ಅಮೇರಿಕಾದಲ್ಲಿ ಖಾಲಿಸ್ತಾನಿಯನ್ನು ಕೊಲೆ ಮಾಡಿಸಲು ಪ್ರಯತ್ನಿಸಿತೇ ಭಾರತ ?

Update: 2023-11-24 13:11 GMT
Editor : Ismail | Byline : ಆರ್. ಜೀವಿ

ಹರ್ದೀಪ್ ಸಿಂಗ್ ನಿಜ್ಜರ್

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿ ಎರಡು ತಿಂಗಳಾಗುವಷ್ಟರಲ್ಲೇ ಈಗ ಅಮೆರಿಕ ಕೂಡ ಭಾರತದ ವಿರುದ್ಧ ಅಂಥದೇ ಗಂಭೀರ ಆರೋಪ ಮಾಡಿದೆ. ತನ್ನ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನೊಬ್ಬನ ಹತ್ಯೆ ಯತ್ನವನ್ನು ಅಧಿಕಾರಿಗಳು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿದೆ. 
ಇದರಲ್ಲಿ ಭಾರತದ ಕೈವಾಡವಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಚಿಯಲ್ ಟೈಮ್ಸ್ ವರದಿ ಮಾಡಿದೆ. ಘೋಷಿತ ಖಾಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ ಜೆ ) ಇದರ  ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಯತ್ನ ನಡೆಸಲಾಗಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
ವರದಿಗೆ ಸಂಬಂಧಿಸಿ ಭಾರತದ ವಿದೇಶಾಂಗ ಸಚಿವಾಲಯ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ಪತ್ರಿಕೆ ಹೇಳಿದೆ. ಇನ್ನೊಂದೆಡೆ,  ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ, ರಾಜತಾಂತ್ರಿಕ ವಿಷಯಗಳು, ಗುಪ್ತಚರ ಸೇರಿದಂತೆ ವಿವಿಧ ಸಂಸ್ಥೆಗಳ ವಿಚಾರವಾಗಿ ತನ್ನ ಪಾಲುದಾರ ದೇಶಗಳ ಜೊತೆ ನಡೆಸಿರುವ ಮಾತುಕತೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿರುವುದಾಗಿ​ಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎರಡೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಹೀಗೊಂದು ಗಂಭೀರ  ಆರೋಪ ಬಂದಿರುವುದು, ಭಾರತ ಮತ್ತೊಂದು ದೇಶದ ಪ್ರಜೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿರುವುದು ರಾಜತಾಂತ್ರಿಕ ಮಟ್ಟದಲ್ಲಿ ಬಹಳ ಕಳವಳಕಾರಿ ವಿಚಾರವಾಗಿದೆ.
ಭಾರತದ ಸ್ನೇಹಪರ ದೇಶವಾಗಿರುವ ಅಮೆರಿಕವೇ ಈಗ ತನ್ನ ನಾಗರಿಕನನ್ನು ಕೊಲೆ ಮಾಡಲು ಭಾರತ  ಪ್ರಯತ್ನಿಸಿದೆ ಎಂದು ಆರೋಪಿಸಿರುವುದರ ಕುರಿತ ಫೈನಾನ್ಷಿಯಲ್ ಟೈಮ್ಸ್ ವರದಿ ಭಾರತವನ್ನು ವಿಚಿತ್ರ ಪರಿಸ್ಥಿತಿಗೆ ತಳ್ಳಿದೆ. ಎರಡು ತಿಂಗಳ ಹಿಂದೆ ಕೆನಡಾ ಪ್ರಧಾನಿ ಇಂತಹದೇ ಆರೋಪಗಳನ್ನು ಮಾಡಿದಾಗ, ಭಾರತ ಅದನ್ನು ಕಟುವಾಗಿ ನಿರಾಕರಿಸಿತ್ತು. 
ಕೆನಡಾದ ಆರೋಪಗಳನ್ನು ತಿರಸ್ಕರಿಸಿ, ರಾಜಕೀಯ ಪ್ರೇರಿತ ಮತ್ತು ಅಸಂಬದ್ಧ ಎಂದು ತಿರುಗೇಟು ನೀಡಿತ್ತು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವೂ ಹದಗೆಟ್ಟಿತು. ರಾಯಭಾರ ಕಚೇರಿಗಳಿಂದ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಲಾಯಿತು. ಅಲ್ಲದೆ, ಪರಸ್ಪರ ವೀಸಾಗಳನ್ನು ನಿಷೇಧಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು.
ಈ ಕ್ರಮಗಳ ಮೂಲಕ ತಾನು ಅಂತಹ ದೇಶವಲ್ಲ, ಬೇರೆ ದೇಶದೊಳಗಿನ ಪ್ರಜೆಗಳನ್ನು ಕೊಲ್ಲುವಂಥ ಕೆಲಸವನ್ನು ಮಾಡುವುದಿಲ್ಲ ಎಂದು ತೋರಿಸಲು ಭಾರತ ಪ್ರಯತ್ನಿಸಿತು. ಆದರೆ ಈಗ ಅಮೆರಿಕದಿಂದ ಅಂತಹದೇ ಆರೋಪ ಕೇಳಿ ಬಂದಿದೆ.
ಭಾರತಕ್ಕೆ ರಾಜತಾಂತ್ರಿಕ ಎಚ್ಚರಿಕೆಯ ಹೊರತಾಗಿ, ಅಮೆರಿಕ ಫೆಡರಲ್ ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ ಒಬ್ಬ ಶಂಕಿತನ ವಿರುದ್ಧ ಮೊಹರು ಮಾಡಿದ ದೋಷಾರೋಪಣೆಯನ್ನೂ ಸಲ್ಲಿಸಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ತಿಳಿಸಿದೆ. ಈ ಸುದ್ದಿ ಗಂಭೀರವಾದುದಾಗಿದೆ. ಏಕೆಂದರೆ ಇದು ಕೆನಡಾಕ್ಕೆ ಭಾರತ ನೀಡಿದ್ದ ಉತ್ತರಗಳನ್ನೇ ಅನುಮಾನಿಸುವಂಥ ಸನ್ನಿವೇಶವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಂದಿಟ್ಟಿದೆ.
ಒಂದು ದೇಶವಾಗಿ ಭಾರತ ತನ್ನ ವ್ಯವಸ್ಥೆಯ ಯಾವುದೇ ಭಾಗವು ಮತ್ತೊಂದು ದೇಶದ ಮಣ್ಣಿನಲ್ಲಿ ಹತ್ಯೆಗಳನ್ನು ನಡೆಸುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಎಂದಿಗೂ ಬಯಸಲು ಸಾಧ್ಯವಿಲ್ಲ. ಆದರೆ ಈಗ ಎರಡೆರಡು ದೇಶಗಳ ಆರೋಪಗಳ ನಂತರ ಭಾರತ ಈ ವಿಚಾರದಲ್ಲಿ ದೃಢವಾದ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಪ್ರತಿಕ್ರಿಯಿಸುವುದು ಅಗತ್ಯವಾಗಿದೆ.
ಖಾಲಿಸ್ತಾನಿ ಪರ ಸಂಘಟನೆ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದೆ ಎಂಬುದು ಭಾರತದ ಆರೋಪ.  ಕೆನಡಾದಲ್ಲಿನ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಗುರ್ಪತ್ವಂತ್ ಪನ್ನುನ್ ನ  ಅಮೃತಸರದಲ್ಲಿನ ಆಸ್ತಿಯನ್ನು ಎನ್ಐಎ ಕಳೆದ ತಿಂಗಳು ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿತ್ತು. ಯುಎಪಿಎ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿತ್ತು.
ಪನ್ನುನ್ ಇದೇ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಾಧ್ಯತೆಯಿದೆ. ಅಂದು ಸಿಖ್ ಸಮುದಾಯದವರು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದ್ದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಈ ತಿಂಗಳ ಮೊದಲ ವಾರ ಕಾಣಿಸಿಕೊಂಡಿತ್ತು. ಹಿಂದೆಯೂ ಆತ ಇಂಥದೇ ಬೆದರಿಕೆಗಳನ್ನು ಹಾಕಿದ್ದಿತ್ತು.
ಸಿಖ್ಸ್ ಫಾರ್ ಜಸ್ಟೀಸ್ನ 40 ವೆಬ್ಸೈಟ್ಗಳನ್ನು ಭಾರತ 2020ರ ಜುಲೈನಲ್ಲಿಯೇ ಬ್ಲಾಕ್ ಮಾಡಿತ್ತು. ಇದೆಲ್ಲ ಒಂದು ಕಡೆ ನಡೆದಿರುವಾಗಲೇ, ಕಳೆದ ಜೂನ್ನಲ್ಲಿ ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಯಿತು. ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ನಂಬಲರ್ಹ ಆರೋಪಗಳಿವೆ ಎಂದು ಕಳೆದ ಸೆಪ್ಟೆಂಬರ್ನಲ್ಲಿ ಮೊದಲ ಬಾರಿಗೆ ಕೆನಡಾ ಹೇಳಿತ್ತು. ಮೊನ್ನೆ ಈ ತಿಂಗಳ ಎರಡನೇ ವಾರದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಭಾರತದ ಮೇಲೆ ಹೊರಿಸಿದ ಆರೋಪವನ್ನು ಪುನರುಚ್ಚರಿಸಿದ್ದರು.
 
ಅಂತಾರಾಷ್ಟ್ರೀಯ ಕಾನೂನು ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ಸಾರ್ವಭೌಮತೆಯ ಉಲ್ಲಂಘನೆ ಇದಾಗಿದ್ದು, ನಾವಿದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ವಿಚಾರದಲ್ಲಿ ಆಮೂಲಾಗ್ರ ತನಿಖೆಗೆ ಸಹಕರಿಸುವಂತೆ ಆರಂಭದಿಂದಲೂ ಭಾರತ ಸರ್ಕಾರವನ್ನು ಕೇಳಿಕೊಂಡಿದ್ದೇವೆ ಎಂದು ಟ್ರೂಡೊ ಹೇಳಿದ್ದರು.
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಮರದಿಂದ ಅಮೆರಿಕ ಅಂತರ ಕಾಯ್ದುಕೊಂಡಂತೆ ಕಂಡಿದ್ದರೂ, ಟ್ರೂಡೊ ಆರೋಪದ ಪಾರದರ್ಶಕ ನಿರ್ವಹಣೆಯ ಅಗತ್ಯದ ಬಗ್ಗೆ ಅದು ಈಚೆಗೆ ಪ್ರದಿಪಾದಿಸಿತ್ತು. ಈ ವಿಚಾರದಲ್ಲಿನ ಕೆನಡಾದ ತನಿಖೆಗೆ ಭಾರತ ಸಹಕರಿಸಬೇಕೆಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬಿ ಹೇಳಿದ್ದರು.
ಇತರ ದೇಶಗಳಲ್ಲಿನ ಭಿನ್ನಮತೀಯರನ್ನು ಟಾರ್ಗೆಟ್ ಮಾಡುವುದರ ಬಗ್ಗೆ ತನ್ನ ತೀವ್ರ ಅಸಮಾಧಾನವನ್ನೂ ಶ್ವೇತಭವನ ವ್ಯಕ್ತಪಡಿಸಿತ್ತು. ಕೆನಡಾದಲ್ಲಿನ ಸಿಖ್ ಪ್ರತ್ಯೇಕತಾವಾದಿಯ ಹತ್ಯೆ ವಿಚಾರವನ್ನು ಬೈಡನ್ ಜಿ20 ಹೊತ್ತಿನಲ್ಲಿಯೇ ಮೋದಿ ಜೊತೆ ಪ್ರಸ್ತಾಪಿಸಿದ್ದರು.
ಈಗ, ಅಮೆರಿಕ ನೆಲದಲ್ಲಿ ನಡೆದಿರುವ ಹತ್ಯೆ ಸಂಚು ಮತ್ತದರಲ್ಲಿ ಭಾರತದ ಪಾತ್ರವಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಈಗಾಗಲೇ ಭಾರತ ಸರ್ಕಾರದ ಜೊತೆ ಅಮೆರಿಕ ಈ ವಿಚಾರ ಪ್ರಸ್ತಾಪಿಸಿದೆ. ಭಾರತ ಇದರ ಬಗ್ಗೆ ಹೆಚ್ಚಿನ ತನಿಖೆ ಮಾಡಬೇಕಿದೆ ಎಂದು ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ವಕ್ತಾರೆ ಆಡ್ರಿಯನ್ ವಾಟ್ಸನ್ ಹೇಳಿದ್ದಾರೆ.
ಭಾರತ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ. ಯಾಕೆಂದರೆ ಇದು ಭಾರತದ ಸುರಕ್ಷತೆ ದೃಷ್ಟಿಯುಂದಲೂ ಕಳವಳಕಾರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿರುವುದು ವರದಿಯಾಗಿದೆ. ಪನ್ನೂನ್ ಕೂಡ ನಿಜ್ಜರ್ ಹಾಗೆಯೇ ದಶಕಗಳಿಂದ ಸಿಖ್ ಪ್ರತ್ಯೇಕತಾವಾದದ ಪ್ರತಿಪಾದಕನಾಗಿದ್ದಾನೆ. ಈಗ ಖಾಲಿಸ್ತಾನ್ ಎಂಬ ಹೆಸರಿನ ಸ್ವತಂತ್ರ ಸಿಖ್ ಸಂಘಟನೆಯೊಂದಿಗೆ ಭಾರತದಿಂದ ಪ್ರತ್ಯೇಕ ದೇಶಕ್ಕೆ ಬೇಡಿಕೆಯಿಟ್ಟಿದ್ದಾನೆ ಎಂಬ ವರದಿಗಳಿವೆ.
ಕೆನಡಾ ಆರೋಪಿಸಿದಾಗ ಭಾರತ ಪ್ರತಿಕ್ರಿಯಿಸಿದ ರೀತಿ ಆಕ್ರಮಣಕಾರಿಯಾಗಿತ್ತು. ಆದರೆ ಈಗ ಎಲ್ಲವೂ ನಿಗೂಢ ಎಂಬಂತಿದೆ. ಕೆನಡಾದ ಬೆನ್ನಿಗೇ ಈಗ ಅಮೆರಿಕ ಕೂಡ ಹತ್ಯೆ ಸಂಚಿನ ಆರೋಪವನ್ನು ಹೊರಿಸಿರುವುದು ನಿಜವಾಗಿಯೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.
ನಿಜವಾಗಿಯೂ ಏನೇನು ಆಯಿತು ಎಂಬುದು ಅಮೆರಿಕ, ಮತ್ತದು ಈ ವಿಚಾರವನ್ನು ಯಾರಲ್ಲಿ ಹಂಚಿಕೊಂಡಿದೆಯೊ ಆ ಮಿತ್ರರಾಷ್ಟ್ರಗಳಿಗೆ ಮಾತ್ರ ಗೊತ್ತು. ಸಂಚಿನಲ್ಲಿ ಭಾರತದ ಕೈವಾಡವಿತ್ತೆಂಬ ಆರೋಪದ ವಿಚಾರದಲ್ಲಿ ಏನೇನು ವಿಚಾರಗಳ ವಿನಿಮಯವಾಗಿದೆ ಎಂಬುದು ಇನ್ನೂ ಅಸ್ಪಷ್ಟ. ಆದರೆ, ಇದು ಸುಲಭವಾಗಿ ಹೋಗುವ ಕಳಂಕವೆ ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!