ಚುನಾವಣಾ ಬಾಂಡ್ ತೀರ್ಪಿನ ಬೆನ್ನಿಗೇ ಸಿಜೆಐ ವಿರುದ್ಧವೇ ಅಸಮಾಧಾನ ಸ್ಫೋಟ
ಸುಪ್ರೀಂ ಕೋರ್ಟ್ ಮೋದಿ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಖಡಕ್ ಆಗಿ ತೀರ್ಪು ಕೊಡುತ್ತಿದ್ದಂತೆ ಯಾರಿಗೆ ಚಿಂತೆ ಶುರುವಾಗಿದೆ ? ಸುಪ್ರೀಂ ಕೋರ್ಟ್ ನ ಖಡಾಖಡಿ ನಿಲುವು ಯಾರ ನಿದ್ದೆಗೆಡಿಸಿದೆ ?ಒಂದು ಕಡೆ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ತೀರ್ಪು ಬಂದ ಬೆನ್ನಿಗೇ ಪ್ರಧಾನಿ ಮೋದಿಯವರೇ ಸಾರ್ವಜನಿಕ ಭಾಷಣದಲ್ಲಿ ಸುಪ್ರೀಂ ಕೋರ್ಟ್ ಅನ್ನು ಉಲ್ಲೇಖಿಸಿ ವ್ಯಂಗ್ಯದ ಮಾತಾಡುತ್ತಾರೆ.
ಈಗ ನೋಡಿದರೆ ಪ್ರಧಾನಿಗೆ , ಅವರ ಪಕ್ಷಕ್ಕೆ, ಅವರ ಕಟ್ಟಾ ಬೆಂಬಲಿಗರಿಗೆ ಅತ್ಯಂತ ಆಪ್ತ ಹಿರಿಯ ವಕೀಲರೊಬ್ಬರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಗೇ ನೂರಾರು ವಕೀಲರು ಪತ್ರ ಬರೆದಿದ್ದಾರೆ. ಚುನಾವಣಾ ಬಾಂಡ್ ವಿಷಯದಲ್ಲಿ ಎಸ್ ಬಿ ಐ ಅನ್ನು ಪ್ರತಿನಿಧಿಸಿ ಭಾರೀ ಮುಜುಗರ ಅನುಭವಿಸಿದ ದೇಶದ ಪ್ರತಿಷ್ಠಿತ ಹಾಗು ಅತ್ಯಂತ ದುಬಾರಿ ವಕೀಲ ಹರೀಶ್ ಸಾಳ್ವೆ ನೇತೃತ್ವದಲ್ಲಿ 600 ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದ ಉದ್ದೇಶವೇನು ?
ಅವರಿಗೆ ದಿಢೀರನೆ ನ್ಯಾಯಾಂಗದಲ್ಲಿ ಕಾಣುತ್ತಿರುವ ಸಮಸ್ಯೆಗಳೇನು ? ಈವರೆಗೆ ಸುಪ್ರೀಂ ಕೋರ್ಟ್ ಅತ್ಯಂತ ಸ್ವತಂತ್ರ, ಅದರ ಮೇಲೆ ಪ್ರಭಾವ ಬೀರಲು ಯಾರಿಗೂ ಸಾಧ್ಯವೇ ಇಲ್ಲ ಎಂದು ನಂಬಿದ್ದವರಿಗೆ ಈಗ ದಿಢೀರನೇ ಸುಪ್ರೀಂ ಕೋರ್ಟ್ ಮೇಲೆ ಪ್ರಭಾವ ಬೀರುವ ಲಾಬಿ ನಡೆಯುತ್ತಿದೆ ಎಂದು ಅನಿಸಲು ಶುರುವಾಗಿದ್ದು ಹೇಗೆ ? ಇವರ ಅಸಮಾಧಾನದ ಮೂಲ ಕಾರಣ ಮುಖ್ಯ ನ್ಯಾಯಾಧೀಶರೇನಾ ? ಯಾಕೆ ಇವರೆಲ್ಲ ಇಷ್ಟೊಂದು ಚಿಂತಿತರಾಗಿದ್ದಾರೆ ?
ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು, ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುವ ಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಮತ್ತು ರಾಜಕೀಯ ಅಜೆಂಡಾಗಳೊಂದಿಗೆ ನ್ಯಾಯಾಂಗದ ಹೆಸರು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂಬುದು ಈ ವಕೀಲರುಗಳ ಆರೋಪ. ನ್ಯಾಯಾಂಗದ ಮೇಲೆ ಒತ್ತಡ ತರಲು, ನ್ಯಾಯಾಂಗದ ಮೇಲಿನ ಗೌರವಕ್ಕೆ ಕುತ್ತು ತರಲು ಆ ಪಟ್ಟಭದ್ರ ಹಿತಾಸಕ್ತಿಗಳ ಗುಂಪು ಯತ್ನಿಸುತ್ತಿದೆ ಎಂಬ ಆರೋಪವನ್ನು ಪತ್ರದಲ್ಲಿ ಮಾಡಲಾಗಿದೆ.
ಸಾಳ್ವೆ, ಮಿಶ್ರಾ ಅಲ್ಲದೆ, ಉದಯ್ ಹೊಳ್ಳ, ಆದೀಶ್ ಅಗರವಾಲ್, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಸ್ವರೂಪಮಾ ಚತುರ್ವೇದಿ ಸೇರಿದಂತೆ ದೇಶದ ವಿವಿಧ ಭಾಗಗಳ 600ರಷ್ಟು ವಕೀಲರು ಸಿಜೆಐ ಅವರಿಗೆ ಮಾರ್ಚ್ 26ರಂದು ಬರೆಯಲಾದ ಪತ್ರಕ್ಕೆ ಸಹಿ ಹಾಕಿದ್ದಾರೆ. ಪತ್ರದಲ್ಲಿರುವ ಪ್ರಮುಖ ವಿಚಾರಗಳೇನು ಎಂಬುದನ್ನು ಗಮನಿಸೋಣ.
ಪಟ್ಟಭದ್ರ ಹಿತಾಸಕ್ತ ಗುಂಪು ನ್ಯಾಯಾಂಗದ ಮೇಲೆ, ಅದರ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದು ರಾಜಕೀಯ ಪ್ರಕರಣಗಳಲ್ಲಿ, ಅದರಲ್ಲಿಯೂ ರಾಜಕಾರಣಿಗಳೇ ಆರೊಪಿಗಳಾಗಿರುವ ಪ್ರಕರಣಗಳಲ್ಲಿ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ತಂತ್ರ ನ್ಯಾಯಾಲಯ ಮತ್ತು ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ವಕೀಲರ ಒಂದು ವರ್ಗ ಹಗಲಿನಲ್ಲಿ ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುತ್ತದೆ. ರಾತ್ರಿ ವೇಳೆ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಹಿಂದೆ ಬಹಳ ಚೆನ್ನಾಗಿತ್ತು. ನ್ಯಾಯಾಲಯಗಳ ಪಾಲಿನ ಸುವರ್ಣಯುಗವೊಂದು ಇತ್ತು ಎಂದು ಸುಳ್ಳು ಸಂಕಥನವೊಂದನ್ನು ಸೃಷ್ಟಿಸುವ ಈ ಗುಂಪು, ಈಗ ಹಿಂದಿನಂತೆ ಇಲ್ಲ ಎನ್ನುತ್ತಿದೆ. ಈ ಗುಂಪಿನ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವ ಮತ್ತು ಅವುಗಳಿಗೆ ಮುಜುಗರ ಉಂಟುಮಾಡುವ ಗುರಿ ಹೊಂದಿವೆ ಎಂಬುದು ಪತ್ರದಲ್ಲಿರುವ ಮತ್ತೊಂದು ಆರೋಪ.
ಹುರುಳಿಲ್ಲದ ತರ್ಕ ಹಾಗೂ ಹಳಸಿದ ರಾಜಕೀಯ ಅಜೆಂಡಾವನ್ನು ಇಟ್ಟುಕೊಂಡು ನ್ಯಾಯಾಂಗದ ಮೇಲೆ ಒತ್ತಡ ತರಲು, ನ್ಯಾಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಹಾಗೂ ನ್ಯಾಯಾಲಯಗಳ ಹೆಸರು ಕೆಡಿಸಲು ಯತ್ನಿಸಲಾಗುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.ನಮ್ಮ ನ್ಯಾಯಾಲಯಗಳನ್ನು ಕಾನೂನಿನ ನಿಯಮಗಳಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಆ ಗುಂಪು ಇಳಿದಿದೆ ಮತ್ತು ನಮ್ಮ ನ್ಯಾಯಾಂಗದ ಸಂಸ್ಥೆಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ತಾನು ಹೇಳಿದ್ದೇ ಸತ್ಯ ಎಂಬ ಧೋರಣೆಯ ಗುಂಪು ಅದಾಗಿದೆ. ತಾನು ಒಪ್ಪುವ ತೀರ್ಪುಗಳನ್ನು ಸ್ವಾಗತಿಸುವ ಆ ಗುಂಪು, ತನಗೆ ಒಪ್ಪಿಗೆಯಾಗದ ತೀರ್ಪುಗಳ ಬಗ್ಗೆ ನಿಂದಿಸುತ್ತದೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ. ಬೆಂಚ್ ಫಿಕ್ಸಿಂಗ್ ಥರದ ಗಂಭೀರ ಆರೋಪಗಳ ಮೂಲಕ ನ್ಯಾಯಾಲಯಗಳ ಗೌರವ ಮತ್ತು ಘನತೆಯ ಮೇಲೆ ದಾಳಿಯಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ತಮಗೆ ಸಂಬಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮೂರ್ತಿ ಯಾರಾಗಿರಬೇಕು ಎಂದು ಕೂಡ ಕೆಲವು ಶಕ್ತಿಗಳು ಪ್ರಭಾವ ಬಿರಲು ಯತ್ನಿಸುತ್ತವೆ ಮತ್ತು ನಿರ್ದಿಷ್ಟ ಆದೇಶ ಪಡೆಯಲು ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರುವುದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳುಗಳನ್ನು ಹರಡಲಾಗುತ್ತದೆ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.
ದೇಶದಲ್ಲಿ ಚುನಾವಣೆ ಹೊತ್ತಿನಲ್ಲಿಯೇ ಇದೆಲ್ಲವೂ ನಡೆಯುತ್ತದೆ ಎಂದು ವಕೀಲರು ಪತ್ರದಲ್ಲಿ ಆರೋಪಿಸಿದ್ದಾರೆ. ಇಂಥ ದಾಳಿಗಳಿಂದ ನ್ಯಾಯಾಲಯಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ದೃಢವಾಗಿ ನಿಲ್ಲಬೇಕು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮೌನವಾಗಿರುವುದು ಅಥವಾ ಏನನ್ನೂ ಮಾಡದೆ ಇರುವುದು ಆಕಸ್ಮಿಕವಾಗಿ ಹಾನಿ ಮಾಡುವವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇಂಥ ಪ್ರಯತ್ನಗಳು ಕೆಲವು ವರ್ಷಗಳಿಂದ ಮತ್ತು ಆಗಾಗ್ಗೆ ನಡೆಯುತ್ತಿರುವುದರಿಂದ ಘನತೆಯ ಮೌನವನ್ನು ವಹಿಸುವ ಹೊತ್ತು ಇದಲ್ಲ. ಇಂಥ ಸಂದರ್ಭದಲ್ಲಿ ಸಿಜೆಐ ಅವರ ನೇತೃತ್ವ ನಿರ್ಣಾಯಕವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಆದರೆ ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುವ ಮತ್ತು ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ವಕೀಲರ ಗುಂಪು ಯಾವುದೆಂಬುದನ್ನು ಪತ್ರದಲ್ಲಿ ಹೇಳಲಾಗಿಲ್ಲ. ಪತ್ರದಲ್ಲಿ ವಕೀಲರು ಯಾವುದೇ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿಲ್ಲವಾದರೂ, ವಿಪಕ್ಷ ನಾಯಕರಿರುವ ಭ್ರಷ್ಟಾಚಾರದ ಹಲವಾರು ಪ್ರಕರಣಗಳನ್ನು ನ್ಯಾಯಾಲಯಗಳು ಕೈಗೆತ್ತಿಕೊಂಡಿರುವ ಹೊತ್ತಿನಲ್ಲಿ ಈ ಬೆಳವಣಿಗೆ ಆಗಿದೆ ಎಂಬುದನ್ನು ಗಮನಿಸಬೇಕು.
ಕೇಂದ್ರ ಸರ್ಕಾರ ತನ್ನ ರಾಜಕೀಯ ಸೇಡಿನ ಭಾಗವಾಗಿ ತಮ್ಮ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಲೇ ಬಂದಿವೆ, ಮತ್ತದನ್ನು ಆಡಳಿತಾರೂಢ ಬಿಜೆಪಿ ನಿರಾಕರಿಸುತ್ತಲೇ ಇದೆ. ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಿದ ವಿರುದ್ಧ ಕೂಡ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ.
ಇದೆಲ್ಲದಕ್ಕೂ ಪ್ರತಿಯಾಗಿ ಇಂಥದೊಂದು ಪತ್ರವನ್ನು ಸಿಜೆಐ ಅವರಿಗೆ ಬರೆಯಲಾಯಿತೆ? ಸಿಜೆಐ ಡಿವೈ ಚಂದ್ರಚೂಡ್ ಅವರ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮೇಲೆ, ನ್ಯಾಯಾಂಗದ ಮೇಲೆ ದೇಶದ ವಿಶ್ವಾಸ ದೊಡ್ಡದಿದೆ. ನ್ಯಾಯಾಂಗದ ಬಗ್ಗೆ ಮೊದಲಿಂದಲೂ ವಿಶ್ವಾಸ ಇದ್ದೇ ಇದೆಯಾದರೂ, ಈಗ ಅದು ಇನ್ನಷ್ಟು ಗಟ್ಟಿಯಾಗಿದೆ. ಆದರೆ ಈಗ ವಿಚಾರವೇನೆಂದರೆ, ಚಂದ್ರಚೂಡ್ ಅವರ ಇತ್ತೀಚಿನ ಐತಿಹಾಸಿಕ ತೀರ್ಪುಗಳ ಬಳಿಕ ಕೆಲವರು ತುಂಬ ಚಿಂತೆಗೀಡಾದ ಹಾಗೆ ಕಾಣಿಸುತ್ತದೆ, ಅದೇಕೊ ಕೆಲವರು ಬಹಳ ಒತ್ತಡಕ್ಕೆ ಒಳಗಾಗಿರುವ ಹಾಗೆ ಕಾಣಿಸುತ್ತದೆ.
ಎಲ್ಲಿಯವರೆಗೆಂದರೆ, ಚಂದ್ರಚೂಡ್ ಅವರ ಮೇಲೆ ಒತ್ತಡ ಹೇರುವುದಕ್ಕಾಗಿಯೇ ಅವರಿಗೆ ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಎಲೆಕ್ಟೋರಲ್ ಬಾಂಡ್ ವಿಷಯ ವಿಚಾರಣೆಗೆ ಬಂದಾಗ ಎಸ್ಬಿಐ ಅನ್ನು ಪ್ರತಿನಿಧಿಸಿದ್ದವರು ಹರೀಶ್ ಸಾಳ್ವೆ. ನ್ಯಾಯಾಲಯ ಎತ್ತಿದ್ದ ಪ್ರಶ್ನೆಗಳಿಗೆ ಅವರು ತಡಬಡಾಯಿಸಿ ಹೋಗಿದ್ದರು.
ಈಗ ಅವರ ನೇತೃತ್ವದಲ್ಲಿ ಇಷ್ಟೊಂದು ವಕೀಲರು ಸಿಜೆಐ ಅವರಿಗೆ ಪತ್ರ ಬರೆದಿದ್ದು, ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಗುಂಪೊಂದು ಯತ್ನಿಸುತ್ತಿದೆ ಎಂಬ ಆರೋಪ ಮಾಡಲಾಗಿದೆ.
ಮುಖ್ಯವಾಗಿ ರಾಜಕೀಯ ವ್ಯಕ್ತಿಗಳು ಹಾಗೂ ಭ್ರಷ್ಟಾಚಾರ ಆರೋಪಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ನ್ಯಾಯಾಂಗವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಹರೀಶ್ ಸಾಳ್ವೆಯಂತ ದೊಡ್ಡ ವಕೀಲರು ಇದ್ದಕ್ಕಿದ್ದ ಹಾಗೆ ಹೀಗೇಕೆ ಭಾವಿಸಲು ಶುರು ಮಾಡಿದರು? ಮತ್ತು ಇಂಥದೊಂದು ಅನುಮಾನ ಅವರಿಗೆ ಶುರುವಾದದ್ದು ಯಾವಾಗಿನಿಂದ? ಅವರು ಆರೋಪಿಸಿರುವಂತೆ, ಅದಾವುದೋ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ, ದುರ್ಬಲಗೊಳಿಸುವ ಯತ್ನ ನಡೆಸಿದೆ ಎಂದಾದಲ್ಲಿ ಅದು ಈ 600 ವಕೀಲರಿಗೆ ಗೊತ್ತಿದೆ ಎಂದಾದಲ್ಲಿ ಆ ಗುಂಪು ಯಾವುದು ಎಂದು ಹೇಳಬಹುದಲ್ಲವೆ?
ಅವರು ಯಾರು, ಅವರ ಹೆಸರೇನು, ಅವರೇನು ಮಾಡುತ್ತಿದ್ಧಾರೆ ಎಂಬುದನ್ನೆಲ್ಲ ಬಹಿರಂಗಪಡಿಸಬಹುದಲ್ಲವೆ? ನ್ಯಾಯಾಂಗದ ಮೇಲೆ ಏಕೆ ಜನರ ವಿಶ್ವಾಸ ಕಮ್ಮಿಯಾಗಲು ಸಾಧ್ಯ? ಪೊಲೀಸರ ಬಳಿ ನ್ಯಾಯ ಸಿಗದೇ ಇದ್ದರೆ ನ್ಯಾಯಲಯಕ್ಕೆ ಹೋಗಿ ನ್ಯಾಯ ಪಡೆಯುತ್ತೇವೆ ಎಂಬ ವಿಶ್ವಾಸ ಜನರಲ್ಲಿದೆ. ಚಂಡೀಗಢ ಮೇಯರ್ ಚುನಾವಣೆ ಕುರಿತ ತೀರ್ಪು, ಎಲೆಕ್ಟೋರಲ್ ಬಾಂಡ್ ಕುರಿತ ತೀರ್ಪು ಇವೆಲ್ಲದರಲ್ಲಿಯೂ ನ್ಯಾಯಾಂಗ ಬಹಳ ದೊಡ್ಡ ವಿಶ್ವಾಸ ಮೂಡುವಂತೆ ಮಾಡಿದೆ.
ಹೀಗೆ ಜನರಲ್ಲಿ ನ್ಯಾಯಾಂಗದ ಬಗ್ಗೆ ಭರವಸೆ ಬಲಗೊಳ್ಳುತ್ತಿರುವುದು ಸಂತಸದ ಸಂಗತಿ, ಹೀಗಿರುವಾಗ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆದಿದೆ ಎಂದು ಈ 600 ವಕೀಲರಿಗೆ ಏಕೆ ಅನ್ನಿಸುತ್ತಿದೆ? ಅಷ್ಟಕ್ಕೂ ದೇಶದ ಪರಮೋಚ್ಚ ನ್ಯಾಯಾಲಯದ ಮೇಲೆ ಒತ್ತಡ ಹೇರುವಷ್ಟು ಪ್ರಭಾವಿಗಳು, ಶಕ್ತಿಶಾಲಿಗಳು ಯಾರಿದ್ದಾರೆ ಇಲ್ಲಿ ?
ಎಲೆಕ್ಟೋರಲ್ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಂಥದೊಂದು ತೀರ್ಪು ಕೊಟ್ಟ ಬಳಿಕ, ಈ ದೇಶದಲ್ಲಿ ಚುನಾವಣಾ ಬಾಂಡ್ ಹೆಸರಲ್ಲಿ ಎಂಥ ಕರಾಳ ದಂಧೆ ನಡೆಯುತ್ತಿತ್ತು ಎಂಬುದು ಈ ದೇಶದ ಜನತೆಗೆ ತಿಳಿಯುವಂತಾಯಿತು. ನಾ ಕಾವುಂಗಾ ನಾ ಕಾನೇದೂನ್ಗಾ ಎನ್ನುತ್ತಿದ್ದವರು ಅದೆಷ್ಟು ವಸೂಲಿ ಮಾಡಿಕೊಂಡಿದ್ದಾರೆ ಹಾಗು ಅದಕ್ಕೆ ಬದಲಾಗಿ ಕೋಟಿಗಟ್ಟಲೆ ಕೊಟ್ಟವರಿಗೆ ಏನೇನು ಲಾಭ ಮಾಡಿಕೊಡಲಾಗಿದೆ ಎಂಬುದೂ ಜನರೆದುರು ಬಯಲಾಗಿದೆ.
ನ್ಯಾಯಾಂಗದ ಕೆಲಸ ದೇಶದ ಸಂವಿಧಾನವನ್ನು ರಕ್ಷಿಸುವುದು, ಅದರ ಮೇಲೆ ಯಾರಾದರೂ ಒತ್ತಡ ಹೇರಲು, ಪ್ರಭಾವ ಬೀರಲು ಹೇಗೆ ಸಾಧ್ಯ?
ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ, ಸುಪ್ರೀಂ ಕೋರ್ಟ್ನ ಈಚಿನ ತೀರ್ಪುಗಳು ಮತ್ತೆ ಮತ್ತೆ ಮೋದಿ ಸರಕಾರಕ್ಕೆ, ಬಿಜೆಪಿಗೆ ಹೊಡೆತ ಕೊಟ್ಟಿವೆ. ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂಬ ತೀರ್ಪಂತೂ ಮೋದಿ ಸರ್ಕಾರದ ಒಟ್ಟು ವಸೂಲಿ ದಂಧೆಯನ್ನೇ ಜಾಲಾಡಿಬಿಟ್ಟಿದೆ.
ಅದು ಕುದುರಿಸಿದ್ದ ವ್ಯವಹಾರಗಳು, ದೇಣಿಗೆ ವಸೂಲಿಗಾಗಿ ಈಡಿ, ಸಿಬಿಐ, ಐಟಿಯಂಥ ಸಂಸ್ಥೆಗಳನ್ನು ಅದು ದುರ್ಬಳಕೆ ಮಾಡಿಕೊಂಡದ್ದು ಎಲ್ಲವೂ ತೀರ್ಪಿನ ನಂತರ ಬಯಲಿಗೆ ಬರತೊಡಗಿವೆ. ಅದರಿಂದ ಉರಿದುರಿದು ಹೋಗುತ್ತಿರುವ, ಅದೂ ಚುನಾವಣೆ ಹೊತ್ತಲ್ಲಿ ಸರಿಯಾಗಿಯೇ ಪೆಟ್ಟು ತಿನ್ನುತ್ತಿರುವ ಮೋದಿ ಸರ್ಕಾರದ ಹತಾಶೆಯ ಒಂದು ಭಾಗವಾಗಿ ಈಗಿನ ವಿದ್ಯಮಾನವನ್ನು ಗಮನಿಸಬೇಕಿದೆ.
ಸಿಜೆಐಗೆ ವಕೀಲರ ಪತ್ರದ ಬೆನ್ನಿಗೇ ಮೋದಿ ಪ್ರತಿಕ್ರಿಯೆ ಬಂದಿದೆ. ಚುನಾವಣಾ ಬಾಂಡ್ ವಿಚಾರದ ತೀರ್ಪಿಗೆ ಪ್ರತಿಕ್ರಿಯೆ ಕೊಡದ ಪ್ರಧಾನಿ,
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಹೇಸಿಗೆ ನಡೆಯ ವಿರುದ್ಧದ ತೀರ್ಪಿಗೂ ಪ್ರತಿಕ್ರಿಯೆ ಕೊಟ್ಟಿರದ ಮೋದಿ,
ಈಗ ಮಾತ್ರ ಬಹಳ ಬೇಗ ಹೇಳಿಕೆ ಕೊಟ್ಟು, ಇತರರನ್ನು ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ ಎಂದಿದ್ದಾರೆ.
ಸಿಜೆಐಗೆ ವಕೀಲರು ಬರೆದ ಪತ್ರವನ್ನು ಶೇರ್ ಮಾಡಿಕೊಂಡೇ ಪ್ರಧಾನಿ ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಗಾದರೆ ಈ ಪತ್ರದ ಹಿಂದಿರುವವರು ಯಾರು ? ಯಾವುದರ ಬಗ್ಗೆಯೂ ಇಲ್ಲದ ಮೋದಿ ಪ್ರತಿಕ್ರಿಯೆ ಈ ವಿಚಾರದ ಬಗ್ಗೆ ಏಕೆ ಅಷ್ಟೊಂದು ವೇಗವಾಗಿ ಬಂತು ? ಚುನಾವಣಾ ಬಾಂಡ್ ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಬಳಿಕ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತಾಡಿದ್ದ ಪ್ರಧಾನಿ ಮೋದಿ " ಇವತ್ತಿನ ಕಾಲದಲ್ಲಿ ಸುಧಾಮ ಕೃಷ್ಣನಿಗೆ ಅಕ್ಕಿ ಕೊಟ್ಟರೆ ಸುಪ್ರೀಂ ಕೋರ್ಟ್ ಅದನ್ನೂ ಭ್ರಷ್ಟಾಚಾರ ಎಂದು ಬಿಡುತ್ತದೆ " ಎಂದು ವ್ಯಂಗ್ಯ ಮಾಡಿದ್ದರು.
ಇದು ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಪ್ರಧಾನ ಮಂತ್ರಿ ಸ್ಥಾನದಲ್ಲಿರುವವರು ಸಾರ್ವಜನಿಕವಾಗಿ ನೀಡುವ ಗೌರವ. ಈಗ ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಖಡಕ್ ಆಗಿ ಪ್ರತಿಕ್ರಿಯಿದ್ದಾರೆ. ಪ್ರಧಾನಿಯ ಲಜ್ಜೆಗೇಡಿತನ ನ್ಯಾಯಾಂಗವನ್ನು ಸಮರ್ಥಿಸಿಕೊಳ್ಳುವ ಹೆಸರಿನಲ್ಲಿ ನ್ಯಾಯಾಂಗದ ಮೇಲಿನ ದಾಳಿಯನ್ನು ಸಂಘಟಿಸುವ ಮತ್ತು ಸಮರ್ಥಿಸುವ ಕೆಲಸ ಮಾಡುತ್ತಿದೆ, ಇದು ಬೂಟಾಟಿಕೆಯ ಪರಮಾವಧಿ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಮೋದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೊಡೆತಗಳನ್ನು ಕೊಟ್ಟಿದೆ ಎಂಬುದನ್ನೂ ಜೈರಾಮ್ ರಮೇಶ್ ಪ್ರಸ್ತಾಪಿಸಿದ್ದಾರೆ.
ಇದೆಲ್ಲದರ ನಂತರವೇ ಈಗ ದೇಶದ ದೊಡ್ಡ ವಕೀಲರೆನ್ನಿಸಿಕೊಂಡ ಸಾಳ್ವೆ ಮತ್ತವರ ನೇತೃತ್ವದಲ್ಲಿ 600ಕ್ಕೂ ಹೆಚ್ಚು ವಕೀಲರು ಸಿಜೆಐ ಅವರಿಗೆ ಪತ್ರ ಬರೆಯುತ್ತಾರೆ. ಹಾಗಾದರೆ ನಿಜವಾಗಿಯೂ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿರುವವರು ಯಾರು ?