ಬಿಹಾರ ಜಾತಿ ಗಣತಿ ವರದಿ ಬಿಡುಗಡೆ ಬೆನ್ನಲ್ಲೇ ರಾಜ್ಯದಲ್ಲಿ ಚರ್ಚೆ

Update: 2023-10-05 13:32 GMT
Editor : Ismail | Byline : ಆರ್. ಜೀವಿ

ಬಿಹಾರದ ಜಾತಿ ಜನಗಣದಿ ವರದಿ ಬಹಿರಂಗವಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಜಾತಿ ಜನಗಣತಿ ವರದಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಬಿಹಾರಕ್ಕೂ ಮೊದಲೇ ಕರ್ನಾಟಕದಲ್ಲಿ ಜಾತಿ ಜನಗಣತಿ ನಡೆದಿದ್ದರೂ ಬಿಡುಗಡೆಯಾಗದಿರುವುದರ ಬಗ್ಗೆ ಈಗ ಪ್ರಶ್ನಿಸಲಾಗುತ್ತಿದ್ದು, ವರದಿ ಬಿಡುಗಡೆ ಮಾಡಬೇಕೆಂಬ ಕೂಗು ಕೇಳಿಬರತೊಡಗಿದೆ.

8 ವರ್ಷಗಳಿಂದ ಬಿಡುಗಡೆಯಾಗದೇ ಉಳಿದಿರುವ ಕರ್ನಾಟಕದ ಜಾತಿ ಜನಗಣತಿ ವರದಿ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದೆ ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎಂ ಆಗಿದ್ದ ಅವಧಿಯಲ್ಲೇ 2015ರಲ್ಲಿ ಜಾತಿ ಗಣತಿ ನಡೆದಿತ್ತು. ಸಾಮಾಜಿಕ, ಆರ್ಥಿಕ ಮತ್ತು ​ ಶೈಕ್ಷಣಿಕ ಸಮೀಕ್ಷೆ ಎಂಬ ಹೆಸರಿನ ಜಾತಿ ಜನಗಣತಿಯನ್ನು ಸುಮಾರು 160 ಕೋಟಿ ವೆಚ್ಚದಲ್ಲಿ ನಡೆಸಲಾಗಿತ್ತು. 1​.35 ​ಕೋಟಿ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಅಚ್ಚರಿಯೆಂದರೆ, ಈ ಜನಗಣತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲೇ ಇಲ್ಲ, ಇಬ್ಬರು ಸದಸ್ಯ ಕಾರ್ಯದರ್ಶಿಗಳು ಸಹಿ ಹಾಕದೇ ಇದ್ದುದು ಅದಕ್ಕೆ ಕಾರಣ. 2015-2018ರ ಅವಧಿಯಲ್ಲಿ ಇದರ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರದೊಳಗೇ ವಿರೋಧವಿತ್ತು ಮತ್ತು ಅದರ ಬಿಡುಗಡೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಗಳೂ ದಾಖಲಾದವು. ಈಗಲೂ ಸಿಎಂ ಸಿದ್ದರಾಮಯ್ಯ ಇದರ ಬಿಡುಗಡೆಗೆ ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ. ಜನಗಣತಿ ವರದಿಯಿಂದ ಸೋರಿಕೆಯಾದ ಮಾಹಿತಿಯು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಜನಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯ ಸುಳಿವನ್ನು ಕೊಟ್ಟಿ​ತ್ತು.

ಈಗಾಗಲೇ ಸೋರಿಕೆಯಾಗಿರುವ ವಿವರಗಳ ಪ್ರಕಾರ, ಯಾವ ಸಮುದಾಯವನ್ನು ಈವರೆಗೆ ಬಹುಸಂಖ್ಯಾತರು ಎಂದು ಭಾವಿಸಲಾಗಿತ್ತೋ ಆ ಸಮುದಾಯ ಬಹುಸಂಖ್ಯಾತರಲ್ಲ ಅನ್ನೋ ಮಾಹಿತಿ ಇದೆ ಎನ್ನಲಾಗಿದೆ. ಅಹಿಂದ ಸಮುದಾಯದ ಬಲ ರಾಜ್ಯದಲ್ಲಿ ಹೆಚ್ಚಾಗಿದೆ ಅನ್ನೋ ಮಾಹಿತಿಯೂ ಜಾತಿ ಗಣತಿಯಲ್ಲಿ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಲಾಢ್ಯ ಸಮುದಾಯಗಳು ಜಾತಿ ಗಣತಿ ವರದಿ ಬಿಡುಗಡೆಗೆ ಅಡ್ಡಗಾಲು ಹಾಕಿರುವ ಆರೋಪಗಳೂ ಇವೆ.

2018ರ ನಂತರದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನಗಣತಿ ಮಾಹಿತಿ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು, ಆದರೆ ಅದೂ ಆಗಿರಲಿಲ್ಲ. ನಂತರ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳೂ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ.

ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ರಾಷ್ಟ್ರಮಟ್ಟದ ಜಾತಿ ಜನಗಣತಿಗೆ ಒತ್ತಾಯಿಸುತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಜಾತಿಜನಗಣತಿ ವರದಿ ಬಿಡುಗಡೆ ಮಾಡದೇ ಇರುವುದು ಕೂಡ ವಿರೋಧಾಭಾಸದಂತೆ ಕಾಣಿಸುತ್ತಿದೆ. ಒಂದು ಕಡೆ ರಾಹುಲ್ ಗಾಂಧಿ ಬಿಹಾರದ ಜಾತಿಗಣತಿಯನ್ನು ಸ್ವಾಗತಿಸಿ ದೇಶಾದ್ಯಂತ ಇದು ಆಗಬೇಕಿದೆ ಎಂದು ಬಲವಾಗಿ ಆಗ್ರಹಿಸುತ್ತಿದ್ದಾರೆ. ಆಯಕಟ್ಟಿನ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ತೀರಾ ಶೋಚನೀಯವಾಗಿದೆ. ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲು ಜಾತಿಗಣತಿ ಒಂದೇ ದಾರಿ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ ಅವರದೇ ಪಕ್ಷದ ಸರಕಾರವಿರುವ ಕರ್ನಾಟಕದಲ್ಲಿ ಆಗಿರುವ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ.

​ಈಗ ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ವರದಿ ಪ್ರಕಟಿಸಲು ಕಾಂಗ್ರೆಸ್ ನಾಯಕರಿಂದಲೇ ಒತ್ತಾಯ ಹೆಚ್ಚತೊಡಗಿದೆ. ಬಿ. ಕೆ. ಹರಿಪ್ರಸಾದ್‌ರಂಥ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ಧಾರೆ. ಇಂಡಿಯಾ ಮೈತ್ರಿ ಕೂಟದ ಅಂಗಪಕ್ಷವಾದ ಜೆಡಿಯು ಬಿಹಾರದಲ್ಲಿ ವರದಿ ಬಿಡುಗಡೆ ಮಾಡಿರುವಾಗ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಏಕೆ ಜಾತಿ ಗಣತಿ ವರದಿ ಬಿಡುಗಡೆ ಮಾಡಬಾರದು ಎಂಬುದು ಅವರ ಪ್ರಶ್ನೆ.

ಜಾತಿ ಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿಯವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ನಡೆದಿದ್ದು, ಅದನ್ನು ಬಹಿರಂಗ ಮಾಡಬೇಕು ಎಂಬುದು ಹರಿಪ್ರಸಾದ್ ಒತ್ತಾಯ. ತಪ್ಪು ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ಸಾಧ್ಯವಾಗುತ್ತದೆಯೊ ಇಲ್ಲವೊ ಬೇರೆ ಮಾತು. ಸಾರ್ವಜನಿಕರ ಹಣ ಖರ್ಚು ಮಾಡಿ ಸಿದ್ಧಪಡಿಸಿರುವ ವರದಿಯನ್ನು ಬಹಿರಂಗ ಮಾಡಬೇಕು, ಚರ್ಚೆಗೆ ಅವಕಾಶ ನೀಡಬೇಕು. ಯಾವುದೇ ಜಾತಿ ಒತ್ತಡವಿದ್ದರೂ ಮೊದಲು ಬಿಡುಗಡೆ ಮಾಡಿ, ಬಳಿಕ ಯಾರಿಗಾದರೂ ಅನ್ಯಾಯವಾಗಿದ್ದರೆ ಸರಿಪಡಿಸಬಹುದು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ ಎಂದು ಹರಿಪ್ರಸಾದ್ ಹೇಳಿದ್ಧಾರೆ.

ವರದಿ ಬಿಡುಗಡೆಗೆ ಒತ್ತಡ ತರಲಾಗುವುದು ಎಂದು ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ , ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರೂ ಈ ವರದಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಆ ಮೂಲಕ ಸಾಮಾಜಿಕ ಅಸಮಾನತೆಗಳನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವರದಿ ಬಿಡುಗಡೆ ಯಾವಾಗ ಎಂದು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಒಂದು ವೇಳೆ ನವೆಂಬರ್ ಒಳಗೆ ಸಿದ್ದರಾಮಯ್ದಯ ಅವರು ಜಾತಿಗಣತಿ ವರದಿ ತೆಗೆದುಕೊಳ್ಳದಿದ್ದರೆ ಜನಾಂದೋಲನ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮತಬ್ಯಾಂಕಿಗೆ ತೊಂದರೆಯಾಗುವ ಕಾರಣಕ್ಕೆ ಅವರು ಜಾತಿ ಗಣತಿ ವರದಿ ತೆಗೆದುಕೊಂಡಿಲ್ಲ ಎನ್ನುವ ಅನುಮಾನ ಇದೆ. ಎರಡು ಪ್ರಬಲ ಸಮುದಾಯಗಳು ಇದಕ್ಕೆ ವಿರೋಧಿಸುವ ಭಯದಿಂದ ಸಿದ್ದರಾಮಯ್ಯ ಸುಮ್ಮನಿದ್ದಾರೆ ಎಂಬುದು ಮುಖ್ಯಮಂತ್ರಿ ಚಂದ್ರು ಆರೋಪ. ಸಿದ್ದರಾಮಯ್ಯ ಸಂಪುಟದ ಸಚಿವರಾದ ಸತೀಶ್ ಜಾರಕಿಹೊಳಿ ಅವರೂ ಈ ವರದಿ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವು ವರ್ಷಗಳ ಹಿಂದೆಯೇ ಈ ವರದಿ ತಯಾರಾಗಿದೆ. ಸರಕಾರ ಹಾಗು ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧಾರ ಮಾಡಬೇಕು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು ? ಹೆಚ್ಚಿನ ಅನುದಾನ ಕೊಡಬೇಕು ಎನ್ನುವುದು ಅದರಿಂದ ಗೊತ್ತಾಗುತ್ತದೆ. ಆದಷ್ಟು ಬೇಗ ಸರಕಾರ ವರದಿ ಬಿಡುಗಡೆ ಮಾಡುವತ್ತ ಗಮನ ಹರಿಸಬೇಕು ಎಂದು ಅವರು ಜಾರಕಿಹೊಳಿ ಹೇಳಿದ್ದಾರೆ.

​ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್ ದ್ವಾರಕನಾಥ್ ಅವರು ಹೇಳುವುದು ಹೀಗೆ:

1931 ರ ನಂತರ ಜಾತಿವಾರು ಜನಗಣತಿ ಆಗಿರಲಿಲ್ಲ. 1982 ರಲ್ಲಿ ತಮಿಳುನಾಡು ಸರ್ಕಾರ ಜಾತಿವಾರು ಜನಗಣತಿ ಮಾಡಿತ್ತು ಅದರ ಆಧಾರದ ಮೇಲೆ ಶೇ.೬೯ ಮೀಸಲಾತಿ ತರಲು ಸಾಧ್ಯವಾಯಿತು. ಇದೀಗ ಬಿಹಾರದಲ್ಲಿ ನಿತೀಶ್ ಕುಮಾರ್ ಆ ಕೆಲಸ ಮಾಡಿದ್ದಾರೆ. ಆಶ್ಚರ್ಯವೆಂದರೆ, ಅತ್ಯಂತ ಹಿಂದುಳಿದ ವರ್ಗಅವರು ಶೇ.೩೬. ೫ ​ಇದ್ದಾರೆ ಎಂಬುದು ಗೊತ್ತಾಗಿದೆ. ಆ ಸಮುದಾಯಗಳಿಗೆ ಪ್ರಾತಿನಿಧ್ಯವೇ ಇರಲಿಲ್ಲ. ಆದರೆ ಈಗ ದಾಖಲೆಗಳ ಸಮೇತ ಆ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಬೇಕಾಗುತ್ತದೆ.

ನಾವು ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆ ಮಾಡಿದ್ದೇವೆ. ನನ್ನ ಆಯೋಗದ ಕಾಲಘಟ್ಟದಲ್ಲಿ ಪ್ರಕ್ರಿಯೆ ಆರಂಭ ಆಯಿತು. ಆಮೇಲೆ ಕಾಂತರಾಜು ಅವರ ಆಯೋಗದಲ್ಲಿ ಮಾಡಿ ಮುಗಿಸಿದ್ದಾರೆ. ಕಾರಣಾಂತರಗಳಿಂದ ಅವರು ಅದನ್ನು ಸರ್ಕಾರಕ್ಕೆ ಕೊಟ್ಟಿರಲಿಲ್ಲ ಅಥವಾ ಸರ್ಕಾರ ತೆಗೆದುಕೊಂಡಿರಲಿಲ್ಲ.ನೆನಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಎರಡು ಮೂರು ಸಲ, ವರದಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಅವರು ಆ ವರದಿಯನ್ನು ಸ್ವೀಕರಿಸಬೇಕು ಎಂದು ನಾವೆಲ್ಲರೂ ನಂಬಿಕೆ ಇಟ್ಟು ಕಾಯುತ್ತಿದ್ದೇವೆ.

ಈ ವರದಿ ಬಂದರೆ ಅನೇಕ ಸಮುದಾಯಗಳಿಗೆ, ಅದರಲ್ಲೂ ಆದಿವಾಸಿ ಸಮುದಾಯಗಳು, ಅಲೆಮಾರಿ ಸಮುದಾಯಗಳು , ಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ. ತಬ್ಬಲಿ ಸಮುದಾಯ ಎಂದು ಕರೆಯುವ ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುತ್ತದೆ. ಹಾಗಾಗಿ ನಿತೀಶ್ ಕುಮಾರ್ ಯಾವ ರೀತಿಯಲ್ಲಿ ಬಿಹಾರದಲ್ಲಿ ಮಾಡಿದ್ದಾರೋ ಅದೇ ರೀತಿಯಲ್ಲಿ ಇಲ್ಲಿ ಸಿದ್ದರಾಮಯ್ಯನವರು ಮಾಡಬೇಕು, ಮಾಡಬಹುದು ಎಂಬ ಆಸೆ ಇಟ್ಟುಕೊಂಡಿದ್ದೇವೆ.

ಆದಷ್ಟು ಬೇಗ ಕರ್ನಾಟಕ ಈ ಸಮೀಕ್ಷೆಯನ್ನು ಪ್ರಕಟಿಸಲಿ. ಅದರ ಮೂಲಕ ಈ ಸಣ್ಣ ಸಮುದಾಯಗಳಿಗೆ, ಅಸಹಾಯಕ ಸಮುದಾಯಗಳಿಗೆ, ಪ್ರಾತಿನಿಧ್ಯವೇ ಇಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಲಿ ಎಂದು ದ್ವಾರಕಾನಾಥ್ ಹೇಳಿದ್ದಾರೆ.

​ರಾಜ್ಯದಲ್ಲಿ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ಪ್ರತಿಕ್ರಿಯಿಸಿ, ನಾವು ಸಮೀಕ್ಷೆ ಮಾಡಿದ್ದು ೨೦೧೫ ರಲ್ಲಿ. ಮುಖ್ಯಮಂತ್ರಿಯವರು ಅದನ್ನು ಉಪಯೋಗಿಸಿಕೊಳ್ಳುವುದಾಗಿ ಹೇಳಿರುವುದು ಸಂತೋಷದ ವಿಷಯ ಎಂದಿದ್ದಾರೆ. ಸಮಾಜದಲ್ಲಿನ ನ್ಯೂನತೆಗಳನ್ನು ತಿಳಿದುಕೊಂಡು, ಸರ್ಕಾರದ ಸೌಲಭ್ಯಗಳಿಂದ, ಸಾಮಾನ್ಯ ಸೌಲಭ್ಯಗಳಿಂದ, ಸಾಂವಿಧಾನಿಕವಾಗಿ ಬರುವ ಸವಲತ್ತುಗಳಿಂದ ವಂಚಿತರಾದವರಿಗೆ ಸವಲತ್ತುಗಳನ್ನು ಕೊಡಲು ಇಂಥ ವಿವರಗಳು ನೆರವಾಗುತ್ತವೆ ಎಂದಿದ್ದಾರೆ.

ಜಾತಿಗಣತಿಯ ವರದಿ ದೇಶವನ್ನು ವಿಭಜನೆ ಮಾಡುತ್ತದೆ ಎಂಬ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿರುವ ಕಾಂತರಾಜು ಅವರು, ಅದು ತಪ್ಪು. ಹಾಗಾಗುವುದಿಲ್ಲ. ದೇಶದಲ್ಲಿ ಜಾತಿ ಇಲ್ಲವೆಂದರೆ ಹಾಗೆ ಹೇಳಬಹುದು. ಜಾತಿ ಇದೆ ಎಂದು ಒಪ್ಪಿಕೊಂಡ ಮೇಲೆ, ಜಾತಿ ಜಾತಿಗಳ ಮಧ್ಯೆ ಇರುವ ಕಂದಕವನ್ನು ತುಂಬಿದಾಗ ಮಾತ್ರ ಸಮಾನತೆ., ಸಾಮಾಜಿಕ ನ್ಯಾಯ ಬರಲು ಸಾಧ್ಯ ಎಂದಿದ್ಧಾರೆ. ಶಾಶ್ವತ ಸಮಿತಿ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಸ್ಥಾನಕ್ಕೆ ಜಯಪ್ರಕಾಶ್ ಹೆಗ್ಡೆ ಬಂದಿದ್ದು, ನವೆಂಬರ್ ತಿಂಗಳಲ್ಲಿ ​ಅವರ ಅವಧಿ ಮುಗಿಯಲಿದೆ.

ಹಾಗಾಗಿ ಅಷ್ಟರೊಳಗೆ ಅವರು ​ವರದಿಯನ್ನು ಸರಕಾರಕ್ಕೆ ಸಲ್ಲಿ​ಸುತ್ತೇನೆ ಎಂದು ಹೇಳಿದ್ದಾರೆ.

ಜಾತಿಗಣತಿ ಹಾಗು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದೆ. ನಮ್ಮ ಸರಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ಪೂರ್ಣವಾದ ವರದಿಯನ್ನು ಅಂದಿನ ಸಿಎಂ ಕುಮಾರಸ್ವಾಮಿಗೆ ಸಲ್ಲಿಸಲು ಹೋದಾಗ ಅವರು ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗ ಸಹಿ ಮಾಡಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗ ವರದಿ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಲಾಗುವುದು ಎಂದು ಮಂಗಳವಾರ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜೊತೆಗೇ, ಜಾತಿ ಜನಗಣತಿ ಕಾಂಗ್ರೆಸ್ ನಾಯಕರ ಆಗ್ರಹವೇ ಆಗಿರುವು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅದನ್ನು ಬಹಿರಂಗಪಡಿಸಬೇಕಿರುವ ಅನಿವಾರ್ಯತೆಯೂ ಎದುರಾಗಬಹುದು.ಅವರ ನಿಲುವು ಏನಿರಲಿದೆ, ಈಗಾಗಲೇ 8 ವರ್ಷಗಳಿಂದ ಹಾಗೇ ಉಳಿದಿರುವ ಜಾತಿ ಗಣತಿಯ ವರದಿ ಕಥೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.​

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!