ಪುಲ್ವಾಮಾ ದಾಳಿ ಹುತಾತ್ಮ ಯೋಧರಿಗೆ ಸಿಕ್ಕಿದೆಯೇ ನ್ಯಾಯ?
ಪುಲ್ವಾಮಾ ಭಯೋತ್ಪಾದಕ ದಾಳಿಗೆ 5 ವರ್ಷ. ಪುಲ್ವಾಮಾ ದಾಳಿ ಮೋದಿ ಸರಕಾರದ ಘೋರ ವೈಫಲ್ಯ ಎಂದು ದಾಳಿಯಾದ ಬೆನ್ನಿಗೇ ಬಂದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ವಿಷಯವಾಗಬೇಕಿತ್ತು. ಆದರೆ ಆಗ ಆದದ್ದೇ ಬೇರೆ. ಪುಲ್ವಾಮಾ ವಿಚಾರವನ್ನಿಟ್ಟುಕೊಂಡೇ ರಾಷ್ಟ್ರೀಯ ಸುರಕ್ಷತೆಯ ಪ್ರಚಾರದ ಮೂಲಕ ನರೇಂದ್ರ ಮೋದಿ 2ನೇ ಅವಧಿಗೆ ಗೆದ್ದರು. ಅವರು 2ನೇ ಅವಧಿ ಮುಗಿಸಿ ಈಗ 3ನೇ ಅವಧಿಗೆ ಅಧಿಕಾರಕ್ಕೇರಲು ತಯಾರಿ ನಡೆಸಿದ್ದಾರೆ. ಆದರೆ ನಮ್ಮ ದೇಶದ 40 ವೀರ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ತನಿಖೆ ಏನಾಯಿತು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಅವತ್ತು ಹುತಾತ್ಮ ಸೈನಿಕರ ಮೃತದೇಹಗಳನ್ನಿಟ್ಟುಕೊಂಡು ರಾಜಕೀಯ ಮಾಡಿದ ಮೋದಿ, ಆ ಯೋಧರ ಅಂಥ ದುರಂತದ ತನಿಖೆಯ ಬಗ್ಗೆ ಮಾತ್ರ ಏಕೆ ಆಸಕ್ತರಾಗದೇ ಹೋದರು?. ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು ಒಂದು ದೊಡ್ಡ ಇವೆಂಟ್ ಗೆ ಬಳಸಿ ಪ್ರಚಾರ ಗಿಟ್ಟಿಸಿದ ಪ್ರಧಾನಿ ಮೋದಿ ಆ ಹುತಾತ್ಮರ ಮೇಲಿನ ದಾಳಿಯ ಸತ್ಯವನ್ನು ಹೊರ ತರಲು ಏಕೆ ಅಷ್ಟೇ ಆಸಕ್ತಿ ತೋರಿಸುತ್ತಿಲ್ಲ ?.
ಆ ನಿಟ್ಟಿನ ತನಿಖೆ ಮೋದಿ ಸರ್ಕಾರಕ್ಕೆ ಬೇಡದ ವಿಷಯವಾಗಿರುವುದು ಏಕೆ? ಇಂಥ ಎಲ್ಲ ಅನುಮಾನಗಳು ಐದು ವರ್ಷಗಳ ಬಳಿಕ ಇವತ್ತಿಗೂ ಹಾಗೇ ಉಳಿದೇ ಇವೆ. ಈ ಮಧ್ಯೆ ಆ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಎತ್ತಿದ ಪ್ರಶ್ನೆಗಳು ಕೂಡ ಹಾಗೇ ತಣ್ಣಗಾಗಿ ಹೋದವು.
ಸತ್ಯಪಾಲ್ ಮಲಿಕ್ ಏನು ಸಾಚಾ ಅಲ್ಲದಿದ್ದರೂ, ಅವರು ಎತ್ತಿದ್ದ ಪ್ರಶ್ನೆಗಳು ಬಹಳ ಗಂಭೀರವಾಗಿದ್ದವು ಮತ್ತು ಮೋದಿ ಸರ್ಕಾರದ ವೈಫಲ್ಯಗಳನ್ನು ಅವು ಸ್ಪಷ್ಟವಾಗಿ ತೋರಿಸಿದ್ದವು. ಅಷ್ಟೊಂದು ಸೈನಿಕರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯಾಗಿ 5 ವರ್ಷಗಳು ತುಂಬಿದವು.
ದೇಶದಲ್ಲೀಗ ಏನಿದ್ದರೂ ಮತ್ತೊಂದು ಸಾರ್ವತ್ರಿಕ ಚುನಾವಣೆಯ ಅಬ್ಬರವೇ ಹೊರತು, ಆ ದುರಂತದ ನೆನಪು ಚುನಾವಣೆಯ ರಾಜಕೀಯದಲ್ಲಿ ಮುಳುಗಿದವರನ್ನು ಕಾಡುತ್ತಿರುವಂತೆ ಕಾಣಿಸುತ್ತಿಲ್ಲ. 44 ಸಿಆರ್ ಪೀ ಎಫ್ ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮ ದಾಳಿ 2019ರ ಫೆ.14ರಂದು ನಡೆಯಿತು.
ಜಮ್ಮು ಕಾಶ್ಮೀರದ ಪುಲ್ವಾಮದ ಅವಂತಿಪುರ ಬಳಿ 78 ವಾಹನಗಳಲ್ಲಿ 2547 ಸಿಆರ್ಪಿಎಫ್ ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟಿದ್ದಾಗ ಆ ಭಯಾನಕ ದಾಳಿ ನಡೆಯಿತು. 350 ಕಿಲೋಗ್ರಾಂನಷ್ಟು ಸ್ಫೋಟಕಗಳಿದ್ದ ಸ್ಕಾರ್ಪಿಯೋವನ್ನು ಆ ದಾರಿಯಲ್ಲಿ ನುಗ್ಗಿಸಿದ ಜೆಇಎಂ ದಾಳಿಕೋರ ಈ ದುರಂತಕ್ಕೆ ಕಾರಣನಾಗಿದ್ದ.
ಪ್ರಪಂಚದಲ್ಲೇ ಅತ್ಯಂತ ಬಿಗಿ ಭದ್ರತೆಯ ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಜಟಿಲವಾದ ಕಣ್ಗಾವಲು ಹಂತಗಳನ್ನು ದಾಟಿ ಇಂಥದೊಂದು ಭಯೋತ್ಪಾದಕ ದಾಳಿ ಹೇಗೆ ಸಾಧ್ಯವಾಯಿತು? ಮತ್ತು ಭದ್ರತಾ ಪಡೆಗಳಿಗೆ ದಾಳಿಯ ಯಾವುದೇ ಸುಳಿವು ಸಿಗದಿದ್ದುದು ಹೇಗೆ? ಸುಳಿವು ಸಿಕ್ಕಿರದೇ ಇರಲು ಸಾಧ್ಯವೇ ಇಲ್ಲ ಎಂಬುದೇ ಅಂದಿನಿಂದ ನಿರಂತರವಾಗಿ ಪ್ರಶ್ನೆಗಳು ಕಾಡಲು ಕಾರಣ. ಆದರೆ ದಾಳಿಗೆ ಮೊದಲೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭಿಸಿತ್ತು ಎಂಬುದು ದಿ ಫ್ರಂಟ್ಲೈನ್ ನ ವಿಶೇಷ ತನಿಖಾ ವರದಿ ಹೇಳುತ್ತಿರುವ ವಿಚಾರ.
ಅಂಥ ಮಾಹಿತಿಯ ಹೊರತಾಗಿಯೂ ಈ ಭೀಕರ ದಾಳಿ ಹೇಗೆ ನಡೆಯಿತು ಎಂಬುದು ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ. 2019ರ ಜನವರಿ 2ರಿಂದ 2019ರ ಫೆಬ್ರವರಿ 13ರವರೆಗೆ ಗುಪ್ತಚರ ಮಾಹಿತಿಗಳ ಸರಣಿಯೇ ಬಂದಿತ್ತು. ಆದರೆ ಸರ್ಕಾರ ಅವಾವುದಕ್ಕೂ ಕಿವಿಗೊಡದೇ ಉಳಿಯಿತೇಕೆ ?ಮಾಹಿತಿಯಿದ್ದರೂ ಅಧಿಕಾರಿಗಳು ಸಕಾಲಿಕ ಕ್ರಮ ಕೈಗೊಳ್ಳುವಲ್ಲಿ ವಿಫಲರಾದರೆ? ದಾಳಿಗೂ ಮುನ್ನ ಲಭಿಸಿದ್ದ ಗುಪ್ತಚರ ಮಾಹಿತಿಗಳು ಏನಿದ್ದವು? 2019 ಜನವರಿ 2 - ಜೈಶೆ ಮುಹಮ್ಮದ್(ಜೆಇಎಂ) ರಾಜ್ಪೋರಾದಲ್ಲಿನ ತನ್ನ ನಾಲ್ವರು ಸದಸ್ಯರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ದಕ್ಷಿಣ ಕಾಶ್ಮೀರದಲ್ಲಿ ಯೋಜನೆ ರೂಪಿಸಿದೆ ಎಂಬ ಮಾಹಿತಿ ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕಾಶ್ಮೀರ ಪೊಲೀಸ್ ಐಜಿಗೆ ರವಾನೆ.
2019 ಜನವರಿ 3 - ಪುಲ್ವಾಮದಲ್ಲಿ 2018ರಲ್ಲಿ ಸಿಆರ್ಪಿಎಫ್ 183ನೇ ಬಟಾಲಿಯನ್ ಶಿಬಿರದ ಮೇಲೆ ನಡೆದಂಥದೇ ಮತ್ತೊಂದು ದಾಳಿಯ ಸಂಚಿನ ಬಗ್ಗೆ ಮಾಹಿತಿ ರವಾನೆ.
2019 ಜನವರಿ 7 - ಶೋಪೀಯಾನ್ ಜಿಲ್ಲೆಯಲ್ಲಿ ಐಇಡಿ ಅಂದ್ರೆ (ಸುಧಾರಿತ ಸ್ಫೋಟಕ ಸಾಧನ) ತಯಾರಿ ಮತ್ತು ಸ್ಫೋಟದ ಬಗ್ಗೆ ಹಾಗೂ ಭದ್ರತಾ ಪಡೆಯನ್ನು ಗುರಿಯಾಗಿಸಿ ಸ್ಫೋಟಕ ಮತ್ತು ಗ್ರೆನೇಡ್ ಎಸೆಯಲು ಯುವಕರಿಗೆ ಮೂವರು ತರಬೇತಿ ನೀಡುತ್ತಿದ್ದುದರ ಮಾಹಿತಿ ರವಾನೆ.
2019 ಜನವರಿ 18 - ಪುಲ್ವಾಮದ ಅವಂತಿಪುರ ಪ್ರದೇಶದಲ್ಲಿ ಯುವಕರ ಗುಂಪೊಂದು ವಿದೇಶೀ ವ್ಯಕ್ತಿಗಳ ಸಹಾಯದಿಂದ ಗೊಂದಲ ಮತ್ತು ಕೋಲಾಹಲಕಾರಿ ಚಟುವಟಿಕೆ ನಡೆಸಲು ತಯಾರಾಗುತ್ತಿದ್ದುದರ ಮಾಹಿತಿ ರವಾನೆ.
2019 ಜನವರಿ 21 - ಮಸೂದ್ ಅಝರ್ ಸೋದರಳಿಯ ತಲ್ಹಾ ರಶೀದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಜೆಇಎಂ ಯೋಜನೆ ಬಗ್ಗೆ ದಪ್ಪಕ್ಷರದ ಮಾಹಿತಿ ರವಾನೆ.
2019 ಜನವರಿ 24 - ಪುಲ್ವಾಮ ದಾಳಿಯ ರೂವಾರಿ ಯಾರೆಂದು ಅನಂತರ ಹೇಳಲಾಯಿತೊ ಅದೇ ಮುದಸ್ಸಿರ್ ಖಾನ್ ನೇತೃತ್ವದಲ್ಲಿ ಜೆಇಎಂ ಮಹಾಪಾತಕ ಕೃತ್ಯದ ಯೋಜನೆ ರೂಪುಗೊಳ್ಳುತ್ತಿದ್ದುದರ ಮಾಹಿತಿ.
2019 ಜನವರಿ 25 - ಮುದಸ್ಸಿರ್ ಖಾನ್ ಅಡಗುತಾಣದ ಬಗ್ಗೆ, ಆತ ಮಿದೂರ ಮತ್ತು ಲಾಪ್ ತ್ರಾಲ್ ಗ್ರಾಮದಲ್ಲಿ ಕಾಣಿಸಿಕೊಂಡದ್ದರ ಬಗ್ಗೆ ಹಾಗೂ ಆತನ ಭಯೋತ್ಪಾದಕ ಕೃತ್ಯದ ಯೋಜನೆ ಸಾಧ್ಯತೆ ಬಗ್ಗೆ ಮಾಹಿತಿ ರವಾನೆ.
2019 ಫೆಬ್ರವರಿ 9 - ಅಫ್ಜಲ್ ಗುರು ನೇಣಿಗೇರಿಸಿದ್ದಕ್ಕೆ ಪ್ತತೀಕಾರವಾಗಿ ಜೆಇಎಂ ದಾಳಿ ಸಾಧ್ಯತೆ ಬಗ್ಗೆ ಮಾಹಿತಿ.
2019 ಫೆಬ್ರವರಿ 12 - ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ ಸ್ಫೋಟಿಸುವ ಬಗ್ಗೆ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊ ಪ್ರಾತ್ಯಕ್ಷಿಕೆ ಸಹಿತ ವಿವರಿಸಲಾಗಿರುವುದರ ಬಗ್ಗೆ ಟ್ವಿಟರ್ ಹ್ಯಾಂಡಲ್ ವಿವರದೊಂದಿಗೆ ಮಾಹಿತಿ ರವಾನೆ.
2019 ಫೆಬ್ರವರಿ 13 - ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ ಸ್ಫೋಟ ಸಾಧ್ಯತೆ ಎಂಬ ಮಾಹಿತಿ ರವಾನೆ.
ಅಂದ್ರೆ ಒಂದೆರಡಲ್ಲ, ಇಂತಹದೊಂದು ದಾಳಿ ನಡೆಯುವ ಸಾಧ್ಯತೆ ಬಗ್ಗೆ ಸರಣಿ ಸುಳಿವುಗಳು ಸಿಕ್ಕಿದ್ದವು.
ಆದರೆ ಈ ಯಾವ ಮಾಹಿತಿಗಳಿಗೂ ಸರ್ಕಾರ ಕಿವಿಗೊಡಲಿಲ್ಲವೆ?
ದಾಳಿಗೆ ಒಂದು ದಿನ ಮೊದಲು ಅಂದರೆ 2019ರ ಫೆಬ್ರವರಿ 13ರಂದು ಅವಂತಿಪೊರದ ಪೊಲೀಸ್ ಅಧೀಕ್ಷಕ ಮುಹಮ್ಮದ್ ಝೈದ್ ಅವರ ವರ್ಗಾವಣೆ ಮಾಡಲಾಗುತ್ತದೆ. ಉಗ್ರರ ಬೆದರಿಕೆ ಹೆಚ್ಚಿದ್ದ ವೇಳೆಯೇ ಇಂಥ ವರ್ಗಾವಣೆ ನಡೆಯಿತೆಂದರೆ, ಗುಪ್ತಚರ ಮಾಹಿತಿಗಳ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಾದವರು ಮಾಡಿದ್ದೇನು? ಎಂಬ ಪ್ರಶ್ನೆಯನ್ನು ಫ್ರಂಟ್ಲೈನ್ ವರದಿ ಎತ್ತಿದೆ.
ಯೋಧರ ಮೇಲೆ ದಾಳಿ ನಡೆದ ದಿನ ಪ್ರಧಾನಿ ಮೋದಿಯವರು ಡಿಸ್ಕವರಿ ಚಾನೆಲ್ನ ಕಿರುಚಿತ್ರವೊಂದರ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಘಟನೆ ಬಗ್ಗೆ ಗೊತ್ತಾದ ಬಳಿಕವೂ ಶೂಟಿಂಗ್ ಮುಂದುವರಿದಿತ್ತು ಎಂಬ ವರದಿಗಳಿವೆ. ಪುಲ್ವಾಮ ದಾಳಿ ಬಳಿಕ ಏನಾಯಿತೆಂಬುದು ಗೊತ್ತಿದೆ. ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಬಾಲಾಕೋಟ್ನಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತದೆ.
ಕನಿಷ್ಠ ಪಕ್ಷ 300 ಪಾಕಿಸ್ತಾನಿ ಉಗ್ರರನ್ನು ಕೊಲ್ಲಲಾಯಿತು ಎಂದು ಹೇಳಲಾಯಿತು. ಅದಕ್ಕೆ ಪುರಾವೆ ಕೇಳಿದವರ ಮೇಲೆ ಹರಿಹಾಯಲಾಯಿತು.
ಮೋದಿಯವರನ್ನು ರಾಷ್ಟ್ರೀಯ ಹಿತಾಸಕ್ತಿಯ ಏಕೈಕ ರಕ್ಷಕ ಎಂದು ಬಿಂಬಿಸಲಾಯಿತು. ಭದ್ರತಾ ಪಡೆಗಳ ಕಣ್ತಪ್ಪಿಸಿ ಇಂಥದೊಂದು ದಾಳಿ ನಡೆಯಲು ಹೇಗೆ ಸಾಧ್ಯವಾಯಿತು ಎಂದು ಅವತ್ತು ಪ್ರಶ್ನಿಸಿದವರ ವಿರುದ್ಧ ಭಕ್ತಪಡೆ ನಿಂದನೆಯ ಮಹಾಪೂರವನ್ನೇ ಹರಿಸಿತು.
ಚಾನಲ್ ಗಳಂತೂ ಸರಕಾರದ ವೈಫಲ್ಯಗಳ ಬಗ್ಗೆ ತಾವೂ ಒಂದೇ ಒಂದು ಪ್ರಶ್ನೆ ಕೇಳದೆ ಕೇಳಿದವರನ್ನೇ ದೇಶದ್ರೋಹಿಗಳಾಗಿಸಿದವು. ಬಹುತೇಕ ಎಲ್ಲ ಚಾನಲ್ ಗಳು ಮೋದಿ ಸರಕಾರದ ಮುಖವಾಣಿಯಾಗಿ ಬಿಟ್ಟವು. ಕೆಲವೇ ವಾರಗಳ ಬಳಿಕ ನಡೆದ ಮಹಾಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಪಡೆಯಿತು.
ದಾಳಿ ನಡೆದು ವರ್ಷ ತುಂಬಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ಪ್ರಶ್ನೆಗಳನ್ನು ಕೇಳಿದ್ದರು. ಅವು ಹೀಗಿದ್ದವು:
1. ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ?
2. ಪುಲ್ವಾಮಾ ದಾಳಿಯ ತನಿಖೆ ಎಷ್ಟು ಪ್ರಗತಿ ಕಂಡಿದೆ?
3. ದಾಳಿಗೆ ಕಾರಣವಾದ ಭದ್ರತಾ ಲೋಪಕ್ಕೆ ಬಿಜೆಪಿ ಸರ್ಕಾರದಲ್ಲಿನ ಯಾರು ಹೊಣೆ?
ಇಂಥ ಹಲವು ಪ್ರಶ್ನೆಗಳು ಇವತ್ತಿಗೂ ಬಗೆಹರಿಯದೇ ಉಳಿದಿವೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕಳೆದ ವರ್ಷ ಭಾರತ್ ಜೋಡೋ ಯಾತ್ರೆ ವೇಳೆ ಕೂಡ ಪುಲ್ವಾಮ ದಾಳಿಯ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರು. ಪುಲ್ವಾಮ ಎಂಥ ಸೂಕ್ಷ್ಮ ಸ್ಥಳವೆಂದರೆ ಅಲ್ಲಿ ಪ್ರತೀ ಕಾರನ್ನೂ ತಪಾಸಣೆ ಮಾಡಲಾಗುತ್ತದೆ. ಆದರೆ ಯೋಧರ ವಾಹನಗಳು ಚಲಿಸುತ್ತಿದ್ದ ದಾರಿಯಲ್ಲಿ ಅಡ್ಡಬಂದ ಕ್ವಿಂಟಾಲ್ ಗಟ್ಟಲೆ ಆರ್ ಡಿ ಎಕ್ಸ್ ಇದ್ದ ಸ್ಕಾರ್ಪಿಯೋ ತಪಾಸಣೆಗೆ ಒಳಗಾಗದೇ ಇದ್ದುದು ಹೇಗೆ ಎಂಬುದಕ್ಕೆ ಇವತ್ತಿಗೂ ಸರ್ಕಾರ ಸಂಸತ್ತಿನಲ್ಲಾಗಲೀ ಸಾರ್ವಜನಿಕವಾಗಲೀ ಉತ್ತರಿಸಿಲ್ಲ ಎಂಬ ವಿಚಾರವನ್ನು ದಿಗ್ವಿಜಯ್ ಸಿಂಗ್ ಎತ್ತಿದ್ದರು.
ಇದರ ಬದಲು ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ. ಹಲವರನ್ನು ಕೊಂದೆವು ಎನ್ನುತ್ತಾರೆ. ಆದರೆ ಅದಕ್ಕೆ ಪುರಾವೆ ಇಲ್ಲ. ಸುಳ್ಳಿನ ಕಂತೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ದಿಗ್ವಿಜಯ ಸಿಂಗ್ ಟೀಕಿಸಿದ್ದರು. ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಅವರ ವೈಯಕ್ತಿಕ ಎಂಬ ಸ್ಪಷ್ಟನೆ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ನಿಂದ ಹೊರಬಿದ್ದಿತ್ತು. ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಪುಲ್ವಾಮ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಎತ್ತಿತ್ತು.
ಆದರೆ ಸೇನೆಯನ್ನು ಕಾಂಗ್ರೆಸ್ ಅನುಮಾನಿಸುತ್ತಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಪಕ್ಷ ಕ್ರಮೇಣ ತನ್ನ ಟೀಕೆಗಳನ್ನು ಕಡಿಮೆ ಮಾಡಿತ್ತು. ಈ ಹಿಂದೆ, ದಾಳಿದ ನಡೆದ ಕೆಲ ವಾರಗಳ ಬಳಿಕ ಪ್ರತಿಕ್ರಿಯಿಸಿದ್ದ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಈ ದಾಳಿಯ ಹಿಂದೆ ಪಿತೂರಿಯಿದೆ ಎಂದಿದ್ದರು.
ಪ್ಯಾರಾ ಮಿಲಿಟರಿ ಪಡೆಗಳು ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿವೆ. ಸೈನಿಕರನ್ನು ಮತಗಳಿಗಾಗಿ ಹತ್ಯೆಗೈಯಲಾಗಿದೆ. ಜಮ್ಮು ಮತ್ತು ಶ್ರೀನಗರದ ನಡುವೆ ಭದ್ರತಾ ತಪಾಸಣೆಯಿರಲಿಲ್ಲ. ಸಾಮಾನ್ಯ ಬಸ್ಗಳಲ್ಲಿ ಸೈನಿಕರನ್ನು ಸಾಗಿಸಲಾಗಿದೆ. ಇದರ ಹಿಂದೆ ಪಿತೂರಿಯಿದೆ ಎಂದು ಅವರು ಹೇಳಿದ್ದು ವರದಿಯಾಗಿತ್ತು.
ಇಂದಿಗೂ ಪುಲ್ವಾಮ ದಾಳಿ ತನಿಖೆ ಯಾವ ಹಂತದಲ್ಲಿದೆ ಎಂಬುದು ಬಹಿರಂಗವಾಗಿಲ್ಲ. ಬಹಿರಂಗವಾಗುವುದೆ ಎಂಬುದೂ ಗೊತ್ತಿಲ್ಲ. ಈ ನಡುವೆ ಕಳೆದ ವರ್ಷ ಏಪ್ರಿಲ್ನಲ್ಲಿ 2019ರ ಪುಲ್ವಾಮಾ ಉಗ್ರ ದಾಳಿ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಫೋಟಕ ವಿಚಾರಗಳನ್ನು ಹೊರಹಾಕಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ಅವರು ಮಾಡಿದ್ದ ಗಂಭೀರ ಆರೋಪ ದೊಡ್ಡ ವಿವಾದವಾಗಿ ಬೆಳೆದಿತ್ತು. ಯೋಧರ ಪ್ರಯಾಣಕ್ಕೆ ಐದು ವಿಮಾನ ಕೇಳಿದ್ದಕ್ಕೆ ಗೃಹ ಸಚಿವಾಲಯ ಕೊಡಲಿಲ್ಲ. ಕೊಟ್ಟಿದ್ದರೆ ಅಂತಹ ಅವಘಡವೇ ಆಗುತ್ತಿರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು.
ದಾಳಿಗೆ ಗೃಹ ಸಚಿವಾಲಯದ ವೈಫಲ್ಯವೇ ಕಾರಣ ಎಂದು ತಾವು ಹೇಳಿದಾಗ, ಬಾಯಿ ಮುಚ್ಚಿಕೊಂಡಿರುವಂತೆ ಪ್ರಧಾನಿ ಮೋದಿ ಆದೇಶಿಸಿದ್ದರು ಎಂದು ಮಲಿಕ್ ಬಹಳ ಗಂಭೀರ ಆರೋಪ ಮಾಡಿದ್ದರು. ದಿ ವೈರ್ ಪೋರ್ಟಲ್ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಈ ಆರೋಪ ಮಾಡಿದ್ದ ಮಲಿಕ್, ಸಿಆರ್ಪಿಎಫ್ ಯೋಧರು ಪ್ರಯಾಣಿಸಬೇಕಿದ್ದ ಮಾರ್ಗದ ಸುರಕ್ಷತೆಯ ತಪಾಸಣೆಯನ್ನೂ ಸಮರ್ಪಕವಾಗಿ ನಡೆಸಿರಲಿಲ್ಲ ಎಂದು ವಿವರಿಸಿದ್ದರು.
ಪುಲ್ವಾಮಾ ದಾಳಿ ದೇಶದಲ್ಲಿಯೇ ಅತ್ಯಂತ ದುರಂತಮಯ ಅವಘಡ. ನಮ್ಮ ಅಸಮರ್ಥತೆಯ ಕಾರಣಕ್ಕೆ ಅಷ್ಟೆಲ್ಲ ಯೋಧರು ಪ್ರಾಣ ಕಳೆದುಕೊಂಡರು ಎಂದು ಮಲಿಕ್ ಹೇಳಿದ್ದರು. ಇದರ ಬೆನ್ನಲ್ಲೇ, ಸತ್ಯಪಾಲ್ ಆರೋಪಗಳ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ತನಿಖೆ ಎಲ್ಲಿಗೆ ಬಂದಿದೆ ಎಂದೂ ಕಾಂಗ್ರೆಸ್ ಕೇಳಿತ್ತು. ಇಲ್ಲಿ ಗಮನಿಸಬೇಕಿದ್ದ ಸಂಗತಿಯೆಂದರೆ, ಪುಲ್ವಾಮಾ ದಾಳಿ ಗುಪ್ತಚರ ವೈಫಲ್ಯದ ಪರಿಣಾಮ ಎಂದು, ಆ ಘಟನೆಯ ಮಾರನೇ ದಿನ, ಅಂದರೆ 2019ರ ಫೆಬ್ರವರಿ 15ರಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ್ದ ಸಂದರ್ಶನದಲ್ಲೇ ಮಲಿಕ್ ಹೇಳಿದ್ದರು.
ಸ್ಫೋಟಕಗಳಿಂದ ತುಂಬಿದ್ದ ವಾಹನ ಅದೇ ಹೆದ್ದಾರಿಯಲ್ಲಿ ಬಂದಿರುವುದನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ನಮ್ಮದೂ ತಪ್ಪಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು.
ಅದೇ ದಿನ, ಯೋಧರ ಪ್ರಯಾಣಕ್ಕೆ ವಿಮಾನಕ್ಕಾಗಿ ಮಾಡಿದ ಮನವಿ ನಾಲ್ಕು ತಿಂಗಳುಗಳಿಂದ ಗೃಹ ಸಚಿವಾಲಯದಲ್ಲಿ ಬಾಕಿ ಇಟ್ಟುಕೊಳ್ಳಲಾಗಿತ್ತು ಎಂಬುದೂ ವರದಿಯಾಗಿತ್ತು. ಆದರೆ, ಆ ಬಳಿಕ ಭಾರತೀಯ ವಾಯುಪಡೆ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತು. ಮತ್ತದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯಿತು.
ಅದೆಲ್ಲದರ ನಡುವೆ ಭದ್ರತಾ ವೈಫಲ್ಯದ ವಿಚಾರ, ಚರ್ಚೆ ಅಡಗಿಹೋಗಿತ್ತು. ಆಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಲಾತೂರ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮೊದಲ ಬಾರಿ ಮತದಾನ ಮಾಡುತ್ತಿರುವವರು ಹುತಾತ್ಮ ಸೈನಿಕರ ಹೆಸರಿನಲ್ಲಿ ಮತ ಚಲಾಯಿಸಬೇಕು, ಬಾಲಾಕೋಟ್ನಲ್ಲಿ ವೈರಿಗಳ ವಿರುದ್ಧ ಹೋರಾಡಿದ ವೀರ ಯೋಧರ ಹೆಸರಿನಲ್ಲಿ ಮತ ಹಾಕಬೇಕು ಎಂದಿದ್ದರು.
ಗಂಭೀರ ಭದ್ರತಾ ಲೋಪ ಕುರಿತ ಆರೋಪಕ್ಕೆ ಪ್ರಧಾನಿ ಏಕೆ ಉತ್ತರಿಸುತ್ತಿಲ್ಲ? ಸಿಆರ್ಪಿಎಫ್ ಕೋರಿಕೆಯಂತೆ ವಿಮಾನ ನೀಡಿದ್ದರೆ ಸೈನಿಕರು ದಾಳಿಗೊಳಗಾಗುವ ಸಂಭವವೇ ಇರುತ್ತಿರಲಿಲ್ಲವಲ್ಲವೇ ಎಂಬ ಪ್ರಶ್ನೆಗಳು ಹಾಗೇ ಉಳಿದುಹೋದವು. ತಮಗಾಗಿ ಸಾವಿರಾರು ಕೋಟಿಯ ವಿಮಾನ ಮಾಡಿಕೊಂಡಿರುವ ಪ್ರಧಾನಿ ಹಾಗೂ ಗೃಹ ಸಚಿವರು ಯೋಧರನ್ನು ಕರೆದುಕೊಂಡು ಹೋಗಲು ವಿಮಾನ ಕಳಿಸಿ ಕೊಡಲಿಲ್ಲ ಯಾಕೆ ?
ಆ ರೀತಿ ಸಾವಿರಾರು ಯೋಧರು ರಸ್ತೆ ಮಾರ್ಗವಾಗಿ ಹೋಗುವ ಪದ್ಧತಿಯೇ ಇರಲಿಲ್ಲವಾದರೂ ಯಾಕೆ ಅವತ್ತು ಅವರನ್ನು ರಸ್ತೆ ಮಾರ್ಗದಲ್ಲೇ ಕಳಿಸಲಾಯಿತು ? ಪುಲ್ವಾಮಾ ಮತ್ತು ಬಾಲಾಕೋಟ್ ವಿಚಾರ ಪ್ರಚಾರ ಮಾಡಿಕೊಂಡು ಮತ ಪಡೆದ ಮೋದಿ ಸರ್ಕಾರಕ್ಕೆ, ಸೈನಿಕರ ವಿಚಾರದಲ್ಲಿ ಇದ್ದ ಕಾಳಜಿ ಎಂಥದು ಎಂಬುದರ ನಿಜರೂಪ ಮಲಿಕ್ ಆರೋಪಗಳ ಬಳಿಕ ಬಯಲಾಗಿತ್ತು.
ಪುಲ್ವಾಮಾ ದಾಳಿಯ ನಂತರ ದಿ ಕ್ವಿಂಟ್ನಲ್ಲಿ ವರದಿಯಾಗಿದ್ದಂತೆ, ಸೈನಿಕರ ಸಾಗಾಟಕ್ಕೆ ವಿಮಾನ ಸೌಲಭ್ಯ ಕೇಳಿ ಮಾಡಿಕೊಳ್ಳಲಾಗಿದ್ದ ಮನವಿಯನ್ನು, ಹಣಕಾಸಿನ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಸಿಆರ್ಪಿಎಫ್ ಮನವಿ ನಾಲ್ಕು ತಿಂಗಳುಗಳ ಕಾಲ ಗೃಹ ಸಚಿವಾಲಯದಲ್ಲಿ ಹಾಗೆಯೇ ಬಿದ್ದಿತ್ತು.
ಸೈನಿಕರ ಬಗ್ಗೆ ಇಷ್ಟೊಂದು ಮಾತನಾಡುವ ಸರ್ಕಾರದ ಬಳಿ, ಸೈನಿಕರ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದ್ದ ಕೆಲಸವೊಂದಕ್ಕೆ ವೈಮಾನಿಕ ನೆರವು ನೀಡುವಷ್ಟೂ ಹಣವಿರಲಿಲ್ಲವೆ ಎಂಬುದು ಆಗಲೂ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.
ಇಂಥ ಗಂಭೀರ ಪ್ರಶ್ನೆಗೆ ಮೋದಿ ಎಂದೂ ಉತ್ತರಿಸಲೇ ಇಲ್ಲ. ಸೈನಿಕರ ಬಗ್ಗೆ, ದೇಶಪ್ರೇಮದ ಬಗ್ಗೆ ಸಿಕ್ಕಾಪಟ್ಟೆ ಅಬ್ಬರದಿಂದ ಮಾತನಾಡುವ ಮೀಡಿಯಾಗಳೂ ಈ ಪ್ರಶ್ನೆಯನ್ನು ಆಗಲೂ ಎತ್ತಲಿಲ್ಲ, ಈಗಲೂ ಎತ್ತುತ್ತಿಲ್ಲ. ಯಾಕೆಂದರೆ, ಅವು ತಮ್ಮನ್ನು ಸಾಕುತ್ತಿರುವ ಮೋದಿ ಸರ್ಕಾರದ ಹೊಗಳಿಕೆಯಲ್ಲಿಯೇ ಮೈಮರೆತಿವೆ. ದಾಳಿ ನಡೆದು 5 ವರ್ಷಗಳಾದರೂ ಅದರ ತನಿಖೆ ಏನಾಯಿತು ಎಂಬುದರ ಸುಳಿವೇ ಇಲ್ಲ.
ಮತ್ತೊಂದು ಚುನಾವಣೆ, ಮತ್ತೊಮ್ಮೆ ಅಧಿಕಾರಕ್ಕೇರುವ ತಯಾರಿ ಮಾತ್ರ ಜೋರಾಗಿಯೇ ನಡೆದಿದೆ. ಈ ಸಲದ ಚುನಾವಣೆಯಲ್ಲಿ ಯೋಧರ ನೆನಪು ಮೋದಿ ಸರ್ಕಾರಕ್ಕೆ ಆಗುತ್ತಿಲ್ಲ. ಯಾಕೆಂದರೆ ಅಯೋಧ್ಯೆಯಲ್ಲಿ ರಾಮ ಬಂದಿದ್ದಾನೆ. ಆದರೆ ರಾಮರಾಜ್ಯದಲ್ಲಿ ಯೋಧರಿಗೆ ಹೀಗೇಕಾಯಿತು ಎಂದು ಯಾರೂ ಕೇಳುತ್ತಲೇ ಇಲ್ಲ ಯಾಕೆ ?