೆ ಎಲ್ಲ ಕಡೆ ಸೀಟು ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಾಗಿ ಚುನಾವಣಾ ಅಖಾಡಕ್ಕೆ ಇಳಿದರೆ ಬಿಜೆಪಿಗೆ ಭಾರೀ ನಷ್ಟ ಖಚಿತ. ಹಾಗಾಗಿ ಅದಾಗದಂತೆ ನೋಡಿಕೊಳ್ಳುವ ಒಂದೊಂದೇ ಕೆಲಸ ಶುರು ಆಗಿಬಿಟ್ಟಿದೆಯೇ ?
ಪ್ರಾದೇಶಿಕ ಪಕ್ಷಗಳ ನಾಯಕರಂತೆ ಸಿಬಿಐ, ಈ ಡಿ ಇತ್ಯಾದಿಗಳಿಗೆ ಹೆದರೋದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ತೋರಿಸಿದ್ದಾರೆ. ಅವರ ವಿರುದ್ಧ ದಾಳಿ ಹೆಚ್ಚಿದಷ್ಟೂ ಅವರು ಹೆಚ್ಚೆಚ್ಚು ಬಿಜೆಪಿ ವಿರುದ್ಧ ಅಗ್ರೆಸಿವ್ ಆಗುತ್ತಿದ್ದಾರೆ. ಹಾಗಾಗಿ ಅವರಿಗೆ ಸಿಗಬಹುದಾದ ಎಲ್ಲ ರಾಜಕೀಯ ಬೆಂಬಲವನ್ನು ಇಲ್ಲವಾಗಿಸುವ ಆಟ ನಡೆಯುತ್ತಿದೆಯೇ ?
ಪ್ರಮುಖ ಮೈತ್ರಿ ಪಕ್ಷ ಮಮತಾ ಬ್ಯಾನರ್ಜಿಯವರ ಟಿಎಂಸಿ ಹಾಗು ಇನ್ನೊಂದು ಪಕ್ಷ ಆಪ್ ಕಾಂಗ್ರೆಸ್ ಜೊತೆ ಯಾವುದೇ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಇಂಡಿಯಾ ಮೈತ್ರಿಗೆ ಯಾವ ಅರ್ಥವೂ ಇಲ್ಲ ಎಂದು ಸಾರಿ ಬಿಟ್ಟಿವೆ.
ಅಲ್ಲಿಗೆ ಇಂಡಿಯಾ ಮೈತ್ರಿಕೂಟದ ಮುಂದಿನ ಹಾದಿ ಇನ್ನಷ್ಟು ದುರ್ಗಮವಾಗಿದೆ. ಅಥವಾ ಅಂಥದೊಂದು ಕನಸೇ ಭಗ್ನವಾಗಲಿದೆಯೆ ಎಂಬ ಅನುಮಾನಗಳೂ ಎದ್ದಿವೆ.
ರಾಮ ಮಂದಿರದ ಹೆಸರಲ್ಲಿ ಹೊಸ ಉತ್ಸಾಹದೊಂದಿಗೆ ಬಿಜೆಪಿ ಮುನ್ನುಗ್ಗುತ್ತಿರುವಾಗ ಇಂಡಿಯಾ ಕೂಟದ ಈ ಗೊಂದಲ ಅದಕ್ಕೆ ಎಷ್ಟು ದುಬಾರಿಯಾಗಲಿದೆ ?ಅತ್ತ ನಿತೀಶ್ ಕುಮಾರ್ ಕೂಡ ನಿಗೂಢ ಹೇಳಿಕೆಗಳ ಮೂಲಕ ಇಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಹೀಗಾದರೆ ಈ ಮೈತ್ರಿಕೂಟದ ಭವಿಷ್ಯ ಏನು ?
ಮಹಾರಾಷ್ಟ್ರ ಹಾಗು ಕೇರಳದಲ್ಲಿ ಸೀಟು ಹೊಂದಾಣಿಕೆ ಆಗಲಿದೆಯೇ ಅಥವಾ ಅಲ್ಲೂ ಮುಗ್ಗರಿಸಲಿದೆಯೇ ಮೈತ್ರಿ ? ಚುನಾವಣೆಗೆ ಮೊದಲೇ ಈ ಇಂಡಿಯಾ ಮೈತ್ರಿಕೂಟದ ಅಂತ್ಯವಾಗಲಿದೆಯೇ ? ಬಿಜೆಪಿ ಹಾಗು ಮೋದಿಯನ್ನು ಸೋಲಿಸೋ ಹಾದಿಯಲ್ಲಿನ ಈ ಮೈತ್ರಿಕೂಟದ ಕಥೆ ಇದೇನಾಗುತ್ತಿದೆ? ಈತನಕವೂ ಒಂದು ಸಣ್ಣ ಅನುಮಾನ ಸುಳಿದಾಡುತ್ತಿದ್ದುದು ಕಡೆಗೆ ನಿಜವೇ ಆಗಿಬಿಟ್ಟಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬುಧವಾರ ಘೋಷಿಸಿಬಿಟ್ಟಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ವಿಚಾರ ಕೂಡ ಚುನಾವಣೆಯ ನಂತರವೇ ನಿರ್ಧಾರವಾಗಲಿದೆ ಎಂದೂ ಅವರು ಹೇಳಿಬಿಟ್ಟಿದ್ಧಾರೆ.
ರಾಷ್ಟ್ರೀಯವಾಗಿ, ನಾವು ಏನು ಮಾಡಬೇಕು, ಏನು ಮಾಡಬಾರದು ಅನ್ನೋದನ್ನು ಚುನಾವಣೆಯ ನಂತರ ಯೋಚಿಸುತ್ತೇವೆ. ನಮ್ಮದು ಜಾತ್ಯತೀತ ಪಕ್ಷ, ಬಿಜೆಪಿಯನ್ನು ಬಗ್ಗುಬಡಿಯಲು ಏನು ಬೇಕೋ ಅದನ್ನು ಮಾಡುತ್ತೇವೆ. ಆದರೆ ಸದ್ಯಕ್ಕೆ ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆಗಳಿಲ್ಲ ಎಂದು ಮಮತಾ, ಈ ನಿರ್ಧಾರ ಅಚಲ ಅನ್ನೋ ಹಾಗೆ ಹೇಳಿದ್ದಾರೆ.
ಅವರು ಕಾಂಗ್ರೆಸ್ ವಿರುದ್ಧ ಇಷ್ಟು ಸಿಟ್ಟು ತೋರಿಸಲು ಅವರ ಮಾತುಗಳಲ್ಲಿಯೇ ವ್ಯಕ್ತವಾಗಿರುವಂತೆ ಎರಡು ಕಾರಣಗಳಿವೆ. ಮೊದಲನೆಯದು, ರಾಜ್ಯದಲ್ಲಿ 2 ಲೋಕಸಭಾ ಸ್ಥಾನಗಳ ಪ್ರಸ್ತಾಪವನ್ನು ಕಾಂಗ್ರೆಸ್ ನಿರಾಕರಿಸಿದೆ ಎಂಬುದು. ನನ್ನ ಆರಂಭಿಕ ಪ್ರಸ್ತಾಪವನ್ನು ಕಾಂಗ್ರೆಸ್ ಈಗಾಗಲೇ ತಿರಸ್ಕರಿಸಿದೆ. ಹೀಗಾಗಿ ಬಂಗಾಳದಲ್ಲಿ ಏಕಾಂಗಿಯಾಗಿ ಹೋರಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಎರಡನೆಯದಾಗಿ, ಮೈತ್ರಿಕೂಟದ ಭಾಗವಾಗಿರುವ ಟಿಎಂಸಿ ಜೊತೆ ಕಾಂಗ್ರೆಸ್ ನ ಸಂವಹನ ಸರಿಯಿಲ್ಲ ಎಂಬ ತಕರಾರು ಅವರದು.ನಾವು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇವೆ. ಅವರು ಇಲ್ಲಿ ಭಾರತ್ ಜೋಡೊ ನ್ಯಾಯ್ ಯಾತ್ರೆ ಮಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಒಮ್ಮೆಯಾದರೂ ನಮಗೆ ತಿಳಿಸಿಲ್ಲ ಎಂದು ಮಮತಾ ಆಕ್ರೋಶ ಹೊರಹಾಕಿದ್ದಾರೆ.
ಬಂಗಾಳಕ್ಕೆ ಸಂಬಂಧಿಸಿದಂತೆ ನನಗೆ ಕಾಂಗ್ರೆಸ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಮುಗಿಸಿಬಿಟ್ಟಿದ್ದಾರೆ ಮಮತಾ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧದ ಸಿಟ್ಟು ಕೂಡ ಮಮತಾ ಇಷ್ಟು ಕಠೋರವಾಗಲು ಕಾರಣವಾಗಿರಬಹುದಾದ ಸಾಧ್ಯತೆಗಳು ಇವೆ.
ಅವರು ಟಿಎಂಸಿ ವಿರುದ್ಧ ಮತ್ತು ಮಮತಾ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡುವುದು ನಡೆದೇ ಬಂದಿದೆ. ಹೇಗೆ ಹೋರಾಡಿ ಗೆಲ್ಲಬೇಕು ಎಂದು ಗೊತ್ತಿದೆ, ಲೋಕಸಭೆ ಚುನಾವಣೆಗೇ ಸ್ಪರ್ಧಿಸಿ ಗೊತ್ತಿಲ್ಲದ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಮೊನ್ನೆ ವಾಗ್ದಾಳಿ ನಡೆಸಿದ್ದರು.
ಮಾತುಗಳು ಹೀಗೆ ಹಳಿ ತಪ್ಪುತ್ತಾ, ಈಗ ಅದು ಎಲ್ಲಿಗೋ ಮುಟ್ಟುವ ಹಾಗಾಗಿದೆ. ಸೀಟು ಹಂಚಿಕೆ ಮಾತುಕತೆಗಳು ಸುಗಮವಾಗಿ ಸಾಗಬಹುದಾಗಿದ್ದ ಹೊತ್ತಲ್ಲಿನ ಇಂಥ ಹೇಳಿಕೆಗಳು, ಟೀಕೆಗಳು ಹಾನಿ ತರುತ್ತಿವೆಯೆ? ಇಂಡಿಯಾ ಮೈತ್ರಿ ಕೇವಲ ಒಂದು ಪಕ್ಷವನ್ನು ಒಳಗೊಂಡಿಲ್ಲ. ಪ್ರಾದೇಶಿಕ ಪಕ್ಷಗಳು ಇವೆ. ಕಾಂಗ್ರೆಸ್ 300 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಮತ್ತು ಉಳಿದ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸಲಿವೆ ಎಂದು ನಾವು ಹೇಳಿದ್ದೇವೆ. ಅಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡಬಾರದು. ಆದರೆ ಅದು ಸಂಭವಿಸಿದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ತೀಕ್ಷ್ಣವಾಗಿಯೇ ಮಮತಾ ಹೇಳಿದ್ದಾರೆ.
ಒಂದೆಡೆ ಮಮತಾ ಅವರು ಹೀಗೆ ಹೊಡೆತ ಕೊಟ್ಟರೆ ಇನ್ನೊಂದೆಡೆಯಿಂದ ನಿನ್ನೆಯೇ ಆಮ್ ಆದ್ಮಿ ಪಕ್ಷ ಕೂಡ ಕಾಂಗ್ರೆಸ್ ಅನ್ನು ಕಂಗಾಲಾಗಿಸಿದೆ.ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ ಎಂದು ಮಮತಾಬ್ಯಾನರ್ಜಿ ಘೋಷಿಸಿದ ಬೆನ್ನಲ್ಲೇ ಪಂಜಾಬ್ನಲ್ಲೂ ಕಾಂಗ್ರೆಸ್ ಜೊತೆ ಎಎಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ದೆಹಲಿ, ಪಂಜಾಬ್, ಹರಿಯಾಣ, ಗೋವಾ ಮತ್ತು ಗುಜರಾತ್ನಲ್ಲಿ ಸೀಟು ಹಂಚಿಕೆ ವಿಚಾರ ಕಾಂಗ್ರೆಸ್ ಮತ್ತು ಎಎಪಿ ನಡುವೆ ನಡೆದಿರುವಾಗಲೇ ಸಿಎಂ ಮಾನ್ ಈ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ಈಗ ಕಾಂಗ್ರೆಸ್ ಎದುರಿನ ಬಿಕ್ಕಟ್ಟು ಮಾತ್ರವಾಗದೆ, ಇಡೀ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಪ್ರಶ್ನೆಯನ್ನು ಸಂದಿಗ್ಧಕ್ಕೆ ತೆಗೆದುಕೊಂಡು ಹೋಗಿದೆ.
ಮಮತಾ ಬ್ಯಾನರ್ಜಿ ಅವರ ನಿರ್ಧಾರವಂತೂ ಮೈತ್ರಿಕೂಟದ ಪಕ್ಷಗಳನ್ನು ಕಂಗಾಲಾಗಿಸಿದೆ. ಈ ನಡುವೆ, ಅವರ ಇಂಥದೊಂದು ನಡೆ ಅನಿರೀಕ್ಷಿತವೇನಲ್ಲ ಎಂದೂ ಕೆಲವರು ಹೇಳಿದ್ದಾರೆ.
ಹೀಗೇ ಆದೀತೆಂದು ನಿರೀಕ್ಷೆ ಇದ್ದುದಾಗಿ ಶಿವಸೇನೆ (ಯುಬಿಟಿ) ಮೂಲಗಳು ಹೇಳಿವೆ. ಇಂಥದೊಂದು ಬೆಳವಣಿಗೆಯ ಸುಳಿವು ಇತ್ತು. ಮಮತಾ ಅವರು ಕಾಂಗ್ರೆಸ್ ಜೊತೆ ಹೋಗುವ ಸಾಧ್ಯತೆ ಕಡಿಮೆ ಎಂದು ಯುಬಿಟಿ ಮೂಲಗಳು ಹೇಳಿರುವ ವರದಿಗಳಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ದೊಡ್ಡ ಪಕ್ಷ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವಾಗಲೂ ಅದರ ವಿರುದ್ಧವೇ ಹೋರಾಡುತ್ತಾ ಬಂದಿವೆ. ಹೀಗಿರುವಾಗ ಟಿಎಂಸಿ ಜೊತೆ ಸೀಟು ಹಂಚಿಕೆ ಸ್ವಲ್ಪ ಕಷ್ಟವಾಗುತ್ತದೆ ಎಂದು ಶಿವಸೇನಾ ಯುಬಿಟಿ ಪಕ್ಷದ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಆದರೂ ಈ ಬಿಕ್ಕಟ್ಟು ಬಗೆಹರಿಯಬಹುದು ಎಂಬ ವಿಶ್ವಾಸವೂ ವ್ಯಕ್ತವಾಗಿದೆ. ಮಮತಾ ಅವರು ಮೈತ್ರಿಯಿಂದ ಹೊರಹೋಗುವುದರ ಬಗೆಗಿನ ಊಹಾಪೋಹಗಳನ್ನು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ತಳ್ಳಿಹಾಕಿದ್ದಾರೆ.
ಅವರು ನಮ್ಮ ದೀದಿ ಮತ್ತು ನಾವು ಅವರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಮೈತ್ರಿ ಒಗ್ಗಟ್ಟಾಗಿದೆ ಮತ್ತು ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ ಎಂದು ಸುಪ್ರಿಯಾ ಹೇಳಿದ್ದಾರೆ. ಇದೇ ಥರದ ವಿಶ್ವಾಸವನ್ನು ಆರ್‌ಜೆಡಿ ಸಂಸದ ಮನೋಜ್ ಝಾ ಕೂಡ ವ್ಯಕ್ತಪಡಿಸಿದ್ದಾರೆ.ಮಮತಾ ಬ್ಯಾನರ್ಜಿ ಅವರ ಹೇಳಿಕೆ ನಿರ್ದಿಷ್ಟ ಸಂದರ್ಭದಲ್ಲಿ ಹೊರಬಂದಿದ್ದಾಗಿರಬಹುದು. ದಯವಿಟ್ಟು ತಾಳ್ಮೆಯಿಂದಿರಿ. ಸ್ವಲ್ಪ ಸಮಯ ಕಾಯಿರಿ. ಸಂಘರ್ಷ ಉಂಟಾದರೆ ಮೈತ್ರಿಕೂಟದ ನಾಯಕರು ಪರಿಹರಿಸುತ್ತಾರೆ ಎಂದು ಝಾ ಹೇಳಿದ್ದಾರೆ.
ಹಾಗೆಂದು ಆರ್ಜೆಡಿ ಕೂಡ ಕಾಂಗ್ರೆಸ್ ಜೊತೆ ಸೌಹಾರ್ದದಿಂದ ಇದೆಯೆಂದೇನೂ ಅಲ್ಲ. ಇನ್ನು ಜೆಡಿಯು ಪಕ್ಷದ ನಿತೀಶ್ ಕುಮಾರ್ ಯಾವಾಗ ಹೇಗೆ ತಿರುಗಿಯಾರು ಎಂಬ ಆತಂಕವೂ ಇಲ್ಲದೇ ಇಲ್ಲ. ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ಇಂಡಿಯಾ ಮೈತ್ರಿಕೂಟದ ಪ್ರಮುಖ ಭಾಗವಾಗಿದೆ. ಅವರು ನಮ್ಮೊಂದಿಗಿದ್ದಾರೆ. ಅವರು ಆ ಹೇಳಿಕೆ ನೀಡಿದ್ದರೆ, ಅದು ತಂತ್ರದ ಭಾಗವಾಗಿರಬಹುದು. ಮೈತ್ರಿಕೂಟದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಬಿಜೆಪಿ ವಿರುದ್ಧ ಬಲವಾಗಿ ಹೋರಾಡುತ್ತಿದ್ದೇವೆ ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಮಮತಾ ಬ್ಯಾನರ್ಜಿಯವರಿಲ್ಲದೆ ಇಂಡಿಯಾ ಮೈತ್ರಿಕೂಟದ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅವರನ್ನು ಬಿಟ್ಟು ಇಂಡಿಯಾ ಮೈತ್ರಿಕೂಟ ಇಲ್ಲ. ಮಾತುಕತೆಗಳು ಫಲಪ್ರದವಾಗಲಿವೆ ಮತ್ತು ಮೈತ್ರಿಕೂಟ ಬಂಗಾಳದಲ್ಲಿ ಒಗ್ಗಟ್ಟಿನಿಂದ ಹೋರಾಡುತ್ತದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುವುದು ಪ್ರಾಥಮಿಕ ಗುರಿ. ಅದೇ ಉದ್ದೇಶದೊಂದಿಗೆ ಮೈತ್ರಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಆದರೆ ಪಂಜಾಬ್ನಲ್ಲಿಯೂ ಸಿಎಂ ಮತ್ತು ಎಎಪಿ ನಾಯಕ ಭಗವಂತ್ ಮಾನ್ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿರುವುದು, ಇಂಡಿಯಾ ಮೈತ್ರಿಕೂಟದ ಬಿಕ್ಕಟ್ಟುಗಳು ಹೆಚ್ಚುತ್ತಲೇ ಇರುವ ಸೂಚನೆಯನ್ನು ಬಹಿರಂಗಗೊಳಿಸಿದೆ.
ಎಎಪಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳಿಗೂ ಎಎಪಿ ಸ್ವಂತವಾಗಿ ಸ್ಪರ್ಧಿಸಿ ಎಲ್ಲ ಸ್ಥಾನಗಳನ್ನು ಗೆಲ್ಲುವುದಾಗಿ ಮಾನ್ ಹೇಳಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಸ್ಥಿತಿ ಸುಲಭದ್ದಾಗಿ ಕಾಣಿಸುವುದಿಲ್ಲ. ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಎನ್ಸಿಪಿ ಜೊತೆಗಿನ ಸೀಟು ಹಂಚಿಕೆ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಅಸ್ಪಷ್ಟ.
ಈಗೇನೋ ಎಲ್ಲವೂ ಸರಿಯಿದೆ ಎನ್ನುವಂತೆಯೇ ಕಾಣಿಸುತ್ತಿದ್ದರೂ, ಸೀಟು ಹಂಚಿಕೆ ಚರ್ಚೆ ಹೊತ್ತಿನಲ್ಲಿ ಒಮ್ಮತಕ್ಕೆ ಬರಲಾಗದಿದ್ದರೆ ಬಿಕ್ಕಟ್ಟು ಎದುರಾಗುತ್ತದೆ.ಕೇರಳದಲ್ಲಿಯೂ ದೊಡ್ಡ ಬಿಕ್ಕಟ್ಟೇ ಇದೆ. ಅಲ್ಲಿ ಎಡಪಕ್ಷಗಳು ರಾಹುಲ್ ಗಾಂಧಿ ಕೇರಳದಲ್ಲಿ ಸ್ಪರ್ಧಿಸುವುದೇ ಬೇಡ ಎನ್ನುತ್ತಿದ್ದಾರೆ. ಅಲ್ಲಿನ ಕಾಂಗ್ರೆಸಿಗರು ಎಡಪಕ್ಷಗಳ ಜೊತೆ ಯಾವುದೇ ಹೊಂದಾಣಿಕೆ ಬೇಡ ಎನ್ನುತ್ತಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಘೋಷಣೆ ಬೆನ್ನಲ್ಲೇ ಅಲ್ಲಿನ ಕಾಂಗ್ರೆಸ್ ನಾಯಕತ್ವ ಅವರ ವಿರುದ್ಧ ತೀವ್ರ ಸ್ವರೂಪದಲ್ಲಿ ಹರಿಹಾಯ್ದಿದೆ. ಅವರು ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದಾರೆ. ಈ ಬಗ್ಗೆ ನಮಗೆ ಈಗಾಗಲೇ ಮಾಹಿತಿ ಬಂದಿದೆ ಎಂದೆಲ್ಲ ಕಾಂಗ್ರೆಸ್ ನಾಯಕಿ ದೀಪ ದಾಸ್ ಮುನ್ಷಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂಥ ಎಲ್ಲ ಹೇಳಿಕೆಗಳು ಬಿಕ್ಕಟ್ಟನ್ನು ಶಮನಗೊಳಿಸುವ ಬದಲಿಗೆ ಮೈತ್ರಿಕೂಟದ ದಾರಿಯನ್ನೇ ದಿಕ್ಕು ತಪ್ಪಿಸಿಬಿಡುತ್ತವೆಯೆ ಎಂಬ ಅನುಮಾನವೂ ಏಳುತ್ತದೆ. ಅಂತಿಮವಾಗಿ ಇದು ನಗೆಪಾಟಲಿಗೀಡಾಗುವ ಹಂತ ಮುಟ್ಟಿದರೆ ಅದರಿಂದ ಕಾಂಗ್ರೆಸ್ಗೊ ಮತ್ತಿತರ ವಿಪಕ್ಷಗಳಿಗೊ ಹಾನಿ ಎನ್ನುವುದಕ್ಕಿಂತ ಹೆಚ್ಚಾಗಿ, ಪ್ರಜಾಸತ್ತೆಯನ್ನು ರಕ್ಷಿಸುವ ನಿಟ್ಟಿನ ಒಗ್ಗಟ್ಟು ಎಂಬ ಇಂಡಿಯಾ ಮೈತ್ರಿಕೂಟದ ಪ್ರತಿಪಾದನೆಗೇ ಕಲ್ಲು ಬಿದ್ದಂತಾಗುತ್ತದೆ. ಅಲ್ಲಿಗೆ, ಪ್ರಜಾಸತ್ತೆಯ ಮೇಲಿನ ದಾಳಿಯನ್ನು ತಡೆಯುವ, ಅದನ್ನು ಎದುರಿಸಿ ಮಣಿಸುವ ದೊಡ್ಡ ಕನಸು ಕೂಡ ಗುರಿ ಮುಟ್ಟುವ ಮೊದಲೇ ಭಗ್ನವಾಗುವ ಅಪಾಯವೂ ಕಾಣಿಸತೊಡಗಿದೆ.