ಪರಿಸರ ಸ್ನೇಹಿ ‘ಟ್ರೀ ಗಣೇಶ’

ವಿಭಿನ್ನ ಆಲೋಚನೆ ಮತ್ತು ವಿಚಾರಗಳಿಂದ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿಸಬಹುದು. ಪ್ರತೀ ಧರ್ಮ, ಜಾತಿಯ ಹಬ್ಬಗಳೂ ಪರಿಸರ ಸ್ನೇಹಿಯಾದರೆ ನಮಗೇ ಒಳಿತಲ್ಲವೇ. ಏಕೆಂದರೆ ಈಗಾಗಲೇ ನಾವು ಮಾರಕವಾದ ಪರಿಸರದಲ್ಲಿ ಬದುಕುತ್ತಿದ್ದೇವೆ. ಆಚರಣೆಯ ಜೊತೆಗೆ ನಮ್ಮ ಬದುಕೂ ಮುಖ್ಯವಲ್ಲವೇ?

Update: 2023-09-17 03:46 GMT

ಗಣೇಶ ಹಬ್ಬವು ಭಾರತದಾದ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಆನೆಯ ಮುಖ ಹೊತ್ತ ಗಣೇಶ ಶಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕ ಎಂದು ಹಿಂದೂಗಳು ನಂಬುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುವುದು ವಾಡಿಕೆ. ಸೆಪ್ಟಂಬರ್ ಬಂತೆಂದರೆ ಸಾಕು, ನುರಿತ ಕುಶಲಕರ್ಮಿಗಳು ನಿರ್ಮಿಸಿದ ವಿವಿಧ ಗಾತ್ರದ ವಿಗ್ರಹಗಳು ಎಲ್ಲೆಡೆ ಮಾರಾಟಕ್ಕೆ ಲಭ್ಯವಿರುತ್ತವೆ. ಗಣೇಶ ಹಬ್ಬ ಅಥವಾ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಯನ್ನು ತಂದು, ವರ್ಣರಂಜಿತವಾಗಿ ಅಲಂಕರಿಸಿದ ತಾತ್ಕಾಲಿಕ ಪೀಠದಲ್ಲಿ ಪ್ರತಿಸ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಮೂರು ದಿನ/ಐದು ದಿನ/ಒಂಭತ್ತು ದಿನಗಳ ನಂತರ ಗಣೇಶನನ್ನು ವಿಸರ್ಜಿಸಲಾಗುತ್ತದೆ.

ಹಬ್ಬದ ಭಾಗವಾಗಿ ಹಾಡು ಕುಣಿತ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಸಹಜ. ವೇದಿಕೆ ನಿರ್ಮಾಣದಿಂದ ಗಣೇಶನ ವಿಸರ್ಜನೆಯವರೆಗಿನ ಹಬ್ಬದ ಪ್ರತೀ ಹಂತವೂ ಪರಿಸರಕ್ಕೆ ಮಾರಕ ಎಂಬುದನ್ನು ನಾವಿನ್ನೂ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಹಬ್ಬಕ್ಕೆ ಒಂದು ವಾರಕ್ಕೂ ಮುನ್ನ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಆಗಬೇಕು ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತವೆ. ಆದರೆ ಪ್ರತೀ ವರ್ಷವೂ ಪರಿಸರ ಮಾರಕ ಹಬ್ಬವೇ ಆಗುತ್ತದೆ.

ವೇದಿಕೆ ನಿರ್ಮಾಣ ಮಾಡುವಾಗಲೂ ಪರಿಸರಕ್ಕೆ ಮಾರಕವಾದ ಅನೇಕ ವಸ್ತುಗಳನ್ನೇ ಬಳಸಲಾಗುತ್ತದೆ. ವೇದಿಕೆಯ ಅಂದ ಹೆಚ್ಚಿಸಲು ಹೊಳಪುಳ್ಳ ಬಣ್ಣಬಣ್ಣದ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತದೆ. ಹಬ್ಬದ ನಂತರ ಬಹುತೇಕ ಈ ಪ್ಲಾಸ್ಟಿಕ್ ಹಾಳೆಗಳು ಕಸದ ತೊಟ್ಟಿ ಸೇರುತ್ತವೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತದೆ. ಜೊತೆಗೆ ವೇದಿಕೆಯಲ್ಲಿ ಬಳಸುವ ಬಣ್ಣಬಣ್ಣದ ಬಲ್ಬ್ಗಳೂ ಬೆಳಕಿನ ಮಾಲಿನ್ಯಕ್ಕೆ ಕಾರಣವಾಗಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಹಬ್ಬಕ್ಕೆ ಬಳಸುವ ಗಣೇಶನ ಮೂರ್ತಿಯು ಪರಿಸರಕ್ಕೆ ಹೆಚ್ಚು ಮಲಿನಕಾರಕವಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಗಣೇಶನ ಮೂರ್ತಿಗಳು ಪಾಸ್ಟರ್ ಆಫ್ ಪ್ಯಾರೀಸ್(ಪಿ.ಒ.ಪಿ.)ನಿಂದ ತಯಾರಿಸಲಾಗಿರುತ್ತದೆ. ನಮಗೆಲ್ಲಾ ತಿಳಿದಿರುವಂತೆ ಪಿ.ಒ.ಪಿ. ಒಂದು ರಾಸಾಯನಿಕ ಮಿಶ್ರಣಗಳ ವಸ್ತುವಾಗಿದ್ದು, ನೀರಿನಲ್ಲಿ ಕರಗದೆ ಹಾಗೇ ಉಳಿಯುತ್ತದೆ. ಪಿ.ಒ.ಪಿ. ಜಿಪ್ಸಮ್ನಿಂದ ತಯಾರಾಗಿದ್ದರೂ ಅದು ಮಣ್ಣು ಮತ್ತು ನೀರಿನಲ್ಲಿ ಕೊಳೆಯದೇ ಹಾಗೆಯೇ ಉಳಿಯುತ್ತದೆ. ಇದು ಜಲಚರಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ಮತ್ತು ನೀರಿನ ಶುದ್ಧತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಗಣೇಶನ ಮೂರ್ತಿಯ ಅಂದ ಹೆಚ್ಚಿಸಲು ಬಳಸುವ ಬಣ್ಣವೂ ಪರಿಸರಕ್ಕೆ ಮಾರಕವಾಗಿದೆ. ಅಂದ ಹೆಚ್ಚಿಸುವ ಬಣ್ಣಗಳು ಸೀಸ, ನಿಕಲ್, ಕ್ಯಾಡ್ಮಿಯಮ್ ಮತ್ತು ಪಾದರಸದಂತಹ ಭಾರವಾದ ಲೋಹಗಳನ್ನು ಹೊಂದಿರುತ್ತವೆ. ವಿಸರ್ಜನೆ ವೇಳೆ ಗಣೇಶನ ವಿಗ್ರಹದ ಜೊತೆಗೆ ಬಣ್ಣಗಳೂ ನೀರಿಗೆ ಸೇರುತ್ತವೆ. ಬಣ್ಣದಲ್ಲಿನ ಲೋಹಗಳು ನೀರಿನ ಕ್ಷಾರೀಯ(ಪಿಎಚ್) ಮಟ್ಟವನ್ನು ಬದಲಾಯಿಸುತ್ತವೆ. ಅಲ್ಲಿನ ನೀರನ್ನು ಹೆಚ್ಚು ಆಮ್ಲೀಯವಾಗಿಸುತ್ತದೆ.

ಪಿ.ಒ.ಪಿ. ಗಣೇಶ ಮೂರ್ತಿಗಳಲ್ಲಿರುವ ರಾಸಾಯನಿಕಗಳು ಮತ್ತು ಭಾರವಾದ ಲೋಹಗಳು ಸಮುದ್ರದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಂತಹ ರಾಸಾಯನಿಕಯುಕ್ತ ನೀರನ್ನು ಸೇವಿಸಿದಾಗ ಅಥವಾ ಕಲುಷಿತ ಆಹಾರ ಸೇವಿಸಿದಾಗ ಹಲವಾರು ಕಾಯಿಲೆಗಳು ಉಂಟಾಗುತ್ತವೆ. ನೀರಿನಲ್ಲಿರುವ ರಾಸಾಯನಿಕಗಳು ನಮ್ಮ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತವೆ.

ಪಿ.ಒ.ಪಿ. ಗಣೇಶ ಮೂರ್ತಿಗೆ ಬದಲಾಗಿ ಜೇಡಿಮಣ್ಣು ಅಥವಾ ಇನ್ನಿತರ ನೈಸರ್ಗಿಕ ವಸ್ತುಗಳಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವುದು ಉತ್ತಮ. ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳು ಯಾವುದೇ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇದು ಸಂಪೂರ್ಣವಾಗಿ ಜೈವಿಕ ವಿಘಟನೀಯವಾಗಿರುತ್ತದೆ. ತಾತ್ವಿಕವಾಗಿ ವಿಚಾರ ಮಾಡುವುದಾದರೆ ಮಣ್ಣಿನ ಗಣೇಶನ ಮೂರ್ತಿಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ಇದರಿಂದ ಜಲಮೂಲಗಳ ಮೇಲೆ ಪರಿಸರದ ಒತ್ತಡವನ್ನು ಕಡಿಮೆ ಮಾಡಬಹುದು.

ಇತ್ತೀಚಿನ ವರ್ಷಗಳಲ್ಲಿ ಕೆಲ ಪರಿಸರ ಪ್ರಿಯರು ಟ್ರೀ ಗಣೇಶನ ಮೂರ್ತಿಗಳಿಗೆ ಮಾರುಹೋಗಿದ್ದಾರೆ. ಏನಿದು ಟ್ರೀ ಗಣೇಶ? ಎಂದು ಅಚ್ಚರಿಯಾಗಬಹುದು. ಇದೊಂದು ವಿಭಿನ್ನ ಹಾಗೂ ವಿಶಿಷ್ಠವಾದ ಪರಿಕಲ್ಪನೆಯಾಗಿದೆ. ಇದೇನು ಸಂಕೀರ್ಣ ಪ್ರಕ್ರಿಯೆಯಲ್ಲ. ತೀರಾ ಸರಳವಾದ ಪ್ರಕ್ರಿಯೆ. ಜೇಡಿಮಣ್ಣಿನೊಂದಿಗೆ ವರ್ಮಿಕಾಂಪೋಸ್ಟ್ ಮತ್ತು ಇತರ ನೈಸರ್ಗಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಅದರಲ್ಲಿ ಬೀಜಗಳನ್ನು ಮಿಶ್ರಣಮಾಡಲಾಗುತ್ತದೆ. ಹೀಗೆ ತಯಾರಾದ ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸದೆ ಮನೆಯ ಆವರಣದಲ್ಲಿನ ಮಣ್ಣಿನಲ್ಲಿ ವಿಸರ್ಜಿಸಲಾಗುತ್ತದೆ. ನಿತ್ಯವೂ ಅಕ್ಕೆ ಮಿತ ಪ್ರಮಾಣದಲ್ಲಿ ನೀರನ್ನು ಕೊಡಲಾಗುತ್ತದೆ. ಕೆಲವು ದಿನಗಳ ನಂತರ ಗಣೇಶ ಮೂರ್ತಿಯಲ್ಲಿ ಅಡಗಿದ್ದ ಬೀಜಗಳು ಕ್ರಮೇಣವಾಗಿ ಮೊಳೆತು ಸಸ್ಯಗಳಾಗಿ ಪರಿವರ್ತನೆಯಾಗುತ್ತವೆ. ಈ ಸಸ್ಯಗಳನ್ನು ಮನೆಯ ಆವರಣದಲ್ಲಿನ ಇನ್ನಿತರ ಕುಂಡಗಳಲ್ಲಿ ಬೆಳೆಸಬಹುದು ಅಥವಾ ವಿಸರ್ಜಿಸಿದ ಸ್ಥಳದಲ್ಲಿಯೇ ಬೆಳೆಸಬಹುದು.

ನೆಡಬಹುದಾದ ಗಣೇಶ ಮೂರ್ತಿಗಳಲ್ಲಿ ವೇಗವಾಗಿ ಬೆಳೆಯುವ ಸಸ್ಯಗಳಾದ ಬೆಂಡಕಾಯಿ, ಟೊಮೆಟೊ, ಬದನೆಕಾಯಿ, ಹಾಗಲಕಾಯಿ, ಪಾಲಕ್, ಪುದಿನ, ಮೆಂತ್ಯೆ, ಮುಂತಾದ ಸಸ್ಯಗಳ ಬೀಜಗಳನ್ನು ಬಳಸಬಹುದು. ನೆಡಬಹುದಾದ ಗಣೇಶ ವಿಸರ್ಜನೆಯ ನಂತರ ಬೆಳೆದ ಸಸ್ಯಗಳನ್ನು ನಿತ್ಯದ ಅಡುಗೆಗೆ ಬಳಸಿಕೊಂಡು ಉತ್ತಮ ಆಹಾರ ಪಡೆಯಲು ಅವಕಾಶಗಳಿವೆ.

ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಇನ್ನೊಂದು ಪರ್ಯಾಯ ಎಂದರೆ ಚಾಕೊಲೇಟ್ ಗಣೇಶನ ವಿಗ್ರಹಗಳು. ಹೆಸರೇ ಸೂಚಿಸುವಂತೆ, ಈ ಗಣೇಶನ ಮೂರ್ತಿಗಳನ್ನು ಚಾಕೊಲೇಟ್ನಿಂದ ಮಾಡಲಾಗುತ್ತದೆ. ಇದರ ಅಲಂಕಾರಕ್ಕೆ ಖಾದ್ಯ ಬಣ್ಣಗಳನ್ನು ಬಳಸಲಾಗುತ್ತದೆ. ಚಾಕೋಲೇಟ್ ಗಣೇಶನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಲಾಗುವುದಿಲ್ಲ. ಇದನ್ನು ಹಾಲಿನೊಂದಿಗೆ ಬೆರೆಸಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

ಇವೆರಡನ್ನೂ ಹೊರತುಪಡಿಸಿ ಪೇಪರ್ ಗಣೇಶನನ್ನೂ ಕೂಡಾ ತಯಾರಿಸಬಹುದು. ಇದರ ತಯಾರಿಕೆ ತುಂಬಾ ಸರಳ. ಮನೆಯಲ್ಲಿನ ಹಳೆಯ ವೃತ್ತ ಪತ್ರಿಕೆಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಹರಿದುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಅದರಲ್ಲಿ ಪೇಪರ್ ತುಂಡುಗಳನ್ನು ನೆನೆಸಬೇಕು. ನೀರಿನಲ್ಲಿ ಒದ್ದೆಯಾದ ಕಾಗದದ ತುಣುಕುಗಳನ್ನು ಇನ್ನೊಂದು ಬಟ್ಟಲು ಅಥವಾ ಪಾತ್ರಗೆ ಹಾಕಿಕೊಂಡು ಅದಕ್ಕೆ ಒಂದಿಷ್ಟು ಗೋದಿ ಹಿಟ್ಟು ಅಥವಾ ಮೈದಾ ಹಿಟ್ಟು ಬೆರೆಸಬೇಕು. ಹೀಗೆ ಹಿಟ್ಟು ಮತ್ತು ಕಾಗದದ ಮಿಶ್ರಣದ ಪಾತ್ರೆಯನ್ನು ಒಲೆಯ ಮೇಲಿಟ್ಟು ಬೇಯಿಸಬೇಕು. ಒಂದು ಹಂತದಲ್ಲಿ ಸ್ಲರಿಯಂತಹ ದ್ರಾವಣ ಉಂಟಾಗುತ್ತದೆ. ದ್ರಾವಣವು ಮಂದವಾಗುವವರೆಗೂ ಕಾಯಿಸಿ ನಂತರ ಗಣೇಶನ ಅಚ್ಚಿಗೆ(ಮೋಲ್ಡ್) ಸುರಿಯಬೇಕು. ಸ್ವಲ್ಪ ಸಮಯದ ನಂತರ ಅಚ್ಚಿನಿಂದ ಹೊರತೆಗೆದಾಗ ಸುಂದರವಾದ ಪೇಪರ್ ಗಣೇಶ ರೆಡಿಯಾಗುತ್ತದೆ. ಇದೂ ಸಂಪೂರ್ಣವಾಗಿ ಪರಿಸರಕ್ಕೆ ಪೂರಕವಾಗಿದ್ದು, ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ.

ಹೀಗೆ ವಿಭಿನ್ನ ಆಲೋಚನೆ ಮತ್ತು ವಿಚಾರಗಳಿಂದ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿಸಬಹುದು. ಪ್ರತೀ ಧರ್ಮ, ಜಾತಿಯ ಹಬ್ಬಗಳೂ ಪರಿಸರ ಸ್ನೇಹಿಯಾದರೆ ನಮಗೇ ಒಳಿತಲ್ಲವೇ. ಏಕೆಂದರೆ ಈಗಾಗಲೇ ನಾವು ಮಾರಕವಾದ ಪರಿಸರದಲ್ಲಿ ಬದುಕುತ್ತಿದ್ದೇವೆ. ಆಚರಣೆಯ ಜೊತೆಗೆ ನಮ್ಮ ಬದುಕೂ ಮುಖ್ಯವಲ್ಲವೇ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಬಿ. ಗುರುಬಸವರಾಜ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!