ರಾಹುಲ್ ಗಾಂಧಿ ಬಗ್ಗೆ ಪುಸ್ತಕ ಬರೆದು ಕೆಲಸ ಕಳಕೊಂಡ ದಯಶಂಕರ್ ಮಿಶ್ರಾ

Update: 2023-12-08 13:03 GMT
Editor : Ismail | Byline : ಆರ್. ಜೀವಿ

ನೀವು ಹಗಲು, ಮೋದೀಜಿ ಹಾಗು ಬಿಜೆಪಿಯ ಭಟ್ಟಂಗಿತನ ಮಾಡೋ ಪತ್ರಕರ್ತರಾದರೆ ನಿಮಗೆ ಅವರ ಜೊತೆ ಸೆಲ್ಫಿ ಭಾಗ್ಯ ಸಿಗುತ್ತೆ. ನೀವು ಬಿಜೆಪಿಗಾಗಿ ಪ್ರತಿ ರಾತ್ರಿ ಪ್ರೈಮ್ ಟೈಮ್ ನಲ್ಲಿ ಸುಳ್ಳು ಹಾಗು ದ್ವೇಷ ಪ್ರಸಾರ ಮಾಡಿದ್ರೆ ನಿಮಗೆ ಇಂಟರ್ವ್ಯೂ ಅವಕಾಶಗಳು ಸುಲಭವಾಗಿ ಸಿಗುತ್ತೆ. ನೀವು ವಿಪಕ್ಷಗಳ ಮೇಲೆ ನಿರಾಧಾರ ಆರೋಪಗಳನ್ನು ಮಾಡಿ ಸರಕಾರವನ್ನು ಪ್ರಶ್ನಿಸುವ ಬದಲು ವಿಪಕ್ಷಗಳನ್ನೇ ಪ್ರಶ್ನಿಸಿದರೆ ನಿಮಗೆ ಪ್ರಧಾನಿಯಿಂದಲೇ ಸರ್ಟಿಫಿಕೇಟ್ ಸಿಗುತ್ತೆ.

ಆದರೆ ನೀವು ಸತ್ಯ ಹೇಳಿದರೆ, ನಿಷ್ಠುರ ಪ್ರಶ್ನೆ ಕೇಳಿದರೆ, ಇದ್ದಿದ್ದನ್ನು ಇದ್ದ ಹಾಗೆ ಬರೆದರೆ ಆಗ ನಿಮಗೆ ಈ ದೇಶದಲ್ಲಿ ಸದ್ಯಕ್ಕೆ ಸಿಗೋದು - ರಾಜೀನಾಮೆ ಭಾಗ್ಯ ಮಾತ್ರ. ನಮ್ಮ ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಹುತೇಕ ಪತ್ರಕರ್ತರು, ಆಂಕರ್ ಗಳು, ಮಡಿಲ ಮಾಧ್ಯಮಗಳು ಅದೆಂತಹ ಅನಾಹುತ ಮಾಡಿಟ್ಟಿವೆ ಎಂಬುದನ್ನು ಒಬ್ಬ ಹಿರಿಯ ಪತ್ರಕರ್ತರೇ ಈಗ ಬಯಲು ಮಾಡಿದ್ದಾರೆ.

ಒಬ್ಬ ಪತ್ರಕರ್ತ ಮಾಡಬೇಕಾದ ಒಂದು ಕೆಲಸವನ್ನೂ ಮಾಡದೇ, ಕೇವಲ ಒಂದು ಪಕ್ಷದ, ಒಂದು ನಾಯಕನ ತುತ್ತೂರಿಯಾಗಿ ಹೇಗೆ ಇಲ್ಲಿನ ಬಹುತೇಕ ಮೀಡಿಯಾಗಳು ವರ್ತಿಸಿದವು ಎಂಬುದನ್ನು ಒಬ್ಬ ಅನುಭವೀ ಪತ್ರಕರ್ತರೇ ಜಗತ್ತಿನ ಎದುರಿಟ್ಟಿದ್ದಾರೆ.

ಈ ಕಹಿ ಸತ್ಯ ಹೇಳಲು ಅವರು ದುಬಾರಿ ಬೆಲೆಯನ್ನೂ ತೆತ್ತಿದ್ದಾರೆ. ತಮ್ಮ ಜೀವನೋಪಾಯಕ್ಕೆ ಕಲ್ಲು ಹಾಕಿಕೊಂಡಿದ್ದಾರೆ. ತಾನಿದ್ದ ಒಳ್ಳೆಯ ಉದ್ಯೋಗವನ್ನೇ ಬಿಟ್ಟು ಬಂದು ನಾವಿಷ್ಟು ವರ್ಷ ಮಾಡಿದ್ದು ಬರೀ ತುತ್ತೂರಿಯ ಕೆಲಸ, ದ್ವೇಷ ಹರಡುವ ಕೆಲಸ, ಸುಳ್ಳು ಪ್ರಚಾರ ಮಾಡುವ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.

ನಾನೀಗ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇನೆ ಎಂದೂ ಹೇಳಿದ್ದಾರೆ. ಆ ಹಿರಿಯ ಪತ್ರಕರ್ತರ ಹೆಸರು ದಯಾಶಂಕರ್ ಮಿಶ್ರಾ. ಆ ಪತ್ರಕರ್ತ ಒಂದು ಪುಸ್ತಕ ಬರೆದರು. ಮತ್ತು ಅದಕ್ಕಾಗಿ ಅವರು ಕೆಲಸಕ್ಕೇ ರಾಜೀನಾಮೆ ಕೊಡಬೇಕಾಗಿ ಬಂತು.

ಹಿರಿಯ ಪತ್ರಕರ್ತ ದಯಾಶಂಕರ್ ಮಿಶ್ರಾ​ ಅವರು ಕೆಲಸ ಮಾಡುತ್ತಿದ್ದುದು ಅಂಬಾನಿ ಮಾಲಕತ್ವದ ​ನೆಟ್ವರ್ಕ್ 18ನಲ್ಲಿ.

​ಅದರ ​ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಯಲ್ಲಿದ್ದರು.

ಅವರು ಕೆಲಸ ಕಳೆದುಕೊಳ್ಳುವಂತಾದದ್ದು​ ರಾಹುಲ್ ಗಾಂಧಿ ಬಗ್ಗೆ ಪುಸ್ತಕ ಬರೆದಿದ್ದಕ್ಕಾಗಿ. ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಸಮಯದಿಂದ ನೆಟ್ವರ್ಕ್ 18ನ ​ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಯಲ್ಲಿದ್ದ ಅವರು​ ಈಗ ರಾಜೀನಾಮೆ ಸಲ್ಲಿಸಿದ್ದಾರೆ. ಹೇಗೆ ಅಂಬಾನಿ ಮಾಲಕತ್ವದ ಮೀಡಿಯಾದ ಪತ್ರಕರ್ತನಿಗೆ ರಾಹುಲ್ ಗಾಂಧಿ ಬಗ್ಗೆ ಪುಸ್ತಕ ಬರೆದಿದ್ದೇ ದುಬಾರಿಯಾಯಿತು ನೋಡಿ.

ಅದಕ್ಕಿಂತ ಹೆಚ್ಚಾಗಿ, ಅಲ್ಲಿ ಕೆಲಸದಲ್ಲಿದ್ದರೂ ಅದೆಂಥ ವಾತಾವರಣವಿತ್ತು, ಅದು ಎಷ್ಟೆಲ್ಲ ರಾಜಿಗಳ ದಾರಿಯಾಗಿತ್ತು ​,​ ಕಳೆದ ಕೆಲವು ವರ್ಷಗಳಲ್ಲಿ ದೇಶದ ಪತ್ರಕರ್ತರು ನಿಜವಾಗಿ ಎಂತಹ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂಬುದರ ಸುಳಿವು ರಾಜೀನಾಮೆ ಬಳಿಕ ಅವರು ಎಕ್ಸ್ನಲ್ಲಿ ಬರೆದುಕೊಂಡಿರುವ ಮಾತುಗಳಲ್ಲಿದೆ.

ಒಂದು ಹಂತದಲ್ಲಿ ಅವರಿಗೆ ಕೆಲಸದಲ್ಲಿಯೇ ಮುಂದುವರಿಯುವ ಅವಕಾಶವನ್ನೂ ಕಂಪನಿ ನೀಡಿತ್ತು. ಆದರೆ ಅದಕ್ಕಾಗಿ ಅವರು ರಾಹುಲ್ ಕುರಿತ ಪುಸ್ತಕ ಪ್ರಕಟಿಸುವುದರಿಂದ ಹಿಂದೆ ಸರಿಯಬೇಕಿತ್ತು. ಆದರೆ, ದಯಾಶಂಕರ್ ಮಿಶ್ರಾ ಪುಸ್ತಕದ ವಿಚಾರದಲ್ಲಿ ಬದ್ಧರಾಗಿ ಉಳಿದರು. ಕೆಲಸವನ್ನೇ ಬಿಟ್ಟುಕೊಟ್ಟರು. ದೊಡ್ಡ ಬೆಲೆ ತೆರಬೇಕಾಗಿ ಬಂದ ಬದ್ಧತೆ ಮತ್ತು ಪ್ರಾಮಾಣಿಕತೆ ಅದು.

ಪ್ರಾಮಾಣಿಕತೆಗೆ ಬೆಲೆ ಕೊಡುವ ಮೀಡಿಯಾಗಳು ಇವತ್ತಿನ ರಾಜಕಾರಣದಲ್ಲಿ ಇಲ್ಲವಾಗುತ್ತಿರುವ ಹೊತ್ತಿನಲ್ಲಿ ಪ್ರಾಮಾಣಿಕ ಪತ್ರಕರ್ತರೆದುರಿನ ದಾರಿ ಕೂಡ ಕೆಂಡದ್ದೂ ಮುಳ್ಳಿನದೂ ಆಗಿದೆ. ದಯಾಶಂಕರ್ ಮಿಶ್ರಾ ಅವರು ರಾಹುಲ್ ಕುರಿತು ಬರೆದ ಪುಸ್ತಕ ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಆ ಕಾರಣಕ್ಕಾಗಿ ಅವರು ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಹೊರ ಬರಬೇಕಾಗಿದೆ. ರಾಜೀನಾಮೆ ಬಳಿಕ ಅವರು ಬರೆದುಕೊಂಡಿರುವುದೇನು? ಆ ಮಾತುಗಳು ಬಯಲು ಮಾಡುತ್ತಿರುವುದೇನು?. ಇಷ್ಟು ವರ್ಷಗಳ ಷಡ್ಯಂತ್ರ ಹಾಗೂ ಈಗಿನ ಉಸಿರುಗಟ್ಟಿಸುವ ವಾತಾವರಣ ಎಂಥದು?.

ರಾಹುಲ್ ಗಾಂಧಿ ಕುರಿತು ಸತ್ಯ ಬರೆದರೆ ಯಾವ ಮಟ್ಟದ ತೊಂದರೆಯಾಗಬಹುದು ಎಂದು ನನಗೆ ಅಂದಾಜಿರಲಿಲ್ಲ ಎಂದೇ ಆವರು ತಮ್ಮ ಟಿಪ್ಪಣಿ ಶುರು ಮಾಡಿದ್ದಾರೆ. ಅಧಿಕಾರದಲ್ಲಿರುವವರ ಮೇಲೆ ಮಹಾಕಾವ್ಯಗಳನ್ನೇ ಬರೆಯುವಷ್ಟು ಪೈಪೋಟಿಯಿರುವ ಈ ಕಾಲದಲ್ಲಿ, ಸಾರ್ವಜನಿಕ ನೀತಿ ಚಿಂತಕನ ಆಲೋಚನೆಗಳು, ದೃಷ್ಟಿಕೋನ ಮತ್ತು ತೀರ್ಮಾನಗಳ ಬಗ್ಗೆ ಬರೆದರೆ ಯಾರಾದರೂ ಯಾಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದೇ ಅಂದುಕೊಂಡಿದ್ದೆ. ಆದರೆ ಹಾಗಂದುಕೊಂಡಿದ್ದು​ ನನ್ನ ತಪ್ಪು ಎಂದು ಸಾಬೀತಾಯಿತು ಎಂದಿದ್ದಾರೆ​ ಮಿಶ್ರಾ.

ಬರೆಯುವುದು ಮತ್ತು ಅನಿಸಿದ್ದನ್ನು ಹೇಳುವುದು ನಮ್ಮ ಕೆಲಸ. ಆದರೆ ಅದರಿಂದಾಗಿ ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಹೃದಯ ಬಡಿತ ಏರುಪೇರಾಯಿತು ಎನ್ನುತ್ತಾರೆ ಮಿಶ್ರಾ. ಅವರು ಬರೆಯುತ್ತಿದ್ದ ರಾಹುಲ್ ಕುರಿತ ಪುಸ್ತಕ ಅಂಬಾನಿಯ ಅದೆಂಥ ಭಯಕ್ಕೆ ಕಾರಣವಾಯಿತೊ. ಆ ಪುಸ್ತಕದ ವಿಚಾರ ಮರೆತು ಸುಮ್ಮನೆ ಕೆಲಸ ಮಾಡಿಕೊಂಡಿರಿ ಎಂಬ ಸೂಚನೆಯೂ ಬಂದಿತ್ತು ಎಂಬುದನ್ನು ಅವರ ಮಾತುಗಳು ತಿಳಿಸುತ್ತವೆ.

ಪುಸ್ತಕವನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನನ್ನೆದುರು ಇಡಲಾಗಿತ್ತು. ಆದರೆ ನಾನು ಪುಸ್ತಕವನ್ನೇ ಆರಿಸಿಕೊಂಡೆ. ನಮ್ಮ ಮೂಲಭೂತ ಕೆಲಸ ಯಾವುದೋ ಅದನ್ನೇ ಆಯ್ದುಕೊಂಡೆ. ಸತ್ಯ ಹೇಳುವುದನ್ನು ಆರಿಸಿಕೊಂಡೆ. ಹಾಗಾಗಿ, ಮೊದಲು ರಾಜೀನಾಮೆ ನೀಡಿದೆ, ನಂತರ ಪುಸ್ತಕದ ಬಗ್ಗೆ ಯೋಚಿಸಿದೆ ಎಂದು ಬರೆದುಕೊಂಡಿದ್ದಾರೆ ಮಿಶ್ರಾ.

ಮುಂದಿನ ಅವರ ಮಾತುಗಳು ಅವರ ತಳಮಳ ಎಂಥದಾಗಿತ್ತು ಎಂಬುದನ್ನು ಹೇಳುತ್ತವೆ. ಸುದ್ದಿಮನೆಯಲ್ಲಿ ಮಾಡಿಕೊಂಡ ಎಲ್ಲ ರಾಜಿಯ ಕಾರಣಕ್ಕೆ ಈ ಪುಸ್ತಕ ಪ್ರಕಟವಾಗಿರಲಿಲ್ಲ. ರಾಜಿಯ ಕಾರಣದಿಂದ ಅಡಗಿಸಿಟ್ಟಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಈ ಪುಸ್ತಕ ಪ್ರಕಟಣೆ ಎಂದಿದ್ದಾರೆ.

2011ರಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಾರಂಭವಾದ ಸುಳ್ಳು ಪ್ರಚಾರಕ್ಕೆ ಪ್ರತಿಯಾಗಿ ನೈಜ ಮತ್ತು ದೃಢವಾದ ಉತ್ತರ ಈ ಪುಸ್ತಕದಲ್ಲಿದೆ. ಪ್ರಜಾಪ್ರಭುತ್ವದಲ್ಲಿ ತನ್ನ ಸಾಂಪ್ರದಾಯಿಕ ಮತ್ತು ಅದ್ಭುತವಾದ ವಿರೋಧ ಪಕ್ಷದ ಪಾತ್ರದಿಂದ ವಿಮುಖವಾಗಿ ಮಾಧ್ಯಮಗಳು ಸರ್ಕಾರದ ಪರವಾಗಿ ನಿಂತವು. ವಿರೋಧ ಪಕ್ಷಗಳ ಚಾರಿತ್ರ್ಯ ಹರಣಕ್ಕೆ ಇಳಿದವು. ಅವುಗಳಿಂದ ಜನರ ಪ್ರಾತಿನಿಧಿಕ ಧ್ವನಿಯನ್ನು ಕಸಿದುಕೊಳ್ಳಲು ನೋಡಿದವು. ಸುದ್ದಿಮನೆ ಮತ್ತು ಸುಳ್ಳು ಪ್ರಚಾರದ ಐಟಿ ಸೆಲ್ ನಡುವಿನ ವ್ಯತ್ಯಾಸವನ್ನೇ ಮಾಧ್ಯಮಗಳು ಅಳಿಸಿಹಾಕಿದವು ಎಂದು ದಯಾಶಂಕರ್​ ಮಿಶ್ರಾ ಹೇಳಿದ್ದಾರೆ.

ಈ ಪುಸ್ತಕ ಕೋಮುವಾದ, ಅಪಪ್ರಚಾರ ಮತ್ತು ಸರ್ವಾಧಿಕಾರದ ವಿರುದ್ಧ ರಾಹುಲ್ ಗಾಂಧಿ ಹೋರಾಟದ ವಿಶ್ಲೇಷಣೆಯಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಹಾಗೂ ಅಣ್ಣಾ ಹಝಾರೆಯೊಂದಿಗೆ ಕೇಜ್ರಿವಾಲ್ ನಡೆಸಿದ ಸುಳ್ಳು ಪ್ರಚಾರದ ರಾಜಕಾರಣವನ್ನು ಓದುಗರು​ ಇದರ ಮೂಲಕ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಮಿಶ್ರಾ ಬರೆದಿದ್ದಾರೆ.

ಈ ಪುಸ್ತಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಾಳಿಗಳ ಚರಿತ್ರೆಯನ್ನು 11 ಅಧ್ಯಾಯಗಳಲ್ಲಿ ನಿರೂಪಿಸುವ ಸರಳ ಪ್ರಯತ್ನವಾಗಿದೆ ಎಂದಿದ್ದಾರೆ. ಹಿಂದುತ್ವ ರಾಜಕಾರಣದಲ್ಲಿ ಹೆಚ್ಚಿರುವ ಗುಂಪು ಹಲ್ಲೆ, ಸುಳ್ಳುಗಳ ಪಾರಮ್ಯ ಹಾಗೂ ಸುಳ್ಳು ಪ್ರಚಾರಗಳು, ರಾಷ್ಟ್ರೀಯವಾದವಾಗುತ್ತಿರುವ ಹಿಂ​ದುತ್ವ ಕೋಮುವಾದ, ಪ್ರಜಾತಂತ್ರ ಮೌಲ್ಯಗಳ ನಾಶ ಇವೆಲ್ಲ ಭಾರತದ ಮೇಲಿನ ಗಾಯಗಳು. ಈ ಗಾಯಗಳು ಇನ್ನು ಕೆಲವು ಸಮಯದಲ್ಲಿ ಗುಣವಾಗಲೂ ಬಹುದು ಅಥವಾ ಅದಕ್ಕೆ ದಶಕಗಳಷ್ಟು ಕಾಲವೇ ಹಿಡಿಯಲೂ ಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲಿದ್ದೀರಿ ಎಂದು ದಯಾಶಂಕರ್ ಮಿಶ್ರಾ ಬರೆದಿದ್ದಾರೆ.

​ಈ ದೇಶ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 150 ದೇಶಗಳ ಪೈಕಿ 161 ನೇ ಸ್ಥಾನಕ್ಕೆ ಸುಮ್ಮನೆ ಕುಸಿದಿಲ್ಲ. ಇಲ್ಲಿ ಸತ್ಯ ಹೇಳುವ ಪತ್ರಕರ್ತರನ್ನು ಮುಗಿಸಿಬಿಡುವ ಕ್ರೌರ್ಯ ದಿಢೀರನೇ ನಡೆಯುತ್ತಿಲ್ಲ. ಇಲ್ಲಿ ನಿಷ್ಠುರ ಪ್ರಶ್ನೆ ಕೇಳುವ ಪತ್ರಕರ್ತರನ್ನು, ಅವರ ಕುಟುಂಬವನ್ನು ಸೋಷಿಯಲ್ ಮೀಡಿಯಾದಲ್ಲಿ ಗುರಿಯಾಗಿಸೋದು ಯಾರೋ ಕೆಲವರು ತಲೆಕೆಟ್ಟವರು ಮಾಡುತ್ತಿರುವ ಕೆಲಸ ಅಲ್ಲ ಎಂಬುದು ದಯಾಶಂಕರ್ ಮಿಶ್ರಾ ಅವರ ಹೇಳಿಕೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ದಯಾಶಂಕರ್ ಮಿಶ್ರಾ ರಾಜೀನಾಮೆ ವಿಚಾರ ಚರ್ಚೆಯಾಗುತ್ತಿರುವುದೇನೋ ನಿಜ. ಆದರೆ, ನೈತಿಕತೆ ನಾಶವಾಗಿರುವ, ಆತ್ಮವೇ ಇಲ್ಲದಂತಿರುವ ​ಮಡಿಲ ಮೀಡಿಯಾಗಳನ್ನು ಇಂಥದೊಂದು ಪ್ರಾಮಾಣಿಕ ನಡೆ ಕಿಂಚಿತ್ತಾದರೂ ಕನಲಿಸುತ್ತದೆಯೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!