ಚುನಾವಣಾ ಬಾಂಡ್ ಯೋಜನೆ ರದ್ದು: ಹಣದ ವಿರುದ್ದ ಮತದ ಮಹತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು

Update: 2024-02-22 07:16 GMT
Editor : Ismail | Byline : ಝೋಯಾ ಹಸನ್

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಈ ತೀರ್ಪು, ಪ್ರಜಾತಂತ್ರ ಮತ್ತು ಪಾರದರ್ಶಕತೆಯ ಗೆಲುವಾಗಿದೆ. ಹಾಗೆಯೇ, ಸರಕಾರ ಮತ್ತು ಕಾರ್ಪೊರೇಟ್ ಸಂಪರ್ಕಗಳನ್ನು ತೀವ್ರವಾಗಿ ಟೀಕಿಸುವವರ ಪಾಲಿನ ಒಂದು ದೊಡ್ಡ ಗೆಲುವಾಗಿದೆ. ಇದು ಹಣ ಬಲದ ವಿರುದ್ಧ ಜನರ ಅಧಿಕಾರದ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದೆ. ನೋಟುಗಳಿಗಿಂತ ಮತಗಳು ಮುಖ್ಯ ಎಂಬುದನ್ನು ಪ್ರತಿಪಾದಿಸಿದೆ.

ರಾಜಕೀಯ ಪಕ್ಷಗಳಿಗೆ ಹೆಸರು ಬಹಿರಂಗಪಡಿಸದೆ ದೇಣಿಗೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಹೇಳಿದೆ. ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸರ್ವಾನುಮತದಿಂದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ. ಅದು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಹಾಗಾಗಿ ಸಂವಿಧಾನದ 19 (1) (ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಫೆಬ್ರವರಿ 15ರ ಈ ತೀರ್ಪು ಪ್ರಜಾಪ್ರಭುತ್ವದ ಮೂಲ ತತ್ವವನ್ನು ಎತ್ತಿಹಿಡಿದಿದೆ. ವಿಶೇಷವಾಗಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಚುನಾವಣಾ ಪ್ರಚಾರಗಳಿಗೆ ಯಾರು ಹಣ ನೀಡುತ್ತಿದ್ದಾರೆ ಎಂಬುದರ ಕುರಿತು ತಿಳಿಯಲು ಅಧಿಕಾರವಿರುವ ಮತದಾರರ ಮಾಹಿತಿ ಹಕ್ಕನ್ನು ತೀರ್ಪು ಎತ್ತಿಹಿಡಿದಿದೆ. ತಕ್ಷಣದಿಂದಲೇ ಚುನಾವಣಾ ಬಾಂಡ್‌ಗಳ ಮಾರಾಟ ನಿಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ದೇಣಿಗೆಗಳ ಮೂಲ ಬಹಿರಂಗಗೊಳಿಸದಿರಲು ಅವಕಾಶ ಒದಗಿಸಿ ಆದಾಯ ತೆರಿಗೆ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಗೆ ಮಾಡಿದ ತಿದ್ದುಪಡಿಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಕಂಪೆನಿಗಳ ಕಾಯ್ದೆಗೆ ತಿದ್ದುಪಡಿಗಳನ್ನು ಕಂಡುಹಿಡಿದಿದೆ, ಕಂಪೆನಿಗಳು ತಮ್ಮ ಲಾಭದ ಶೇ.7.5ರವರೆಗೆ ಮಾತ್ರ ರಾಜಕೀಯ ಪಕ್ಷಗಳಿಗೆ ಅವುಗಳ ವಿವರಗಳನ್ನು ಬಹಿರಂಗಪಡಿಸದೆ ನೀಡಬಹುದು ಎಂಬ ನಿಯಮವನ್ನು ತೆಗೆದುಹಾಕಲಾದ ಕಂಪೆನಿಗಳ ಕಾಯ್ದೆಯ ತಿದ್ದುಪಡಿಯನ್ನು ಕೂಡ ಗಮನಿಸಿದ ಸುಪ್ರೀಂ ಕೋರ್ಟ್, ಅದನ್ನು ತರ್ಕರಹಿತ ಕ್ರಮ ಎಂದು ಹೇಳಿದೆ.




 


ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿಯಿಲ್ಲದ ಕಾರ್ಪೊರೇಟ್ ದೇಣಿಗೆಗಳು ಅನಿಯಂತ್ರಿತ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬುದನ್ನು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೊಡ್ಡ ಪ್ರಮಾಣದ ದೇಣಿಗೆಗಳನ್ನು ನೀಡುವ ಮೂಲಕ ಆಡಳಿತಾರೂಢ ಪಕ್ಷಗಳ ಮೇಲೆ ಅನುಚಿತ ರೀತಿಯಲ್ಲಿ ಪ್ರಭಾವ ಬೀರಲು ದಾರಿ ಮಾಡಿಕೊಡುವುದರಿಂದ ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವದ ಉಲ್ಲಂಘನೆ ಎಂದೂ ನ್ಯಾಯಾಲಯ ಹೇಳಿದೆ.

ಈ ತೀರ್ಪು ಮೂಲವನ್ನು ಬಹಿರಂಗಪಡಿಸದ ಕಾರ್ಪೊರೇಟ್ ದೇಣಿಗೆಗಳು ಮತ್ತು ದೇಣಿಗೆ ನೀಡಿದ ಕಂಪೆನಿಗಳಿಗೆ ಅನುಕೂಲವಾಗುವಂತೆ ನೀತಿಗಳನ್ನು ಮಾಡುವ ಸಂಭವನೀಯತೆಯ ನಡುವೆ ತಾರ್ಕಿಕ ಸಂಬಂಧ ಇರುವುದನ್ನು ಕಾಣಿಸಿದೆ.

ಸರಕಾರ ಚುನಾವಣಾ ಬಾಂಡ್ ಯೋಜನೆಯನ್ನು ಚುನಾವಣಾ ಸುಧಾರಣೆ ಎಂದು ಬಿಂಬಿಸಿದೆ. ಭ್ರಷ್ಟಾಚಾರ, ಕಪ್ಪುಹಣವನ್ನು ತಡೆಯಲು ಮತ್ತು ರಾಜಕೀಯ ನಿಧಿಗೆ ಹೆಚ್ಚು ಅಗತ್ಯವಿರುವ ಪಾರದರ್ಶಕತೆಯನ್ನು ತರಲು ಇದು ಒಂದು ಮಾರ್ಗ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ ಹೆಸರು ಬಹಿರಂಗಗೊಳಿಸದೆ ದೇಣಿಗೆ ನೀಡುವವರು ರಾಜಕೀಯ ಪಕ್ಷಗಳಿಗೆ ಮಿತಿಯೇ ಇಲ್ಲದಷ್ಟು ಹಣವನ್ನು ದೇಣಿಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟಿದ್ದರಿಂದ, ಬಿಜೆಪಿ ಹೇಳಿಕೊಳ್ಳುತ್ತಿರುವುದಕ್ಕೆ ಪೂರ್ತಿಯಾಗಿ ಮತ್ತು ಸ್ಪಷ್ಟವಾಗಿ ವಿರುದ್ಧವಿದೆ.

ಪಾರದರ್ಶಕತೆಯನ್ನು ಹೆಚ್ಚಿಸಲೆಂದೇ ಚುನಾವಣಾ ಬಾಂಡ್‌ಗಳನ್ನು ರೂಪಿಸಲಾಗಿದೆ ಎಂದು ಬಿಜೆಪಿಯವರು ಇನ್ನೂ ಹೇಳುತ್ತಲೇ ಇದ್ದಾರೆ. ಆದರೆ ಚುನಾವಣೆಗೆ ಕಪ್ಪುಹಣ ಹರಿದುಬರುವುದನ್ನು ತಡೆಯುವ ಮಾರ್ಗ ಇದೆಂಬ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದರೆ ನ್ಯಾಯಾಲಯದ ತೀರ್ಪಿನ ನಂತರವೂ ಬಿಜೆಪಿಯ ಸಮರ್ಥನೆ ನಿಂತಿಲ್ಲ.

ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ತಿಳಿದುಕೊಳ್ಳುವ ಮೂಲಭೂತ ಹಕ್ಕು ನಾಗರಿಕರಿಗೆ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ನಂತರವೂ ಬಿಜೆಪಿ ಇದನ್ನು ಪಾರದರ್ಶಕ ಎಂದು ಸಮರ್ಥಿಸುತ್ತಿರುವುದು ವಿಚಿತ್ರವಾಗಿದೆ. ದೇಣಿಗೆ ನೀಡುವವರ ಗೌಪ್ಯತೆಯನ್ನು ಕಾಪಾಡುವುದಕ್ಕಾಗಿ ಪಕ್ಷಗಳಿಗೆ ಕಾರ್ಪೊರೇಟ್ ಅಥವಾ ವೈಯಕ್ತಿಕ ದೇಣಿಗೆಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗದು ಎಂದು ನ್ಯಾಯಾಲಯದಲ್ಲಿ ಸರಕಾರಿ ವಕೀಲರು ಹೇಳಿದ್ದರು.

ಬಾಂಡ್‌ಗಳನ್ನು ಯಾರು ಖರೀದಿಸುತ್ತಿದ್ದಾರೆ ಮತ್ತು ಯಾರು ದೇಣಿಗೆ ನೀಡುತ್ತಿದ್ದಾರೆಂದು ಸಾರ್ವಜನಿಕರಿಗೆ ತಿಳಿಸಲಾಗದು. ಆದರೆ ಸರಕಾರ ತನ್ನ ಅಧೀನದಲ್ಲಿರುವ ಎಸ್‌ಬಿಐ ಮೂಲಕ ಇದನ್ನು ತಿಳಿಯಬಹುದು. ಮಾರಾಟವಾದ ಮತ್ತು ಠೇವಣಿ ಮಾಡಲಾದ ಎಲ್ಲಾ ಬಾಂಡ್‌ಗಳ ಪಟ್ಟಿ ಎಸ್‌ಬಿಐ ಬಳಿ ಇರುತ್ತದೆ. ಈಗ ಅದನ್ನೇ ಸಾರ್ವಜನಿಕವಾಗಿ ಬಹಿರಂಗಗೊಳಿಸುವಂತೆ ನ್ಯಾಯಾಲಯ ಸೂಚಿಸಿರುವುದು.

ಸರಕಾರದ ನಿಲುವನ್ನು ಒಪ್ಪದ ನ್ಯಾಯಾಲಯ, ರಾಜಕೀಯ ಪಕ್ಷಗಳಿಗೆ ಹೇಗೆ ಹಣ ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ನಾಗರಿಕರ ಹಕ್ಕನ್ನು ಎತ್ತಿಹಿಡಿದಿದೆ. ರಾಜಕೀಯ ಸಂಬಂಧಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ವ್ಯಕ್ತಿಯ ಹಕ್ಕಿನ ವಿರುದ್ಧ ನಾಗರಿಕ ಹಕ್ಕನ್ನು ಮರೆಯುವಂತಿಲ್ಲ ಎಂಬುದು ಈ ಮೂಲಕ ಪ್ರತಿಪಾದಿತವಾಗಿದೆ.

ಈಗಾಗಲೇ ಗೊತ್ತಿರುವಂತೆ, ಚುನಾವಣಾ ಬಾಂಡ್‌ಗಳನ್ನು ಪರಿಚಯಿಸುವ ಮೊದಲೇ ಚುನಾವಣಾ ಆಯೋಗ ಮತ್ತು ಆರ್‌ಬಿಐ ಆ ಯೋಜನೆಯನ್ನು ವಿರೋಧಿಸಿದ್ದವು. ಅದು ರಾಜಕೀಯ ಹಣಕಾಸು ಮತ್ತು ರಾಜಕೀಯ ಪಕ್ಷಗಳ ಹಣದ ಪಾರದರ್ಶಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಚುನಾವಣಾ ಆಯೋಗ ಹೇಳಿತ್ತು (ನಂತರ ಅದು ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡಿತು ಎಂಬುದು ಬೇರೆ ಮಾತು). ಆರ್‌ಬಿಐ ಈ ಯೋಜನೆಯನ್ನು ಕೆಟ್ಟ ಕ್ರಮಕ್ಕೆ ನಾಂದಿ ಎಂದು ಹೇಳಿತ್ತು. ಮಾಹಿತಿ ಹಕ್ಕು ಕಾರ್ಯಕರ್ತರ ಹಲವಾರು ವರದಿಗಳು ಯೋಜನೆಯಲ್ಲಿನ ಅಪಾರದರ್ಶಕತೆ ಮತ್ತು ಸಮಸ್ಯೆಗಳನ್ನು ಬಹಿರಂಗಪಡಿಸಿದ್ದವು.

ಅದರ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಆತಂಕಗಳ ನಡುವೆಯೂ ಸರಕಾರ ಯೋಜನೆಯನ್ನು ಮುಂದುವರಿಸಿತ್ತು. ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸಮರ್ಥಿಸಲು ಮುಂದೆ ಮಾಡಲಾಗಿದ್ದ ಅದರ ವಾದಗಳು ತಪ್ಪಾಗಿದ್ದವು.

ಪ್ರಜಾಪ್ರಭುತ್ವಕ್ಕೆ ಮಾಹಿತಿ ಅತ್ಯಗತ್ಯವಾದ್ದರಿಂದ ಮತದಾರರ ತಿಳಿದು ಕೊಳ್ಳುವ ಹಕ್ಕು ಎಲ್ಲಕ್ಕಿಂತ ಹೆಚ್ಚಿನದು. ಪ್ರಜಾತಂತ್ರದ ದೃಷ್ಟಿಕೋನ ದಿಂದ ಸಾರ್ವಜನಿಕರು ರಾಜಕೀಯ ಪಕ್ಷಗಳಿಗೆ ಬರುವ ಹಣದ ಬಗ್ಗೆ ಮಾಹಿತಿಯನ್ನು ಪಡೆಯುವುದು ಮುಖ್ಯ. ಇದರಿಂದಾಗಿ ಮತದಾರ ಎಚ್ಚರಿಕೆಯುಳ್ಳವನಾಗಲು ಸಾಧ್ಯ. ಮಾಹಿತಿ ಇಲ್ಲದೆ ಇರುವುದು ತಿಳಿವಳಿಕೆ ಹೊಂದಿರುವ ಮತದಾರ ಎಂಬ ತತ್ವದ ಉಲ್ಲಂಘನೆಯಾಗುತ್ತದೆ.

ಈ ವಿಚಾರವನ್ನು, ಸಾರ್ವಜನಿಕ ಕ್ಷೇತ್ರದಲ್ಲಿ ಯಾವ ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವ ಜನರಿಗೆ ತಿಳಿದುಕೊಳ್ಳುವ ಹಕ್ಕು ಇದೆ ಎಂದು ಹೇಳುವ ಮೂಲಕ ನ್ಯಾಯಾಲಯ ಎತ್ತಿಹಿಡಿದಿದೆ.

ದೇಶದಲ್ಲಿನ ಚುನಾವಣೆಗಳು ಕಾರ್ಪೊರೇಟ್ ದಾನಿಗಳಿಂದ ಸಂಪೂರ್ಣವಾಗಿ ಹಣವನ್ನು ಪಡೆದ ದುಬಾರಿ ವ್ಯವಹಾರವಾಗಿ ಬಿಟ್ಟಿವೆ. ಇದು ಭಾರೀ ಬಂಡವಾಳ ಮತ್ತು ರಾಜಕೀಯದ ನಡುವೆ ನಿಕಟ ಸಂಬಂಧಕ್ಕೆ ಕಾರಣವಾಗುತ್ತದೆ. ಚುನಾವಣಾ ಬಾಂಡ್‌ಗಳು ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಲ್ಲಿಯವರೆಗೂ ಹೊಸ ವ್ಯವಸ್ಥೆಯ ಹಾಗೆ ಇದ್ದವು.

ಈ ರಹಸ್ಯ ಯೋಜನೆಯ ದೊಡ್ಡ ಫಲಾನುಭವಿ ಬಿಜೆಪಿ. ಈ ಯೋಜನೆ ಪ್ರಾರಂಭವಾದಾಗಿನಿಂದ 2022-2023ರ ಆರ್ಥಿಕ ವರ್ಷದ ಅಂತ್ಯದವರೆಗೆ ಬಂದ ಒಟ್ಟು 12,000 ಕೋಟಿ ರೂ.ಗಳಲ್ಲಿ, 6,500 ಕೋಟಿ ರೂ. ಬಿಜೆಪಿಗೆ ಹೋಗಿದೆ, ಇದು ಸಂಪೂರ್ಣ ಮೊತ್ತದ ಸುಮಾರು ಶೇ.55 ಆಗಿದೆ. ಸುಮಾರು 1,000 ಕೋಟಿ ರೂ. ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ನಂತರದ ಸ್ಥಾನದಲ್ಲಿದೆ.

ಬಿಜೆಪಿ ಮತ್ತು ಅದರ ಸಮೀಪದ ಪ್ರತಿಸ್ಪರ್ಧಿ ಪಕ್ಷ ಕಾಂಗ್ರೆಸ್ ನಡುವಿನ ಈ ಅಗಾಧ ಅಂತರ, ಚುನಾವಣಾ ಬಾಂಡ್‌ಗಳ ಮೂಲಕ ಅಸಮಾನ ಆಟದ ಮೈದಾನ ಸೃಷ್ಟಿಯಾಗಿರುವುದನ್ನೇ ತೋರಿಸುತ್ತದೆ.

ಚುನಾವಣಾ ಬಾಂಡ್‌ಗಳನ್ನು ನಗದು ದೇಣಿಗೆಗಳಿಗೆ ಪರ್ಯಾಯವಾಗಿ ತರಲಾಗಿದೆ. ಅದು ರಾಜಕೀಯ ದೇಣಿಗೆಯನ್ನು ಶುದ್ಧ ಎಂದು ಕಾಣಿಸಲು ಯತ್ನಿಸುತ್ತದೆ. ಎಸ್‌ಬಿಐ ಮೂಲಕ ರಾಜಕೀಯ ಪಕ್ಷಗಳಿಗೆ ಹಣವನ್ನು ನೀಡಲು ದೇಣಿಗೆದಾರರನ್ನು ಉತ್ತೇಜಿಸುತ್ತದೆ. ಆದರೆ ನೇರ ಮತ್ತು ಪತ್ತೆಹಚ್ಚಲಾಗದ ನಗದು ಕಣ್ಮರೆಯಾಗಿಲ್ಲ. ವಾಸ್ತವವಾಗಿ, ಚುನಾವಣಾ ಬಾಂಡ್‌ಗಳ ಹೊರತಾಗಿಯೂ ಅಜ್ಞಾತ ಮೂಲಗಳ ಮೂಲಕ ರಾಷ್ಟ್ರೀಯ ಪಕ್ಷಗಳ ಆದಾಯದ ಪಾಲು 2018ರಿಂದ ಹೆಚ್ಚಾಗಿದೆ.

ಬಿಜೆಪಿಗೆ ಪ್ರಮುಖ ಲಾಭ ಮಾಡಲೆಂದೇ ಈ ಯೋಜನೆ ರೂಪಿಸಲಾಗಿತ್ತು. ಮೂಲಭೂತವಾಗಿ, ಇದು ಕಾರ್ಪೊರೇಟ್ ವಲಯವು ಬಿಜೆಪಿಗೆ ಹಣವನ್ನು ನೀಡುವ ಒಂದು ಮಾರ್ಗವಾಗಿತ್ತು ಮತ್ತು ಬಿಜೆಪಿಗೆ ಬರುವ ಮಿತಿಯಿಲ್ಲದ ಕಾರ್ಪೊರೇಟ್ ದೇಣಿಗೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯದಂತಿರಲು ಮತ್ತು ಆ ಮೂಲಕ ಪ್ರತಿಪಕ್ಷಗಳಿಗೆ ಬರುವ ನಿಧಿಯನ್ನು ತಡೆಯಲು ಬಳಕೆಯಾಗುವ ದಾರಿ ಇದಾಗಿತ್ತು.

ಈ ದ್ವಿಮುಖ ನೀತಿಯಿಂದಾಗಿಯೇ ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಲಾಭ ಮಾಡಿಕೊಳ್ಳಲು ಕಾರಣವಾಗಿರುವುದು. ಪ್ರತಿಪಕ್ಷಗಳನ್ನು ತನಿಖಾ ಸಂಸ್ಥೆಗಳನ್ನು ಬಳಸಿ ನಿಯಂತ್ರಿಸಲಾಗುತ್ತಿತ್ತು. ಬಿಜೆಪಿಗೆ ಬೇಕಾದಂತೆ ಚುನಾವಣಾ ಅಖಾಡವನ್ನು ರೂಪಿಸುವಲ್ಲಿ ಚುನಾವಣಾ ಬಾಂಡ್‌ಗಳು ಕೆಲಸ ಮಾಡುತ್ತಿದ್ದವು.

ಹಲವಾರು ಅರ್ಜಿಗಳು 2018ರಲ್ಲಿ ಚುನಾವಣಾ ಬಾಂಡ್‌ಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದವು. ಯೋಜನೆಯು ಚುನಾವಣೆಗಳನ್ನು ವಿರೂಪಗೊಳಿಸುತ್ತದೆ ಮತ್ತು ಅಸಮ ಆಟದ ಮೈದಾನವನ್ನು ಸೃಷ್ಟಿಸುತ್ತದೆ ಎಂಬುದು ಆ ಎಲ್ಲ ಅರ್ಜಿಗಳು ಎತ್ತಿದ್ದ ತಕರಾರುಗಳಾಗಿದ್ದವು. ಯೋಜನೆ ಪಾರದರ್ಶಕತೆಯನ್ನು ಹೊಂದಿಲ್ಲ ಮತ್ತು ದೊಡ್ಡ ಪ್ರಮಾಣದಲ್ಲಿ ಚುನಾವಣಾ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದೆ ಎಂದು ಅರ್ಜಿದಾರರು 2019ರಲ್ಲಿಯೇ ವಾದಿಸಿದ್ದರು. ಆದರೆ ಆಗಿನ ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಯೋಜನೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು.

ಈ ಯೋಜನೆ ಅಸಾಂವಿಧಾನಿಕ ಎಂದು ತೀರ್ಮಾನಿಸಲು ಸುಪ್ರೀಂ ಕೋರ್ಟ್‌ಗೆ ಆರು ವರ್ಷಗಳು ಬೇಕಾದವು. ಈಗ ಅಂಗೀಕರಿಸಲಾಗಿರುವ ಎಲ್ಲಾ ಆಕ್ಷೇಪಣೆಗಳನ್ನು ಆ ಅರ್ಜಿಗಳಲ್ಲಿಯೇ ವ್ಯಕ್ತಪಡಿಸಲಾಗಿತ್ತು. ಆದರೆ ನ್ಯಾಯಾಲಯ ಯೋಜನೆಯನ್ನು ತಡೆಹಿಡಿಯಲು ನಿರಾಕರಿಸಿತ್ತು. ಯೋಜನೆಯ ಸುತ್ತಲಿನ ಚರ್ಚೆಯು ದೊಡ್ಡ ಸಮಸ್ಯೆಗಳನ್ನು ಎತ್ತಿದ್ದು, ಅದರ ಚರ್ಚೆಗೆ ಸಮಯ ಬೇಕಾಗುತ್ತದೆ ಎಂದಿತ್ತು.

ಇದು ಬಿಜೆಪಿಗೆ ಹಣವನ್ನು ಸಂಗ್ರಹಿಸಲು ಮತ್ತು ಅದನ್ನು ತನ್ನ ಚುನಾವಣಾ ತಂತ್ರವನ್ನು ಪ್ರಬಲಗೊಳಿಸಲು ಅವಕಾಶ ಮಾಡಿಕೊಟ್ಟಿತು. ಈ ಅಕ್ರಮ ಚುನಾವಣಾ ಬಾಂಡ್‌ಗಳು ಈಗಾಗಲೇ ಒಂದು ಲೋಕಸಭೆ ಚುನಾವಣೆ ಮತ್ತು ಹಲವು ವಿಧಾನಸಭೆ ಚುನಾವಣೆಗಳಿಗೆ ಹಣ ಒದಗಿಸಿವೆ. 2019ರ ಚುನಾವಣೆಯೂ ಅದರಲ್ಲಿ ಸೇರಿದೆ ಮತ್ತು ಆ ಚುನಾವಣೆ ಡೊನಾಲ್ಡ್ ಟ್ರಂಪ್‌ರನ್ನು ಅಧಿಕಾರಕ್ಕೆ ತಂದಿದ್ದ 2016ರ ಅಮೆರಿಕ ಚುನಾವಣೆಗಿಂತಲೂ ಹೆಚ್ಚು ದುಬಾರಿಯಾಗಿತ್ತು.

ಸುಪ್ರೀಂ ಕೋರ್ಟ್ ನವೆಂಬರ್‌ನಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದ್ದರಿಂದ, ಚುನಾವಣೆಗೆ ಮುನ್ನ ಬಿಜೆಪಿಗೆ ಇನ್ನೂ ಎರಡು ಕಂತುಗಳನ್ನು ಸಂಗ್ರಹಿಸಲು ಅವಕಾಶವಾಯಿತು. ಈ ಮಹತ್ವದ ಸಾಂವಿಧಾನಿಕ ವಿಷಯವನ್ನು ಪರಿಹರಿಸುವಲ್ಲಿನ ವಿಳಂಬದಿಂದಾಗಿ ಮುಂಬರುವ ಲೋಕಸಭೆ ಚುನಾವಣೆಯ ಹೊತ್ತಿನಲ್ಲೂ ಈ ವಂಚಕ ಯೋಜನೆಯ ಮೂಲಕ ತನ್ನ ಪ್ರತಿಸ್ಪರ್ಧಿಗಳ ವಿರುದ್ಧವಾಗಿ ಬಿಜೆಪಿ ಆರಂಭಿಕ ಲಾಭ ಮಾಡಿಕೊಳ್ಳುವುದು ಸಾಧ್ಯವಾಯಿತು. ಇದರೊಂದಿಗೆ, ಪ್ರಜಾಪ್ರಭುತ್ವಕ್ಕೆ ಅಪಾರ ಹಾನಿಯಂತೂ ಆಗಿದೆ.

ಹಣ ಮತ್ತು ರಾಜಕೀಯದ ನಡುವಿನ ಸಂಬಂಧವನ್ನು ತೀರ್ಪು ಸ್ಪಷ್ಟವಾಗಿ ಗಮನಿಸಿದೆ ಮತ್ತು ಈ ಸಂದರ್ಭದಲ್ಲಿ ಹಣವು ನೇರವಾಗಿ ರಾಜಕೀಯವನ್ನು ಪ್ರಭಾವಿಸುವ ಪ್ರಾಥಮಿಕ ಮಾರ್ಗ ವೆಂದರೆ, ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು ಎಂಬ ವಿಚಾರವೂ ಬಯಲಾಗಿದೆ.

ಹಣದ ಹರಿಯುವಿಕೆಯಲ್ಲಿನ ಅಸಮಾನತೆಯು ರಾಜಕೀಯ ಅಸಮಾನತೆಯನ್ನು ಕೂಡ ಉಂಟುಮಾಡಬಹುದು. ಇದು ಬಹುಪಾಲು, ವಿಶೇಷವಾಗಿ ಬಡವರು ಮತ್ತು ದುರ್ಬಲರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ, ಅತಿ ಶ್ರೀಮಂತರ ಹಿತಾಸಕ್ತಿಗಳ ಪರವಾಗಿ ಸಾರ್ವಜನಿಕ ನೀತಿಗಳನ್ನು ರೂಪಿಸುವುದಕ್ಕೆ ಕಾರಣವಾಗುವ ಮೂಲಕ ಚುನಾವಣಾ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ.

ಹಣಕ್ಕಾಗಿ ಈ ಬಾಂಡ್‌ಗಳನ್ನು ತಂದದ್ದು ಬಿಜೆಪಿಗೆ ಹಣ ನೀಡುತ್ತಿರುವ ಉನ್ನತ ಕಾರ್ಪೊರೇಟ್‌ಗಳ ಪರವಾಗಿ ಚುನಾವಣೆಗಳನ್ನು ತಿರುಗಿಸಲು ಕಾರಣವಾದವು. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದಂತೆ, ಅಂತಹ ಬೆಂಬಲವು ಪಕ್ಷಗಳು ಮತ್ತು ದೇಣಿಗೆದಾರರ ನಡುವೆ ಉಪಕಾರಕ್ಕೆ ಪ್ರತ್ಯುಪಕಾರ ಸಲ್ಲಿಸುವ ವ್ಯವಸ್ಥೆಗೆ ಕಾರಣವಾಗಬಹುದು. ಅದು ಚುನಾವಣಾ ಪ್ರಜಾಪ್ರಭುತ್ವ ಮತ್ತು ಸರಕಾರವನ್ನು ದುರ್ಬಲಗೊಳಿಸುತ್ತದೆ. ಅದು ನೀತಿಗಳ ಮೇಲೆ ನಿಯಂತ್ರಣಕ್ಕೆ ಕಾರಣವಾಗಬಹುದು. ನೀತಿಗಳ ಮೇಲಿನ ನಿರ್ಧಾರಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಬದಲು ನಿರ್ದಿಷ್ಟ ಆಸಕ್ತಿಗಳ ದೃಷ್ಟಿಯಿಂದ ಪ್ರಭಾವಿತವಾಗಬಹುದು.

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಈ ತೀರ್ಪು, ಪ್ರಜಾತಂತ್ರ ಮತ್ತು ಪಾರದರ್ಶಕತೆಯ ಗೆಲುವಾಗಿದೆ. ಹಾಗೆಯೇ, ಸರಕಾರ ಮತ್ತು ಕಾರ್ಪೊರೇಟ್ ಸಂಪರ್ಕಗಳನ್ನು ತೀವ್ರವಾಗಿ ಟೀಕಿಸುವವರ ಪಾಲಿನ ಒಂದು ದೊಡ್ಡ ಗೆಲುವಾಗಿದೆ. ಇದು ಹಣ ಬಲದ ವಿರುದ್ಧ ಜನರ ಅಧಿಕಾರದ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದೆ. ನೋಟುಗಳಿಗಿಂತ ಮತಗಳು ಮುಖ್ಯ ಎಂಬುದನ್ನು ಪ್ರತಿಪಾದಿಸಿದೆ.

ಸಾರ್ವತ್ರಿಕ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಇದು ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆ. ಏಕೆಂದರೆ ದೇಣಿಗೆದಾರರ ಹೆಸರುಗಳು ಮತ್ತು ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ಇದರಿಂದ ಆಡಳಿತ ಪಕ್ಷಗಳು ಮತ್ತು ನಿರ್ದಿಷ್ಟ ಕಾರ್ಪೊರೇಟ್‌ಗಳ ನಡುವಿನ ಹಿಂಬಾಗಿಲಿನ ಸಂಪರ್ಕ ಬಯಲಾಗಲಿದೆ. ಅಂಥ ಸಂಪರ್ಕ ಈಗಾಗಲೇ ಗೊತ್ತಿರುವುದೇ ಆದರೂ, ಅದು ಈಗ ಅಧಿಕೃತವಾಗಿಯೇ ಬಹಿರಂಗವಾಗಲಿದೆ.

ಕಾರ್ಪೊರೇಟ್ ದೇಣಿಗೆಗಳ ಮೇಲಿನ ಮುಸುಕನ್ನು ತೆಗೆದುಹಾಕುವುದು ಆಡಳಿತಾರೂಢ ಪಕ್ಷದ ನೈತಿಕ ಪತನವನ್ನೇ ಬಯಲಾಗಿಸಲಿದೆ. ಏಕೆಂದರೆ ಅದು ಈವರೆಗೆ ತನ್ನನ್ನು ತಾನು ಭ್ರಷ್ಟಾಚಾರ ವಿರೋಧಿ ಎಂದು ಬಿಂಬಿಸಿಕೊಳ್ಳುತ್ತ ಬಂದಿದ್ದರ ಹಿಂದಿನ ಅಸಲಿ ಜಾತಕವನ್ನೇ ಬಯಲುಗೊಳಿಸಲಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಝೋಯಾ ಹಸನ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!