ಈ.ಡಿ. ಬಳಕೆಯ ಉದ್ದೇಶದ ಹಿಂದೆ...

Update: 2024-01-05 04:30 GMT
Editor : Ismail | Byline : ಪೂರ್ವಿ

ವಿರೋಧಿಗಳನ್ನು ಹಣಿಯುವ ಮತ್ತು ಚುನಾವಣೆಯ ಸಮಯದಲ್ಲಿಯೇ ಅವರನ್ನು ಕಾಡುವ ಬಿಜೆಪಿ ಸಂಪ್ರದಾಯ ಮುಂದುವರಿದಿದೆ.

ಈಗ ಅದು ಈ.ಡಿ. ಎಂಬ ಅಸ್ತ್ರವನ್ನು ಕೈಗೆತ್ತಿಕೊಂಡಿರುವ ರೀತಿ ನೋಡಿದರೆ, ಚುನಾವಣೆಯನ್ನು ನೇರವಾಗಿ ಎದುರಿಸುವ ದಾರಿಗಿಂತಲೂ, ಮರೆಯಲ್ಲಿ ನಿಂತು ಎದುರಾಳಿಗಳನ್ನು ಮುಗಿಸಲು ಸನ್ನದ್ಧವಾಗಿರುವ ಹಾಗೆ ಕಾಣಿಸುತ್ತಿದೆ.

ಇಬ್ಬರು ವಿಪಕ್ಷ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬಂಧಿಸಲು ಈ.ಡಿ. ಮುಂದಾಗಲಿದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ.

ಒಬ್ಬರು ದಿಲ್ಲಿ ಸಿಎಂ ಮತ್ತು ಬಿಜೆಪಿಯ ಪ್ರಬಲ ಎದುರಾಳಿ ಪಕ್ಷವಾಗಿರುವ ಎಎಪಿಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್.

ಇನ್ನೊಬ್ಬರು ಜಾರ್ಖಂಡ್ ಸಿಎಂ, ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೇನ್.

ಚುನಾವಣೆಗೆ ಇನ್ನೇನು ವಿಪಕ್ಷಗಳು ಸಜ್ಜಾಗಬೇಕು ಎನ್ನುವ ಹೊತ್ತಿಗೇ ಅದು ಒಂದಾದ ಮೇಲೊಂದರಂತೆ ಸಮನ್ಸ್ ಗಳನ್ನು ಜಾರಿಗೊಳಿಸುತ್ತಿರುವುದು ನೋಡಿದರೆ, ಗೈರಾಗುವುದನ್ನೇ ನೆಪವಾಗಿಟ್ಟುಕೊಂಡು ಬಂಧನಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆಯೇ ಎಂಬ ಅನುಮಾನವೂ ಬರುತ್ತದೆ. ಇಬ್ಬರೂ ಸಿಎಂಗಳು ಈ.ಡಿ. ಸಮನ್ಸ್ ವಿರುದ್ಧ ತಕರಾರೆತ್ತುತ್ತಲೇ ಇದ್ದಾರೆ ಮತ್ತು ವಿಚಾರಣೆಗೂ ಹಾಜರಾಗಿಲ್ಲ.

ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವಾಗ ಈ ‘ಈ.ಡಿ.’ ಬೇಟೆ ಯಾವ ರೂಪ ಪಡೆದುಕೊಳ್ಳಬಹುದು? ಇದರ ಪರಿಣಾಮಗಳು ಏನೇನಾಗಬಹುದು? ಇದರಿಂದ ವಿಪಕ್ಷ ಒಕ್ಕೂಟ ಇನ್ನಷ್ಟು ದುರ್ಬಲವಾಗಬಹುದೇ? ಅಥವಾ ಎನ್‌ಡಿಎ ಎದುರು ಪುಟಿದೇಳಲು ಅದಕ್ಕೊಂದು ಕಾರಣ ಇದಾಗಬಹುದೇ?

ಮೊದಲಿಗೆ ಸೊರೇನ್ ಮತ್ತು ಕೇಜ್ರಿವಾಲ್ ಅವರಿಗೆ ಈ.ಡಿ. ಸಮನ್ಸ್ ವಿಚಾರವಾಗಿ ಕೆಲವು ವಿವರಗಳನ್ನು ಗಮನಿಸುವುದಾದರೆ,

ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗೆ ಈ.ಡಿ. ಶನಿವಾರ ಜಾರಿ ಮಾಡಿರುವುದು 7ನೇ ಸಮನ್ಸ್. ಭೂ ಹಗರಣ ಪ್ರಕರಣದಲ್ಲಿ ತಮ್ಮ ಹೇಳಿಕೆ ದಾಖಲಿಸಲು ಸೊರೇನ್ ಅವರಿಗೆ ಇದು ಕೊನೆಯ ಅವಕಾಶ ಎಂದು ಈ.ಡಿ. ಹೇಳಿತ್ತು.ಅನುಕೂಲವಾಗುವ ಸಮಯ ಮತ್ತು ಸ್ಥಳವನ್ನು ನಿರ್ಧರಿಸುವುದಕ್ಕೂ ಎರಡು ದಿನ ಕಾಲಾವಕಾಶ ನೀಡಿತ್ತು.

ಈ ಹಿಂದೆ ಆಗಸ್ಟ್ 14, ಆಗಸ್ಟ್ 24, ಸೆಪ್ಟಂಬರ್ 9, ಸೆಪ್ಟಂಬರ್ 23, ಅಕ್ಟೋಬರ್ 4 ಮತ್ತು ಡಿಸೆಂಬರ್ 12ರಂದು ಅದು ಸಮನ್ಸ್ ಜಾರಿ ಮಾಡಿತ್ತು. ಸೊರೇನ್ ಎಲ್ಲಾ ಸಮನ್ಸ್‌ಗಳಿಗೂ ಪ್ರತಿಕ್ರಿಯಿಸಿದ್ದಾರೆ ಆದರೆ ಈ.ಡಿ. ಎದುರು ಅವರು ಹಾಜರಾಗಿಲ್ಲ. ಸಮನ್ಸ್ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮತ್ತು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದರೂ ಯಾವುದೇ ಪರಿಹಾರ ಪಡೆಯಲು ಸಾಧ್ಯವಾಗಲಿಲ್ಲ.

ಮೊದಲ ಸಮನ್ಸ್ ಸ್ವೀಕರಿಸಿದಾಗಲೇ ಅದನ್ನು ಕಾನೂನು ಬಾಹಿರ ಎಂದು ಪ್ರಶ್ನಿಸಿ ಸೊರೇನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು, ಆದರೆ ಸುಪ್ರೀಂ ಕೋರ್ಟ್ ಅವರಿಗೆ ಜಾರ್ಖಂಡ್ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿತು.

ಅಷ್ಟು ಹೊತ್ತಿಗೆ ಈ.ಡಿ.ಯಿಂದ 2ನೇ ಸಮನ್ಸ್ ಬಂದಿತ್ತು.

ಬಳಿಕ ಸೊರೇನ್ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿದರಾದರೂ, ತೀರ್ಪು ಅವರ ಪರವಾಗಿ ಬರಲಿಲ್ಲ.

ಈ.ಡಿ. ಸಮನ್ಸ್ ಕಿರುಕುಳ ನೀಡುವ ಉದ್ದೇಶದ್ದಾಗಿದೆ ಎಂದೇ ಜೆಎಂಎಂ ಆರೋಪಿಸುತ್ತಿದೆ. ಅಲ್ಲದೆ ಸೊರೇನ್ ಕೂಡ ಮೊದಲ ಸಮನ್ಸ್ ಬಂದಾಗಲೇ, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಇರುವುದಕ್ಕಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದೇ ಆರೋಪಿಸಿದ್ದರು.

ಈಗ ಸೊರೇನ್ ಬಂಧನವಾದರೆ ಅವರ ಪತ್ನಿಯನ್ನು ಜಾರ್ಖಂಡ್ ಸಿಎಂ ಮಾಡಲು ಜೆಎಂಎಂ ಪಕ್ಷ ಸಜ್ಜಾಗಿದೆ ಎಂದು ಸುದ್ದಿಯಿದೆ.

ಇನ್ನು ಈ.ಡಿ. ಅರವಿಂದ್ ಕೇಜ್ರಿವಾಲ್ ಬೆನ್ನುಬಿದ್ದಿರುವ ವಿಚಾರ.

ದಿಲ್ಲಿ ಅಬಕಾರಿ ಹಗರಣದ ಸಂಬಂಧ ಕೇಜ್ರಿವಾಲ್ ಅವರಿಗೆ ಈ.ಡಿ. 3ನೇ ಸಮನ್ಸ್ ಕಳಿಸಿತ್ತು. ಆದರೆ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ.

ಈ ಮೊದಲು ನವೆಂಬರ್ 21 ಹಾಗೂ ಡಿಸೆಂಬರ್ 2ರಂದು ವಿಚಾರಣೆಗೆ ಬರುವಂತೆ ನೊಟೀಸ್ ನೀಡಲಾಗಿತ್ತು. ಆದರೆ ಕೇಜ್ರಿವಾಲ್ ಗೈರಾಗಿದ್ದರು. ಈಗಾಗಲೇ ಈ.ಡಿ. ಸಮನ್ಸ್ ರಾಜಕೀಯ ಪ್ರೇರಿತ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ. ಈ.ಡಿ.ಗೆ ಪತ್ರ ಬರೆದಿರುವ ಅವರು, ಅಪಾರದರ್ಶಕ ಮತ್ತು ನಿರಂಕುಶ ಕ್ರಮ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತೀ ಬಾರಿಯೂ ಸಮನ್ಸ್ ತಮಗೆ ತಲುಪುವ ಮೊದಲೇ ಮಾಧ್ಯಮಗಳಿಗೆ ಅದರ ಬಗ್ಗೆ ಗೊತ್ತಾಗುತ್ತದೆ. ಈ ಬಾರಿಯೂ ಅದೇ ಆಗಿದೆ. ಈ.ಡಿ. ಸಮನ್ಸ್ ಉದ್ದೇಶ ಕಾನೂನುಬದ್ಧ ವಿಚಾರಣೆಯೋ ಅಥವಾ ತಮ್ಮ ಘನತೆಗೆ ಕಳಂಕ ಹಚ್ಚುವುದಾಗಿದೆಯೋ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಸಮನ್ಸ್ ವಿಚಾರವಾಗಿ ತಾವು ಎತ್ತಿರುವ ಕಾನೂನಾತ್ಮಕ ತಕರಾರುಗಳ ಬಗ್ಗೆ ಈ.ಡಿ. ಮೌನ ವಹಿಸಿರುವುದರ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.

ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಾಕ್ಷಿ ಎಂದು ವಿಚಾರಣೆಗೆ ಕರೆಯಲಾಗುತ್ತಿದೆಯೋ ಅಥವಾ ಶಂಕಿತ ಎಂದು ಕರೆಯಲಾಗುತ್ತಿದೆಯೋ ಎಂಬುದು ಸ್ಪಷ್ಟವಿಲ್ಲ ಎಂದು ಎಎಪಿ ತಕರಾರೆತ್ತಿದೆ. ವಿಚಾರಣೆಗೆ ಸಹಕರಿಸಲು ಕೇಜ್ರಿವಾಲ್ ತಯಾರಿದ್ದಾರೆ. ಆದರೆ ಈ.ಡಿ. ಅವರನ್ನು ಬಂಧಿಸುವ ಉದ್ದೇಶದಿಂದಲೇ ನೋಟಿಸ್ ನೀಡಿದೆ ಎಂದು ಆಪ್ ಆರೋಪಿಸಿದೆ.

ಚುನಾವಣೆಗೂ ಮೊದಲು ನೋಟಿಸ್ ಕಳುಹಿಸುವ ಉದ್ದೇಶ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ತಡೆಯುವುದೇ ಆಗಿದೆ ಎಂದು ಅದು ಹೇಳಿದೆ. ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ಅಲ್ಲಿ ನಡೆಯುವುದಿದೆ. ಈ ನಡುವೆಯೇ ಲೋಕಸಭೆ ಚುನಾವಣೆ ಎದುರಿಗಿದೆ.ಹಾಗೆಯೇ ದಿಲ್ಲಿಯಲ್ಲಿ ಎಎಪಿ ಪ್ರಬಲ ಎದುರಾಳಿಯಾಗಿ ಬಿಜೆಪಿಯೆದುರು ನಿಂತಿದೆ.

ಬರಲಿರುವ ಲೋಕಸಭೆ ಚುನಾವಣೆ ವೇಳೆ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಎಎಪಿ ಇನ್ನೂ ಪ್ರಬಲ ಪೈಪೋಟಿ ಒಡ್ಡಲಿದೆ ಎಂಬ ಆತಂಕವೂ ಬಿಜೆಪಿಯನ್ನು ಕಾಡುತ್ತಿರಬಹುದು. ಇಂಥ ಹೊತ್ತಲ್ಲಿ ವಿಪಕ್ಷ ಮೈತ್ರಿಕೂಟವನ್ನು ಕಂಗೆಡಿಸುವುದು ಬಿಜೆಪಿಯ ಉದ್ದೇಶ.

ಇಬ್ಬರೂ ಸಿಎಂಗಳು ಆರೋಪಿಸಿರುವ ಹಾಗೆ, ಕೇಂದ್ರ ಸರಕಾರದ ಸೂತ್ರದ ಗೊಂಬೆಯಾಗಿರುವ ಈ.ಡಿ. ಕಳಿಸಿರುವ ಸಮನ್ಸ್ ರಾಜಕೀಯ ಪ್ರೇರಿತ ಎಂಬುದು ರಹಸ್ಯವಂತೂ ಅಲ್ಲ.

ಈ.ಡಿ. ಒಂದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡದೆ, ಬಿಜೆಪಿ ಹೇಳಿದ ಕೆಲಸವನ್ನಷ್ಟೇ ಮಾಡುತ್ತಿದೆ ಎಂದು ವಿಪಕ್ಷ ಮಾಡುತ್ತಿರುವ ಆರೋಪ ಸರಿಯಾಗಿ ಕಾಣುತ್ತಿಲ್ಲವೇ?

ವಿಪಕ್ಷಗಳನ್ನು ಹೇಗಾದರೂ ಭಯ ಮತ್ತು ಗೊಂದಲದಲ್ಲಿ ಕೆಡವಬೇಕು ಮತ್ತು ಚುನಾವಣೆ ತಯಾರಿಯಲ್ಲಿ ಅವರು ಸರಿಯಾಗಿ ತೊಡಗಿಕೊಳ್ಳದ ಹಾಗೆ ಅಲ್ಲೋಲ ಕಲ್ಲೋಲ ಎಬ್ಬಿಸಬೇಕು ಎಂಬುದೇ ಬಿಜೆಪಿ ಉದ್ದೇಶವಾಗಿದೆಯೇ?

ಬಲಾಢ್ಯ ಪಕ್ಷ ಬಿಜೆಪಿಗೆ ಏಕೆ ಹೀಗೆ ವಿಪಕ್ಷಗಳನ್ನು ನೇರವಾಗಿ ಎದುರಿಸಲಾರದೆ ಬದಿಯಿಂದ ಹೊಡೆಯುವ ಚಾಳಿ? ಅಷ್ಟರ ಮಟ್ಟಿಗೆ ಅದು ಅಸಮರ್ಥವೆ? ಅಡ್ಡದಾರಿಯಿಂದ ಹೋಗದೆ ಅಧಿಕಾರ ಪಡೆಯುವುದು ಅದಕ್ಕೆ ಸಾಧ್ಯವಿಲ್ಲವೆ? ಎಂದೆಲ್ಲ ವಿಪಕ್ಷಗಳು ಪ್ರಶ್ನಿಸುತ್ತಿವೆ

ಈಗ ದೊಡ್ಡ ಸವಾಲಿರುವುದು ವಿಪಕ್ಷಗಳ ಎದುರಲ್ಲಿ.

ಈ ಸವಾಲನ್ನೇ ಅವು ತಮ್ಮ ತಾಕತ್ತು ತೋರಿಸಲು ಬಳಸುವುದಕ್ಕೆ ತಂತ್ರ ರೂಪಿಸಲು ಸಾಧ್ಯವೇ? ಹಣಬಲ, ಹಿಂದುತ್ವ ಅಜೆಂಡಾ, ಮೀಡಿಯಾ ಎಲ್ಲವನ್ನೂ ಹೊಂದಿರುವ ಬಿಜೆಪಿಯನ್ನು ಸವಾಲಾಗಿ ತೆಗೆದುಕೊಳ್ಳುವ ಶಕ್ತಿಯಾಗಿ ಪ್ರತಿಪಕ್ಷಗಳು ಎದ್ದುನಿಲ್ಲಬಲ್ಲವೆ?

ಮೂರನೇ ಅವಧಿಯ ಗುರಿಯೊಂದೇ ಮುಖ್ಯ ಎಂದು ಹೊರಟಿರುವವರು ಏನನ್ನೂ ಮಾಡಬಲ್ಲ ಸಾಧ್ಯತೆ ಇರುವುದರಿಂದ, ನಿಜಕ್ಕೂ ಈಗ ಸವಾಲಿರುವುದು ವಿಪಕ್ಷಗಳ ಎದುರಲ್ಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪೂರ್ವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!