ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ಹೋರಾಡಲು ಮೋದಿಯೇ ವೇದಿಕೆ ಸಜ್ಜುಗೊಳಿಸಿದರೇ ?

Update: 2024-04-18 05:20 GMT
Editor : Ismail | Byline : ಆರ್. ಜೀವಿ

ಮೋದಿ | PC : PTI 

ವಿಪಕ್ಷಗಳನ್ನು ಹಣಿಯುವ ಮೋದಿ ಸರಕಾರದ ನಡೆ ಈಗ ಅದಕ್ಕೆ ತಿರುಗುಬಾಣವಾಗಲಿದೆಯೇ ? ಕೇಜ್ರಿವಾಲ್ ಬಂಧನದಿಂದ ಇಡೀ ವಿಪಕ್ಷ ಒಕ್ಕೂಟ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಬಿಜೆಪಿ ಹಾಗು ಮೋದಿಗೆ ಸವಾಲು ಹಾಕುವಂತೆ ಮಾಡಿ ಬಿಟ್ಟರೆ ಮೋದಿ ?

ದಿಲ್ಲಿ ಸಿಎಂ ಬಂಧನ ಏನೇನು ರಾಜಕೀಯ ಪರಿಣಾಮಗಳನ್ನು ಬೀರಲಿದೆ ? ಮಹಾ ಚುನಾವಣೆಗೆ ಈ ಬಂಧನದ ಎಫೆಕ್ಟ್ ಏನಾಗಲಿದೆ ? ಹೇಗಾಗಲಿದೆ ? ಚುನಾವಣೆಗೆ ಮೊದಲು ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಮೋದಿ ರಾಜಕೀಯ ಬದುಕಿನಲ್ಲೇ ಅತಿ ದೊಡ್ಡ ಪ್ರಮಾದವಾಗಿ ಪರಿಣಮಿಸಬಹುದೆ ? ಈಗಿನ ಬೆಳವಣಿಗೆಗಳು ಇಡೀ ಲೆಕ್ಕಾಚಾರವನ್ನೇ ಬದಲಿಸಿಬಿಡಬಹುದೆ ? ಆಡಳಿತ ಪಕ್ಷದ ವಿರುದ್ಧದ ಸಂಚಲನವೊಂದು ಒಳಗೊಳಗೇ ಕ್ರಿಯಾಶೀಲವಾಗಿ, ಅದು ಮೋದಿ ಮತ್ತವರ ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಲಿದೆಯೆ?

ದೆಹಲಿ ಮತ್ತು ಪಂಜಾಬ್ಗಳಲ್ಲೂ ಇಂಥದೊಂದು ಸಾಧ್ಯತೆಯನ್ನು ಇಲ್ಲವೆಂದು ಹೇಳಲಿಕ್ಕಾಗದು. ದೆಹಲಿಯಲ್ಲಿ ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಪಂಜಾಬ್ನಲ್ಲಿ ಅವೆರಡೂ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಉತ್ತರ ಪ್ರದೇಶದಲ್ಲಿಯೂ ವೋಟುಗಳ ವರ್ಗಾವಣೆ ಹೇಗೆಲ್ಲ ಆಗಬಹುದು? ಅಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಕಣಕ್ಕಿಳಿದಿವೆ. ಬಿಹಾರದಲ್ಲಿಯೂ ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರ ಬಹಳ ಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪಕ್ಷ ಮತ್ತು ಉದ್ಧವ್ ಠಾಕ್ರೆಯವರ ಶಿವಸೇನೆ ಬಣಗಳ ನಡುವೆ ಕಾಂಗ್ರೆಸ್ ಇರಲಿದ್ದು, ಅಲ್ಲಿ ಹೇಗೆ ವೋಟುಗಳ ವರ್ಗಾವಣೆ ಆಗಲಿದೆ?

ಇದೇ ವೇಳೆ ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಎದುರಾಳಿಗಳಾಗಿರಲಿವೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಜೊತೆ ಕಾಂಗ್ರೆಸ್ ಮೈತ್ರಿಯಿದೆ.

ಈ ಸ್ಥಿತಿಯನ್ನು ಮೋದಿ ಮತ್ತು ಅಮಿತ್ ಶಾ ಮತ್ತೆ ಮತ್ತೆ ಲೇವಡಿ ಮಾಡುತ್ತಿರುವುದೂ ಇದೆ.ಕೇರಳದಲ್ಲಿ ಶತ್ರುಗಳಂತಿರುವ ಅವೆರಡೂ ಬೇರೆಡೆ ಮಿತ್ರರಾಗುವುದು ಹೇಗೆ ಎಂದು ಆಡಿಕೊಳ್ಳಲಾಗುತ್ತಿದೆ. ಆಡಳಿತಾರೂಢ ಬಿಜೆಪಿಗೆ ಸರಿಯಾಗಿಯೇ ಪೈಪೋಟಿ ನೀಡಬೇಕೆಂದರೆ ಬೇರೆಬೇರೆಯಾಗಿ ಕಣಕ್ಕಿಳಿಯುವುವದಕ್ಕಿಂತ ಒಟ್ಟಾಗಿ ಹೋಗಬೇಕಿರುವುದು ಈಗಿನ ಜರೂರಾಗಿದೆ.

ಹೀಗೆ ಒಗ್ಗಟ್ಟಾಗಿ ಹೋಗದ ಸ್ಥಿತಿಯ ಲಾಭ ಮಾಡಿಕೊಳ್ಳುವುದಕ್ಕೆಂದೇ ಬಿಜೆಪಿ ಕಾದುಕೊಂಡೂ ಇದೆ. ಆದರೆ ಈಗ ಇದೆಲ್ಲವೂ ಬದಲಾಗಿ ಬಿಡಲಿದೆಯೆ?ಅರವಿಂದ್ ಕೇಜ್ರಿವಾಲ್ ಅವರ ಬಂಧನವೇ ಅಂಥ ಹೊಸ ರಾಜಕೀಯ ಸಾಧ್ಯತೆಗೆ ಮುಖ್ಯ ಕಾರಣವಾಗಲಿದೆಯೆ?

ಈಗಿನ ಈ ಬೆಳವಣಿಗೆ ಎಲ್ಲ ವಿಪಕ್ಷಗಳನ್ನು ಒಂದೆಡೆಗೆ ತರುವ ಮಹತ್ವದ ರಾಜಕೀಯ ತಿರುವಿಗೆ, ಚುನಾವಣಾ ರಾಜಕೀಯದ ಹೊಸ ತೀವ್ರತೆಗೆ ಮುನ್ನುಡಿ ಬರೆಯಲಿದೆಯೆ? ಹಲವು ಸಣ್ಣ ಪಕ್ಷಗಳು ಇಂಡಿಯಾ ಮೈತ್ರಿಯ ಭಾಗವಾಗಲು ಶುಕ್ರವಾರ ನಿರ್ಧರಿಸಿದ್ದು ಒಂದು ಮಹತ್ವದ ಘಟನೆ.

ಲೋಕತಂತ್ರ ಸುರಕ್ಷಾ ಪಾರ್ಟಿ, ಬಹುಜನ್ ಮುಕ್ತಿ ಪಾರ್ಟಿ, ಸ್ವತಂತ್ರ ಜನತಾ ಪಾರ್ಟಿ ಮೊದಲಾದ ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ಬೇಷರತ್ತಾಗಿ ನಿಲ್ಲಲು ಒಮ್ಮತದ ನಿರ್ಣಯ ತೆಗೆದುಕೊಂಡು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿವೆ. ಬಹುಶಃ ಇದು ಈ ದೇಶದಲ್ಲಿನ ವಿಲಕ್ಷಣ ರಾಜಕೀಯ ಸನ್ನಿವೇಶದಲ್ಲಿ ವಿಪಕ್ಷಗಳೆಲ್ಲ ಒಂದಾಗಬೇಕಿರುವ ತುರ್ತನ್ನು ಸೂಚಿಸುತ್ತಲೇ, ಮುಂದೆ ಅಂಥ ಸಾಧ್ಯತೆ ಹೆಚ್ಚಬಹುದು ಎಂಬುದನ್ನೂ ಹೇಳಿದಂತಿದೆ.

ಈಗಾಗಲೇ ಜಾರ್ಖಂಡ್ ಮುಖ್ಯಮಂತ್ರಿ ಹೇಮತ್ ಸೊರೇನ್ ಬಂಧನವಾಗಿತ್ತು. ಈಗ ಅದೇ ಈಡಿಯನ್ನು ಬಳಸಿಕೊಂಡು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಒಬ್ಬ ಮುಖ್ಯಮಂತ್ರಿಯನ್ನೂ ಹೀಗೆ ಬಂಧಿಸುವ ಇವರ ರಾಜಕಾರಣದ ಹಿಂದಿನ ಉದ್ದೇಶವೇನು? ಮತ್ತಿದಕ್ಕೆ ಇಂಡಿಯಾ ಮೈತ್ರಿ ಪಕ್ಷಗಳು ತೋರಿಸಬಹುದಾದ ಪ್ರತಿಕ್ರಿಯೆ ರಾಜಕೀಯವಾಗಿ ಏನಾಗಿರಲಿದೆ?

ಇದೇ ಅವುಗಳನ್ನು ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಮರೆಯುವಂತೆ ಮಾಡಿ ಒಟ್ಟಿಗೆ ತರಬಲ್ಲುದೆ? ಕೇಜ್ರಿವಾಲ್ ಗೆಲುವಂತೂ ಯಾರೂ ಪಡೆದಿರದಂಥ ಬಹುಮತದ ಗೆಲುವಾಗಿತ್ತು. ಹಾಗೆ ಜನರು ಗೆಲ್ಲಿಸಿದ ನಾಯಕನನ್ನೂ ಇವರು ಕಳಿಸುವ ಈಡಿ ತಂಡ ಬಂದು ಬಂಧಿಸಿ ಕರೆದುಕೊಂಡು ಹೋಗಿಬಿಡುತ್ತದೆ.

ಪಂಜಾಬ್ನಲ್ಲಿಯೂ ಅಂಥದೇ ಭರ್ಜರಿ ಗೆಲುವನ್ನು ಕಂಡು ಅಧಿಕಾರಕ್ಕೇರಿದ್ದ ಪಕ್ಷ ಎಎಪಿ. ಅಂಥ ಪಕ್ಷದ ಸಿಎಂ ಈಗ ಬಂಧಿತರಾಗಿದ್ಧಾರೆ.ವಿಪಕ್ಷಗಳ ನಾಯಕರ ವಿರುದ್ಧ ಅದೆಷ್ಟು ಭ್ರಷ್ಟಾಚಾರ ಆರೋಪ ಇದ್ದರೂ ಅವರು ಬಿಜೆಪಿ ಸೇರಿಬಿಟ್ಟರೆ ಯಾವ ಈಡಿ ಕಾರ್ಯಾಚರಣೆಯೂ ಅಂಥವರ ವಿರುದ್ಧ ಇರುವುದೇ ಇಲ್ಲ. ಯಾರನ್ನು ಕಡು ಭ್ರಷ್ಟರು ಎಂದು ಮೋದಿಯೇ ಹೇಳಿಕೊಂಡು ಓಡಾಡಿದ್ದರೊ ಅಂಥವರನ್ನೇ ಬಳಿಕ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅಂತವರ ಜೊತೆಯೇ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರ ನಡೆಸುತ್ತಿದೆ.

ಅಂಥವರ ವಿರುದ್ಧದ ಪ್ರಕರಣಗಳ ಫೈಲನ್ನು ಮುಚ್ಚಿ ಮೂಲೆಗೆ ಎಸೆಯಲಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯಿತು ಎಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆ. ಯಾರು ವಿರೋಧ ಮಾಡುತ್ತಾರೊ ಅಂಥವರನ್ನು ತನಿಖೆಯ ಚಕ್ರವ್ಯೂಹದಲ್ಲಿ ಸಿಲುಕಿಸಲಾಗುತ್ತದೆ.

ಬಹುಮತದಿಂದ ಆರಿಸಿಬಂದ ಮುಖ್ಯಮಂತ್ರಿಯೊಬ್ಬ ತನ್ನ ಹುದ್ದೆಯಲ್ಲಿ ಇರುವುದೇ ಗ್ಯಾರಂಟಿಯಿರದಂಥ ಸ್ಥಿತಿಯನ್ನು ಈ ದೇಶದಲ್ಲಿ ಈಗ ತಂದಿಡಲಾಗಿದೆ. ಇದಕ್ಕೆ ಸರಿಯಾಗಿ ಮಡಿಲ ಮೀಡಿಯಾಗಳು ಏನನ್ನೂ ಪ್ರಶ್ನಿಸದೆ, ಸರ್ಕಾರದ್ದೇ ಭಾಗವಾಗಿ ಮಾತನಾಡುತ್ತ, ಪ್ರಜಾಸತ್ತೆಯಲ್ಲಿ ಇನ್ನಷ್ಟು ಹತಾಶ ಸ್ಥಿತಿಗೆ ಕಾರಣವಾಗುತ್ತಿವೆ. ಈಗಿನ ಸ್ಥಿತಿ ನೋಡಿದರೆ ಒಡಿಶಾದಲ್ಲಿನ ನವೀನ್ ಪಾಟ್ನಾಯಕ್ ಮುಂದೆಯೂ ಆತಂಕವಿದೆ.

ಲೋಕಸಭೆ ಚುನಾವಣೆ ಜೊತೆಗೇ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಎದುರಲ್ಲಿಯೂ ಸವಾಲು ಇದೆ. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಇಂಥದೇ ಏನಾದರೂ ಆಟವನ್ನಾಡಿ ನಾಯ್ಡುವನ್ನೇ ಸಿಎಂ ಖುರ್ಚಿಯ ಮೇಲೆ ಕೂರಿಸಲೂ ಬಹುದು.

ಮಹಾರಾಷ್ಟ್ರದಲ್ಲಿಯೂ ವಿಧಾನಸಭೆ ಚುನಾವಣೆ ನಡೆಯುವುದಿದೆ. ಈಗ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದರೆ, ಮಮತಾ ಬ್ಯಾನರ್ಜಿ ಅಥವಾ ಪಿಣರಾಯಿ ವಿಜಯನ್ ಎದುರಲ್ಲಿಯೂ ಇಂಥದೇ ಸಂದರ್ಭಗಳು ಬಂದರೂ ಅಚ್ಚರಿಪಡುವಂಥದ್ದು ಏನಿಲ್ಲ,.

ಅದಾದ ಬಳಿಕ ದಿಲ್ಲಿಯಲ್ಲೂ ಚುನಾವಣೆ ಬರುತ್ತದೆ. ಕೇಜ್ರಿವಾಲ್ ಗೆದ್ದಷ್ಟು ಪ್ರಚಂಡ ಬಹುಮತದಿಂದ ಯಾರು ಗೆಲ್ಲಲು ಸಾಧ್ಯ?

ಅಷ್ಟಾದ ಮೇಲೂ ಸಿಎಂ ಬಂಧನವಾಗುತ್ತದೆ. ಈಗ ಎಎಪಿಯ ಎಲ್ಲ ಪ್ರಮುಖ ನಾಯಕರು ಜೈಲಿನಲ್ಲಿದ್ಧಾರೆ. ದೇಶದುದ್ದಕ್ಕೂ ಈಗ, ಅದು ಉತ್ತರ ಪ್ರದೇಶವಾಗಲಿ, ಬಿಹಾರವಾಗಲಿ, ಮಹಾರಾಷ್ಟ್ರವಾಗಲಿ ತಮಿಳ್ನಾಡು ಆಗಲಿ ಒಂದು ವಿಲಕ್ಷಣ ಕರಾಳತೆಯನ್ನು ಬಿಜೆಪಿಯ ಇವತ್ತಿನ ರಾಜಕೀಯ ತಂದಿಟ್ಟಿದೆ.

ಹೀಗಿರುವಾಗ ವಿಪಕ್ಷಗಳು ಒಗ್ಗಟ್ಟಾಗುವ ಪ್ರಮೇಯವೊಂದು ಅನಿವಾರ್ಯತೆಯೊಂದು ತಾನೇ ತಾನಾಗಿ ಸಾಧ್ಯವಾಗಲಿದೆಯೆ?

ಅದು ಎಲ್ಲ ವಿಪಕ್ಷಗಳನ್ನೂ ಬಿಜೆಪಿಯ ಈ ರಾಜಕಾರಣಕ್ಕೆ ಪ್ರತಿಯಾಗಿ ಕೂಡಿಸಿ ಕರೆದೊಯ್ಯಲಿದೆಯೆ? ಈಗ ಎಎಪಿ ಎದುರು ಬಂದಿರುವ ಬಿಕ್ಕಟ್ಟು ನೋಡಿದರೆ, ಅದರ ವಿರುದ್ಧ ಈಡಿ ಹೊರಿಸುತ್ತಿರುವ ಆರೋಪಗಳನ್ನು ನೋಡಿದರೆ, ಅದರ ಬ್ಯಾಂಕ್ ಖಾತೆಗಳೂ ಸ್ಥಗಿತಗೊಳ್ಳಬಹುದು. ಅದರ ಕೇಂದ್ರ ಕಚೇರಿ ಕೂಡ ಸೀಝ್ ಆಗಬಹುದು.

ಈಗಾಗಲೇ ಕಾಂಗ್ರೆಸ್ನ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹೀಗಿರುವಾಗ ಈಗಿನ ಸ್ಥಿತಿಯಲ್ಲಿ ಚುನಾವಣೆಯನ್ನು ಬಿಜೆಪಿಗೆ ವಿರುದ್ಧವಾಗಿ ಒಗ್ಗಟ್ಟಾಗಿ ಎದುರಿಸದೇ ಹೋದಲ್ಲಿ ಅದರ ಇಂಥದೇ ರಾಜಕಾರಣ ಮುಂದೆಯೂ ನಡೆಯಲಿದೆ.

ಹೀಗೆ ಬಂಧನಗಳು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಮುಂದುವರಿಯಲಿದೆ.

ಆಗ ಒಂದೇ ಬಿಜೆಪಿ ಜೊತೆ ಸೇರಿಕೊಳ್ಳಬೇಕಾಗುತ್ತದ. ಇಲ್ಲವೆ ಹೀಗೆ ಬಲಿಪಶುವಾಗಬೇಕಾಗುತ್ತದೆ.

ನೆನಪು ಮಾಡಿಕೊಳ್ಳುವುದಾದರೆ, ಎಎಪಿ ಆಂದೋಲನದ ಮೂಲಕ ಹುಟ್ಟಿದ್ದ ಪಕ್ಷ.

ಆಗ ಅದರ ಹೋರಾಟ ನಡೆದದ್ದು ಕಾಂಗ್ರೆಸ್ ವಿರುದ್ಧ. ಸಂಘ ಪರಿವಾರದ ಜನರು ಅದರ ಹಿಂದೆಮುಂದೆ ಇದ್ದರು.

ಈಗ ಅದೇ ಬಿಜೆಪಿ ಮತ್ತು ಸಂಘ ಪರಿವಾರದ ಷಡ್ಯಂತ್ರಕ್ಕೆ ಕೇಜ್ರಿವಾಲ್ ಮತ್ತವರ ಪಕ್ಷ ಬಲಿಪಶುವಾಗಬೇಕಿದೆ.

ವಿಪರ್ಯಾಸವೆಂದರೆ, ಅವತ್ತು ಯಾವ ಕಾಂಗ್ರೆಸ್ ಅನ್ನು ಎಎಪಿ ವಿರೋಧಿಸಿತ್ತೊ ಅದರ ಜೊತೆಗೇ ಈಗ ಇವತ್ತಿನ ಕರಾಳ ರಾಜಕೀಯ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಹೋಗಬೇಕಾದ ಅನಿವಾರ್ಯತೆ ತಲೆದೋರಿದೆ.

ಇದೊಂದು ವಿಚಿತ್ರ ರಾಜಕೀಯ ಚಕ್ರ.

ದೇಶದ ರಾಜಕಾರಣದ ಮೇಲೆ ಬಹಳ ದೊಡ್ಡ ಪ್ರಭಾವ ಬಿರಿದ್ದ ನಾಯಕ ಕೇಜ್ರಿವಾಲ್ ಇಂದು ಕೋರ್ಟ್ ಮುಂದೆ ಹತಾಶ ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿರುವುದು ಅದೇ ಬಿಜೆಪಿಯ ವಿಪಕ್ಷ ದಮನ ನೀತಿ.

ಇಂಥದೊಂದು ನೀತಿಯ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಬೇಕಾದ ಕಾಲ ಬಂದಿದೆ.

ಈ ದೇಶದಲ್ಲಿ ನಿರುದ್ಯೋಗ ಪ್ರಮಾಣ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯಲು, ನಿಯಂತ್ರಿಸಲಾಗದ ಬೆಲೆಯೇರಿಕೆಗೆ ಜನರು ತತ್ತರಿಸುವಂತಾಗಲು, ದೇಶದ ಎಲ್ಲವೂ ಖಾಸಗಿಯವರ ಕೈಗೆ ಹಸ್ತಾಂತರವಾಗುವಂತಾಗಲು, ಧರ್ಮದ ಹೆಸರಿನಲ್ಲಿ ಜನರು ಹೊಡೆದಾಡಿಕೊಳ್ಳುವಂತಾಗಲು ಕಾರಣವಾದ ಮೋದಿ ನೀತಿಯ ವಿರುದ್ಧ ಈಗ ವಿಪಕ್ಷಗಳು ಒಗ್ಗಟ್ಟಾಗದೇ ಹೋದರೆ, ಈಗಲೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರೆ ಮುಂದೆ ಕಾದಿರುವುದು ಅಪಾಯ ಮಾತ್ರ.

ಯಾವ ಅಜಿತ್ ಪವಾರನ್ನು ಮಹಾ ಭ್ರಷ್ಟ ಎಂದು ಆರೋಪಿಸಿತ್ತೊ ಅವರನ್ನೇ ಕರೆದು ಡಿಸಿಎಂ ಮಾಡಿ ಜೊತೆಗಿಟ್ಟುಕೊಳ್ಳುವ ಬಿಜೆಪಿ, ಒಂದು ರಾಜ್ಯದ ಜನತೆ ಒಮ್ಮತದಿಂದ ಗೆಲ್ಲಿಸಿದ್ದ ಮುಖ್ಯಮಂತ್ರಿಯನ್ನು ಭ್ರಷ್ಟಾಚಾರ ಆರೋಪ ಹೊರಿಸಿ ಜೈಲಿಗೆ ಕಳಿಸುತ್ತದೆ ಎಂಬುದೇ ಅತ್ಯಂತ ಹಾಸ್ಯಾಸ್ಪದ ಮತ್ತು ವಿಪರ್ಯಾಸದ ಸಂಗತಿಯಾಗಿದೆ.

ಬಿಜೆಪಿಯ ಈ ದ್ವಂದ್ವನೀತಿಯಲ್ಲಿರುವುದು ಮತ್ತದೇ ಉದ್ಧೇಶ. ವಿಪಕ್ಷಗಳನ್ನು ಖಾಲಿ ಮಾಡುವುದು, ಇಲ್ಲವೆ ಮುಗಿಸಿಹಾಕುವುದು.

ಇಂಥ ಹೊತ್ತಿನಲ್ಲಿ ಈ ದೇಶದ ಜನರು ನಿಜವಾಗಿಯೂ ತಮ್ಮ ರಾಜಕೀಯ ಭಾಗವಹಿಸುವಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಂಡು ಬಹಳ ದೊಡ್ಡ ತೀರ್ಮಾನವನ್ನು ಕೊಡಬಲ್ಲರೆ?

ಹೆಚ್ಚು ದಿನಗಳೇನಿಲ್ಲ. ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!