ಕಾಂಗ್ರೆಸ್ ಗ್ಯಾರಂಟಿ ಕೊಟ್ಟರೆ ದಿವಾಳಿ, ಬಿಜೆಪಿ ಕೊಟ್ಟರೆ ದೀಪಾವಳಿ !

Update: 2024-02-09 04:54 GMT
Editor : Ismail | Byline : ಆರ್. ಜೀವಿ

ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಮೋದಿ ಕೀ ಗ್ಯಾರಂಟಿ ಎಂದು ಹೇಳುತ್ತಲೇ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಗ್ಯಾರಂಟಿಗಳನ್ನು ವಿರೋಧಿಸುತ್ತಲೇ ಲೋಕಸಭಾ ಚುನಾವಣೆ ಎದುರಿಸೋ ಸಿದ್ಧತೆಯಲ್ಲಿದೆ.

ಆದರೆ ಅದಕ್ಕೆ ತಕ್ಕ ತಿರುಗೇಟು ನೀಡಿರುವ ಕಾಂಗ್ರೆಸ್ , ಗ್ಯಾರಂಟಿಗಳ ಬಗ್ಗೆ ಒಂದಿಷ್ಟೂ ಹಿಂಜರಿಯದೆ, ಗ್ಯಾರಂಟಿ ಮಾತ್ರವಲ್ಲ, ಗ್ಯಾರಂಟಿ ಜಾರಿಗೆ ತಳಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಮಿತಿಗಳನ್ನು ರಚಿಸುವ ಘೋಷಣೆ ಮಾಡಿ ಬಿಟ್ಟಿದೆ.

ಇಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಅದು ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಲು ಬಯಸಿತ್ತು.

ಆದರೆ ಕಾಂಗ್ರೆಸ್ ಗ್ಯಾರಂಟಿಯೇ ನಮ್ಮ ಅಸ್ತ್ರ, ಅದಕ್ಕಾಗಿ ಇನ್ನಷ್ಟು ಖರ್ಚು ಮಾಡುವುದಕ್ಕೂ ಹಿಂದೆ ಮುಂದೆ ನೋಡಲ್ಲ ಎಂದು ಆಕ್ರಮಣಕಾರಿಯಾಗಿಯೇ ಮುಂದಡಿ ಇಟ್ಟಿದೆ.

ಬಿಜೆಪಿ ಇದನ್ನು ನಿರೀಕ್ಷಿಸಲೇ ಇಲ್ಲ.

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳ ಪರಿಣಾಮಕಾರಿ ಜಾರಿಗೆ ರಾಜ್ಯ ಮಟ್ಟದ ಸಮಿತಿಯನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಚಿವರು, ಶಾಸಕರು, ಪದಾಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ಘೋಷಣೆಯನ್ನು ಸಿಎಂ ಮಾಡಿದ್ದಾರೆ.

ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ರಚನೆಯಾಗಲಿರುವ ಈ ಸಮಿತಿಗಳು ಗ್ಯಾರಂಟಿ ಪರಿಣಾಮಕಾರಿ ಜಾರಿಯ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದ್ದರೂ ಅಸಲಿ ಉದ್ದೇಶ ಕಾರ್ಯಕರ್ತರು ಹಾಗೂ ಜಿಲ್ಲಾ ಮಟ್ಟದ ನಾಯಕರಿಗೆ ಅಧಿಕಾರ, ಅವಕಾಶ ಕಲ್ಪಿಸಿ ಚುನಾವಣೆಗೆ ಸಿದ್ಧವಾಗೋದು ಎಂಬುದು ಸ್ಪಷ್ಟ.

ಹೇಗಿರಲಿದೆ ಈ ಗ್ಯಾರಂಟಿ ಜಾರಿ ಸಮಿತಿ?

ಗ್ಯಾರಂಟಿ ಯೋಜನೆಗಳ ಜಾರಿಗೆ ರಚನೆಯಾಗಲಿರುವ ಸಮಿತಿಯಲ್ಲಿ ರಾಜ್ಯಮಟ್ಟದಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ರಾಜ್ಯ ಮಟ್ಟದ ಸಮಿತಿಗೆ 31 ಜನ ಸದಸ್ಯರು ಇರಲಿದ್ದಾರೆ. ಈ ಎಲ್ಲ ಸ್ಥಾನಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ.

ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ರು ಹಾಗೂ 21 ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ ಹಾಗೂ 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು.

ಇನ್ನು 224 ಕ್ಷೇತ್ರಗಳ ಸಮಿತಿಗೂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರುಗಳೇ ಈ ಎಲ್ಲಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಕ್ಷೇತ್ರ ಮಟ್ಟದ ಅಧ್ಯಕ್ಷರಿಗೂ ಸುಮಾರು 25,000 ರೂ. ಗೌರವ ಧನ ನೀಡುವ ಚಿಂತನೆ ಇದೆ. ಸದಸ್ಯರುಗಳಿಗೆ ಸಿಟ್ಟಿಂಗ್ ಫೀಸ್ ಸಹ ಒದಗಿಸಲಾಗುವುದು. ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುತ್ತದೆ.

" ಸರ್ಕಾರಕ್ಕೆ ಇದು ದೊಡ್ಡ ಹೊರೆಯೇನಲ್ಲ. ಪರಿಣಾಮಕಾರಿಯಾಗಿ ಗ್ಯಾರಂಟಿಗಳ ಅನುಷ್ಠಾನವಾಗಬೇಕು ಎಂಬ ಕಾರಣಕ್ಕೆ 16 ಕೋಟಿ ರೂ.ಗಳನ್ನು ಭರಿಸುತ್ತೇವೆ. ಅಪಪ್ರಚಾರಕ್ಕೆ ಉತ್ತರ ಕೊಡಲು ಈ ಸಮಿತಿಗಳನ್ನು ರಚಿಸಲಾಗುತ್ತಿದೆ. ಕಾರ್ಯಕರ್ತರಿಗೆ, ಶಾಸಕರಲ್ಲದವರಿಗೆ, ಸಂಸದರಲ್ಲದವರಿಗೆ, ಸಮಿತಿ ಸದಸ್ಯತ್ವ ದೊರೆಯಲಿದೆ. ವಿವಿಧ ಇಲಾಖೆಗಳ ಸಮಿತಿಗಳನ್ನು ಕೂಡಲೇ ರಚಿಸಲು ಆಯಾ ಇಲಾಖೆಗಳ ಸಚಿವರ ವಿವೇಚನೆಗೆ ಬಿಡಲಾಗಿದೆ. ಹೆಸರುಗಳನ್ನು ಪಡೆಯುವಾಗ, ನಮ್ಮ ಶಾಸಕರು, ಸಂಸದರ ಸಲಹೆ ಪಡೆಯಬೇಕು. ಕೆಲವು ಶಾಸಕರಿಗೆ , ವಿಧಾನಸಭೆ ಟಿಕೆಟ್ ದೊರೆಯದವರಿಗೆ ಅವಕಾಶ ಕಲ್ಪಿಸಲಾಗುವುದು. ಎರಡು ವರ್ಷಗಳ ಅವಧಿ ಇರಲಿದೆ. ಕಾರ್ಯಕರ್ತರ ಶ್ರಮದಿಂದ ಪಕ್ಷ ಗಟ್ಟಿಯಾಗಿದೆ " ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅದರ ಜೊತೆಜೊತೆಗೆ " ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇಷ್ಟೆಲ್ಲಾ ಮಾಡಿಯೂ ನಾವು ಗೆಲ್ಲದೆ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ, ನಾವು ಗೆಲ್ಲಲೇಬೇಕು. 28ಕ್ಕೆ 28 ಸೀಟನ್ನು ಗೆಲ್ಲಬೇಕು. ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು, ಸಕಾರಾತ್ಮಕವಾಗಿರಬೇಕು." ಎಂದೂ ಹೇಳಿದ್ದಾರೆ ಸಿಎಂ ಸಿದ್ದರಾಮಯ್ಯ.

ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಸೂಕ್ತ ಮಾನ್ಯತೆ ಸಿಗುತ್ತಿಲ್ಲ ಎಂಬ ಆರೋಪ ಸಹಜವಾಗಿದೆ.

ಇದೀಗ ನಿಗಮ ಮಂಡಳಿಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರೂ ಹಾಗೂ ಎರಡನೇ ಹಂತದ ನಾಯಕರೂ ಆಕಾಂಕ್ಷಿಗಳಾಗಿದ್ದಾರೆ.

ಆದರೆ ಪ್ರಮುಖ ನಿಗಮ ಮಂಡಳಿಗಳಿಗೆ ಸಚಿವ ಸ್ಥಾನ ವಂಚಿತ ಶಾಸಕರನ್ನೇ ನೇಮಿಸಲು ಕಾಂಗ್ರೆಸ್ ಬಯಸಿದೆ.

ಅದರಿಂದ ಕಾರ್ಯಕರ್ತರಿಗೆ ಮತ್ತಷ್ಟು ನಿರಾಸೆಯಾಗಲಿದೆ.

ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹಾಗು ಅವರಿಗೆ ಸರಕಾರದ ಕೆಲಸದಲ್ಲಿ ಭಾಗೀದಾರಿಕೆ ಕಲ್ಪಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚನೆ ಮಾಡಲಾಗಿದೆ ಎಂಬುದು ಸ್ಪಷ್ಟ.

ಇದಕ್ಕೆ ಪೂರಕ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಭಾರತ್ ಜೋಡೋ ಭವನದಲ್ಲಿ ನಡೆದ ಲೋಕಸಭೆ ಚುನಾವಣೆ ಸಿದ್ಧತೆ ಸಭೆಯಲ್ಲಿ ಗ್ಯಾರಂಟಿ ಸಮಿತಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಆಡಳಿತಾತ್ಮಕವಾಗಿ ಇದೇನು ಸೂಕ್ತ ಕ್ರಮವಲ್ಲ. ಪ್ರತಿ ಇಲಾಖೆಗೆ ಸಚಿವರು ಇರುವಾಗ ಗ್ಯಾರಂಟಿ ಜಾರಿಗೆ ಇನ್ನೊಂದು ಸಮಿತಿ ಏಕೆ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಬರುತ್ತೆ.

ಆದರೆ ರಾಜಕೀಯ ಎಂದ ಮೇಲೆ ಚುನಾವಣೆ ಕೇಂದ್ರಿತವಾಗಿ ಇಂತಹ ನಡೆ ಸಹಜ. ಅಧಿಕಾರ ಇರುವಾಗ ಪಕ್ಷ ಹಾಗು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸದಿದ್ದರೆ ಮತ್ತೆ ಯಾವಾಗ , ಹೇಗೆ ಪಕ್ಷ ಬೆಳೆಸೋದು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿದೆ.

ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ಇಂತಹ ನೂರಾರು ಅಚ್ಚರಿಯ ಹೆಜ್ಜೆಗಳನ್ನಿಟ್ಟಿದೆ. ಈಗ ಕಾಂಗ್ರೆಸ್ ಸರದಿ.

ರಾಜಕೀಯವಾಗಿ ಇದೊಂದು ಜಾಣ ನಡೆ. ಇದನ್ನು ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ಪಕ್ಷದ ಮುಖಂಡರು ಸರಿಯಾಗಿ ಬಳಸಿಕೊಂಡರೆ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ , ಬಿಜೆಪಿಗೆ ಠಕ್ಕರ್ ಕೊಡುವಲ್ಲಿ ಇದರಿಂದ ಕಾಂಗ್ರೆಸ್ ಗೆ ಸಹಾಯವಾಗೋದು ಮಾತ್ರ ಗ್ಯಾರಂಟಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!