ಲೋಕಸಭಾ ಚುನಾವಣೆಗೆ ಮೊದಲೇ ಶರಣಾಯಿತೇ ಕಾಂಗ್ರೆಸ್ ?

Update: 2023-12-04 15:21 GMT
Editor : Ismail | Byline : ಆರ್. ಜೀವಿ

ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ನಿನ್ನೆ ಬಂದಿದೆ. ಮಿಝೋರಾಂ ನಲ್ಲಿ ಇವತ್ತು ಮತ ಎಣಿಕೆ ನಡೆಯುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗಳ ಫಲಿತಾಂಶ ಹೇಳುತ್ತಿರುವುದೇನು?

ದೇಶದ ಹಿಂದಿ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಹಾಗೂ ಕಾಂಗ್ರೆಸ್ ಹೀನಾಯ ಸೋಲಿನ ಪ್ರಮುಖ ಕಾರಣಗಳೇನು?. ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡು, ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವಂತಾದದ್ದು ಹೇಗೆ?.

ಕಾಂಗ್ರೆಸ್ ಕೋಟೆಯಾಗಿದ್ದ ಛತ್ತೀಸ್ ಗಢ ಕೂಡ ಕೈಬಿಟ್ಟು ಹೋಗುವಂತಾದದ್ದು ಹೇಗೆ?. ಈ ಫಲಿತಾಂಶದ ಪರಿಣಾಮಗಳೇನು? ಲೋಕಸಭಾ ಚುನಾವಣೆ ಮೇಲೆ ಇದು ಯಾವ ಥರದ ಎಫೆಕ್ಟ್ ಉಂಟು ಮಾಡಬಹುದು ?.

ಈ ಬಗ್ಗೆ ಇವತ್ತಿನ ಕಾರ್ಯಕ್ರಮದಲ್ಲಿ ನೋಡೋಣ. ನಾಲ್ಕು ರಾಜ್ಯಗಳಲ್ಲಿ ತೆಲಂಗಾಣದಲ್ಲಿ ಮಾತ್ರ​ವೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವಾಗಿದೆ. ಉಳಿದಂತೆ ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿಯೂ ಬಿಜೆಪಿಯ ಎದುರು ಹೀನಾಯ ಸೋಲು ಕಂಡಿದೆ. ಮಧ್ಯಪ್ರದೇಶದ ಸ್ಥಿತಿ ಹೇಗಿತ್ತೆಂದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅವರ ಪಕ್ಷ ಬಿಜೆಪಿಯೇ ಒಂದು ರೀತಿಯಲ್ಲಿ ಬದಿಗೆ ಸರಿಸಿತ್ತು.

ಅಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ವ್ಯಾಪಕವಾಗಿಯೇ ಪ್ರಚಾರ ಮಾಡಿತ್ತು. ಶಿವರಾಜ್ ಸಿಂಗ್ ತಮ್ಮ ಪಕ್ಷದ ನಾಯಕತ್ವದೊಂದಿಗೇ ಹೋರಾಟ ಮಾಡಬೇಕಾದ ಸ್ಥಿತಿಯಿತ್ತು. ಪೋಸ್ಟರ್ಗಳಲ್ಲಿ ಕೂಡ ಅವರಿಗೆ ಜಾಗವಿಲ್ಲದಂತಾಗಿತ್ತು. 'ಎಂಪಿ ಮನಸ್ಸಿನಲ್ಲಿ ಮೋದಿ' ಎಂಬ ಮೋದಿಯ ಚಿತ್ರವೇ ರಾರಾಜಿಸುತ್ತಿದ್ದ ಪೋಸ್ಟರ್ಗಳೇ ಮಧ್ಯಪ್ರದೇಶದ ತುಂಬ ಕಂಡಿದ್ದವು.

ಹೀಗೆ ಒಂದೆಡೆ ಜನವಿರೋಧವಿದೆ ಎಂದು ಬಿಂಬಿಸುತ್ತಿರುವಾಗಲೇ ಕೇಂದ್ರದ ನಾಯಕರಿಗೂ ಶಿವರಾಜ್ ಸಿಂಗ್ ಬೇಡವಾಗಿದ್ದಾರೆ ಎಂಬ ಸ್ಥಿತಿ ಕಂಡಿತ್ತು. ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅವರನ್ನು ಬಿಂಬಿಸಿರಲಿಲ್ಲ. ಈಗ ಗೆದ್ದ ಬಳಿಕವೂ, ಮೋದಿ ಕಾರಣದ ಗೆಲುವು ಎಂದು ಬಿಜೆಪಿ ಹೆಳುತ್ತಿದೆಯೇ ಹೊರತು, ಶಿವರಾಜ್ ಸಿಂಗ್ ಗೆಲುವೆಂದು ತಪ್ಪಿಯೂ ಹೇಳುತ್ತಿಲ್ಲ.

ಇಂಥ ಸ್ಥಿತಿಯಲ್ಲಿಯೂ ಶಿವರಾಜ್ ಸಿಂಗ್ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಚುನಾವಣೆಗೆ 30 ದಿನಗಳಿವೆ ಎನ್ನುವ ಹೊತ್ತಲ್ಲಿ ಮೋದಿ 15 ರ್ಯಾಲಿಗಳಲ್ಲಿ ಮಾತ್ರ ಭಾಗವಹಿಸಿದ್ದರೆ, ಶಿವರಾಜ್ ಸಿಂಗ್ ಅಂಥ 160 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು.

ಬಿಜೆಪಿಯನ್ನು ಗೆಲ್ಲಿಸಿ ತೋರಿಸಿದರು. ಆದರೆ ಕಾಂಗ್ರೆಸ್ ಪಾಲಿಗೆ ಅದರ ನಾಯಕರು ಏನು ಕೊಟ್ಟರು?. ಕಾಂಗ್ರೆಸ್ ಗ್ಯಾರಂಟಿಗಳನ್ನೇ ಕಾಪಿ ಮಾಡಿಕೊಂಡು ಬಿಜೆಪಿ ಗೆದ್ದಿತು ಎಂದಾದರೆ ಕಾಂಗ್ರೆಸ್ ಸೋತಿದ್ದು ಹೇಗೆ? ಈ ಪರಿ ಎಡವಿದ್ದು ಎಲ್ಲಿ?. ಛತ್ತೀಸ್ಗಢದಲ್ಲಿ ಕೂಡ ಕಾಂಗ್ರೆಸ್ ಅನಿರೀಕ್ಷಿತ ಸೋಲು ಕಂಡಿದೆ. ಹೆಚ್ಚಿನ ಸಮೀಕ್ಷೆಗಳೆಲ್ಲವೂ ಜಿದ್ದಾಜಿದ್ದಿ ಇದ್ದು ಕೊನೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಲಿದೆ ಎಂದೇ ಹೇಳಿದ್ದವು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 68 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗೆದ್ದಿರುವುದು 36 ಕ್ಷೇತ್ರಗಳಲ್ಲಿ ಮಾತ್ರ. ಹೆಚ್ಚುಕಡಿಮೆ ಅರ್ಧದಷ್ಟು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಈ ಸೋಲಿನೊಂದಿಗೆ, ಸತತ ಮತ್ತೊಂದು ಅವಧಿಗೆ ಅಧಿಕಾರಕ್ಕೇರುವ ಸಾಧ್ಯತೆಯಿಂದ ಕಾಂಗ್ರೆಸ್ ವಂಚಿತವಾಯ್ತು.

ಛತ್ತೀಸ್ ಗಢದ ರಾಜಕೀಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ ಎಂದೇ ಬಿಂಬಿತರಾಗಿದ್ದ ಅಲ್ಲಿನ ಕಾಂಗ್ರೆಸ್ ಸಿಎಂ ಭೂಪೇಶ್ ಭಾಗೇಲ್ ತಮ್ಮ ಆಡಳಿತದ ವಿರುದ್ಧ ಇದ್ದ ಅಲೆಯನ್ನು ತಿಳಿದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅಲ್ಲಿ ಅವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕರಿಗೇ ಇದ್ದ ಅಸಮಾಧಾನವೂ ಸೋಲಿಗೆ ತನ್ನ ಕೊಡುಗೆ ನೀಡಿರಬಹುದು.

ವಿಶೇಷವಾಗಿ ಆದಿವಾಸಿಗಳಿಗೆ ಭಾಗೇಲ್ ಮೇಲೆ ಭಾರೀ ವಿಶ್ವಾಸವಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಅವರು ಸಂಪೂರ್ಣವಾಗಿ ಕೈ ಕೊಟ್ಟಿದ್ದಾರೆ. ಅದ್ಯಾಕೆ ಭಾಗೇಲ್ ಗೆ ಇದು ಗೊತ್ತಾಗಲೇ ಇಲ್ಲ ? ಬಿಜೆಪಿ ಒಳಗೊಳಗೇ ತಳಮಟ್ಟದಲ್ಲಿ ಮಾಡುತ್ತಿರುವ ಕೆಲಸ ಅವರ ಗಮನಕ್ಕೆ ಬರಲೇ ಇಲ್ಲವೇ ? ಅಥವಾ ತನಗಿರುವ ಜನಪ್ರಿಯತೆಯಿಂದಾಗಿ ಗೆದ್ದೇ ಬಿಟ್ಟೆ ಎಂಬ ಅತಿಯಾದ ಆತ್ಮ ವಿಶ್ವಾಸವೇ ಅವರನ್ನು ಮುಳುಗಿಸಿತೇ ?

ರಾಜಸ್ಥಾನದಲ್ಲಿ ಇದ್ದ ಅಧಿಕಾರವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ. ಆ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಸಿಎಂ ಅಶೋಕ್ ಗೆಹಲೋಟ್ ಅವರ ಮ್ಯಾಜಿಕ್ ನಡೆದಿಲ್ಲ. ರಾಜಸ್ತಾನವನ್ನು ಗೆಹಲೋಟ್ ಅವರೇ ಗೆದ್ದು ಕೊಡುತ್ತಾರೆ ಎಂದು ನಂಬಿದ್ದ ಕಾಂಗ್ರೆಸ್ ವರಿಷ್ಠರಿಗೆ ಈಗ ಆಘಾತವಾಗಿದೆ. ಮುಖ್ಯಮಂತ್ರಿ ಸೀಟು ತಾನು ಬೇಡವೆಂದರೂ ತನ್ನನ್ನು ಬಿಡಲ್ಲ ಎಂದು ಹೇಳಿದ್ದ ಗೆಹಲೋಟ್ ರನ್ನು ಈಗ ಅಲ್ಲಿನ ಜನರೇ ಮನೆಗೆ ಕಳಿಸಿದ್ದಾರೆ. ಆಡಳಿತ ವಿರೋಧಿ ಅಲೆ ಅಲ್ಲಿ ಕಾಂಗ್ರೆಸ್ ಸೋಲನ್ನು ಬರೆದಿದೆ.

ಒಟ್ಟಾರೆ ಮೂರೂ ಹಿಂದಿ ರಾಜ್ಯಗಳಲ್ಲಿ ಅಲ್ಲಿನ ಪ್ರಭಾವಿ ನಾಯಕರು ಕಾಂಗ್ರೆಸ್ ಗೆ ಕೈಕೊಟ್ಟರು. ಅವರನ್ನು ನಂಬಿ ಅವರ ಕೈಗೆ ರಾಜ್ಯ ಕೊಟ್ಟಿದ್ದ ಸೋನಿಯಾ, ರಾಹುಲ್ ಗಾಂಧಿಯನ್ನು ಸೋಲಿಸಿಬಿಟ್ಟರು. ಆದರೆ ಅದೇ ಮೂರು ರಾಜ್ಯಗಳಲ್ಲಿ ವರಿಷ್ಠರು ತಮ್ಮ ಮೇಲೆ ಭರವಸೆ ಇಡದಿದ್ದರೂ ಬಿಜೆಪಿಯ ರಾಜ್ಯ ನಾಯಕರು ಕೆಲಸ ಮಾಡಿ ಗೆದ್ದು ತೋರಿಸಿದರು. ಎಲ್ಲೆಡೆ ಮೋದಿ ಮೋದಿ ಎಂದೇ ಪ್ರಚಾರ ಮಾಡಿದರೂ ಅಲ್ಲಿನ ರಾಜ್ಯ ನಾಯಕರು ತಳಮಟ್ಟದಲ್ಲಿ ದುಡಿದು ಜನರ ಮನಸ್ಸು ಗೆದ್ದು ಚುನಾವಣೆ ಗೆದ್ದು ಬಿಟ್ಟರು. ದಿಲ್ಲಿ ನಾಯಕರು ತಮ್ಮನ್ನು ಕಡೆಗಣಿಸಿದರೂ ಜನರ ಮಧ್ಯೆ ತಾವಿನ್ನೂ ಎಷ್ಟು ಜನಪ್ರಿಯರು ಎಂದು ವರಿಷ್ಠರಿಗೆ ಸಾಬೀತುಪಡಿಸಿದರು.

ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿದ್ದು ತೆಲಂಗಾಣ ಮಾತ್ರ. ಅಲ್ಲಿ ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವಿನ ಅಲೆ ಪರಿಣಾಮ ಬೀರಿತು ಮಾತ್ರವಲ್ಲ, ಬಿಆರ್ ಎಸ್ ವಿರುದ್ಧದ ಆಡಳಿತ ವಿರೋಧಿ ಅಲೆ ಒಂದೆಡೆಗೆ ಕಾಂಗ್ರೆಸ್ ಕೈಹಿಡಿದರೆ, ತೆಲಂಗಾಣ ಜನರ ಮನಸ್ಸಿನಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಇದ್ದ ಅಭಿಮಾನ ಕೂಡ ಕಾಂಗ್ರೆಸ್ ಪಾಲಿಗೆ ವರದಾನವಾಗಿ ಒದಗಿತೆನ್ನಲಾಗುತ್ತದೆ.

ಕಾಂಗ್ರೆಸ್ ಜಾತಿ ಜನಗಣತಿ ವಿಚಾರ ಪ್ರಮುಖ ಅಸ್ತ್ರವಾಗಬಹುದೆಂದೇ ಬಗೆದಿತ್ತು. ಆದರೆ ಅದು ಹಿಂದಿ ಭಾಷಿಕ ರಾಜ್ಯಗಳಲ್ಲಿನ ಬಿಜೆಪಿ ಆಟದ ಮುಂದೆ ಫಲ ಕೊಟ್ಟಿಲ್ಲ. ಇನ್ನು ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ಕೂಡ ಈ ಚುನಾವಣೆಗಳ ಫಲಿತಾಂಶ ನೋಡಿದರೆ ಆ ಭಾಗದ ಜನರ ಮನಸ್ಸಿನಲ್ಲಿ ಉಳಿದಿಲ್ಲ ಎಂದೇ ಅನಿಸುತ್ತದೆ.

ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಮಾದರಿಯ ಭರವಸೆಗಳನ್ನೇ ಮುಂದಿಟ್ಟು ಬಿಜೆಪಿ ಗೆಲುವಿನ ಬಹುಪಾಲನ್ನು ಪಡೆದ ಹಾಗಿದೆ. ಅಲ್ಲದೆ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೆಳ ಸಮುದಾಯದ ಮತಗಳನ್ನು ಪಡೆಯುವಲ್ಲಿಯೂ ಬಿಜೆಪಿ ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. ಈಗ ಈ ಫಲಿತಾಂಶ ಬೇರೆ ಬೇರೆ ರೀತಿಯಲ್ಲಿ ಕಾಂಗ್ರೆಸ್ಗೆ ದೊಡ್ಡ ಪೆಟ್ಟು ಕೊಡಲಿದೆಯೆ ಎಂಬ ಪ್ರಶ್ನೆ ಎದ್ದಿದೆ.

ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ,

ರಾಜಸ್ಥಾನ ಮತ್ತು ಛತ್ತೀಸ್ಗಢಗಳನ್ನೂ ಕಾಂಗ್ರೆಸ್ ಕೈಯಿಂದ ಕಿತ್ತುಕೊಂಡಿರುವುದರಿಂದ 12 ರಾಜ್ಯಗಳಲ್ಲಿ ಅದರ ಸ್ವಂತ ಬಲದಲ್ಲಿ ಅಧಿಕಾರ ಹಿಡಿದಂತಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ, ಗುಜರಾತ್, ಗೋವಾ, ಅಸ್ಸಾಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ಅಧಿಕಾರದಲ್ಲಿದೆ. ಇದರೊಂದಿಗೆ ಹಿಂದಿ ಹಾರ್ಟ್ ಲ್ಯಾಂಡ್ ನ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲೂ ಅಧಿಕಾರ ಅದರ ಪಾಲಾಗಿದೆ.

ಕಾಂಗ್ರೆಸ್ ಇರುವುದನ್ನೆಲ್ಲ ಕಳೆದುಕೊಂಡು, ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಮಾತ್ರವೇ ಅಧಿಕಾರದಲ್ಲಿದೆ. ಈಗ ತೆಲಂಗಾಣದಲ್ಲಿ ಸರ್ಕಾರ ರಚಿಸಲಿದೆ.

ಈ ಸಲದ ನಾಲ್ಕೂ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ. ಆದರೆ ಹಿಂದಿ ಭಾಷಿಕ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಬಹಳಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಅನುಭವಿಸಿರುವ ಈ ಹಿನ್ನಡೆ ಈಗ ಇಂಡಿಯಾ ಮೈತ್ರಿಕೂಟದಲ್ಲಿ ಅದರ ಮಹತ್ವವನ್ನು ಕುಂದಿಸಲಿದೆಯೆ?

ವಿಧಾನಸಭೆ ಚುನಾವನೆಗೆ ಏಕಾಂಗಿಯಾಗಿ ಹೊರಟಾಗಲೇ ಮೈತ್ರಿ ಪಕ್ಷಗಳ ಮುನಿಸನ್ನು ಕಾಂಗ್ರೆಸ್ ಎದುರಿಸಬೇಕಾಗಿ ಬಂದಿತ್ತು. ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಎಲ್ಲೂ ಕಾಂಗ್ರೆಸ್ ಒಂದು ಪ್ರಬಲ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಸ್ಥಳೀಯವಾಗಿ ಪ್ರಭಾವಿಯಾಗಿರುವ ಸಣ್ಣಪುಟ್ಟ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಕೆಲವು ಸೀಟುಗಳನ್ನು ಅವುಗಳಿಗೆ ಬಿಟ್ಟು ಕೊಟ್ಟಿದ್ದರೆ ಪ್ರಯೋಜನ ಆಗುತ್ತಿತ್ತೋ ಏನೋ.

ವಿಧಾನಸಭೆ ಚುನಾವಣೆಗಳಲ್ಲಿ ಕನಿಷ್ಠ ಎರಡರಲ್ಲಾದರೂ ಗೆದ್ದಿದ್ದರೆ, ಕಾಂಗ್ರೆಸ್ ತನ್ನ ಗತ್ತನ್ನು ಮೈತ್ರಿ ಪಕ್ಷಗಳ ಮಧ್ಯೆ ಉಳಿಸಿಕೊಳ್ಳಲು ಅವಕಾಶವಿತ್ತು. ಆದರೆ ಈಗ ಬುಧವಾರದ ಸಭೆಗೆ ಹೋಗುವಾಗ ಅದು ಹಿಂಜರಿಕೆಯಿಂದಲೇ ಹೋಗಬೇಕಾದ ಸ್ಥಿತಿಯಲ್ಲಿದೆ.

ಮೊದಲನೆಯದಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿನ ಬಿಜೆಪಿಯೊಂದಿಗಿನ ನೇರ ಪೈಪೋಟಿಯಲ್ಲಿ ಆಗಿರುವ ಸೋಲು ಕಾಂಗ್ರೆಸ್ ಪಾಲಿನ ಅಧಿಕಾರಯುತ ಅವಕಾಶವನ್ನು ಕಸಿದಂತಿದೆ. ಆ ಭಾಗದಲ್ಲಿ ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ ಎಂಬುದು ನಿನ್ನೆ ಸಾಬೀತಾಗಿದೆ. ರಾಹುಲ್ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ನಾಯಕರಾಗಿ ಸಾಕಷ್ಟು ಬೆಳೆದಿದ್ದಾರೆ, ಜನಪ್ರಿಯತೆ ಗಳಿಸಿದ್ದಾರೆ. ಆದರೆ ಅದು ಮೋದಿಯವರ ಪ್ರಭಾವ ಹಾಗು ರಣತಂತ್ರದ ಎದುರು ಏನೇನೂ ಸಾಲದು ಎಂಬುದು ನಿನ್ನೆ ಬಯಲಾಗಿದೆ.

ಇನ್ನು ಮೋದಿ ಸರಕಾರದ ಎಲ್ಲ ವೈಫಲ್ಯಗಳ ಆಚೆಯೂ ಅವರ ಪಕ್ಷ ಹಾಗು ಸಂಘ ಪರಿವಾರ ಈ ದೇಶದ ಮಹಿಳೆಯರ, ಯುವಜನರ, ಕಾರ್ಮಿಕರ ಹಾಗು ಆದಿವಾಸಿಗಳ ಜೊತೆ ತಳಮಟ್ಟದಲ್ಲಿ ಬೆಳೆಸಿಕೊಂಡಿರುವ ನಂಟು ಅದಕ್ಕೆ ಈ ಚುನಾವಣೆಯಲ್ಲಿ ಭರ್ಜರಿ ಬೆಳೆ ತಂದು ಕೊಟ್ಟಿದೆ. ಆದರೆ ದಿಲ್ಲಿಯಲ್ಲಿ ಬಿಜೆಪಿ ಹಾಗು ಮೋದಿ ವೈಫಲ್ಯಗಳ ಬಗ್ಗೆ ಪತ್ರಿಕಾ ಗೋಷ್ಠಿ ಮಾಡುವ ಕಾಂಗ್ರೆಸ್ ತಳಮಟ್ಟದಲ್ಲಿ ಮತದಾರರೊಂದಿಗೆ ಆ ನಂಟು ಬೆಳೆಸಿಕೊಳ್ಳುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ.

ಮಮತಾ ಬ್ಯಾನರ್ಜಿ, ನಿತೀಶ್ ರಂತಹ ನಾಯಕರಿರುವ ಇಂಡಿಯಾ ಮೈತ್ರಿಕೂಟಕ್ಕೆ ನಾಯಕರು ಯಾರು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಆದರೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯೇ ಅದರ ನಾಯಕತ್ವ ವಹಿಸಲಿದ್ದಾರೆ ಎಂಬಂತೆಯೇ ನಿನ್ನೆಯ ಫಲಿತಾಂಶಕ್ಕಿಂತ ಮೊದಲು ಕಾಣುತ್ತಿತ್ತು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮೈತ್ರಿ ಪಕ್ಷಗಳು ಮೂರು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲನ್ನೇ ಬಳಸಿಕೊಂಡು, ಇಂಡಿಯಾ ಮೈತ್ರಿಕೂಟಕ್ಕೆ ಕಾಂಗ್ರೆಸ್ ನಾಯಕತ್ವದ ಬಗ್ಗೆಯೇ ಪ್ರಶ್ನೆ ಎತ್ತುವ ಸಾಧ್ಯತೆ ಇದೆ.

ಇನ್ನು ಸೀಟು ಹಂಚಿಕೆಯಲ್ಲೂ ಕಾಂಗ್ರೆಸ್ ತಲೆನೋವು ಹೆಚ್ಚಲಿದೆ. ಅದಕ್ಕೆ ಚೌಕಾಸಿ ಹೆಚ್ಚಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಎರಡನೆಯದಾಗಿ, ಉತ್ತರದ ರಾಜ್ಯಗಳಲ್ಲಿ ಬಿಜೆಪಿಯೆದುರು ಗೆಲ್ಲಲಾರದ ಸ್ಥಿತಿಯ ಜೊತೆಗೇ, ದಕ್ಷಿಣದ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಲಾಭವಾದೀತು ಎಂದು ನಿರೀಕ್ಷಿಸಲಾರದ ಸ್ಥಿತಿಯಲ್ಲಿ ಈಗ ಕಾಂಗ್ರೆಸ್ ಇದೆ.

ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಅಧಿಕಾರ ನೀಡಿರುವ ಕರ್ನಾಟಕ, ತೆಲಂಗಾಣದಂತಹ ರಾಜ್ಯಗಳಲ್ಲೂ ಲೋಕಸಭೆಗೆ ಮೋದಿಜಿನೇ ಬೇಕು ಎನ್ನುವ ಮತದಾರರೇ ಹೆಚ್ಚಿದ್ದಾರೆ. ಅವರನ್ನು ತನ್ನೆಡೆಗೆ ಸೆಳೆಯುವುದು ಕಾಂಗ್ರೆಸ್ ದೊಡ್ಡ ಸವಾಲು. ನಿನ್ನೆಯ ಫಲಿತಾಂಶದ ಬಳಿಕ ಅದು ಇನ್ನಷ್ಟು ಕಠಿಣವಾಗಲಿದೆ.

ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯ ವಿಚಾರವೇ ಬೇರೆ ಎಂಬುದೇನೋ ನಿಜ. ಆದರೆ, ಕಾಂಗ್ರೆಸ್ ಬಲ ಕುಸಿಯುವುದಕ್ಕೆ ಕಾರಣವಾಗಿರುವ ಆಂತರಿಕ ಒಡಕುಗಳೇ ಅದರ ದೊಡ್ಡ ಶತ್ರುಗಳಾಗಿವೆ. ವಾಸ್ತವದೊಂದಿಗೆ ಸಂಪರ್ಕವೇ ಇಲ್ಲದ ವೃದ್ಧ ನಾಯಕರು, ಅವರ ಹಠ, ಅವರ ಅಹಂಕಾರ, ಅವರ ಮಕ್ಕಳ ಕಾಟಗಳಿಂದ ಕಾಂಗ್ರೆಸ್ ಮೊದಲು ಮುಕ್ತವಾಗಬೇಕಾಗಿದೆ.

ಬಿಜೆಪಿಯ ಭಾರೀ ಚುನಾವಣಾ ಯಂತ್ರದ ಎದುರು ಪೈಪೋಟಿಗಿಳಿಯುವಾಗ ಅಷ್ಟೇ ಪ್ರಬಲ ಒಗ್ಗಟ್ಟಿನ ಅವಶ್ಯಕತೆ ಖಂಡಿತ ಇದೆ. ಬಿಜೆಪಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸೋದು ಬೇರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋದು ಬೇರೆ. ಆದರೆ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸೋದು ಸಂಪೂರ್ಣವಾಗಿ ಬೇರೆಯೇ ಆಟ. ಈಗಿನ ತನ್ನ ರಾಜಕೀಯದ ಮೂಲಕ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಲು ಸಾಧ್ಯವಿಲ್ಲ ಎಂಬುದು ಈಗ ಸಾಬೀತಾಗಿದೆ.

ಚುನಾವಣೆಗೆ ಬಿಜೆಪಿಯ ರಣತಂತ್ರ ಏನು ಎಂದು ಸ್ಪಷ್ಟವಾಗಿ ತಿಳಿದುಕೊಂಡು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗದಿದ್ದರೆ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟದ ವಿಚಾರಕ್ಕೂ ಇದು ಅನ್ವಯವಾಗಲಿದೆ. ಹೀಗಿರುವಾಗ, ಬುಧವಾರದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿನ ಚರ್ಚೆಗಳ ಆದ್ಯತೆ ಏನಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸುಮ್ಮನೆ ಹೊತ್ತುಗಳೆಯುವ ಸಮಯ ಖಂಡಿತ ಮೀರಿದೆ. ಇದು ಖಂಡಿತವಾಗಿಯೂ ಪ್ರತಿಷ್ಠೆ ಬದಿಗಿಟ್ಟು ಒಗ್ಗಟ್ಟಿನ ಹಾದಿಯಲ್ಲಿ ಮೈತ್ರಿಪಕ್ಷಗಳೆಲ್ಲವೂ ಹೊಂದಿಕೊಂಡು ನಡೆಯಬೇಕಿರುವ ಹೊತ್ತು. ಅದಾಗದೇ ಹೋದಲ್ಲಿ, ಗೆಲುವೆಂಬುದು ಬರೀ ಭ್ರಮೆಯ ಮಾತಾದೀತು ಎಂಬುದೇ ಸದ್ಯದ ಆತಂಕ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!